Dr Vijay Darda Column: ಡೊನಾಲ್ಡ್ ಟ್ರಂಪ್ ದೌಲತ್ತಿನಿಂದ ಜಗತ್ತಿಗೆ ಆತಂಕ !
ಟ್ರಂಪ್ ಅವರ ದೌಲತ್ತು, ಜಂಭ, ಬಡಾಯಿ, ತೀಕ್ಷ್ಣ ಮಾತುಗಳು, ಉಪದ್ವ್ಯಾಪಿತನ ಹಾಗೂ ಹುಚ್ಚಾಟ ಗಳು ಯಾವುವೂ ಬದಲಾಗಿಲ್ಲ. ಅವೆಲ್ಲವೂ ಥೇಟ್ ನಾಲ್ಕು ವರ್ಷ ಹಿಂದೆ ಇದ್ದಂತೆಯೇ ಇವೆ. ವಾಸ್ತವ ವಾಗಿ ಈಗ ಅವು ಇನ್ನೂ ಸ್ವಲ್ಪ ಜಾಸ್ತಿಯಾಗಿರುವಂತೆ ಕಾಣುತ್ತಿವೆ. ಈ ಬಾರಿ ಅಧಿಕಾರ ಸ್ವೀಕಾರಕ್ಕೂ ಮೊದಲೇ ಅವರು ತಮ್ಮ ಹರಿತ ಮಾತುಗಳಿಂದ ಎರಡು ಅಲಗಿನ ಕತ್ತಿ ಝಳಪಿಸಲು ಆರಂಭಿಸಿದ್ದಾರೆ
ಸಂಗತ
ಡಾ.ವಿಜಯ್ ದರಡಾ
ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ್ದಾರೆ. ಇದು ಅವರಿಗೆ ಎರಡನೇ ಅವಧಿ. ಹಿಂದೆ ಅವರು ಅಧ್ಯಕ್ಷರಾಗಿ ಅಧಿಕಾರ ಪೂರ್ಣಗೊಳಿಸಿ ಅಮೆರಿಕದ ಚುಕ್ಕಾಣಿಯನ್ನು ಜೋ ಬೈಡೆನ್ ಗೆ ಹಸ್ತಾಂತರಿಸಿದ ಮೇಲೆ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
ಆದರೆ, ಟ್ರಂಪ್ ಅವರ ದೌಲತ್ತು, ಜಂಭ, ಬಡಾಯಿ, ತೀಕ್ಷ್ಣ ಮಾತುಗಳು, ಉಪದ್ವ್ಯಾಪಿತನ ಹಾಗೂ ಹುಚ್ಚಾಟಗಳು ಯಾವುವೂ ಬದಲಾಗಿಲ್ಲ. ಅವೆಲ್ಲವೂ ಥೇಟ್ ನಾಲ್ಕು ವರ್ಷ ಹಿಂದೆ ಇದ್ದಂತೆಯೇ ಇವೆ. ವಾಸ್ತವವಾಗಿ ಈಗ ಅವು ಇನ್ನೂ ಸ್ವಲ್ಪ ಜಾಸ್ತಿಯಾಗಿರುವಂತೆ ಕಾಣುತ್ತಿವೆ. ಈ ಬಾರಿ ಅಧಿಕಾರ ಸ್ವೀಕಾರಕ್ಕೂ ಮೊದಲೇ ಅವರು ತಮ್ಮ ಹರಿತ ಮಾತುಗಳಿಂದ ಎರಡು ಅಲಗಿನ ಕತ್ತಿ ಝಳಪಿಸಲು ಆರಂಭಿಸಿದ್ದಾರೆ.
ಅದನ್ನು ನೋಡಿ ಜಗತ್ತು ಕಂಗಾಲಾಗಿದೆ. ಟ್ರಂಪ್ ಇನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಏನೇನು ಮಾಡುವವರಿದ್ದಾರೆ? ಮಾತನಾಡುತ್ತಿರುವಂತೆಯೇ ನಡೆದುಕೊಂಡುಬಿಟ್ಟರೆ ಜಗತ್ತಿನ ಕತೆ ಏನಾಗ ಬೇಕು ಎಂದು ಎಲ್ಲರೂ ಯೋಚಿಸುತ್ತಿದ್ದಾರೆ. ಅವರ ಡೌಲು ಜಗತ್ತಿನಾದ್ಯಂತ ಒಂದಷ್ಟು ಆತಂಕದ ಅಲೆಗಳನ್ನು ಹುಟ್ಟುಹಾಕಿರುವುದಂತೂ ಸತ್ಯ!
ಇದನ್ನೂ ಓದಿ: Dr Vijay Darda Column: ದಿವಾಳಿಯಾದವರು ದಾನ ನೀಡಲು ಬಂದಾಗ !
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿದ ಮೇಲೆ, ಅಧಿಕಾರ ಸ್ವೀಕಾರಕ್ಕೂ ಮೊದಲೇ ಅವರು ಕೆನಡಾದ ಬಗ್ಗೆ ಭಯಾನಕ ಹೇಳಿಕೆಯೊಂದನ್ನು ನೀಡಿದ್ದರು. ಕೆನಡಾ ದೇಶವು ಅಮೆರಿಕದ 51ನೇ ರಾಜ್ಯವಾಗಬೇಕು ಎಂದು ಅವರು ಹೇಳಿದ್ದನ್ನು ಕೇಳಿ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು. ಈ ಹೇಳಿಕೆಯ ಉದ್ದೇಶವೇನು ಎಂಬುದು ಇವತ್ತಿಗೂ ಸ್ಪಷ್ಟವಾಗಿಲ್ಲ. ಆದರೆ ಅದು ಕೆನಡಾದಲ್ಲಿ ರಾಜಕೀಯ ಭೂಕಂಪನವನ್ನೇ ಉಂಟುಮಾಡಿತು.
ಅದೊಂದು ಹೇಳಿಕೆ ಎಷ್ಟು ಅನಾಹುತ ಸೃಷ್ಟಿಸಿತು ಅಂದರೆ, ಕೆನಡಾದ ಪ್ರಧಾನಿಯಾಗಿದ್ದ ಜಸ್ಟಿನ್ ಟ್ರೂಡೊ ರಾಜೀನಾಮೆ ನೀಡಿ ಕುರ್ಚಿಯಿಂದ ಕೆಳಗಿಳಿಯಬೇಕಾಯಿತು. ಟ್ರೂಡೊ ಮೇಲೆ ಮೊದಲಿ ನಿಂದಲೂ ಟ್ರಂಪ್‌ಗೆ ಕಣ್ಣಿತ್ತು. ಅದರ ಜತೆಗೆ ಆತ ತಮ್ಮ ಎಡವಟ್ಟುಗಳಿಂದಾಗಿ ಸಾಕಷ್ಟು ಹೆಸರು ಕೆಡಿಸಿಕೊಂಡಿದ್ದರು. ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದ ಆರೋಪ ಕೂಡ ಟ್ರೂಡೊ ಮೇಲಿತ್ತು.
ಅದೆಲ್ಲದರ ಪರಿಣಾಮವಾಗಿ ಅವರ ಕುರ್ಚಿ ಹೋಯಿತು. ವಸ್ತುಸ್ಥಿತಿ ಏನೆಂದರೆ, ಕೆನಡಾ ಅಗಾಧ ಭೂಪ್ರದೇಶ ಹೊಂದಿರುವ ದೇಶ. ಅದರ ಗಾತ್ರ ಅಮೆರಿಕಕ್ಕಿಂತ 150000 ಚದರ ಕಿಲೋಮೀಟರ್ ಜಾಸ್ತಿ ಇದೆ. ಎರಡೂ ದೇಶಗಳು ನ್ಯಾಟೋದ ಸಂಸ್ಥಾಪಕ ಸದಸ್ಯರು. ಎರಡೂ ದೇಶಗಳ ನಡುವೆ ಮಿಲಿಟರಿ ಒಪ್ಪಂದಗಳಿವೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಕೆನಡಾವನ್ನು ಅಮೆರಿಕ ಕಬಳಿಸಲು ಹೇಗೆ ಸಾಧ್ಯ? ಆದರೆ ಟ್ರಂಪ್ ಈಗಾಗಲೇ ತಮ್ಮ ವ್ಯೂಹಾತ್ಮಕ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕೆನಡಾದ ಮೇಲೆ ಭಾರಿ ತೆರಿಗೆ ವಿಧಿಸುವ ಯೋಜನೆ ಹಾಕಿಕೊಂಡಿದ್ದಾರೆ. ಅದರಿಂದಾಗಿ ಇಂದಲ್ಲಾ ನಾಳೆ ಕೆನಡಾ ಮಂಡಿಯೂರಿ ಕುಳಿತು ಅಮೆರಿಕದ ಮುಂದೆ ದೇಹಿ ಅನ್ನಲೇಬೇಕು. ಹೀಗಾಗಿ ಅಧಿಕಾ ರಕ್ಕೆ ಬರುವುದಕ್ಕೂ ಮೊದಲೇ ಕೆನಡಾವನ್ನು ಟ್ರಂಪ್ ಬೆಚ್ಚಿಬೀಳಿಸಿದ್ದಾಗಿದೆ. ಗ್ರೀನ್‌ಲ್ಯಾಂಡ್ ಬಗ್ಗೆಯೂ ಟ್ರಂಪ್ ನೀಡಿದ ಇಂಥದೇ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಗ್ರೀನ್‌ಲ್ಯಾಂಡ್ ಮೇಲೆ ಡೆನ್ಮಾರ್ಕ್ ತನ್ನ ಹಿಡಿತ ಕೈಬಿಡದೆ ಇದ್ದರೆ ಅಮೆರಿಕ ಭಾರಿ ತೆರಿಗೆ ವಿಧಿಸಲಿದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಗ್ರೀನ್ಲ್ಯಾಂಡ್‌ನ ಶೇ.೮೫ರಷ್ಟು ಭೂಭಾಗ ದಟ್ಟವಾದ ಹಿಮ ದಿಂದ ಆವೃತವಾಗಿದೆ. ಆ ಹಿಮದ ಕೆಳಗೆ ಭರಪೂರ ಖನಿಜಗಳಿವೆ. ಅದರ ಮೇಲೆ ಟ್ರಂಪ್ ಕಣ್ಣಿಟ್ಟಿ ದ್ದಾರೆ. ಆದರೆ ಟ್ರಂಪ್ ಹೇಳಿಕೆಯನ್ನು ಈಗಾಗಲೇ ಗ್ರೀನ್‌ಲ್ಯಾಂಡಿನ ಪ್ರಧಾನಿ ಮ್ಯೂಟ್ ಎಗೆಡೆ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
ಯಾವುದೇ ಕಾರಣಕ್ಕೂ ನಾವು ಅಮೆರಿಕದಲ್ಲಿ ವಿಲೀನವಾಗುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಅಮೆರಿಕದ ಜತೆಗೆ ಇನ್ನಷ್ಟು ಹೆಚ್ಚು ಸಹಕಾರದಿಂದ ವ್ಯವಹರಿಸಲು ಸಿದ್ಧ ರಿದ್ದೇವೆ ಎಂದೂ ಸ್ಪಷ್ಟಪಡಿಸಿದ್ದಾರೆ. ಗ್ರೀನ್ ಲ್ಯಾಂಡಿನ ಜನಸಂಖ್ಯೆ 57000ಕ್ಕಿಂತ ಕಡಿಮೆ. ಅಂಥ ಸಣ್ಣ ಜನಸಂಖ್ಯೆಯ ದೇಶವನ್ನು ಗೆಲ್ಲುವುದು ಟ್ರಂಪ್‌ಗೆ ಅಸಾಧ್ಯವೇನಲ್ಲ. ಗ್ರೀನ್‌ಲ್ಯಾಂಡಿನ ಮೇಲೆ ಹಿಡಿತ ಹೊಂದಿರುವ ಡೆನ್ಮಾರ್ಕ್‌ಗೂ ಟ್ರಂಪ್‌ರನ್ನು ಎದುರಿಸುವುದು ಕಷ್ಟ.
ಹೀಗಾಗಿ ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ಗೆ ಇರುವ ಏಕೈಕ ಆಯ್ಕೆಯೆಂದರೆ ಅಮೆರಿಕದ ಜತೆಗೆ ಮಾತುಕತೆ ನಡೆಸಿ ಆಪತ್ತು ನಿವಾರಿಸಿಕೊಳ್ಳುವುದೇ ಆಗಿದೆ. ಇನ್ನು, ಮೆಕ್ಸಿಕನ್ ಕೊಲ್ಲಿಗೆ ‘ಅಮೆರಿಕನ್ ಕೊಲ್ಲಿ’ ಎಂದು ಮರುನಾಮಕರಣ ಮಾಡುವುದಾಗಿಯೂ ಟ್ರಂಪ್ ಘೋಷಿಸಿದ್ದಾರೆ. ತನ್ಮೂಲಕ ಈ ಹಿಂದೆ ಮೆಕ್ಸಿಕೋ ವಿಷಯದಲ್ಲಿ ತಾವು ಯಾವ ರೀತಿಯಲ್ಲಿ ಕಠಿಣವಾಗಿ ನಡೆದುಕೊಂಡಿದ್ದರೋ ಅದೇ ಧೋರಣೆಯನ್ನು ಈ ಅವಧಿಯಲ್ಲೂ ಮುಂದುವರಿಸುವ ಸ್ಪಷ್ಟ ಸೂಚನೆಯನ್ನು ನೀಡಿ ದ್ದಾರೆ.
ಮೊದಲ ಅವಧಿಯಲ್ಲಿ ಮೆಕ್ಸಿಕೋದ ಗಡಿಯಲ್ಲಿ ಟ್ರಂಪ್ ಗೋಡೆ ಕಟ್ಟಿಸುವುದಾಗಿ ಘೋಷಿಸಿದ್ದರು. ಅಂದನ್ನು ಪೋಪ್ ಟೀಕಿಸಿದಾಗ ‘ಈ ವಿಷಯದಲ್ಲಿ ಪೋಪ್ ಮೂಗು ತೂರಿಸುವ ಅಗತ್ಯವಿಲ್ಲ’ ಎಂದು ನೇರಾನೇರವಾಗಿ ಕುಟುಕಿದ್ದರು! ಕೊನೆಗೆ ಗಡಿಯ ಗುಂಟ ಒಂದಷ್ಟು ಜಾಗದಲ್ಲಿ ಗೋಡೆ ಕಟ್ಟಿಸಿಯೇಬಿಟ್ಟಿದ್ದರು. ಮೆಕ್ಸಿಕೋದಿಂದ ಅಕ್ರಮ ವಲಸಿಗರು ಅಮೆರಿಕಕ್ಕೆ ದೊಡ್ಡ ಸಂಖ್ಯೆಯಲ್ಲಿ ನುಸುಳುತ್ತಾರೆ. ಅದನ್ನು ತಡೆಯುವುದು ಟ್ರಂಪ್ ನೀತಿಗಳಲ್ಲೊಂದು.
ವಾಸ್ತವವಾಗಿ, ಚೀನಾವನ್ನು ಹದ್ದುಬಸ್ತಿನಲ್ಲಿ ಇಡಬೇಕು ಅಂದರೆ ಮೆಕ್ಸಿಕೋ ದೇಶಕ್ಕೆ ಮೂಗುದಾರ ಹಾಕುವುದು ಟ್ರಂಪ್‌ಗೆ ಅತ್ಯಗತ್ಯ. ಏಕೆಂದರೆ, ಮೆಕ್ಸಿಕೋದಲ್ಲಿರುವ ದೊಡ್ಡ ದೊಡ್ಡ ಕಾರ್ಖಾನೆ ಗಳಲ್ಲಿ ಚೀನಾ ತನ್ನ ಸರಕುಗಳನ್ನು ಉತ್ಪಾದಿಸಿ ಅಮೆರಿಕದ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ. ಇದು ಅಮೆರಿಕದ ಆರ್ಥಿಕತೆಗೆ ಹೊಡೆತ ನೀಡುತ್ತಿದೆ. ಹೀಗಾಗಿ ಮೆಕ್ಸಿಕೋ ಜತೆಗಿನ ಟ್ರಂಪ್ ಸಂಘರ್ಷ ಇನ್ನಷ್ಟು ಉಲ್ಬಣಗೊಳ್ಳುವುದು ಗ್ಯಾರಂಟಿ.
ಎರಡನೇ ಅವಧಿಯ ಚುನಾವಣೆಯಲ್ಲಿ ಗೆದ್ದ ತಕ್ಷಣ ಟ್ರಂಪ್ ಅವರು ಇಸ್ರೇಲ್ ಮತ್ತು ಹಮಾಸ್ ಯುದ್ಧ ನಿಲ್ಲಿಸಬೇಕು ಎಂದು ಗುಡುಗಿದ್ದರು. ನಾನು ಅಧಿಕಾರ ಸ್ವೀಕರಿಸುವುದಕ್ಕಿಂತ ಮುಂಚೆ ನಿಮ್ಮ ಜಗಳ ನಿಲ್ಲಬೇಕು ಎಂದು ತಾಕೀತು ಮಾಡಿದ್ದರು. ಅದು ಎಂಥಾ ಪರಿಣಾಮ ಉಂಟು ಮಾಡಿತು ಅಂದರೆ, ಈಗ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನವಿರಾಮ ಜಾರಿಗೆ ಬಂದಿದೆ. ಟ್ರಂಪ್ ಇಸ್ರೇಲ್‌ಗೆ ಬಹಿರಂಗ ಬೆಂಬಲ ಘೋಷಿಸಿರುವ ವ್ಯಕ್ತಿ.
ಅವರ ಮೊದಲ ಅವಧಿಯಲ್ಲಿ ಇಸ್ರೇಲ್‌ನ ಬಯಕೆಯಂತೆ ಜೆರುಸಲೇಂ ನಗರಕ್ಕೆ ಇಸ್ರೇಲ್‌ನ ರಾಜಧಾನಿಯ ಮಾನ್ಯತೆ ನೀಡಿ, ಇಸ್ರೇಲ್‌ನಲ್ಲಿರುವ ಅಮೆರಿಕದ ದೂತಾವಾಸವನ್ನು ಜೆರುಸಲೇಂಗೆ ಸ್ಥಳಾಂತರ ಮಾಡಿದ್ದರು. ಇನ್ನು, ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದಲ್ಲಿ ಟ್ರಂಪ್ ಏನು ಮಾಡುತ್ತಾರೆಂಬುದು ಇನ್ನೂ ಸ್ಪಷ್ಟವಿಲ್ಲ.
ಜೋ ಬೈಡೆನ್ ಉಕ್ರೇನ್‌ಗೆ ಉದಾರವಾಗಿ ನೆರವು ನೀಡಿದ್ದರು. ಟ್ರಂಪ್ ಅದನ್ನು ಮುಂದು ವರಿಸು ತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಏಕೆಂದರೆ ಟ್ರಂಪ್‌ಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆಗೂ ಸ್ನೇಹವಿದೆ. ಹೀಗಾಗಿ ರಷ್ಯಾವನ್ನು ಎದುರು ಹಾಕಿಕೊಂಡು ಉಕ್ರೇನ್ ಪರ ಅವರ ನಿಲ್ಲುತ್ತಾರೆಯೇ ಎಂಬುದು ಯಕ್ಷಪ್ರಶ್ನೆ. ಈ ಜಟಿಲ ಸಂಬಂಧ ಹೇಗೆ ಮುಂದುವರಿಯುತ್ತದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.
ರಾಜತಾಂತ್ರಿಕವಾಗಿ ನೋಡುವುದಾದರೆ, ಟ್ರಂಪ್ ಅವಧಿಯಲ್ಲಿ ಭಾರತವು ಅಮೆರಿಕಕ್ಕೆ ಇನ್ನಷ್ಟು ಹತ್ತಿರವಾಗಬಹುದು. ಏಕೆಂದರೆ ಚೀನಾವನ್ನು ಎದುರಿಸಲು ಅಮೆರಿಕಕ್ಕೆ ಭಾರತದ ನೆರವು ಬೇಕು. ಪ್ರಧಾನಿ ನರೇಂದ್ರ ಮೋದಿ ಜತೆಗೆ ಟ್ರಂಪ್ ಹೊಂದಿರುವ ಆತ್ಮೀಯ ಸಂಬಂಧ ಎಲ್ಲರಿಗೂ ತಿಳಿದಿದೆ. ಆದರೆ ‘ಅಮೆರಿಕ ಮೊದಲು’ ಎಂಬುದು ಟ್ರಂಪ್ ನೀತಿ. ಹೀಗಾಗಿ ಭಾರತದ ಜತೆಗೆ ವ್ಯವಹರಿಸು ವಾಗಲೂ ಅಮೆರಿಕದ ಹಿತಾಸಕ್ತಿಯನ್ನೇ ಟ್ರಂಪ್ ಪ್ರಬಲವಾಗಿ ಪ್ರತಿಪಾದಿಸುತ್ತಾರೆ. ಅದು ಭಾರತಕ್ಕೆ ಇರಿಸುಮುರಿಸು ಉಂಟುಮಾಡಬಹುದು.
ತಮ್ಮ ಮೊದಲ ಅವಧಿಯಲ್ಲಿ ಟ್ರಂಪ್, ಅಮೆರಿಕದ ಹಾರ್ಲೆ ಡೇವಿಡ್ಸನ್ ಬೈಕ್‌ಗಳಿಗೆ ಭಾರತದ ಸರಕಾರ ದುಬಾರಿ ತೆರಿಗೆ ವಿಧಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅದಕ್ಕೆ ಪ್ರತಿಯಾಗಿ ಅಮೆರಿಕದಲ್ಲಿ ಮಾರಾಟವಾಗುವ ಭಾರತದ ಸರಕುಗಳಿಗೆ ಹೆಚ್ಚು ತೆರಿಗೆ ವಿಧಿಸುವ ಕಠಿಣ ನಿರ್ಧಾರ ಕೈಗೊಂಡಿದ್ದರು. ಇದು ಭಾರತದ ರಫ್ತು ವ್ಯವಹಾರಗಳಿಗೆ ಹೊಡೆತ ನೀಡಿತ್ತು.
ಈ ಬಾರಿ ಟ್ರಂಪ್ ರಕ್ಷಣಾ ವ್ಯವಹಾರಗಳಲ್ಲಿ ಭಾರತವು ಅಮೆರಿಕಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಡ ಹೇರುವ ಸಾಧ್ಯತೆಯಿದೆ. ಅದಕ್ಕೆ ಭಾರತ ಒಪ್ಪದಿದ್ದರೆ ಪ್ರತೀಕಾರದ ಕ್ರಮ ಕೈಗೊಳ್ಳುವುದಾಗಿ ಬೆದರಿಸುವ ಸಂಭವವಿದೆ. ಅದೇ ರೀತಿ, ಎಚ್-1ಬಿ ವೀಸಾ ವಿಷಯದಲ್ಲಿ ಟ್ರಂಪ್ ತಾಳಿರುವ ಕಠಿಣ ನಿಲುವುಗಳು ಭಾರತದ ಮೇಲೆ ದುಷ್ಪರಿಣಾಮ ಬೀರಬಹುದು. ಅಮೆರಿಕದ ಎಚ್-1ಬಿ ವೀಸಾದ ಪ್ರಮುಖ ಫಲಾನುಭವಿಗಳು ಭಾರತದ ಟೆಕ್ಕಿಗಳಾಗಿದ್ದಾರೆ.
ಇನ್ನೊಂದು ಹೆಜ್ಜೆ ಮುಂದೆಹೋಗಿ, ಅಮೆರಿಕದಲ್ಲಿ ಜನಿಸಿದ ಮಾತ್ರಕ್ಕೆ ವಿದೇಶಿಗರಿಗೆ ಅಮೆರಿಕದ ಪೌರತ್ವ ಸಿಗುವ ವ್ಯವಸ್ಥೆ ಸರಿಯಿಲ್ಲ ಎಂದು ಟ್ರಂಪ್ ಈಗಾಗಲೇ ಹೇಳಿದ್ದಾರೆ. ಇದನ್ನೆಲ್ಲ ನೋಡಿ ದರೆ, ಭಾರತಕ್ಕೆ ಟ್ರಂಪ್ ತಮ್ಮ ಕಠಿಣ ನಿಲುವುಗಳಲ್ಲಿ ಒಂದಷ್ಟು ವಿನಾಯಿತಿ ನೀಡುತ್ತಾರೋ ಇಲ್ಲವೋ ಎಂಬುದು ಅನುಮಾನಾಸ್ಪದವಾಗಿದೆ. ಆದರೆ, ಅಮೆರಿಕ ಮತ್ತು ಚೀನಾ ನಡುವಿನ ವೈರತ್ವ ವನ್ನು ಗಮನಿಸಿದರೆ, ಭಾರತದ ವಿಷಯದಲ್ಲಿ ಟ್ರಂಪ್ ‘ಶತ್ರುವಿನ ಶತ್ರು ನಮಗೆ ಮಿತ್ರ’ ಎಂಬ ನಿಲುವು ತಾಳುವ ಸಾಧ್ಯತೆಯೂ ಇದೆ. ಹೀಗಾಗಿ ಭಾರತ ತೀರಾ ಆತಂಕಪಡುವ ಅಗತ್ಯ ವೇನೂ ಇಲ್ಲ.
ಆದರೆ ಎಷ್ಟೆಂದರೂ ಟ್ರಂಪ್ ಅಂದರೆ ಟ್ರಂಪ್! ಅವರ ನಾಯಕತ್ವದ ಶೈಲಿಯನ್ನು ಯಾರೂ ಊಹಿಸಲು ಸಾಧ್ಯವಿಲ್ಲ. 78 ವರ್ಷದ ವೃದ್ಧನಾಗಿದ್ದರೂ ಅವರು ಚುನಾವಣೆಯ ಸಮಯದಲ್ಲಿ 200 ರ‍್ಯಾಲಿಗಳನ್ನು ನಡೆಸಿದ್ದಾರೆ. ಯುವಕರೂ ನಾಚುವಂಥ ಉತ್ಸಾಹ ಅವರಲ್ಲಿದೆ. ತಮ್ಮ ತಂಡದ ಸದಸ್ಯರನ್ನು ಸಾಕಷ್ಟು ಅಳೆದು ತೂಗಿ ಆರಿಸಿಕೊಂಡಿದ್ದಾರೆ. ಎಲಾನ್ ಮಸ್ಕ್‌ರಂಥ ಘಟಾನುಘಟಿ ಗಳು ಅದರಲ್ಲಿದ್ದಾರೆ.
ಸ್ಟಾರ್‌ಶಿಪ್ ಏರ್‌ಕ್ರಾಫ್ಟ್ ಪತನಗೊಂಡಿದ್ದರೂ ಸ್ಪೇಸೆಕ್ಸ್ ಮಾಲೀಕ ಎಲಾನ್ ಮಸ್ಕ್ ಎದೆಗುಂದಿಲ್ಲ. ಅಂಥ ವ್ಯಕ್ತಿಯನ್ನು ಜತೆಗಿಟ್ಟುಕೊಂಡಿರುವ ಟ್ರಂಪ್, ಯಾರಿಗೂ ಅಂಜದೆ ಮುನ್ನುಗ್ಗುವುದರಲ್ಲಿ ಅನುಮಾನವೇ ಇಲ್ಲ. ನ್ಯಾಯಾಂಗವು ತಮ್ಮ ಬಗ್ಗೆ ಕೆಲ ತೀಕ್ಷ್ಣ ಟಿಪ್ಪಣಿಗಳನ್ನು ಮಾಡಿದಾಗ ಅದಕ್ಕೂ ಡೋಂಟ್ ಕೇರ್ ಎನ್ನದ ಟ್ರಂಪ್, ‘ಅಧ್ಯಕ್ಷರ ಬಳಿ ಎಲ್ಲವನ್ನೂ ಮೀರಿದ ಅಧಿಕಾರವಿದೆ’ ಎಂದು ಹೇಳಿದ್ದರು.
ತಮ್ಮ ಅಧಿಕಾರ ಸ್ವೀಕಾರ ಸಮಾರಂಭಕ್ಕೂ ಅವರು ಸೀಮಿತ ಸಂಖ್ಯೆಯ ಜಾಗತಿಕ ನಾಯಕರಿಗೆ ಮಾತ್ರ ಆಹ್ವಾನ ನೀಡಿದ್ದರು. ಬಹಳ ವರ್ಷಗಳಿಂದ ಅಮೆರಿಕದ ಸ್ನೇಹಿತ ರಾಷ್ಟ್ರವಾಗಿದ್ದ ಪಾಕಿ ಸ್ತಾನಕ್ಕೆ ಆಹ್ವಾನ ನೀಡಿರಲಿಲ್ಲ. ಈ ವಿಷಯ ಪಾಕಿಸ್ತಾನದಲ್ಲಿ ದೊಡ್ಡ ಆಕ್ರೋಶಕ್ಕೆ ಕಾರಣವಾಗಿದೆ. ಜಗತ್ತು ಪಾಕಿಸ್ತಾನವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆ ದೇಶದ ಒಳಗೆ ಚರ್ಚೆಗಳು ನಡೆಯುತ್ತಿವೆ.
ಒಟ್ಟಿನಲ್ಲಿ ತಮ್ಮೆಲ್ಲಾ ಜೋಶ್‌ನೊಂದಿಗೆ ಟ್ರಂಪ್ ಮರಳಿ ಬಂದಿದ್ದಾರೆ. ಜಾಗತಿಕ ವೇದಿಕೆಯಲ್ಲಿ ತಮಗೊಂದು ಪ್ರಮುಖ ಸ್ಥಾನ ಇರಬೇಕು ಅಂತಾದರೆ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಅಧಿಕಾರ ಚಲಾಯಿಸಬೇಕು ಎಂಬುದು ಅವರಿಗೆ ಗೊತ್ತಿದೆ. ಏನಾಗುತ್ತದೋ ನೋಡೋಣ. ವೆಲ್‌ಕಮ್ ಮಿಸ್ಟರ್ ಟ್ರಂಪ್!
(ಲೇಖಕರು ಹಿರಿಯ ಪತ್ರಿಕೋದ್ಯಮಿ)