ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ashoka University: ಅಶೋಕ ವಿವಿ ನೂತನ ಉಪಕುಲಪತಿಯಾಗಿ ಪ್ರೊ. ರಿಷಿಕೇಶ ಟಿ. ಕೃಷ್ಣನ್ ನೇಮಕ

Ashoka University: ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾದ 'ಅಶೋಕ ವಿಶ್ವವಿದ್ಯಾಲಯ'ದ ನೂತನ ಉಪಕುಲಪತಿಯಾಗಿ ಪ್ರೊ. ರಿಷಿಕೇಶ ಟಿ. ಕೃಷ್ಣನ್ ನೇಮಕವಾಗಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ನಡೆಸಿದ ಕಟ್ಟುನಿಟ್ಟಿನ ಆಯ್ಕೆ ಪ್ರಕ್ರಿಯೆಯ ನಂತರ ಈ ನೇಮಕ ಮಾಡಲಾಗಿದೆ.

ಅಶೋಕ ವಿವಿ ನೂತನ ಉಪಕುಲಪತಿ ಪ್ರೊ. ರಿಷಿಕೇಶ ಟಿ. ಕೃಷ್ಣನ್.

ಬೆಂಗಳೂರು, ಜೂ.15: ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾದ 'ಅಶೋಕ ವಿಶ್ವವಿದ್ಯಾಲಯ'ದ (Ashoka University) ನೂತನ ಉಪಕುಲಪತಿಯಾಗಿ ಪ್ರೊ. ರಿಷಿಕೇಶ ಟಿ. ಕೃಷ್ಣನ್ ನೇಮಕವಾಗಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ನಡೆಸಿದ ಕಟ್ಟುನಿಟ್ಟಿನ ಆಯ್ಕೆ ಪ್ರಕ್ರಿಯೆಯ ನಂತರ ಈ ನೇಮಕ ಮಾಡಲಾಗಿದೆ. ಪ್ರೊ. ರಿಷಿಕೇಶ ಅವರು 2026ರ ಆಗಸ್ಟ್ 1ರಿಂದ ಅಧಿಕಾರ ವಹಿಸಿಕೊಳ್ಳಲಿದ್ದು, ಮೂರು ವರ್ಷಗಳ ಕಾಲ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಹಿಂದೆ ಉಪಕುಲಪತಿಯಾಗಿದ್ದ ಪ್ರೊ. ಸೋಮಕ್ ರಾಯ್‌ಚೌಧರಿ ಅವರ ಜಾಗಕ್ಕೆ ಪ್ರೊ. ರಿಷಿಕೇಶ ಟಿ. ಕೃಷ್ಣನ್ ಅವರು ಬರಲಿದ್ದಾರೆ.

ಯಾರು ಈ ಪ್ರೊ. ರಿಷಿಕೇಶ ಟಿ. ಕೃಷ್ಣನ್?

ಪ್ರೊ. ರಿಷಿಕೇಶ ಅವರು ಭಾರತದ ಪ್ರಸಿದ್ಧ ಹಾಗೂ ಗೌರವಾನ್ವಿತ ಶಿಕ್ಷಣ ತಜ್ಞರಲ್ಲಿ ಒಬ್ಬರಾಗಿದ್ದಾರೆ. ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ದಶಕಗಳ ಅನುಭವವನ್ನು ಇವರು ಹೊಂದಿದ್ದಾರೆ. ಕಾನ್ಪುರದ ಐಐಟಿಯಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್, ಮತ್ತು ಐಐಎಂ-ಅಹಮದಾಬಾದ್‌ನಿಂದ ಮ್ಯಾನೇಜ್ಮೆಂಟ್ ಹಾಗೂ ಪಬ್ಲಿಕ್ ಪಾಲಿಸಿಯಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.

ಅವರು ಈ ಹಿಂದೆ ಐಐಎಂ-ಇಂದೋರ್ ಮತ್ತು ಐಐಎಂ-ಬೆಂಗಳೂರಿನ ನಿರ್ದೇಶಕರಾಗಿದ್ದರು. ಇದಿಷ್ಟೇ ಅಲ್ಲದೆ, ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿ (ಎಚ್‌ಇಎಫ್‌ಎ) ಮತ್ತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಆಡಳಿತ ಮಂಡಳಿಯಲ್ಲೂ ಸೇವೆ ಸಲ್ಲಿಸಿದ್ದರು. ಭಾರತಕ್ಕೆ ಡೇಟಾ ಸಂರಕ್ಷಣಾ ಚೌಕಟ್ಟನ್ನು ಪ್ರಸ್ತಾಪಿಸಿದ 'ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಸಮಿತಿ'ಯ ಸದಸ್ಯರಾಗಿಯೂ ಇವರು ಕೆಲಸ ಮಾಡಿದ್ದರು.

"ಫ್ರಮ್‌ ಜುಗಾಡ್‌ ಟು ಸಿಸ್ಟಮ್ಯಾಟಿಕ್‌ ಇನ್ನೋವೇಶನ್”‌ ಎಂಬ ಇವರ ಪುಸ್ತಕ ವ್ಯಾಪಕ ಮನ್ನಣೆ ಗಳಿಸಿದೆ. 2025ರಲ್ಲಿ ಐಐಟಿ-ಕಾನ್ಪುರ ಇವರಿಗೆ ತನ್ನ ಅತ್ಯುನ್ನತ ಗೌರವವಾದ 'ಡಿಸ್ಟಿಂಗ್ವಿಶ್ಡ್ ಅಲುಮ್ನಿ ಅವಾರ್ಡ್'ನ್ನು ನೀಡಿ ಗೌರವಿಸಿದೆ.

ಈ ನೇಮಕಾತಿಯ ಕುರಿತು ಹರ್ಷ ವ್ಯಕ್ತಪಡಿಸಿರುವ ಅಶೋಕ ವಿಶ್ವವಿದ್ಯಾಲಯದ ಕುಲಪತಿ ರುದ್ರಾಂಗ್ಶು ಮುಖರ್ಜಿ, ʼಪ್ರೊ. ಕೃಷ್ಣನ್ ಅವರ ಅಪಾರ ಪಾಂಡಿತ್ಯ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ ಅನುಭವ ಅಶೋಕ ವಿವಿಯನ್ನು ಮುನ್ನಡೆಸಲು ಅತ್ಯಂತ ಸೂಕ್ತವಾಗಿದೆ. ಅವರನ್ನು ವಿವಿಯ ಕುಟುಂಬಕ್ಕೆ ಸ್ವಾಗತಿಸುತ್ತೇವೆ. ಇದೇ ವೇಳೆ, ವಿವಿಯ ಶೈಕ್ಷಣಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ ನಿರ್ಗಮಿತ ಉಪಕುಲಪತಿ ಪ್ರೊ. ಸೋಮಕ್ ರಾಯ್‌ಚೌಧರಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆʼ ಎಂದರು.

ಅಶೋಕ ವಿಶ್ವವಿದ್ಯಾಲಯದ ಸ್ಥಾಪಕ ಮತ್ತು ಟ್ರಸ್ಟಿ ಪ್ರಮಥ್ ರಾಜ್ ಸಿನ್ಹಾ ಮಾತನಾಡಿ, ʼಪ್ರೊ. ರಿಷಿಕೇಶ ಅವರು ಭಾರತದ ಅತ್ಯಂತ ಗೌರವಾನ್ವಿತ ಶೈಕ್ಷಣಿಕ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರ ದೂರದೃಷ್ಟಿ ಮತ್ತು ನಾಯಕತ್ವವು ಅಶೋಕ ವಿಶ್ವವಿದ್ಯಾಲಯವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಪಡಿಸಲಿದೆʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ನೇಮಕದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೊ. ರಿಷಿಕೇಶ ಟಿ. ಕೃಷ್ಣನ್, ʼಹೊಸ ಪೀಳಿಗೆಯ ಸಂಶೋಧನಾ-ಆಧಾರಿತ ಸಂಸ್ಥೆಯಾಗಿ ಅಶೋಕ ವಿಶ್ವವಿದ್ಯಾಲಯವು ಅತ್ಯುನ್ನತ ಮಾನದಂಡಗಳನ್ನು ಹೊಂದಿದೆ. ಇಂತಹ ಪ್ರತಿಷ್ಠಿತ ವಿವಿಯನ್ನು ಮುನ್ನಡೆಸುವುದು ನನಗೆ ಸಿಕ್ಕ ದೊಡ್ಡ ಗೌರವ. ವಿಶ್ವವಿದ್ಯಾಲಯದ ನಿರಂತರ ಬೆಳವಣಿಗೆಗಾಗಿ ಬೋಧಕರು, ವಿದ್ಯಾರ್ಥಿಗಳು ಮತ್ತು ಎಲ್ಲಾ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆʼ ಎಂದು ಹರ್ಷ ವ್ಯಕ್ತಪಡಿಸಿದರು.

ಇನ್ನು ನಿರ್ಗಮಿತ ಉಪಕುಲಪತಿ ಪ್ರೊ. ಸೋಮಕ್ ರಾಯ್‌ಚೌಧರಿ ಅವರ ಅವಧಿಯಲ್ಲಿ ಅಶೋಕ ವಿಶ್ವವಿದ್ಯಾಲಯವು ಭಾರಿ ಬೆಳವಣಿಗೆ ಕಂಡಿತ್ತು. ಅವರ ನಾಯಕತ್ವದಲ್ಲಿ ಮ್ಯಾನೇಜ್ಮೆಂಟ್, ಬಯೋಸೈನ್ಸ್, ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಸೇರಿದಂತೆ ಏಳು ಹೊಸ ವಿಭಾಗಗಳನ್ನು ಆರಂಭಿಸಲಾಗಿತ್ತು. ಜತೆಗೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಖಭೌತಶಾಸ್ತ್ರಜ್ಞರಾಗಿರುವ ಪ್ರೊ. ರಾಯ್‌ಚೌಧರಿ ಅವರು ಮುಂದೆಯೂ ಅಶೋಕ ವಿವಿಯಲ್ಲಿ ವಿಜ್ಞಾನಿ ಮತ್ತು ಪ್ರಾಧ್ಯಾಪಕರಾಗಿ ಮುಂದುವರಿಯಲಿದ್ದಾರೆ.‌

Veeraloka pustaka santhe: ತುಮಕೂರಿನಲ್ಲಿ ಜೂ.26ರಿಂದ 3 ದಿನ ʼವೀರಲೋಕ ಪುಸ್ತಕ ಸಂತೆʼ; ಲೋಗೋ ಬಿಡುಗಡೆ ಮಾಡಿದ ಡಿಸಿ ಶುಭ ಕಲ್ಯಾಣ್

ದೆಹಲಿ-ಎನ್‌ಸಿಆರ್‌ನಲ್ಲಿ 2014ರಲ್ಲಿ ಸ್ಥಾಪನೆಯಾದ ಅಶೋಕ ವಿಶ್ವವಿದ್ಯಾಲಯವು ನೈಸರ್ಗಿಕ ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯಗಳಲ್ಲಿ ವಿಶ್ವದರ್ಜೆಯ ಶಿಕ್ಷಣ ನೀಡುವ ಪ್ರಧಾನ ಸಂಸ್ಥೆಯಾಗಿದೆ. ಪ್ರಸ್ತುತ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಶೇ. 57ರಷ್ಟು ಮಹಿಳಾ ವಿದ್ಯಾರ್ಥಿಗಳಿದ್ದಾರೆ. ಶೇ. 47ರಷ್ಟು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ.