ಪ್ಯಾರಿಸ್: ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಿ ಫ್ರಾನ್ಸ್‌ನ ಪ್ಯಾರಿಸ್ ಐಫಲ್ ಟವರ್ (Eiffel Tower) ಮುಂದೆ ಫೆಮೆನ್ (FEMEN) ಗುಂಪಿನ 20 ಮಹಿಳೆಯರು ಟಾಪ್‌ಲೆಸ್ ಆಗಿ ಪ್ರತಿಭಟನೆ ನಡೆಸಿದರು. ತೆರೆದೆದೆಯೊಂದಿಗೆ ಅವರು ಐಫಲ್ ಟವರ್ ಮುಂಭಾಗ ನೆರೆದು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ರಕ್ತಪಾತದ ಸಂಕೇತವಾಗಿ ಮೈತುಂಬಾ ಕೆಂಪು ಬಣ್ಣವನ್ನು ಪ್ರತಿಭಟನಾಕಾರರು ಬಳಿದುಕೊಂಡಿದ್ದರು. ಜತೆಗೆ ಚಿಕ್ಕ ಮಕ್ಕಳ ಸಂಕೇತವಾಗಿ ಎದೆಯ ಬಳಿ ಗೊಂಬೆಯನ್ನು ಹಿಡಿದುಕೊಂಡಿದ್ದರು. ಮಾತ್ರವಲ್ಲ ಕೆಲವರು ತಮ್ಮ ಸ್ತನಗಳ ಮೇಲೆ ಹತ್ಯಾಕಾಂಡ ನಿಲ್ಲಿಸಿ ಎಂದು ಬರೆದುಕೊಂಡಿದ್ದರು. ಜತೆಗೆ ಅವರು ಹಿಡಿದಿರುವ ಫಲಕಗಳಲ್ಲಿ ಇಸ್ರೇಲ್ ಮತ್ತು ಹಮಾಸ್ ವಿರುದ್ಧ ಘೋಷಣೆಗಳನ್ನು ಬರೆಯಲಾಗಿತ್ತು.
ಫೆಮೆನ್ ಗುಂಪಿನ ಸದಸ್ಯರು ಐಫಲ್ ಟವರ್ ಮುಂಭಾಗ ಟಾಪ್‌ಲೆಸ್ ಆಗಿ ಪ್ರತಿಭಟನೆ ನಡೆಸುತ್ತಿರುವುದು ಇದು ಮೊದಲ ಸಲವೇನಲ್ಲ. ಈ ವರ್ಷದ ಮಾರ್ಚ್‌ನಲ್ಲಿ ಸುಮಾರು 100 ಕಾರ್ಯಕರ್ತೆಯರು ಅಮೆರಿಕ, ಯುರೋಪ್ ಮತ್ತು ರಷ್ಯಾದ ಧ್ವಜಗಳನ್ನು ಎದೆಯ ಮೇಲೆ ಚಿತ್ರಿಸಿ, ಸ್ವಸ್ತಿಕ ಮತ್ತು ಫ್ಯಾಸಿಸ್ಟ್ ಸಾಂಕ್ರಾಮಿಕ ಎಂಬ ಪದಗಳೊಂದಿಗೆ ಟಾಪ್‌ಲೆಸ್ ಮೆರವಣಿಗೆ ನಡೆಸಿದ್ದರು.
ಈ ಸುದ್ದಿಯನ್ನೂ ಓದಿ: Russia-Ukraine Conflict: ರಷ್ಯಾ ಮೇಲೆ ಉಕ್ರೇನ್‌ನಿಂದ ಮತ್ತೊಂದು ದಾಳಿ; ಕ್ರಿಮಿಯನ್ ಸೇತುವೆ ಮೇಲೆ ಭಾರಿ ಸ್ಫೋಟ
ಪುಟಿನ್ ವಿರುದ್ಧವೂ ಪ್ರತಿಭಟನೆ ನಡೆಸಿದ್ದ ಸಂಘಟನೆ
ಫೆಮೆನ್ ಸಂಘಟನೆಯ ಕಾರ್ಯಕರ್ತೆಯರು ಈ ಹಿಂದೆ ಐಫಲ್ ಟವರ್ ಮುಂಭಾಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಟಾಪ್‌ಲೆಸ್ ಆಗಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದರು. 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದಾಗ, ಸಾವಿರಾರು ಮಂದಿ ಜೀವ ಉಳಿಸಿಕೊಳ್ಳಲು ದೇಶ ಬಿಡತೊಡಗಿದ್ದರು. ಈ ಮಧ್ಯೆ ಪ್ಯಾರಿಸ್‌ನಲ್ಲಿ ಮಹಿಳೆಯರು ಯುದ್ಧ ನಿಲ್ಲಿಸುವಂತೆ ಆಗ್ರಹಿಸಿ ವ್ಲಾಡಿಮಿರ್ ಪುಟಿನ್ ವಿರುದ್ಧ ಟಾಪ್‌ಲೆಸ್ ಆಗಿ ಪ್ರತಿಭಟನೆ ನಡೆಸಿದ್ದರು.
ಅವರು ತಮ್ಮ ದೇಹದ ಮೇಲ್ಭಾಗದಲ್ಲಿ ಉಕ್ರೇನಿಯನ್ ಧ್ವಜವನ್ನು ಮತ್ತು ಯುದ್ಧವನ್ನು ವಿರೋಧಿಸಿ ಘೋಷಣೆಗಳನ್ನು ಚಿತ್ರಿಸಿದ್ದರು. 'ಸ್ಟಾಪ್ ವಾರ್ ಪುಟಿನ್', 'ಯುದ್ಧದ ವಿರುದ್ಧ ಸ್ತ್ರೀವಾದಿಗಳು', 'ಸ್ಲಾವಾ ಉಕ್ರೇನಿ' ಎಂಬಿತ್ಯಾದಿ ಘೋಷಣೆಗಳನ್ನು ತಮ್ಮ ದೇಹದ ಮೇಲೆ ಬರೆದುಕೊಂಡಿದ್ದರು. 2013ರಲ್ಲಿಯೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ತ್ರೀವಾದಿ ಮಹಿಳೆಯರಿಂದ ಇದೇ ರೀತಿಯ ಟಾಪ್‌ಲೆಸ್ ಪ್ರತಿಭಟನೆಗಳನ್ನು ಎದುರಿಸಿದ್ದರು.
ಏನಿದು ಫೆಮೆನ್ ಸಂಘಟನೆ?
ಫೆಮೆನ್ ಎಂಬುದು 2008ರಲ್ಲಿ ಉಕ್ರೇನ್‌ನಲ್ಲಿ ಅನ್ನಾ ಹಟ್ಸೋಲ್, ಒಕ್ಸಾನಾ ಶಚ್ಕೊ ಮತ್ತು ಅಲೆಕ್ಸಾಂಡ್ರಾ ಶೆವ್ಚೆಂಕೊ ಅವರಿಂದ ಸ್ಥಾಪಿಸಲ್ಪಟ್ಟ ಸ್ತ್ರೀವಾದಿ ಕಾರ್ಯಕರ್ತರ ಗುಂಪು. ಉಕ್ರೇನ್‌ನಲ್ಲಿ ಕಿರುಕುಳ ಮತ್ತು ಕಾನೂನು ಒತ್ತಡಗಳನ್ನು ಎದುರಿಸಿದ ನಂತರ ಈ ಸಂಸ್ಥೆಯು 2013ರಲ್ಲಿ ತನ್ನ ಪ್ರಧಾನ ಕಚೇರಿಯನ್ನು ಪ್ಯಾರಿಸ್‌ಗೆ ಸ್ಥಳಾಂತರಗೊಳಿಸಿತು. ಈ ಸಂಘಟನೆ ರಾಜಕೀಯ ಭ್ರಷ್ಟಾಚಾರ ಮತ್ತು ಲೈಂಗಿಕ ಕಳ್ಳಸಾಗಣೆ ಸೇರಿದಂತೆ ಪಿತೃಪ್ರಭುತ್ವ, ಲಿಂಗ ಅಸಮಾನತೆ ಮತ್ತು ವಿವಿಧ ರೀತಿಯ ದಬ್ಬಾಳಿಕೆಯನ್ನು ಪ್ರಶ್ನಿಸುವ ಗುರಿಯನ್ನು ಹೊಂದಿದ್ದು, ಪ್ರಚೋದನಕಾರಿ ಟಾಪ್‌ಲೆಸ್ ಪ್ರತಿಭಟನೆಗಳಿಗೆ ಹೆಸರುವಾಸಿ. "ನಾನು ಬಂದೆ, ವಿವಸ್ತ್ರಗೊಂಡೆ, ನಾನು ಗೆದ್ದೆ" ಎಂಬುದು ಈ ಸಂಘಟನೆಯ ಘೋಷ ವಾಕ್ಯ.