ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Qari Abdu Rehman: ಮತ್ತೊಂದು ಉಗ್ರ ಬೇಟೆ; ಪಾಕಿಸ್ತಾನದಲ್ಲಿ ಲಷ್ಕರ್-ಎ-ತೊಯ್ಬಾದ ಫೈನಾನ್ಸರ್ ಖಾರಿ ಅಬ್ದು ರೆಹಮಾನ್‌ನ ಹತ್ಯೆ

ಪಾಕಿಸ್ತಾನದಲ್ಲಿರುವ ಉಗ್ರರ ಬೇಟೆ ಮುಂದುವರಿದಿದ್ದು, ಮತ್ತೊಬ್ಬ ಭಾರತ ವಿರೋಧಿ ಅಪರಿಚಿತನ ಗುಂಡಿನ ದಾಳಿಗೆ ಹತನಾಗಿದ್ದಾನೆ. ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾದ ಫೈನಾನ್ಸರ್‌ ಮತ್ತು ಭಯೋತ್ಪಾದಕ ಹಫೀಜ್ ಸಯೀದ್‌ನ ಸಂಬಂಧಿ ಖಾರಿ ಅಬ್ದು ರೆಹಮಾನ್‌ನನ್ನು ಸೋಮವಾರ (ಮಾ. 31) ಕರಾಚಿಯಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ.

ಪಾಕಿಸ್ತಾನದಲ್ಲಿ ಉಗ್ರ ಖಾರಿ ಅಬ್ದು ರೆಹಮಾನ್‌ನ ಹತ್ಯೆ

Profile Ramesh B Mar 31, 2025 8:55 PM

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿರುವ ಉಗ್ರರ ಬೇಟೆ ಮುಂದುವರಿದಿದ್ದು, ಮತ್ತೊಬ್ಬ ಭಾರತ ವಿರೋಧಿ ಅಪರಿಚಿತನ ಗುಂಡಿನ ದಾಳಿಗೆ ಹತನಾಗಿದ್ದಾನೆ. ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ (LeT)ದ ಫೈನಾನ್ಸರ್‌ ಮತ್ತು ಭಯೋತ್ಪಾದಕ ಹಫೀಜ್ ಸಯೀದ್‌ನ ಸಂಬಂಧಿ ಖಾರಿ ಅಬ್ದು ರೆಹಮಾನ್‌ (Qari Abdu Rehman)ನನ್ನು ಸೋಮವಾರ (ಮಾ. 31) ಕರಾಚಿಯಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ. ಅಪರಿಚಿತ ಮುಸುಕುಧಾರಿಯ ದಾಳಿಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಮುಸುಕು ಧರಿಸಿದ ವ್ಯಕ್ತಿಯೊಬ್ಬರು ಗನ್‌ ಹಿಡಿದು ಖಾರಿ ಅಬ್ದು ರೆಹಮಾನ್‌ನ ಅಂಗಡಿಗೆ ಬರುತ್ತಿರುವುದು, ಬಳಿಕ ದಾಳಿ ನಡೆಸುತ್ತಿರುವುದು ಕಂಡು ಬಂದಿದೆ. ದಾಳಿಯಿಂದ ಖಾರಿ ಅಬ್ದು ರೆಹಮಾನ್‌ ಸ್ಥಳದಲ್ಲೇ ಅಸುನೀಗಿದ್ದಾನೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಸದ್ಯ ಅಪರಿಚಿತ ಯಾರೆನ್ನುವುದು ತಿಳಿದು ಬಂದಿಲ್ಲ. ಬಂದೂಕುಧಾರಿ ಅಲ್ಲಿದ್ದ ಇತರರ ಮೇಲೂ ದಾಳಿ ನಡೆಸಿದ್ದಾರೆ. ರೆಹಮಾನ್‌ ಹತನಾದಾಗ ಅಂಗಡಿಯ ಸಮೀಪ ಮಗುವೊಂದು ನಿಂತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಆದರೆ ಮಗುವಿಗೆ ಯಾವುದೇ ತೊಂದರೆ ಮಾಡಿಲ್ಲ. ಈ ಕೊಲೆಗೆ ನಿಖರ ಕಾರಣವೇನು ಎನ್ನುವುದು ಗೊತ್ತಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಖಾರಿ ಅಬ್ದು ರೆಹಮಾನ್‌ ಹತ್ಯೆಯ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: ಜೈಶ್, ಲಷ್ಕರ್ ಭಯೋತ್ಪಾದಕ ಸಂಘಟನೆಗಳ ಮಧ್ಯೆ ಬಿರುಕು; ಬದಲಾದ ಭಾರತದ ಕಾರ್ಯತಂತ್ರ

ʼʼಮೋಟಾರ್ ಸೈಕಲ್‌ನಲ್ಲಿ ಬಂದ ಶಸ್ತ್ರಸಜ್ಜಿತ ಶಂಕಿತರು ಖಾರಿ ಅಬ್ದು ರೆಹಮಾನ್ ಇದ್ದ ಅಂಗಡಿಗೆ ಬಂದು ಆತನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತೀವ್ರ ರಕ್ತದ ಮಡುವಿನಲ್ಲಿದ್ದ ಖಾರಿ ಅಬ್ದು ರೆಹಮಾನ್‌ನನ್ನು ಜಿನ್ನಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಬಿಟ್ಟಿದ್ದಾನೆʼʼ ಎಂದು ಖೈದಾಬಾದ್ ಪೊಲೀಸ್ ಎಸ್‌ಎಚ್‌ಒ ರಾಣಾ ಖುಷಿ ಮೊಹಮ್ಮದ್ ಮಾಹಿತಿ ನೀಡಿದ್ದಾರೆ.

ಯಾರು ಈ ಖಾರಿ ಅಬ್ದು ರೆಹಮಾನ್?

ಖಾರಿ ಅಬ್ದು ರೆಹಮಾನ್ ಭಾರತದ ಮೋಸ್ಟ್ ವಾಟೆಂಡ್ ಲಷ್ಕರ್-ಎ-ತೊಯ್ಬಾ ನಾಯಕ ಮತ್ತು ಮುಂಬೈ ದಾಳಿ ರೂವಾರಿ ಹಫೀಜ್ ಸಯ್ಯೀದ್‌ನ ಸಂಬಂಧಿ. ಈತ ಕೂಡ ಲಷ್ಕರ್ ಸಂಘಟನೆಯ ಪ್ರಮುಖ ಕಮಾಂಡರ್ ಆಗಿದ್ದ. ಜತೆಗೆ ಫೈನಾನ್ಸರ್‌ ಆಗಿದ್ದ. ಪ್ರಸ್ತುತ ಆತನ ಕೊಲೆಗೆ ವೈಯುಕ್ತಿಕ ದ್ವೇಷ ಕಾರಣವಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಇದು 2ನೇ ಬಲಿ

ಈ ಮೂಲಕ ಮಾರ್ಚ್‌ನಲ್ಲಿ ಹಫೀಜ್ ಸಯ್ಯೀದ್‌ನ 2 ಸಂಬಂಧಿಕರು ಕೊಲೆಯಾದಂತಾಗಿದೆ. ತಿಂಗಳ ಆರಂಭದಲ್ಲಿ, ಸಯ್ಯೀದ್‌ನ ಮತ್ತೊಬ್ಬ ನಿಕಟವರ್ತಿ ಅಬು ಖತಲ್‌ನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿತ್ತು. ಖತಲ್ ಸಾವಿನ ನಿಖರ ದಿನಾಂಕ ಇನ್ನೂ ತಿಳಿದುಬಂದಿಲ್ಲ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ಎಲ್ಇಟಿ ನಡುವಿನ ಆಂತರಿಕ ದ್ವೇಷವು ಖತಾಲ್ ಹತ್ಯೆಗೆ ಕಾರಣವಾಗಿರಬಹುದು ಎಂದು ಕೆಲವು ವರದಿಗಳು ತಿಳಿಸಿವೆ. ಎಲ್ಇಟಿಯ ಉನ್ನತ ಕಮಾಂಡರ್ ಆಗಿದ್ದ ಖತಾಲ್ 2024ರ ಜೂ. 9ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಹಿಂದೂ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ದಾಳಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ದಾಳಿಗಳ ಹಿಂದಿನ ಮಾಸ್ಟರ್‌ ಮೈಂಡ್‌ ಎನ್ನಲಾಗಿದೆ.