ಬೆಂಗಳೂರು: ಇದೇ ಮೊದಲ ಬಾರಿಗೆ, ರಾಜ್ಯ ಸರ್ಕಾರದ ಆದೇಶದಂತೆ 2026-27ನೇ ಸಾಲಿನ ಎರಡು ವರ್ಷಗಳ ಬಿ.ಇಡಿ ಕೋರ್ಸ್ ಪ್ರವೇಶಕ್ಕೂ (B.Ed Admission 2026) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕೌನ್ಸೆಲಿಂಗ್ ನಡೆಸಲಿದೆ. ಈ ಸಲುವಾಗಿ ಅರ್ಹರಿಂದ ಆನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ನ.30 ಕೊನೆಯ ದಿನವಾಗಿದ್ದು, ಅರ್ಜಿ ಶುಲ್ಕ ಪಾವತಿಗೆ ಡಿ. 2 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಪದವಿ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳನ್ನು ಗಣನೆಗೆ ತೆಗೆದುಕೊಂಡು ಸೀಟು ಹಂಚಿಕೆ ಮಾಡಲಾಗುತ್ತದೆ.
ಎಂಜಿನಿಯರಿಂಗ್ ಸೇರಿ ಇತರ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕೆಇಎ ಅಳವಡಿಸಿಕೊಂಡಿರುವ ಮಾನದಂಡಗಳ ಪ್ರಕಾರ ಬಿ.ಇಡಿ ಕೋರ್ಸ್ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ. ಸರ್ಕಾರಿ, ಅನುದಾನಿತ, ಅನುದಾನ ರಹಿತ ಬಿ.ಇಡಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಾಗುತ್ತದೆ ಎಂದು ಕೆಇಎ ತಿಳಿಸಿದೆ.
ಪ್ರಮುಖ ದಿನಾಂಕಗಳು
- ನೋಂದಣಿ, ಅರ್ಜಿ ಸಲ್ಲಿಕೆ ಆರಂಭ: 20-11-2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-11-2026
- ಶುಲ್ಕ ಪಾವತಿಗೆ ಕೊನೆಯ ದಿನಾಂಕ: 02-12-2026 ಸಂಜೆ 6 ಗಂಟೆವರೆಗೆ
ಬಿ.ಇಡಿ ಸೀಟು ಹಂಚಿಕೆ ಪ್ರಕ್ರಿಯೆ ಹೊಣೆ ಕೆಇಎಗೆ
2026-27ನೇ ಸಾಲಿನ ಎರಡು ವರ್ಷಗಳ ಬಿ.ಇಡಿ ಕೋರ್ಸುಗಳ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಬಿ.ಇಡಿ. ಕಾಲೇಜುಗಳಲ್ಲಿನ ಸರ್ಕಾರಿ ಕೋಟದ ಸೀಟುಗಳಿಗೆ ಪ್ರವೇಶಾತಿಗೆ ಅಭ್ಯರ್ಥಿಗಳು ಪದವಿ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳನ್ನು ಗಣನೆಗೆ ತೆಗೆದುಕೊಂಡು "Karnataka Professional Educational Institutions (Regulation of Admission and Determination of Fee) Act, 2006 ಮತ್ತು "Karnataka Selection of Candidates for Admission to Government seats in Professional Educational Institutions Rules 2006" ಅನ್ವಯ ಎಂಜಿನಿಯರಿಂಗ್, ಇತರ ವೃತ್ತಿಪರ ಕೋರ್ಸ್ಗಳಿಗೆ ಅನುಸರಿಸುತ್ತಿರುವ ನಿಯಮಗಳನ್ನು ಅಳವಡಿಸಿಕೊಂಡು ಎರಡು ವರ್ಷಗಳ ಬಿ.ಇಡಿ ಕೋರ್ಸುಗಳ ಸೀಟುಗಳ ಹಂಚಿಕೆಯ ಪ್ರಕ್ರಿಯೆಯನ್ನು ಕೈಗೊಳ್ಳಲು ಸರ್ಕಾರವು ತನ್ನ ಆದೇಶ ಸಂಖ್ಯೆ ಇಡಿ 26 ಯುಜಿಹೆಚ್ (ಭಾಗ-1) ದಿನಾಂಕ 16-11-2026 ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕವನ್ನು ಪಾವತಿಸಿ ನಂತರ ಅರ್ಜಿಯನ್ನು ಮುದ್ರಿಸಿಟ್ಟುಕೊಂಡಲ್ಲಿ ಮಾತ್ರ ಎರಡು ವರ್ಷದ ಬಿ.ಇಡಿ - 2026ರ ಕೋರ್ಸ್ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಅಂತಹ ಅಭ್ಯರ್ಥಿಗಳು ಮಾತ್ರ ಅರ್ಹತೆಯನ್ನು ಪಡೆಯುತ್ತಾರೆ.
ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಮಾಹಿತಿ ಪುಸ್ತಕದ ಲಿಂಕ್ ಮೇಲೆ ಕ್ಲಿಕ್ ಮಾಡಿ
BED information bulletin https://share.google/3xRyp6mZ0Lv1scXhB
ಮೂಲ ದಾಖಲೆ ಸಲ್ಲಿಸುವುದು ಕಡ್ಡಾಯ
- ಸರ್ಕಾರದ ನಿರ್ದೇಶನದಂತೆ ಪ್ರಾಧಿಕಾರವು 2026ನೇ ಸಾಲಿನ ಎರಡು ವರ್ಷಗಳ ಬಿ.ಇಡಿ ಕೋರ್ಸುಗಳ ಪ್ರವೇಶಾತಿಗೆ ಸೀಟು ಹಂಚಿಕೆಯನ್ನು ಅಭ್ಯರ್ಥಿಗಳು ದಾಖಲಿಸಿರುವ options, ಮೆರಿಟ್ ಮತ್ತು ಸೀಟ್ ಮ್ಯಾಟ್ರಿಕ್ಸ್ ಅನುಸಾರ ರೋಸ್ಟರ್ ಪದ್ಧತಿಯಂತೆ ಸೀಟು ಹಂಚಿಕೆಯನ್ನು ಮಾಡಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
- ಫಲಿತಾಂಶ ಪ್ರಕಟಣೆಯ ನಂತರ, ಪ್ರಾಧಿಕಾರದ ಶುಲ್ಕ ಪಾವತಿಸಿ, seat confirmation slip ಪ್ರತಿಯೊಂದಿಗೆ ಆಯಾ ಕಾಲೇಜಿಗೆ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳೊಂದಿಗೆ ವರದಿ ಮಾಡಿಕೊಳ್ಳಬೇಕು.
- ಆದ್ದರಿಂದ ಅಭ್ಯರ್ಥಿಗಳ ಪ್ರವೇಶಾತಿಯ ಸಂದರ್ಭದಲ್ಲಿ ಅಭ್ಯರ್ಥಿಗಳ ಪದವಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಕಡ್ಡಾಯವಾಗಿ ಪರಿಶೀಲಿಸಿ ನಂತರ ಕಾಲೇಜಿನವರು ಪ್ರವೇಶಾತಿ ನೀಡತಕ್ಕದ್ದು. ಪ್ರವೇಶ ನೀಡುವ ಮೊದಲು ಎಲ್ಲಾ ಸರಿ ಇರುವ ಬಗ್ಗೆ ಪರಿಶೀಲಿಸಿ ಪ್ರವೇಶ ಪಡೆಯುವ / ನೀಡುವ ಜವಾಬ್ದಾರಿ ಅಭ್ಯರ್ಥಿಗಳು ಮತ್ತು ಸಂಬಂಧಿಸಿದ ಕಾಲೇಜುಗಳದ್ದಾಗಿರುತ್ತದೆ.
- ಪ್ರತಿಯೊಂದು ಅರ್ಹತಾ ಷರತ್ತಿಗೆ ಅಗತ್ಯವಿರುವ ಮೂಲ ದಾಖಲೆಗಳ ವಿವರಗಳನ್ನು KEA ವೆಬ್ಸೈಟ್ ನಲ್ಲಿ ಲಭ್ಯವಿರುವ ಬಿ.ಇಡಿ ಮಾಹಿತಿ ಕೈಪಿಡಿಯಲ್ಲಿ (Information Bulletin) ನೀಡಲಾಗಿದೆ.
- ಅಭ್ಯರ್ಥಿಯು ಅಗತ್ಯವಿರುವ ಮೂಲ ದಾಖಲೆಗಳನ್ನು ಸಲ್ಲಿಸಲು ವಿಫಲವಾದರೆ, ಅವರಿಗೆ ಹಂಚಿಕೆ ಮಾಡಲಾದ ಸೀಟನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ. ಅಂತಹ ಸೀಟುಗಳನ್ನು ಮತ್ತೆ ಸೀಟುಗಳ ಪೂಲ್ಗೆ (seat pool) ಸೇರಿಸಲಾಗುತ್ತದೆ ಮತ್ತು ಮುಂದಿನ ಸುತ್ತಿನಲ್ಲಿ ಮತ್ತೊಬ್ಬ ಅರ್ಹ ಅಭ್ಯರ್ಥಿಗೆ ನೀಡಲಾಗುತ್ತದೆ.
- ಎಲ್ಲಾ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅಗತ್ಯವಿರುವ ಮೂಲ ದಾಖಲೆಗಳು | ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಮೂಲ ದಾಖಲೆಗಳನ್ನು ಸಲ್ಲಿಸದಿರಲು ಯಾವುದೇ ನೆಪಗಳನ್ನು ಸ್ವೀಕರಿಸಲಾಗುವುದಿಲ್ಲ.
- ಅಭ್ಯರ್ಥಿಗಳಿಗೆ ಪ್ರವೇಶ ನೀಡುವ ಮೊದಲು, ಕಾಲೇಜು ಆಡಳಿತ ಮಂಡಳಿಯು "ಪರಿಶೀಲನಾ ಚೀಟಿ"ಯ (Verification Slip) ಆಧಾರದ ಮೇಲೆ ಅರ್ಹತಾ ಮಾನದಂಡಗಳು ಮತ್ತು ದಾಖಲೆಗಳನ್ನು ಪರಿಶೀಲಿಸಬೇಕು ಹಾಗೂ ಎಲ್ಲಾ ಮೂಲ ದಾಖಲೆಗಳನ್ನು ಸಂಗ್ರಹಿಸಿಕೊಳ್ಳಬೇಕು ಎಂದು ಕೆಇಎ ತಿಳಿಸಿದೆ.