ಕಠ್ಮಂಡು, ಆ. 28: ನೇಪಾಳದಲ್ಲಿ ಜಲಪ್ರಳಯ (Nepal Floods) ಮತ್ತು ಭೂಕುಸಿತದ ರೌದ್ರಾವಾತಾರ ಮುಂದುವರಿದಿದ್ದು, ರುಸುವಾ ಜಿಲ್ಲೆಯ ತ್ರಿಶೂಲಿ-1 ಜಲವಿದ್ಯುತ್ ಯೋಜನಾ ಪ್ರದೇಶದಲ್ಲಿ ಪ್ರವಾಹದ ಸುಳಿಯಲ್ಲಿ ಸಿಲುಕಿದ್ದ 200 ಭಾರತೀಯರು ಸೇರಿ ಬರೋಬ್ಬರಿ 500 ಜನರನ್ನು ಸೇನೆ ಯಶಸ್ವಿಯಾಗಿ ರಕ್ಷಿಸಿದೆ. ರಸ್ತೆಗಳು ಮತ್ತು ಸೇತುವೆಗಳು ಸಂಪೂರ್ಣವಾಗಿ ಕೊಚ್ಚಿಹೋದ ಪರಿಣಾಮ ಯೋಜನಾ ತಾಣದಲ್ಲೇ ಬಂಧಿಯಾಗಿದ್ದ ಕಾರ್ಮಿಕರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ಹೊರತಲಾಗಿದೆ. ರಕ್ಷಿಸಲ್ಪಟ್ಟ ಭಾರತೀಯರನ್ನು ಕಠ್ಮಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಹಲವು ಭಾಗಗಳು ಹಾನಿಗೊಳಗಾಗಿದ್ದು, ಸಾವಿನ ಸಂಖ್ಯೆ 429ಕ್ಕೆ ಏರಿದೆ. 1,000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಕಣಿವೆ ಹಾಗೂ ಬೆಟ್ಟದ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ನೇಪಾಳದಲ್ಲಿ ನಾಪತ್ತೆಯಾಗಿರುವ ವಿದೇಶಿಯರಲ್ಲಿ 290 ಭಾರತೀಯ ಪ್ರಜೆಗಳು, 63 ಅಮೆರಿಕ, 51 ಮಲೇಷ್ಯಾ, 34 ಆಸ್ಟ್ರೇಲಿಯಾ, 33 ಬ್ರಿಟನ್ ಮತ್ತು 25 ಕೆನಡಾ ಪ್ರಜೆಗಳು ಸೇರಿದ್ದಾರೆ. ಟಿಬೆಟ್‌ನಲ್ಲಿ ಕನಿಷ್ಠ 3 ಜನರು ಮೃತಪಟ್ಟಿದ್ದು, 268 ವಿದೇಶಿಯರು ಸೇರಿ 558 ಜನರು ಕಾಣೆಯಾಗಿದ್ದಾರೆ. ಈ ಪೀಡಿತ ಪ್ರದೇಶದ ಗಡಿಯ ಎರಡೂ ಬದಿಗಳಲ್ಲಿ ಇರುವ ಎರಡು ಸರೋವರಗಳು ಒಡೆಯುವ ಸ್ಥಿತಿಯಲ್ಲಿದ್ದು, ಹಿಮಾಲಯ ಭಾಗದಲ್ಲಿ ಮತ್ತೆ ಪ್ರವಾಹ ಉಂಟಾಗುವ ಅಪಾಯವಿದೆ ಎಂದು ನೇಪಾಳ ಮತ್ತು ಚೀನಾ ಸರ್ಕಾರಗಳು ಮುನ್ನೆಚ್ಚರಿಕೆ ನೀಡಿವೆ.
ನೇಪಾಳದಲ್ಲಿ ಭಾರತೀಯರ ರಕ್ಷಣೆ:
ಹೆಲಿಕಾಪ್ಟರ್ ಮೂಲಕ ಬೃಹತ್ ರಕ್ಷಣಾ ಕಾರ್ಯಾಚರಣೆ
ಭೀಕರ ಪ್ರವಾದಿಂದಾಗಿ ನೇಪಾಳ ಮತ್ತು ಟಿಬೆಟ್‌ಗೆ ಗಡಿ ಹಂಚಿಕೊಂಡಿದ್ದ ಹಲವು ಹಳ್ಳಿಗಳಿಗೆ ಸಾಕಷ್ಟು ಹಾನಿಯಾಗಿದೆ. ಸುಮಾರು 15 ಹೆಲಿಕಾಪ್ಟರ್‌ಗಳ ಮೂಲಕ ನೇಪಾಳ ಸರ್ಕಾರ ಈ ಗಡಿ ಭಾಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಈವರೆಗೆ ಕನಿಷ್ಠ 2,523 ಜನರನ್ನು ರಕ್ಷಿಸಿಲಾಗಿದೆ ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ನೇಪಾಳ ಜಲಸ್ಫೋಟ; ಕಲಬುರಗಿಯ ಇಬ್ಬರು ಕನ್ನಡಿಗರ ರಕ್ಷಣೆ
ಈ ದುರಂತವು ಆರಂಭದಲ್ಲಿ ಭೂಕಂಪವೆಂದು ಪರಿಗಣಿಸಲಾಗಿತ್ತು. ಬಳಿಕ ಇದು ಬೃಹತ್ ಹಿಮಗಡ್ಡೆ ಕುಸಿತದಿಂದ ಉಂಟಾದ ಪ್ರವಾಹ ಎನ್ನುವುದು ದೃಢಪಟ್ಟಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ.
ಭಾರತದ ತುರ್ತು ನೆರವು
ಪ್ರವಾಹ ಪೀಡಿತ ಸಂತ್ರಸ್ತರಿಗೆ ಭಾರತ ಸರ್ಕಾರವು ಆಗಸ್ಟ್ 23ರಂದು ವಾಯುಪಡೆಯ ಮೂಲಕ 10 ಟನ್ ಪರಿಹಾರ ಸಾಮಗ್ರಿಗಳನ್ನು ಘಾಜಿಯಾಬಾದ್‌ನ ಹಿಂದೂನ್ ವಿಮಾನ ನಿಲ್ದಾಣದಿಂದ ನೇಪಾಳಕ್ಕೆ ಕಳುಹಿಸಿಕೊಟ್ಟಿತು. ಆಗಸ್ಟ್ 27ರಂದು 37.5 ಟನ್‌ಗಿಂತಲೂ ಹೆಚ್ಚಿನ ಸಾಮಗ್ರಿಗಳನ್ನು ಭಾರತವು ಕಳುಹಿಸಿತು. ಈ ಮಧ್ಯೆ ನವದೆಹಲಿಯು ಪ್ರವಾಹ ಸಂತ್ರಸ್ತರಿಗೆ ನೆರವು ವಿಸ್ತರಿಸಲು ಕಠ್ಮಂಡು ಜತೆಗೆ ಸಮನ್ವಯ ಸಾಧಿಸುತ್ತಿದೆ. ಅದೇ ಸಮಯದಲ್ಲಿ, ಪೀಡಿತ ಪ್ರದೇಶಗಳಲ್ಲಿರುವ ಭಾರತೀಯ ಪ್ರಜೆಗಳನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ಭಾರತೀಯ ರಾಜತಾಂತ್ರಿಕ ನಿಯೋಗಗಳು ನಿರಂತರ ಪ್ರಯತ್ನಗಳಲ್ಲಿ ತೊಡಗಿವೆ.
'ಸಹಾಯ ಅಗತ್ಯವಿಲ್ಲ': ವಿದೇಶಿ ರಕ್ಷಣಾ ನೆರವು ತಿರಸ್ಕರಿಸಿದ ನೇಪಾಳ
ತ್ರಿಶೂಲಿ ನದಿಯ ರೌದ್ರಾವತಾರ ಮತ್ತು ಅಪಾರ ನಷ್ಟ
ಹಿಮಾಲಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ತ್ರಿಶೂಲಿ ನದಿಯಲ್ಲಿ ನೀರಿನ ಮಟ್ಟ ಕ್ಷಣಾರ್ಧದಲ್ಲೇ ತೀವ್ರವಾಗಿ ಹೆಚ್ಚಾಗಿ ಭೀಕರ ಜಲಪ್ರಳಯ ಉಂಟಾಗಲು ಕಾರಣವಾಯಿತು. ಪ್ರವಾಹದಿಂದಾಗಿ ಜಲವಿದ್ಯುತ್ ಯೋಜನಾ ಸ್ಥಳದಲ್ಲಿದ್ದ ಕಾರ್ಮಿಕರ ತಾತ್ಕಾಲಿಕ ಶೆಡ್‌ಗಳು, ಕೆಲಸಕ್ಕೆ ಬಳಸುತ್ತಿದ್ದ ದೊಡ್ಡ ದೊಡ್ಡ ಯಂತ್ರಗಳು ಮತ್ತು ವಾಹನಗಳು ಕೊಚ್ಚಿಕೊಂಡು ಹೋಗಿವೆ. ಅದೃಷ್ಟವಶಾತ್ ಪ್ರವಾಹ ಬರುತ್ತಿದ್ದಂತೆ ರಕ್ಷಣಾ ಪಡೆಗಳು ಹೆಲಿಕಾಪ್ಟರ್ ಮೂಲಕ ತಕ್ಷಣವೇ ಕಾರ್ಯಪ್ರವೃತ್ತರಾಗಿ ಅಲ್ಲಿದ್ದ ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತಸಿದ್ದರಿಂದ ಭಾರಿ ಪ್ರಮಾಣದ ಪ್ರಾಣಹಾನಿ ತಪ್ಪಿದೆ.
ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.