ಟೆಹರಾನ್, ಫೆ. 28: ಇಸ್ರೇಲ್ ಮತ್ತು ಇರಾನ್ (Iran-Israel War) ನಡುವಿನ ಉದ್ವಿಗ್ನತೆ ಮತ್ತೊಂದು ಹಂತಕ್ಕೆ ತಲುಪಿದ್ದು, ಶನಿವಾರ ಮುಂಜಾನೆ ಇಸ್ರೇಲ್ ಮಹತ್ವದ ಸೇನಾ ಕಾರ್ಯಾಚರಣೆ ನಡೆಸಿದೆ. ಅಮೆರಿಕದೊಂದಿಗೆ ಸೇರಿ ಇರಾನ್ ಮೇಲೆ ದಾಳಿ ನಡೆಸಿದ್ದು (Israeli-US Airstrikes), ಈ ವೇಳೆ ಮಿನಾಬ್‌ನಲ್ಲಿ 40 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ ಎಂದು ಇರಾನ್ ತಿಳಿಸಿದೆ. ಆರಂಭದಲ್ಲಿ ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ದಾಳಿ ನಡೆಯಿತು. ಬಳಿಕ ದೇಶದ ವಿವಿಧ ಕಡೆಗಳಲ್ಲಿ ಸ್ಫೋಟ ಕಂಡುಬಂತು.
40 ಮಂದಿ ಸಾವನ್ನಪ್ಪಿರುವ ವಿಚಾರವನ್ನು ಇರಾನ್ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ. ದಾಳಿ ನಡೆದ ಶಾಲೆಯು ಹಾರ್ಮೋಜ್ಗನ್ ಪ್ರಾಂತ್ಯದ ಮಿನಾಬ್ ನಗರದಲ್ಲಿದೆ. ಇರಾನ್‌ನ ಅರೆ ಸೈನಿಕ ಕ್ರಾಂತಿಕಾರಿ ಗಾರ್ಡ್ ಈ ನಗರದಲ್ಲಿ ನೆಲೆಯನ್ನು ಹೊಂದಿದೆ. ಈ ಅರೆ ಸೈನಿಕ ಪಡೆಯ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ ಎನ್ನಲಾಗಿದೆ.
ಈ ವಾರದ ಆರಂಭದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಪರಮಾಣು ಮಾತುಕತೆಗಳು ಸ್ಥಗಿತಗೊಂಡ ಮಧ್ಯೆ ಈ ಬೆಳವಣಿಗೆ ನಡೆದಿದೆ. ಅಮೆರಿಕದೊಂದಿಗೆ ಸೇರಿ ಇಸ್ರೇಲ್ ಶನಿವಾರ ಇರಾನ್ ವಿರುದ್ಧ ಬೃಹತ್ ಸಂಘಟಿತ ದಾಳಿಗಳನ್ನು ನಡೆಸಿದೆ.
ಇಸ್ರೇಲ್ ದಾಳಿಗೆ ಇರಾನ್‌ನಲ್ಲಿ 40 ಸಾವು:
ಅಮೆರಿಕದ ʼಆಪರೇಷನ್ ಎಪಿಕ್ ಫರಿʼ ಹಾಗೂ ಇಸ್ರೇಲ್‌ನ ʼಆಪರೇಷನ್ ರೋರಿಂಗ್ ಲಯನ್ʼ ಕಾರ್ಯಾಚರಣೆ ಇರಾನ್ ಸರ್ಕಾರದ ಪ್ರಮುಖ ತಾಣ ಮತ್ತು ಸೈನಿಕ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿದೆ. ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಮತ್ತು ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಅವರನ್ನು ಇನ್ನಿಲ್ಲವಾಗಿಸುವುದೇ ಕಾರ್ಯಾಚರಣೆಯ ಉದ್ದೇಶ ಎಂದು ಎರಡೂ ದೇಶಗಳು ಹೇಳಿಕೊಂಡಿವೆ. ಈಗಾಗಲೇ ಈ ಇಬ್ಬರು ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ಏಳು ಕ್ಷಿಪಣಿ ದಾಳಿ ನಡೆದಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಸಂಘಟಿತ ದಾಳಿಯ ನಂತರ ಟೆಹರಾನ್ ಮತ್ತು ಇರಾನ್‌ನ ಇತರ ಹಲವು ನಗರಗಳ ಆಕಾಶ ಹೊಗೆಯಿಂದ ಆವರಿಸಿರುವುದು ಕಂಡು ಬಂದಿದೆ. ಜತೆಗೆ ಅಲ್ಲಲ್ಲಿ ಸ್ಫೋಟದ ಸದ್ದು ಕೇಳಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಭೀಕರ ಸ್ಫೋಟದ ದೃಶ್ಯ:
ಸುರಕ್ಷಿತ ಜಾಗಕ್ಕೆ ಖಮೇನಿ ಸ್ಥಳಾಂತರ
ಅದಾಗ್ಯೂ ಖಮೇನಿ ನಿಗೂಢ ಸ್ಥಳದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಇರಾನ್ ಹೇಳಿದೆ. ಇಸ್ರೇಲ್-ಅಮೆರಿಕ ದಾಳಿಗಳಿಗೆ ಪ್ರತೀಕಾರವಾಗಿ ಇರಾನ್ ಕುವೈತ್, ಕತಾರ್, ಬಹ್ರೈನ್ ಮತ್ತು ಯುಎಇಯಂತಹ ಗಲ್ಫ್ ರಾಷ್ಟ್ರಗಳ ಅನೇಕ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ಇದು ಇಡೀ ಮಧ್ಯ ಪ್ರಾಚ್ಯವನ್ನು ಪೂರ್ಣ ಪ್ರಮಾಣದ ಸಂಘರ್ಷಕ್ಕೆ ತಳ್ಳಿದೆ. ಇದರ ಪರಿಣಾಮ ಹೆಚ್ಚಿನ ಮಧ್ಯ ಪ್ರಾಚ್ಯ ರಾಷ್ಟ್ರಗಳು ತಮ್ಮ ವಾಯು ಪ್ರದೇಶವನ್ನು ಮುಚ್ಚಿವೆ. ಜತೆಗೆ ಜಾಗತಿಕ ವಿಮಾನಯಾನ ಸಂಸ್ಥೆಗಳು ಮಧ್ಯ ಪ್ರಾಚ್ಯದಾದ್ಯಂತ ತಮ್ಮ ವಿಮಾನ ಯಾನಗಳನ್ನು ಸ್ಥಗಿತಗೊಳಿಸಿವೆ.
ಇಸ್ರೇಲ್–ಇರಾನ್ ಯುದ್ಧ ಭೀತಿ; ಭಾರತೀಯ ನಾಗರಿಕರಿಗೆ ತುರ್ತು ಎಚ್ಚರಿಕೆ ರವಾನಿಸಿದ ಕೇಂದ್ರ
ಇರಾನ್ ತನ್ನ ಪರಮಾಣು ಮಹತ್ವಾಕಾಂಕ್ಷೆಯನ್ನು ತ್ಯಜಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.