ಢಾಕಾ: ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸ್ಥಾಪಕ ಹಫೀಜ್ ಸಯೀದ್‌ನ ಆಪ್ತ (Hafiz Saeed) ಸಹಚರನೊಬ್ಬ ಬಾಂಗ್ಲಾದೇಶದಲ್ಲಿ (Bangladesh) ಪತ್ತೆಯಾಗಿದ್ದು, ಭಾರತದೊಂದಿಗಿನ ದೇಶದ ಗಡಿಯ ಬಳಿ ಅಪಾಯಕಾರಿ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದ ಮರ್ಕಜಿ ಜಮಿಯತ್ ಅಹ್ಲ್-ಎ-ಹದೀಸ್‌ನ ಪ್ರಧಾನ ಕಾರ್ಯದರ್ಶಿ ಮತ್ತು ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಹದೀಸ್‌ನ ದೀರ್ಘಕಾಲದ ಮಿತ್ರ ಇಬ್ತಿಸಮ್ ಇಲಾಹಿ ಜಹೀರ್ ಅಕ್ಟೋಬರ್ 25 ರಂದು ಢಾಕಾಗೆ ತೆರಳಿದ್ದಾನೆ ಎಂದು ತಿಳಿದು ಬಂದಿದೆ.
ಆತ ಭಾರತದ ಗಡಿ ಬಳಿ ಇರುವ ಸೂಕ್ಷ್ಮ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದಾನೆ. ಪ್ರಚೋದನಕಾರಿ ಭಾಷಣಗಳನ್ನು ನೀಡಿ, ಸ್ಥಳೀಯ ಮೂಲಭೂತವಾದಿಗಳೊಂದಿಗೆ ಮಾತುಕತೆ ನಡೆಸಿದ್ದಾನೆ. ಕಳೆದ ಎರಡು ದಿನಗಳಲ್ಲಿ ಆತ ರಾಜ್‌ಶಾಹಿ ಮತ್ತು ಚಾಪೈನವಾಬ್‌ಗಂಜ್‌ನ ಗಡಿ ಪ್ರದೇಶಗಳಿಗೆ ಭೇಟಿ ನೀಡಿದ್ದು, ಈ ವಾರ ರಂಗ್‌ಪುರಕ್ಕೆ ಹೋಗಲಿದ್ದಾನೆ ಎಂದು ತಿಳಿದು ಬಂದಿದೆ. ಮುಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಇದು ಆತನ ಎರಡನೇ ಭೇಟಿಯಾಗಿದೆ. ಫೆಬ್ರವರಿ 2025 ರಲ್ಲಿ ಅವರು ಒಂದು ವಾರಕ್ಕೂ ಹೆಚ್ಚು ಕಾಲ ಬಾಂಗ್ಲಾದೇಶದಲ್ಲಿದ್ದ.
ಈಶಾನ್ಯವನ್ನು ಅಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ಪಾಕಿಸ್ತಾನ-ಬಾಂಗ್ಲಾದೇಶದ ಸಂಬಂಧವು ಇನ್ನಷ್ಟು ಆಳವಾಗುವ ಭೀತಿಯನ್ನು ಹುಟ್ಟುಹಾಕಿದೆ. ಆಗಸ್ಟ್ 2024 ರಲ್ಲಿ ಬಾಂಗ್ಲಾದೇಶದ ಶೇಖ್ ಹಸೀನಾ ಸರ್ಕಾರವನ್ನು ಪದಚ್ಯುತಗೊಳಿಸಿದ ನಂತರ ಹೆಚ್ಚಿದ ಉದ್ವಿಗ್ನತೆಯ ಮಧ್ಯೆ ಜಹೀರ್ ಬಾಂಗ್ಲಾ ಜೊತೆಗೆ ಹೆಚ್ಚಿನ ನಂಟನ್ನು ಹೊಂದಿದ್ದಾನೆ. ಯೂನಸ್ ನೇತೃತ್ವದ ಮಧ್ಯಂತರ ಆಡಳಿತವು ಈ ಹಿಂದೆ ನಿಯಂತ್ರಣದಲ್ಲಿ ಇರಿಸಲಾಗಿದ್ದ ಉಗ್ರಗಾಮಿ ಜಾಲಗಳಿಗೆ ಅವಕಾಶಗಳನ್ನು ಸೃಷ್ಟಿಸಿದೆ ಎಂದು ವರದಿಗಳು ಹೇಳಿವೆ.
ಈ ಸುದ್ದಿಯನ್ನೂ ಓದಿ: Zakir Naik: ಭಾರತದ ಮೋಸ್ಟ್ ವಾಂಟೆಡ್ ಆರೋಪಿ ಝಾಕಿರ್ ನಾಯ್ಕ್‌ಗೆ ಬಾಂಗ್ಲಾದಲ್ಲಿ ಅದ್ಧೂರಿ ಸ್ವಾಗತ
2008 ರ ಮುಂಬೈ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಹಫೀಜ್ ಸಯೀದ್, ಬಾಂಗ್ಲಾದೇಶದಲ್ಲಿ ತನ್ನ ಪ್ರಭಾವವನ್ನು ವೇಗವಾಗಿ ವಿಸ್ತರಿಸುತ್ತಿದ್ದಾನೆ. ಆತನ ಸಹಚರ ಜಹೀರ್ ಇಸ್ಲಾಮಿಕ್ ಧರ್ಮೋಪದೇಶಗಳೊಂದಿಗೆ ಸಂಬಂಧ ಹೊಂದಿದ್ದಾರೆ, ಆದರೆ ಭಾರತ-ಬಾಂಗ್ಲಾದೇಶ ಗಡಿಯ ಬಳಿ ಅವರ ಚಟುವಟಿಕೆಗಳು ಈಶಾನ್ಯ ಭಾರತದಲ್ಲಿ ಒಂದು ದೊಡ್ಡ ಪಿತೂರಿಯ ಅನುಮಾನಗಳನ್ನು ಹುಟ್ಟು ಹಾಕಿವೆ.