ಬೆಂಗಳೂರು: ಎಂಜಿನಿಯರಿಂಗ್ ಸೇರಿ ಇತರ ಸಿಇಟಿ ಕೋರ್ಸ್‌ಗಳ (KCET Counselling 2026) ಮೂರನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವಿ (KEA) ಲಿಂಕ್ ಬಿಡುಗಡೆ ಮಾಡಿದೆ. ಎರಡನೇ ಸುತ್ತಿನಲ್ಲಿ ಯಾವುದೇ ಸೀಟು ಹಂಚಿಕೆಯಾಗದವರು/ ಹಂಚಿಕೆ ನಂತರ ದಂಡ ಪಾವತಿಸಿ ಸೀಟು ರದ್ದು ಮಾಡಿಕೊಂಡವರು ಹೊಸದಾಗಿ ಆಪ್ಷನ್ಸ್ ದಾಖಲಿಸಲು ಸೆ.3ರ ಸಂಜೆ 6 ಗಂಟೆವರೆಗೆ ಅವಕಾಶ ನೀಡಲಾಗಿದೆ.
ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ. ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ಹಾಗೂ ಅಪ್ ಗ್ರೆಡೇಷನ್‌ಗೆ ಹೋಗಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸೆ.2ರಂದು ಬೆಳಿಗ್ಗೆ 11ರಿಂದ ಸೆ.3ರ ಸಂಜೆ 6 ಗಂಟೆವರೆಗೆ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ.
ಮೂರನೇ ಸುತ್ತಿನಲ್ಲಿ ಭಾಗವಹಿಸುವವರು ಹೊಸದಾಗಿಯೇ ಆಪ್ಷನ್ಸ್ ದಾಖಲಿಸಬೇಕು. ಈ ಹಿಂದಿನ ಆಪ್ಷನ್ಸ್ ಗಣನೆಗೆ ತೆಗೆದುಕೊಳ್ಳುವುದಿಲ್ಲ. 3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದರೆ ಕಾಲೇಜಿನಲ್ಲಿ ಪ್ರವೇಶ ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ ಶುಲ್ಕದ ಐದು ಪಟ್ಟು ದಂಡ ಪಾವತಿಸಬೇಕಾಗುತ್ತದೆ. ಹೀಗಾಗಿ ಇಷ್ಟ ಇರುವ ಕಾಲೇಜು ಮತ್ತು ಕೋರ್ಸ್‌ಗಳನ್ನೇ ಆಪ್ಷನ್ಸ್ ದಾಖಲಿಸುವಾಗ ಪರಿಗಣಿಸಲು ಕೋರಲಾಗಿದೆ.
ಎರಡನೇ ಸುತ್ತಿನ ಸೀಟು ಹಂಚಿಕೆ ನಂತರ ಯಾವುದೇ ಚಾಯ್ಸ್ ಆಯ್ಕೆ ಮಾಡದ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗುವುದಿಲ್ಲ. ಹಾಗೆಯೇ ಎರಡನೇ ಸುತ್ತಿನಲ್ಲಿ ಚಾಯ್ಸ್-4 ಹಾಕಿರುವ ಅಭ್ಯರ್ಥಿಗಳು ಕೂಡ ಭಾಗವಹಿಸಲು ಆಗುವುದಿಲ್ಲ. ಆದರೆ ಅಂತಹವರು ವೈದ್ಯಕೀಯ ಕೋರ್ಸ್‌ಗಳ ಆಪ್ಷನ್ಸ್ ಇದ್ದರೆ ಮಾತ್ರ ಎರಡನೇ ಸುತ್ತಿನ ವೈದ್ಯಕೀಯ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದು. ಎರಡನೇ ಸುತ್ತಿನ ನಂತರ ಉಳಿದಿರುವ ಸೀಟುಗಳ ವಿವರಗಳನ್ನು ವೆಬ್ ಸೈಟ್‌ನಲ್ಲಿ ಪ್ರಕಟಿಸಿದ್ದು, ಅವುಗಳನ್ನು ನೋಡುವಂತೆ ಕೋರಿದ್ದಾರೆ.