ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತದಿಂದ ಮರಳುತ್ತಿದ್ದ ಇರಾನ್‌ ಹಡಗಿನ ಮೇಲೆ ಅಮೆರಿಕ ದಾಳಿ; 80 ಮಂದಿ ಸಾವು: ಭಯಾನಕ ವಿಡಿಯೊ ರಿಲೀಸ್‌

US-Israel-Iran War: ಭಾರತದಿಂದ ಮರಳುತ್ತಿದ್ದ ಇರಾನ್‌ ಯುದ್ಧನೌಕೆ ಐಆರ್​ಐಎಸ್ ದೇನಾ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ 80ಕ್ಕಿಂತ ಅಧಿಕ ಮಂದಿ ಮೃತಪಟ್ಟಿದ್ದಾರೆ. ಶ್ರೀಲಂಕಾ ದಕ್ಷಿಣ ಕರಾವಳಿ ಸಮೀಪ ಈ ದಾಳಿ ನಡೆದಿದೆ. ಇರಾನ್‌ನ ಯುದ್ಧಹಡಗನ್ನು ಹೊಡೆದು ಮುಳುಗಿಸಿದ್ದೇವೆ ಎಂದು ಅಮೆರಿಕ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಇರಾನ್‌ ಯುದ್ಧನೌಕೆ

ಕೊಲಂಬೋ, ಮಾ. 4: ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ದಿನೇ ದಿನ ಬಿಗಡಾಯಿಸುತ್ತಿದೆ (US-Israel-Iran War). ಯುದ್ಧ ಆರಂಭವಾಗಿ 5 ದಿನ ಕಳೆದಿದ್ದು, ದಾಳಿ-ಪ್ರತಿ ದಾಳಿ ಮುಂದುವರಿದಿದೆ. ಈ ಮಧ್ಯೆ ಯುದ್ಧದ ಬಿಸಿ ಶ್ರೀಲಂಕಾಕ್ಕೂ ತಟ್ಟಿದೆ. ಭಾರತದಿಂದ ಮರಳುತ್ತಿದ್ದ ಇರಾನ್‌ ಯುದ್ಧನೌಕೆ ಐಆರ್​ಐಎಸ್ ದೇನಾ (IRIS Dena) ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ 80ಕ್ಕಿಂತ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶ್ರೀಲಂಕಾ ದಕ್ಷಿಣ ಕರಾವಳಿ ಸಮೀಪ ಈ ದಾಳಿ ನಡೆದಿದೆ. ಇರಾನ್‌ನ ಯುದ್ಧಹಡಗನ್ನು ಹೊಡೆದು ಮುಳುಗಿಸಿದ್ದೇವೆ ಎಂದು ಅಮೆರಿಕ ಹೇಳಿಕೊಂಡಿದೆ.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ (Pete Hegseth) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ‘ʼಇರಾನ್ ಯುದ್ಧಹಡಗನ್ನು ನಮ್ಮ ಸಬ್‌ಮರೀನ್ ಟಾರ್ಪಿಡೋ ಮೂಲಕ ಹೊಡೆಯಲಾಗಿದೆʼʼ ಎಂದು ತಿಳಿಸಿದ್ದಾರೆ. ಅದಾಗ್ಯೂ ಅಮೆರಿಕ ಮೃತರ ಸಂಖ್ಯೆಯನ್ನು ದೃಢಪಡಿಸಿಲ್ಲ. ಇರಾನ್ ವಿರುದ್ಧದ ಯುದ್ಧವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವುದನ್ನು ಈ ಮೂಲಕ ಅಮೆರಿಕ ಸ್ಪಷ್ಟಪಡಿಸಿದೆ. ದಾಳಿಯನ್ನು ತೋರಿಸುವ ವಿಡಿಯೊ ಬಿಡುಗಡೆ ಮಾಡಿದೆ. ಅದರಲ್ಲಿ ಇರಾನ್‌ ಯುದ್ಧಹಡಗು ದಾಳಿಗೆ ತತ್ತರಿಸಿ ಸಮುದ್ರದಲ್ಲಿ ಮುಳುಗುತ್ತಿರುವುದು ಕಂಡು ಬಂದಿದೆ.

ಅಮೆರಿಕ ಬಿಡುಗಡೆ ಮಾಡಿದ ದಾಳಿಯ ದೃಶ್ಯ:



ದಾಳಿಗೆ ಸಿಕ್ಕಿ ಮುಳುಗಿದ ಐಆರ್​ಐಎಸ್ ದೇನಾ ಯುದ್ಧನೌಕೆಯಿಂದ 32 ಮಂದಿಯನ್ನು ರಕ್ಷಿಸಲಾಗಿದೆ ಎಂದು ಶ್ರೀಲಂಕಾ ತಿಳಿಸಿದೆ. ಜತೆಗೆ 148 ಮಂದಿ ನಾಪತ್ತೆಯಾಗಿರುವುದಾಗಿಯೂ ಮಾಹಿತಿ ನೀಡಿದೆ. 2ನೇ ವಿಶ್ವ ಮಹಾಯುದ್ಧದ ಬಳಿಕ ಅಮೆರಿಕ ಟಾರ್ಪಿಡೋ ಬಳಸಿ ಯುದ್ಧಹಡಗನ್ನು ಮುಳುಗಿಸಿರುವುದು ಇದೇ ಮೊದಲು.

ವಿಶೇಷ ಎಂದರೆ ಭಾರತೀಯ ನೌಕಾಪಡೆ ಆಯೋಜಿಸಿದ್ದ ಐಎಫ್​ಆರ್/ಮಿಲನ್ ಸಮರಾಭ್ಯಾಸದಲ್ಲಿ ಭಾಗವಹಿಸಿ ಐಆರ್‌ಐಎಸ್ ದೇನಾ ಯುದ್ಧನೌಕೆ ಇರಾನ್​ಗೆ ವಾಪಸಾಗುತ್ತಿದ್ದಾಗ ಶ್ರೀಲಂಕಾ ವ್ಯಾಪ್ತಿಯಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಈ ಹಡಗಿನಲ್ಲಿ 180ಕ್ಕೂ ಹೆಚ್ಚು ಮಂದಿ ಇದ್ದರು. ಆ ಮೂಲಕ ಯುದ್ಧ ನೆಲ, ವಾಯು ಪ್ರದೇಶದ ಬಳಿಕ ಜಲ ಪ್ರದೇಶಕ್ಕೂ ವ್ಯಾಪಿಸಿದೆ.

ಹೊರ್ಮುಜ್ ಜಲಸಂಧಿ ಬಂದ್: ಅತಂತ್ರ ಸ್ಥಿತಿಯಲ್ಲಿ 37 ಭಾರತೀಯ ಹಡಗುಗಳು, 1,109 ನಾವಿಕರು

ಶ್ರೀಲಂಕಾ ಹೇಳಿದ್ದೇನು?

ಶ್ರೀಲಂಕಾದ ವಿದೇಶಾಂಗ ಸಚಿವ ವಿಜಿತಾ ಹೆರಾತ್ ಸಂಸತ್ತಿಗೆ ಮಾಹಿತಿ ನೀಡಿ, ʼʼಇರಾನಿನ ಹಡಗಿನಲ್ಲಿ ಸುಮಾರು 180 ಜನರು ಇದ್ದರು. ಶ್ರೀಲಂಕಾದ ಕರಾವಳಿಯಿಂದ ಸುಮಾರು 40 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ದಾಳಿ ನಡೆದಿದೆ. ಬುಧವಾರ (ಮಾರ್ಚ್‌ 4) ಬೆಳಗ್ಗೆ 5.08ಕ್ಕೆ ಇರಾನ್ ಹಡಗಿನಿಂದ ತುರ್ತು ಸಂದೇಶ ಬಂದಿತ್ತು. ಬಳಿಕ ರಕ್ಷಣೆಗಾಗಿ 2 ಹಡಗನ್ನು ಕಳುಹಿಸಲಾಯಿತು'' ಎಂದಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ವಿಶಾಖಪಟ್ಟಣಕ್ಕೆ ಬಂದಿದ್ದ ಹಡಗು

ಐಆರ್‌ಐಎನ್‌ಎಸ್ ದೇನಾ ಹಡಗು ಇತ್ತೀಚೆಗೆ ವಿಶಾಖಪಟ್ಟಣದಲ್ಲಿ ನಡೆದ ಐಎಫ್​ಆರ್/ಮಿಲನ್ ಸಮರಾಭ್ಯಾಸದಲ್ಲಿ ಭಾಗವಹಿಸಿತ್ತು. ಫೆಬ್ರವರಿ 18ರಿಂದ ಫೆಬ್ರವರಿ 25ರವರೆಗೆ ಬಂಗಾಳಕೊಲ್ಲಿಯಲ್ಲಿ ನಡೆದ ನೌಕಾ ಕವಾಯತಿನಲ್ಲಿ ಪಾಲ್ಗೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಳುಗುವ ಎರಡು ವಾರಗಳ ಮೊದಲು ವಿಶಾಖಪಟ್ಟಣದಲ್ಲಿ ಭಾರತ ಈ ಇರಾನ್‌ ಹಡಗನ್ನು ಔಪಚಾರಿಕವಾಗಿ ಸ್ವಾಗತಿಸಿತ್ತು.

ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author