Neck Pain: ಕುತ್ತಿಗೆ ನೋವು ನಿಮ್ಮನ್ನು ಕಾಡುತ್ತಿದೆಯೇ? ನಿಮ್ಮ ದಿಂಬು ಸರಿಯಾಗಿದೆಯೇ ಎಂದು ಚೆಕ್ ಹೀಗೆ ಮಾಡಿ
ಬೆಳಗ್ಗೆ ಏಳುತ್ತಿದ್ದಂತೆ ಭುಜವೆಲ್ಲ ನೋವು, ಕುತ್ತಿಗೆ ತಿರುಗಿಸಲಾಗುತ್ತಿಲ್ಲವೇ? ಹೇಗೋ ಮಲಗಿದ್ದೀರಿ, ಅದಕ್ಕೇ ನೋವಾಗಿದೆ ಎಂದು ಭಾವಿಸಿದಿರೇ? ಇರಬಹುದು… ಹಾಗಿಲ್ಲದೆಯೂ ಇರಬಹುದು! ನೀವು ಬಳಸುತ್ತಿರುವ ದಿಂಬು ಹೇಗಿದೆ ಎಂಬುದನ್ನು ಗಮನಿಸಿದ್ದೀರಾ? ನಮ್ಮ ಕುತ್ತಿಗೆಯೆಂದರೆ ಸ್ನಾಯುಗಳು, ಟೆಂಡನ್‌ಗಳು, ಲಿಗಮೆಂಟ್‌ಗಳು ಮತ್ತು ಸಣ್ಣ ವೆರ್ಟೆಬ್ರೆಗಳ ಸಂಕೀರ್ಣ ಹಂದರ. ಮೇಲಿಂದ ಕೆಳಗಿನವರೆಗೆ ಎಲ್ಲವೂ ಸರಿ ಇರಬೇಕು ಎಂದರೆ ಕುತ್ತಿಗೆಯ ಆರೋಗ್ಯವೂ ಸರಿ ಇರಬೇಕು.

-

ಬೆಳಗ್ಗೆ ಏಳುತ್ತಿದ್ದಂತೆ ಭುಜವೆಲ್ಲ ನೋವು, ಕುತ್ತಿಗೆ ತಿರುಗಿಸಲಾಗುತ್ತಿಲ್ಲವೇ? ಹೇಗೋ ಮಲಗಿದ್ದೀರಿ, ಅದಕ್ಕೇ ನೋವಾಗಿದೆ ಎಂದು ಭಾವಿಸಿದಿರೇ? ಇರಬಹುದು… ಹಾಗಿಲ್ಲದೆಯೂ ಇರಬಹುದು! ನೀವು ಬಳಸುತ್ತಿರುವ ದಿಂಬು ಹೇಗಿದೆ ಎಂಬುದನ್ನು ಗಮನಿಸಿದ್ದೀರಾ? ನಿತ್ಯವೂ ರಾತ್ರಿ ಕಣ್ತುಂಬಾ ನಿದ್ದೆ ಬರುವುದಕ್ಕೆ ನಾವು ಬಳಸುವ ದಿಂಬು ಎಷ್ಟು ಮಹತ್ವದ ಕೊಡುಗೆಯನ್ನು ನೀಡಬಲ್ಲದು ಎಂಬುದನ್ನು ನಾವು ಅರಿಯುವುದೇ ಇಲ್ಲ. ನಮ್ಮ ದೇಹಕ್ಕೆ ಸೂಕ್ತವಾದ ಭಂಗಿಯಲ್ಲಿ ಕುತ್ತಿಗೆಯನ್ನು ಇರಿಸಿಕೊಳ್ಳದಿದ್ದರೆ ತೊಂದರೆ ತಪ್ಪಿದ್ದಲ್ಲ. ಹಾಗಾಗಿ ನಾವು ಬಳಸುವ ದಿಂಬು ಹೇಗಿರಬೇಕು?
ಕುತ್ತಿಗೆ-ದಿಂಬಿನ ನಂಟೇನು?:
ನಮ್ಮ ಕುತ್ತಿಗೆಯೆಂದರೆ ಸ್ನಾಯುಗಳು, ಟೆಂಡನ್‌ಗಳು, ಲಿಗಮೆಂಟ್‌ಗಳು ಮತ್ತು ಸಣ್ಣ ವೆರ್ಟೆಬ್ರೆಗಳ ಸಂಕೀರ್ಣ ಹಂದರ. ಮೇಲಿಂದ ಕೆಳಗಿನವರೆಗೆ ಎಲ್ಲವೂ ಸರಿ ಇರಬೇಕು ಎಂದರೆ ಕುತ್ತಿಗೆಯ ಆರೋಗ್ಯವೂ ಸರಿ ಇರಬೇಕು. ನಮ್ಮ ಬೆನ್ನುಹುರಿಯ ಸರ್ವೈಕಲ್ ಭಾಗದಲ್ಲಿನ ಬಾಗು ಸರಿಯಾಗಿಲ್ಲದಿದ್ದರೆ ಹಲವು ರೀತಿಯ ತೊಂದರೆಗಳು ಬರುತ್ತವೆ. ಕುತ್ತಿಗೆ ನೋವು, ತಲೆ ನೋವು, ಭುಜದ ನೋವು ಇತ್ಯಾದಿಗಳೆಲ್ಲ ಅಂಟಿಕೊಳ್ಳುತ್ತವೆ. ಹಾಗಾಗಿ ಸರ್ವೈಕಲ್ ಭಾಗದ ಸ್ವಾಸ್ಥ್ಯ ರಕ್ಷಣೆಗೆ ಸರಿಯಾದ ದಿಂಬು ಬಳಕೆಯೂ ಒಂದು ಮಾರ್ಗ. ಬೆಳಗ್ಗೆ ಏಳುವಾಗಲೇ ಬೆನ್ನು, ಕುತ್ತಿಗೆ, ಭುಜದಲ್ಲಿ ನೋವು, ಆಗಾಗ ತಲೆ ನೋವು ಕಾಡುವುದು, ತೋಳುಗಳಲ್ಲಿ ಬೆರಳುಗಳಲ್ಲಿ ಮರಗಟ್ಟಿದ್ದ ಅಥವಾ ಚುಚ್ಚಿದ ಅನುಭವ, ಮಲಗುವ ಭಂಗಿ ಸರಿಯಾಗದೆ ಆಗಾಗ ಎಚ್ಚರವಾಗುವುದು- ಇವೆಲ್ಲ ದಿಂಬಿನ ಸಮಸ್ಯೆಯಿಂದಲೇ ಇರಬಹುದು.
ಹಾಗಿದ್ದರೆ ಏನು ಮಾಡಬೇಕು?
ಮಲಗುವ ಭಂಗಿ:
ಮಗ್ಗುಲಾಗಿ ಮಲಗುವವರಿಗೆ ಸ್ವಲ್ಪ ದಪ್ಪನೆಯ ಮತ್ತು ಹೆಚ್ಚು ದೃಢವಾದ ದಿಂಬು ಸೂಕ್ತ. ಕಾರಣ, ದೇಹದ ಎತ್ತರದಲ್ಲೇ ಕುತ್ತಿಗೆಯನ್ನು ಇರಿಸಿಕೊಳ್ಳುವುದು ಅಗತ್ಯ. ಹಾಗಿಲ್ಲದಿದ್ದರೆ ಕುತ್ತಿಗೆ ಭಾಗ ನೇತಾಡಿದಂತೆ ಇರುತ್ತದೆ; ನೋವು ತರುತ್ತದೆ.
ಬೆನ್ನಿನ ಮೇಲೆ ಮಲಗುವವರಿಗೆ
ತೀರಾ ಎತ್ತರವಲ್ಲದ, ಮೃದುವಾದ ದಿಂಬು ಇಂಥವರಿಗೆ ಬೇಕು. ಮುಖ ಮೇಲೆ ಮಾಡಿ ಮಲಗುವಾಗ ಕುತ್ತಿಗೆಯ ಎತ್ತರವನ್ನು ಅತಿ ಎತ್ತರಕ್ಕೆ ನೂಕುವ ದಿಂಬುಗಳು ಸರ್ವೈಕಲ್ ಭಾಗಕ್ಕೆ ಸಮಸ್ಯೆ ತರುತ್ತವೆ.
ಹೊಟ್ಟೆಯ ಮೇಲೆ ಮಲಗುವವರಿಗೆ: ಇದು ಅಷ್ಟು ಸರಿಯಾದ ಭಂಗಿಯಲ್ಲ. ಹೀಗೆ ಮಲಗುವುದರಿಂದ ಕುತ್ತಿಗೆ ಮೇಲೆ ಅತಿ ಹೆಚ್ಚಿನ ಒತ್ತಡ ಬೀಳುತ್ತದೆ. ಆದರೂ, ಇದೇ ಭಂಗಿಯಲ್ಲಿ ನಿದ್ದೆ ಬರುತ್ತದೆ ಎಂದಾದರೆ, ತೆಳ್ಳನೆಯ ದಿಂಬು ಉಪಯೋಗಿಸಿ. ದಿಂಬು ಬೇಡ ಎಂದರೂ ಸರಿಯೆ.
ದಿಂಬಿನ ಫಿಲ್ಲಿಂಗ್: ದಿಂಬು ಎನ್ನುತ್ತಿದ್ದಂತೆ ಮೆತ್ತನೆಯ ಹತ್ತಿ ದಿಂಬುಗಳು ಮಾತ್ರವೇ ಇರುವುದು ಎಂದು ಭಾವಿಸುವಂತಿಲ್ಲ. ಇವುಗಳಲ್ಲೂ ಹಲವಾರು ವಸ್ತುಗಳಿಂದ ತಯಾರಿಸಿದವು ಲಭ್ಯವಿವೆ.
ಮೆಮರಿ ಫೋಮ್: ಖರೀದಿಸುವಾಗ ಕೊಂಚ ದುಬಾರಿ ಎನಿಸಿದರೂ, ತಲೆ ಮತ್ತು ಕುತ್ತಿಗೆಯ ಭಾಗಕ್ಕೆ ಒಳ್ಳೆಯ ಆಧಾರವನ್ನಿದು ನೀಡುತ್ತದೆ. ನಮ್ಮ ದೇಹದ ಆಕೃತಿಯನ್ನೇ ತಳೆಯುವ ಮೂಲಕ, ಎಲ್ಲಿಯೂ ಸ್ನಾಯುಗಳಿಗೆ ಪ್ರತಿರೋಧ ಒಡ್ಡದೇ, ಒತ್ತಡವನ್ನು ಕಡಿಮೆ ಮಾಡುತ್ತದೆ.
ಲೇಟೆಕ್ಸ್: ಇದೂ ಸಹ ದೃಢವಾದ ಆಧಾರವನ್ನೇ ನೀಡುತ್ತದೆ. ಜೊತೆಗೆ, ಹೈಪೋಅಲರ್ಜೆನಿಕ್ ಸಹ ಆಗಿರುವುದರಿಂದ, ಧೂಳು, ಮೈಟ್‌ಗಳ ಸಮಸ್ಯೆ ಇದ್ದವರಿಗೆ ಒಳ್ಳೆಯ ಆಯ್ಕೆ. ಅಂಥವರಿಗೆ ಇದನ್ನು ಉಪಯೋಗಿಸುವುದರಿಂದ ಅಲರ್ಜಿಯ ಬಾಧೆ ಕಾಡುವುದು ಕಡಿಮೆ ಆಗುತ್ತದೆ.
ಹತ್ತಿ: ಸಾಮಾನ್ಯವಾಗಿ ಹೆಚ್ಚಿನ ಮಂದಿ ಬಳಸುವುದು ಇದನ್ನೇ. ಮೊದಲಿಗೆ ಇವುಗಳು ಅಗತ್ಯಕ್ಕಿಂತ ಹೆಚ್ಚು ಎತ್ತರವಾಗಿ, ದೃಢವಾಗಿಯೇ ಇರುತ್ತವೆ. ಆದರೆ ಕ್ರಮೇಣ ತಗ್ಗಿ, ಗಂಟಾಗಿ, ಬೇಕಾದ ಆಧಾರವನ್ನು ನೀಡದಂತಾಗುತ್ತವೆ. ಅಲರ್ಜಿ ಇರುವವರಿಗೆ ಸಮಸ್ಯೆ ನೀಡಬಹುದು.
ಗರಿಗಳು/ ಕಾಯರ್/ ಹುಲ್ಲು: ಫೆದರ್ ಮತ್ತು ಹುಲ್ಲಿನ ದಿಂಬುಗಳು ಮೃದುವಾದವು ಹೌದಾದರೂ, ಹೆಚ್ಚು ಆಧಾರವನ್ನು ನೀಡುವುದಿಲ್ಲ. ಅಲರ್ಜಿ ಇರುವವರಿಗಂತೂ ಇದು ಆಯ್ಕೆಯೇ ಅಲ್ಲ. ಕಾಯರ್ ಫಿಲ್ಲಿಂಗ್ ಅಂಥ ಆರಾಮವನ್ನೇನು ನೀಡುವುದಿಲ್ಲ.
ಈ ಸುದ್ದಿಯನ್ನೂ ಓದಿ: Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ
ಹೈಬ್ರಿಡ್: ಒಂದಕ್ಕಿಂತ ಹೆಚ್ಚು ವಸ್ತುಗಳನ್ನು ಬಳಸಿ ಇವುಗಳನ್ನು ಮಾಡಲಾಗುತ್ತದೆ. ಯಾವೆಲ್ಲ ವಸ್ತುಗಳ ಫಿಲ್ಲಿಂಗ್ ಇದೆ ಎನ್ನುವುದನ್ನು ಖರೀದಿಸುವಾಗ ಖಾತ್ರಿ ಪಡಿಸಿಕೊಳ್ಳಬೇಕು. ಇಂಥವು ಸಹ ಆರಾಮ ಮತ್ತು ಆಧಾರವನ್ನು ನೀಡಲು ಸಮರ್ಥವಾಗಿರುತ್ತವೆ.