Nobel Peace Prize: ಜಗತ್ತಿನ ಶಾಂತಿ ಕಾಪಾಡುವಲ್ಲಿ ಟ್ರಂಪ್ ಪ್ರಮುಖ ಪಾತ್ರವಹಿಸಿದ್ದಾರೆ; ನೊಬೆಲ್‌ಗೆ ಅವರು ಸೂಕ್ತ ವ್ಯಕ್ತಿ ಎಂದ ಶ್ವೇತಭವನ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆರು ತಿಂಗಳ ಅಧಿಕಾರಾವಧಿಯಲ್ಲಿ ತಿಂಗಳಿಗೆ ಒಂದು ಶಾಂತಿ ಒಪ್ಪಂದವನ್ನು ಮಾಡಿಸಿದ್ದಾರೆ. ಥೈಲ್ಯಾಂಡ್ ಮತ್ತು ಕಾಂಬೋಡಿಯಾ, ಇಸ್ರೇಲ್ ಮತ್ತು ಇರಾನ್, ರುವಾಂಡಾ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಭಾರತ ಮತ್ತು ಪಾಕಿಸ್ತಾನ, ಸೆರ್ಬಿಯಾ ಮತ್ತು ಕೊಸೊವೊ, ಈಜಿಪ್ಟ್ ಮತ್ತು ಇಥಿಯೋಪಿಯಾ ನಡುವಿನ ಸಂಘರ್ಷಗಳನ್ನು ಕೊನೆಗೊಳಿಸಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ.


ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ( US President) ಡೊನಾಲ್ಡ್ ಟ್ರಂಪ್ (Donald Trump) ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ (Nobel Peace Prize) ಅರ್ಹರು. ಅವರು ತಮ್ಮ ಆರು ತಿಂಗಳ ಅಧಿಕಾರಾವಧಿಯಲ್ಲಿ ತಿಂಗಳಿಗೆ ಒಂದು ಶಾಂತಿ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಇಸ್ರೇಲ್ ಮತ್ತು ಇರಾನ್ ಹಾಗೂ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಗಳು ಸೇರಿದಂತೆ ಅವರು ಆರು ಸಂಘರ್ಷಗಳನ್ನು ಕೊನೆಗೊಳಿಸಿದ್ದಾರೆ. ಹೀಗಾಗಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು ಎಂದು ಗುರುವಾರ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಆರು ತಿಂಗಳ ಅಧಿಕಾರಾವಧಿಯಲ್ಲಿ ತಿಂಗಳಿಗೆ ಒಂದು ಶಾಂತಿ ಒಪ್ಪಂದವನ್ನು ಮಾಡಿಸಿದ್ದಾರೆ. ಹೀಗಾಗಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ.
ಟ್ರಂಪ್ ಅವರು ಥೈಲ್ಯಾಂಡ್ ಮತ್ತು ಕಾಂಬೋಡಿಯಾ, ಇಸ್ರೇಲ್ ಮತ್ತು ಇರಾನ್, ರುವಾಂಡಾ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಭಾರತ ಮತ್ತು ಪಾಕಿಸ್ತಾನ, ಸೆರ್ಬಿಯಾ ಮತ್ತು ಕೊಸೊವೊ, ಈಜಿಪ್ಟ್ ಮತ್ತು ಇಥಿಯೋಪಿಯಾ ನಡುವಿನ ಸಂಘರ್ಷಗಳನ್ನು ಕೊನೆಗೊಳಿಸಿದ್ದಾರೆ ಎಂದು ಅವರು ಹೇಳಿದರು.
ನೊಬೆಲ್ ಶಾಂತಿ ಪ್ರಶಸ್ತಿ
1895ರಲ್ಲಿ ಆಲ್ಫ್ರೆಡ್ ನೊಬೆಲ್ ಅವರು ಬರೆದಿರುವ ವಿಲ್ ಪ್ರಕಾರ ಈ ಪ್ರಶಸ್ತಿಯನ್ನು ವ್ಯಕ್ತಿಗಳು, ಸಂಸ್ಥೆಗಳು ಅಥವಾ ಚಳುವಳಿಗಳಿಗೆ ನೀಡಲಾಗುತ್ತದೆ. ರಾಷ್ಟ್ರಗಳ ನಡುವಿನ ಭ್ರಾತೃತ್ವಕ್ಕಾಗಿ ಶಾಂತಿ ಸಮಾವೇಶಗಳನ್ನು ನಡೆಸುವುದು ಮತ್ತು ಉತ್ತೇಜಿಸುವುದಕ್ಕಾಗಿ ಹೆಚ್ಚಿನ ಆದ್ಯತೆ ನೀಡಿರುವ ಅಥವಾ ಇದಕ್ಕಾಗಿ ಅತ್ಯುತ್ತಮ ಕೆಲಸ ಮಾಡಿರುವವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಯಾರು ನೀಡುತ್ತಾರೆ?
ನೊಬೆಲ್ ಶಾಂತಿ ಪ್ರಶಸ್ತಿಯನ್ನು ನಾರ್ವೆಯಲ್ಲಿ ನಾರ್ವೇಜಿಯನ್ ನೊಬೆಲ್ ಸಮಿತಿಯು ನೀಡುತ್ತದೆ. ನಾರ್ವೇಜಿಯನ್ ನೊಬೆಲ್ ಸಮಿತಿಯಲ್ಲಿ ನಾರ್ವೇಜಿಯನ್ ಸಂಸತ್ತು ನೇಮಿಸಿದ ಐದು ಸದಸ್ಯರು ಇರುತ್ತಾರೆ. ಇವರಲ್ಲಿ ಸಾಮಾನ್ಯವಾಗಿ ನಿವೃತ್ತ ರಾಜಕಾರಣಿಗಳು, ಶಿಕ್ಷಣ ತಜ್ಞರು, ರಾಜತಾಂತ್ರಿಕತೆ, ಅಂತಾರಾಷ್ಟ್ರೀಯ ಕಾನೂನು ಅಥವಾ ಮಾನವ ಹಕ್ಕುಗಳ ಬಗ್ಗೆ ಅಪಾರ ಅನುಭವ ಹೊಂದಿರುವ ಸಾರ್ವಜನಿಕ ವ್ಯಕ್ತಿಗಳು ಇರುತ್ತಾರೆ.
ಯಾರು ನಾಮನಿರ್ದೇಶನ ಮಾಡಬಹುದು?
ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಕೆಲವು ಮಾನದಂಡಗಳನ್ನು ಪೂರೈಸಬೇಕಿದೆ. ನೊಬೆಲ್ ಫೌಂಡೇಶನ್‌ನ ಶಾಸನಗಳ ಪ್ರಕಾರ, ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನವನ್ನು ಈ ಕೆಳಗಿನ ವರ್ಗಗಳಲ್ಲಿ ಒಂದಕ್ಕೆ ಸೇರಿದ ವ್ಯಕ್ತಿ ಸಲ್ಲಿಸಿದರೆ ಅದು ಮಾನ್ಯವೆಂದು ಪರಿಗಣಿಸಲಾಗುತ್ತದೆ. ಈ ಪ್ರಶಸ್ತಿಗಾಗಿ ವೈಯಕ್ತಿಕ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ:
ಕ್ಯಾಬಿನೆಟ್ ಸದಸ್ಯರು, ಮಂತ್ರಿಗಳು, ರಾಷ್ಟ್ರದ ಮುಖ್ಯಸ್ಥರು, ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ, ನ್ಯಾಯಾಲಯದ ಶಾಶ್ವತ ಸದಸ್ಯರು, ಎಲ್'ಇನ್ಸ್ಟಿಟ್ಯೂಟ್ ಡಿ ಡ್ರಾಯಿಟ್ ಇಂಟರ್ನ್ಯಾಷನಲ್ ಸದಸ್ಯರು, ಮಹಿಳಾ ಅಂತಾರಾಷ್ಟ್ರೀಯ ಲೀಗ್‌ನ ಅಂತಾಷ್ಟ್ರೀಯ ಮಂಡಳಿಯ ಸದಸ್ಯರು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ನಿವೃತ್ತ ಪ್ರಾಧ್ಯಾಪಕರು, ವಿಶ್ವವಿದ್ಯಾಲಯದ ರೆಕ್ಟರ್‌ಗಳು ಮತ್ತು ವಿಶ್ವವಿದ್ಯಾಲಯ ನಿರ್ದೇಶಕರು, ಶಾಂತಿ ಸಂಶೋಧನಾ ಸಂಸ್ಥೆಗಳು ಮತ್ತು ವಿದೇಶಾಂಗ ನೀತಿ ಸಂಸ್ಥೆಗಳ ನಿರ್ದೇಶಕರು, ನೊಬೆಲ್ ಶಾಂತಿ ಪ್ರಶಸ್ತಿ ಪಡೆದವರು, ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಮುಖ್ಯ ನಿರ್ದೇಶಕರ ಮಂಡಳಿಯ ಸದಸ್ಯರು ಅಥವಾ ಅದರ ಸಮಾನ ಸಂಸ್ಥೆಗಳ ಸದಸ್ಯರು, ನಾರ್ವೇಜಿಯನ್ ನೊಬೆಲ್ ಸಮಿತಿಯ ಪ್ರಸ್ತುತ ಮತ್ತು ಮಾಜಿ ಸದಸ್ಯರು, ನಾರ್ವೇಜಿಯನ್ ನೊಬೆಲ್ ಸಮಿತಿಯ ಮಾಜಿ ಸಲಹೆಗಾರರು ನಾಮ ನಿರ್ದೇಶನಗಳನ್ನು ಮಾಡಬಹುದು.
2025ರ ಪ್ರಶಸ್ತಿಗೆ ನಾಮನಿರ್ದೇಶನಗಳು
ನೊಬೆಲ್ ಪ್ರಶಸ್ತಿಗಾಗಿ ಪ್ರತಿ ವರ್ಷದ ಜನವರಿ 31 ರೊಳಗೆ ನಾಮ ನಿರ್ದೇಶನಗಳನ್ನು ಸಲ್ಲಿಸಬೇಕು. ನೊಬೆಲ್ ಪ್ರಶಸ್ತಿ ವೆಬ್‌ಸೈಟ್ ಮಾಹಿತಿ ಪ್ರಕಾರ 2025ರ ನೊಬೆಲ್ ಶಾಂತಿ ಪ್ರಶಸ್ತಿಗೆ 338 ಅಭ್ಯರ್ಥಿಗಳು ನಾಮನಿರ್ದೇಶನಗೊಂಡಿದ್ದಾರೆ. ಅದರಲ್ಲಿ 244 ವ್ಯಕ್ತಿಗಳು ಮತ್ತು 94 ಸಂಸ್ಥೆಗಳು. ಕಳೆದ ವರ್ಷ 286 ನಾಮನಿರ್ದೇಶಿತರು ಇದ್ದರು. ನಾಮನಿರ್ದೇಶನಗಳನ್ನು 50 ವರ್ಷಗಳವರೆಗೆ ರಹಸ್ಯವಾಗಿಡಲಾಗುತ್ತದೆ. ನಾಮನಿರ್ದೇಶಿತರು ಅಥವಾ ನಾಮನಿರ್ದೇಶಿತರಿಗೆ ಅವರ ಸಲ್ಲಿಕೆಗಳನ್ನು ಸ್ವೀಕರಿಸಲಾಗಿದೆಯೇ ಎಂದು ತಿಳಿಸಲಾಗುವುದಿಲ್ಲ.
ವಿಜೇತರ ಆಯ್ಕೆ ಹೇಗೆ?
ನಾರ್ವೇಜಿಯನ್ ನೊಬೆಲ್ ಸಮಿತಿಯು ಸ್ವೀಕರಿಸಿದ ಎಲ್ಲಾ ನಾಮನಿರ್ದೇಶನಗಳನ್ನು ಪರಿಶೀಲಿಸಿ ವಿವಿಧ ರೀತಿಯಲ್ಲಿ ಮೌಲ್ಯಮಾಪನ ನಡೆಸುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ತಯಾರಿಸಿ ಫೆಬ್ರವರಿ ಮತ್ತು ಅಕ್ಟೋಬರ್ ನಡುವೆ ಹಲವಾರು ಬಾರಿ ಸಭೆ ನಡೆಸಿ ಪರಿಶೀಲಿಸುತ್ತದೆ. ಸಮಿತಿಯು ಮತ ಚಲಾಯಿಸಿ ಅರ್ಹರನ್ನು ಆಯ್ಕೆ ಮಾಡುತ್ತದೆ. ಶಾಂತಿ ಪ್ರಶಸ್ತಿ ವಿಜೇತರನ್ನು ಅಕ್ಟೋಬರ್ ಆರಂಭದಲ್ಲಿ ಘೋಷಿಸಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 10 ರಂದು ನಾರ್ವೆಯ ಓಸ್ಲೋದಲ್ಲಿ ನಡೆಯುವುದು.
ಪ್ರಶಸ್ತಿ ವಿಜೇತರು ಏನು ಸಿಗುತ್ತದೆ?
ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರು ಚಿನ್ನದ ನೊಬೆಲ್ ಪದಕ, ಡಿಪ್ಲೊಮಾ ಸರ್ಟಿಫಿಕೇಟ್, ಸುಮಾರು 9 ಲಕ್ಷ ಡಾಲರ್ ನಗದು ಬಹುಮಾನ ದೊರೆಯಲಿದೆ.
ಈವರೆಗೆ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಅಮೆರಿಕ ಅಧ್ಯಕ್ಷರು
ಒಟ್ಟು ನಾಲ್ವರು ಅಮೆರಿಕದ ಅಧ್ಯಕ್ಷರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ:
ಥಿಯೋಡರ್ ರೂಸ್ವೆಲ್ಟ್ ಅವರು 1906 ರಲ್ಲಿ ರುಸ್ಸೋ- ಜಪಾನೀಸ್ ಯುದ್ಧ ಅಂತ್ಯಗೊಳ್ಳಲು ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.
ಇದನ್ನೂ ಓದಿ: ಬಫರ್ ಜೋನ್: ರಾಜ್ಯ ಸರ್ಕಾರದ ತೀರ್ಮಾನಕ್ಕೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಕ್ರೋಶ
ವುಡ್ರೋ ವಿಲ್ಸನ್ ಅವರಿಗೆ ಮೊದಲನೆ ಮಹಾಯುದ್ಧದ ಅನಂತರ ವಿಶ್ವಸಂಸ್ಥೆಯ ಮುಂಚೂಣಿಯಲ್ಲಿರುವ ಲೀಗ್ ಆಫ್ ನೇಷನ್ಸ್ ಅನ್ನು ಸ್ಥಾಪಿಸಿದ್ದಕ್ಕಾಗಿ 1919 ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
ಜಿಮ್ಮಿ ಕಾರ್ಟರ್ ಅವರಿಗೆ ಕಾರ್ಟರ್ ಕೇಂದ್ರದ ಮೂಲಕ ದಶಕಗಳ ಶಾಂತಿಯುತ ಸಂಘರ್ಷ ಪರಿಹಾರ, ಮಾನವ ಹಕ್ಕುಗಳ ವಕಾಲತ್ತು ಮತ್ತು ಮಧ್ಯಸ್ಥಿಕೆ ಕಾರ್ಯಕ್ಕಾಗಿ 2002 ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
ಬರಾಕ್ ಒಬಾಮಾ ಅವರಿಗೆ 2009ರಲ್ಲಿ ಈ ಪ್ರಶಸ್ತಿ ನೀಡಲಾಗಿದೆ. ಅಂತಾರಾಷ್ಟ್ರೀಯ ರಾಜತಾಂತ್ರಿಕತೆ ಮತ್ತು ಜನರ ನಡುವಿನ ಸಹಕಾರವನ್ನು ಬಲಪಡಿಸಲು ಅವರ ಅಸಾಧಾರಣ ಪ್ರಯತ್ನಗಳಿಗೆ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.