ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hayavadana: ಅಮೆರಿಕೆಯಲ್ಲೊಂದು ಅದ್ಭುತ ನಾಟಕ ‘ಹಯವದನ’

Hayavadana: ಈ ಹಿಂದೆ ರಂಗಧ್ವನಿ ತಂಡ ಬೆನಕ ತಂಡದ ‘ಜೋಕುಮಾರಸ್ವಾಮಿ’, ‘ಸತ್ತವರ ನೆರಳು’ ನಾಟಕಗಳನ್ನು ಅಮೆರಿಕೆಯ ಕನ್ನಡಿಗರಿಗೆ ಯಶಸ್ವೀ ಪರ್ದರ್ಶನಗಳನ್ನು ನೀಡಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದಿದೆ. ಇತ್ತೀಚೆಗೆ ʼಹಯವದನʼದ 3 ಪ್ರದರ್ಶನಗಳನ್ನು ನೀಡಿ ಒಂದು ದಾಖಲೆಯನ್ನೇ ನಿರ್ಮಿಸಿದೆ.

ಅಮೆರಿಕೆಯಲ್ಲೊಂದು ಅದ್ಭುತ ನಾಟಕ ‘ಹಯವದನ’

-

ಹರೀಶ್‌ ಕೇರ ಹರೀಶ್‌ ಕೇರ Sep 24, 2025 1:40 PM

- ವೀಕ್ಷಕ

ದಕ್ಷಿಣ ಕ್ಯಾಲಿಫೋರ್ನಿಯಾದ ‘ರಂಗಧ್ವನಿ ತಂಡ’ ಗಿರೀಶ್ ಕಾರ್ನಾಡ್ ಅವರ ಹಯವದನ (Hayavadana) ನಾಟಕವನ್ನು ಬೆಂಗಳೂರಿನ ಬೆನಕ ತಂಡದ ಸಹಾಯದೊಂದಿಗೆ ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡಿಗರಿಗೆ ಪ್ರಸ್ತುತ ಪಡಿಸಿ, ಒಂದು ಹೊಸ ಅನುಭವವನ್ನೇ ಕೊಟ್ಟಿತ್ತು. ಇದು ಥಾಮಸ್ ಮಾನ್ ಅವರ “The Transposed Heads”ನಲ್ಲಿ ಹಳೆಯ "ಬೇತಾಳ ಪಂಚವಿಂಶತಿ" ಕಥೆಯ ಪುನರ್ನಿರ್ಮಾಣದಿಂದ ತೆಗೆದುಕೊಳ್ಳಲ್ಪಟ್ಟಿದೆ. ತನ್ನದೇ ಆದ ವಿಶಿಷ್ಟ ಅಲಂಕಾರಗಳೊಂದಿಗೆ ರಂಗಸಜ್ಜಿಕೆಮಾಡಿ, ಪ್ರೇಕ್ಷಕರ ಮೆಚ್ಚುಗೆ ಪಡೆದ ಹಾಗೂ ಒಂದರ ಹಿಂದೆ ಒಂದರಂತೆ ವಾರಾಂತ್ಯದಲ್ಲಿ 3 ಪ್ರದರ್ಶನಗಳನ್ನು (2 housefull shows) ನೀಡಿ ಒಂದು ದಾಖಲೆಯನ್ನೇ ನಿರ್ಮಿಸಿದೆ. ಈ ಹಿಂದೆ ಇದೇ ರಂಗಧ್ವನಿ ತಂಡ ಬೆನಕ ತಂಡದ ‘ಜೋಕುಮಾರಸ್ವಾಮಿ’, ‘ಸತ್ತವರ ನೆರಳು’ ನಾಟಕಗಳನ್ನು ಅಮೆರಿಕೆಯ ಕನ್ನಡಿಗರಿಗೆ ಯಶಸ್ವೀ ಪರ್ದರ್ಶನಗಳನ್ನು ನೀಡಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದಿದೆ.

Hayavadana6

ಬೆನಕ ತಂಡದ ಮಾಜಿ ಸದಸ್ಯರೂ ಆದ ವಲ್ಲೀಶ ಶಾಸ್ತ್ರಿಗಳು ಮೂಲ ಬಿ ವಿ ಕಾರಂತರ ಹಾಡುಗಳನ್ನೇ ಇಟ್ಟುಕೊಂಡು ರಂಗದ ಮೇಲೆ ತಂದು ಅನಿವಾಸಿ ಕನ್ನಡಿಗರಿಗೊಂದು ಕೊಡುಗೆಯಾಗಿ ಕೊಟ್ಟಿದ್ದಾರೆ. ವಲ್ಲೀಶ ಶಾಸ್ತ್ರಿ ಅವರ ಮರು ನಿರ್ದೇಶನದಲ್ಲಿ ಮೂಡಿ ಬಂದ ಈ ನಾಟಕದ ಮುಖ್ಯ ಕಥೆಯಲ್ಲಿ ಪದ್ಮಿನಿ (ಪೂರ್ಣಿಮ ಶ್ರೀನಿವಾಸ್ /ಶ್ರೀಲಕ್ಷ್ಮಿ ಆನಂದ್) ಮತ್ತು ಅವಳ ಜೀವನದ ದೇವದತ್ತ (ಶ್ರಿನಿವಾಸ ರಾವ್) ಹಾಗೂ ಕಪಿಲ (ವೆಂಕಟೇಶ್ ಚಕ್ರವರ್ತಿ) ಇಬ್ಬರು ಪುರುಷರ ನಡುವೆ ಕೇಂದ್ರ ಬಿಂದುವಾಗಲಿರುವ ಮನಸ್ಸು ಹಾಗೂ ದೇಹದ ಆಟಗಳು ಪ್ರೇಕ್ಷಕನಲ್ಲಿ ಚರ್ಚೆಯನ್ನೇ ಹುಟ್ಟುಹಾಕುತ್ತದೆ. ನಾಟಕದಲ್ಲಿ ಸಂಗೀತ, ಹಾಡು ಮತ್ತು ನೃತ್ಯದ ಅಳವಡಿಕೆಯು ಕಥೆಯನ್ನು ಹೇಳುವ ವಿಧಾನವನ್ನು ಹೆಚ್ಚು ಆಕರ್ಷಕವಾಗಿಸುತ್ತದೆ. ಕತೆ ಕಟ್ಟುವ ಕ್ರಮ, ನಾಟಕೀಯ ದೃಶ್ಯಗಳು ಮತ್ತು ಹಾಡುಗಳು ನಾಟಕಕ್ಕೆ ಹೆಚ್ಚಿನ ಮೆರಗು ನೀಡುತ್ತವೆ.

Hayavadana4

ನಾಟಕ ಗಣೇಶನ ಸ್ಮರಣೆಯಿಂದ ಆರಂಭಗೊಂಡ ನಾಟಕದಲ್ಲಿ ಕಂಡುಬರುವುದು ಬರೇ ಮೂರು ಮುಖ್ಯ ಪಾತ್ರಗಳು – ಪದ್ಮಿನಿ, ದೇವದತ್ತ ಹಾಗೂ ಕಪಿಲ. ಇಲ್ಲಿಅಪೂರ್ಣತೆಯ ಪ್ರತೀಕ ಅನ್ನುವಂತೆ ಹಯವದನನಿದ್ದಾನೆ. ಮೊದಲು ಹಯವದನನ ಅಪೂರ್ಣತೆಯ ವಿಚಾರ ನಂತರ ಕಪಿಲ, ಪದ್ಮಿನಿಯವರ ಕಥೆ, ಮತ್ತೆ ಹಯವದನನ ಪೂರ್ಣಾಂಗನಾದ ವಿಚಾರ ಹೀಗೆ ಕಥೆ 3 ಭಾಗವಾಗಿ ವಿಂಗಡಿಸಬಹುದು. ಕಥೆಯು ದೇಹ ಮತ್ತು ಮನಸ್ಸಿನ ನಡುವಿನ ಗಹನವಾದ ಸಂಘರ್ಷವನ್ನು ವಿಶ್ಲೇಷಿಸುತ್ತದೆ, ಇದು ಮಾನವನ ಅಸಮಗ್ರತೆಯನ್ನು ತೋರಿಸುತ್ತದೆ.

Hayavadana3

ರಂಗಧ್ವನಿಯ ಈ ಪ್ರದರ್ಶನಗಳು ವಲ್ಲೀಶ ಶಾಸ್ತ್ರಿಯವರು ನಡೆಸಿದ Theater Workshopನ ಫಲ. ಅಮೆರಿಕೆ ಎಂದರೆ ಇಂತಹ ಕಾರ್ಯಗಳಿಗೆ ವಾರಾಂತ್ಯ ಮಾತ್ರ ಲಭ್ಯ. 3ತಿಂಗಳಿಗೂ ಹೆಚ್ಚು ಕಾಲ ವಾರಂತ್ಯಗಳಲ್ಲಿ ಕಾರ್ಯಗಾರ, 4 ತಿಂಗಳ ಕಾಲ ವಾರಾಂತ್ಯಗಳಲ್ಲಿ Rehearsals ನಡೆಸಿ ಹೊರಬಂದ ನಾಟಕ ಅತ್ಯಂತ ಪ್ರಶಂಸನೀಯ. ಇರುವ ಸ್ಥಳೀಯ ರಂಗಾಸಕ್ತರನ್ನೇ ಹಿಡಿದು, ಅವರುಗಳಿಗೆ ತರಬೇತಿ ನೀಡಿ ಒಂದು ಅದ್ಭುತ ನಾಟಕವನ್ನೇ ನೀಡಿದ್ದಾರೆ. ಅದರಲ್ಲೂ ಒಂದರ ಹಿಂದೆ ಒಂದರಂತೆ 3 ಪ್ರದರ್ಶನಗಳು ಮಾಡಿ ಒಂದು ದಾಖಲೆಯೇ ಸರಿ. ಒಂದು ಪ್ರದರ್ಶನದಲ್ಲಿ ಭಾಗವತರ ಪಾತ್ರದಲ್ಲಿ ಬಸವರಾಜ್ ಹುಕ್ಕೇರಿ ಇನ್ನೊಂದು ಪ್ರದರ್ಶನದಲ್ಲಿ ML ಶ್ರೀನಿ ನಾಟಕಕ್ಕೆ ತಕ್ಕ ಬುನಾದಿಯನ್ನು ಕೊಟ್ಟರು. ಪದ್ಮಿನಿಯ ಪಾತ್ರದಲ್ಲಿ ಒಂದು ಪ್ರದರ್ಶನದಲ್ಲಿ ಪೂರ್ಣಿಮ ಶ್ರೀನಿವಾಸ್ ಇನ್ನೊಂದು ಪ್ರದರ್ಶನದಲ್ಲಿ ಶ್ರೀಲಕ್ಷ್ಮಿ ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಕಪಿಲನ ಪಾತ್ರದಲ್ಲಿ ವೆಂಕಿ ಹಾಗೂ ದೇವದತ್ತನ ಪಾತ್ರದಲ್ಲಿ ನಟಿಸಿ ಪಾತ್ರಕ್ಕೆ ಜೀವ ತುಂಬಿದ್ದರು. ಮಿಕ್ಕೆಲ್ಲಾ ನಟರು ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಟಿಸಿ ನಾಟಕಕ್ಕೆ ಹೆಚ್ಚು ಮೆರಗನ್ನು ಕೊಟ್ಟರು.

Hayavadana1

ಹಿಂದುಸ್ಥಾನಿ ಸಂಗೀತ ಗಾಯಕಿ ಶ್ರೀಮತಿ. ಸುಶ್ಮಾ ಪವನ್ ಅವರು ಒಂದು ತಂಡವನ್ನೇ ಕಟ್ಟಿ ಗಂಡು ಮೇಳ ಹಾಗೂ ಹೆಣ್ಣು ಮೇಳದವರಿಂದ ಸೊಗಸಾಗಿ ಹಾಡಿಸಿದ್ದು ನಾಟಕ್ಕೆ ಹೆಚ್ಚು ಆಕರ್ಷಕವಾಗಿಸಿತ್ತು. ಪವನ್ ಹಾಗೂ ಶ್ರೀ ಸಂಡೂರ್ ಅವರ ರಂಗವಿನ್ಯಾಸ, ಬೆಳಕು ಕಾರ್ಯ ಎಲ್ಲರ ಮೆಚ್ಚುಗೆ ಪಡೆದಿತ್ತು. ಎಲ್ಲಾ ಸ್ಥಳೀಯ ಕಲಾವಿದರೇ ಇದ್ದ ಈ ನಾಟಕವು ಮೂರೇ ಪ್ರದರ್ಶನಗಳಿಗೆ ಮೀಸಲಾಗದೆ, ಅಮೆರಿಕೆಯ ಹಲವಾರು ನಗರಗಳಲ್ಲಿ ಪ್ರದರ್ಶನಗೊಳ್ಳಬೇಕು ಎಂಬುದು ಆಶಯ.