ಢಾಕಾ, ಡಿ. 28: ಉದ್ವಿಗ್ನಗೊಂಡಿರುವ ಬಾಂಗ್ಲಾದೇಶದಲ್ಲಿ (Bangladesh Unrest) ಅರಾಜಕತೆ ಮುಂದುವರಿದಿದ್ದು, ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಭಾರತ ವಿರೋಧಿ, ಬಾಂಗ್ಲಾದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿಯ (Sharif Osman Hadi) ಹತ್ಯೆಯ ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಮಧ್ಯೆ ಹಾದಿಯನ್ನು ಹತ್ಯೆಗೈದ ಇಬ್ಬರು ಪ್ರಮುಖ ಶಂಕಿತರು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಹಾದಿಯನ್ನು ಕೊಂದ ಬಳಿಕ ಮೇಘಾಲಯ ಗಡಿಯ ಮೂಲಕ ಭಾರತಕ್ಕೆ ಪ್ರವೇಶಿಸಿದ್ದಾಗಿ ಢಾಕಾ ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾಗಿ ದಿ ಡೈಲಿ ಸ್ಟಾರ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಹೆಚ್ಚುವರಿ ಆಯುಕ್ತ ಎಸ್.ಎನ್.ನಜ್ರುಲ್ ಇಸ್ಲಾಂ ಈ ಬಗ್ಗೆ ಮಾಹಿತಿ ನೀಡಿ, ʼʼಹಾದಿ ಹತ್ಯೆಯ ಪ್ರಮುಖ ಶಂಕಿತರಾದ ಫೈಸಲ್ ಕರೀಂ ಮಸೂದ್ ಮತ್ತು ಆಲಂಗಿರ್ ಶೇಕ್ ಸ್ಥಳೀಯ ಸಹಚರರ ಸಹಾಯದಿಂದ ಮೈಮೆನ್ಸಿಂಗ್‌ನ ಹಲುಘಾಟ್ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆʼʼ ಎಂದು ಹೇಳಿದ್ದಾರೆ.
ಷರೀಫ್ ಉಸ್ಮಾನ್ ಹಾದಿ ಹತ್ಯೆಯ ಶಂಕಿತರ ಪಲಾಯನದ ಬಗ್ಗೆ ಮಾಹಿತಿ:
ʼʼನಮಗೆ ದೊರೆತ ಮಾಹಿತಿ ಪ್ರಕಾರ ಶಂಕಿತರು ಈಗಾಗಲೇ ಭಾರತಕ್ಕೆ ಪಲಾಯನ ಮಾಡಿದ್ದಾರೆ. ಅವರಿಗೆ ಅಲ್ಲಿನ ಸ್ಥಳೀಯರ ಸಹಕಾರ ಸಿಕ್ಕಿದೆ. ಭಾರತದಲ್ಲಿ ಅವರನ್ನು ಪೂರ್ತಿ ಹೆಸರಿನ ಸ್ಥಳೀಯರೊಬ್ಬರು ಕರೆದುಕೊಂಡು ಹೋಗಿದ್ದಾರೆ. ಬಳಿಕ ಟ್ಯಾಕ್ಸಿ ಚಾಲಕ ಸಾಮಿ ಮೇಘಾಲಯದ ತುರ ನಗರಕ್ಕೆ ತಲುಪಿಸಿದ್ದಾರೆʼʼ ಎಂದು ನಜ್ರುಲ್ ಇಸ್ಲಾಂ ತಿಳಿಸಿದ್ದಾರೆ. ʼʼಶಂಕಿತರಿಗೆ ಸಹಾಯ ಮಾಡಿದ ಇಬ್ಬರು ವ್ಯಕ್ತಿಗಳನ್ನು ಭಾರತೀಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ದೊರೆತಿಲ್ಲʼʼ ಎಂದು ವಿವರಿಸಿದ್ದಾರೆ.
ʼʼಭಾರತೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಈ ವಿಚಾರವಾಗಿ ಮಾತುಕತೆ ನಡೆಯುತ್ತಿದೆ. ಶಂಕಿತರ ಬಂಧನ ಮತ್ತು ಹಸ್ತಾಂತರದ ಬಗ್ಗೆ ಒತ್ತಡ ಹೇರಲಾಗುತ್ತದೆʼʼ ಎಂದಿದ್ದಾರೆ. ಈ ಬಗ್ಗೆ ಭಾರತೀಯ ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆ ಹೊರಡಿಸಿಲ್ಲ.
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹಿಂಸಾಚಾರ ಖಂಡಿಸಿ ಬೀದಿಗಿಳಿದ ಸಂತರು, ಸನ್ಯಾಸಿಗಳು
ಯಾರು ಈ ಉಸ್ಮಾನ್ ಹಾದಿ?
ಬಾಂಗ್ಲಾದೇಶದ ಪ್ರಮುಖ ನಾಯಕನಾಗಿದ್ದ ಹಾದಿ ಭಾರತ ಮತ್ತು ಶೇಕ್ ಹಸೀನಾ ಅವರ ಪಕ್ಷ ಅವಾಮಿ ಲೀಗ್‌ನ ವಿರೋಧಿಯಾಗಿದ್ದ. ಕಳೆದ ವರ್ಷ ಶೇಕ್ ಹಸೀನಾ ಅವರ ಸರ್ಕಾರ ಪತನಕ್ಕೆ ಕಾರಣವಾದ ವಿದ್ಯಾರ್ಥಿಗಳ ಪ್ರತಿಭಟನೆಗೆ ಈತನೇ ಮುಂದಾಳತ್ವ ವಹಿಸಿದ್ದ. ಬಾಂಗ್ಲಾದಲ್ಲಿ ದಾಂಧಲೆ ಎಬ್ಬಿಸಿ ಶೇಕ್ ಹಸೀನಾ ಅವರ ಪಲಾಯನಕ್ಕ ಕಾರಣಕರ್ತನಾದ ಹಾದಿ ಬಳಿಕ ಇಂಕಿಲಾಬ್ ಮಂಚ ಎನ್ನುವ ಪಕ್ಷ ಹುಟ್ಟು ಹಾಕಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿದ್ದ.
ಹಾದಿಯ ಹತ್ಯೆ
ಹೀಗೆ ಬಾಂಗ್ಲಾದಲ್ಲಿ ಕೋಲಾಹಲ ಎಬ್ಬಿಸಿದ್ದ ಉಸ್ಮಾನ್ ಹಾದಿಯ ಮೇಲೆ ಢಾಕಾದಲ್ಲಿ ಡಿಸೆಂಬರ್ 12ರಂದು ಮುಸುಕುಧಾರಿ ಅಪರಿಚಿತರು ಗುಂಡು ಹಾರಿಸಿದ್ದರು. ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ 6 ದಿನಗಳ ಬಳಿಕ ಸಾವನ್ನಪ್ಪಿದ್ದ. ಹಾದಿಯ ಸಾವಿನ ಬಳಿಕ ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಅಲ್ಲಿನ ಅಲ್ಪ ಸಂಖ್ಯಾತ ಹಿಂದೂಗಳ ಮೇಲೆ ದುಷ್ಕರ್ಮಿಗಳು ನಿರಂತರ ದಾಳಿ ನಡೆಸುತ್ತಿದ್ದಾರೆ. ಈಗಾಗಲೇ ಇಬ್ಬರು ಹಿಂದೂ ಯುವಕರು ಬಲಿಯಾಗಿದ್ದಾರೆ.