ಢಾಕಾ, ಡಿ. 25: ಸಂಘರ್ಷ ಭರಿತ ಬಾಂಗ್ಲಾದೇಶದಲ್ಲಿ (Bangladesh Unrest) ಮತ್ತೊಬ್ಬ ಹಿಂದೂ ಯುವಕನನ್ನು ಹತ್ಯೆ ಮಾಡಲಾಗಿದೆ. ದೀಪು ಚಂದ್ರ ದಾಸ್ ಅವರನ್ನು ಥಳಿಸಿ ಕೊಲೆ ಮಾಡಿದ ಕೆಲವೇ ದಿನಗಳ ಅಂತರದಲ್ಲಿ ಮತ್ತೊಬ್ಬ ಹಿಂದೂ ಯುವಕನ ಹತ್ಯೆಯಾಗಿದ್ದು, ಭಾರತ ಆತಂಕ ವ್ಯಕ್ತಪಡಿಸಿದೆ. ರಾಜಬರಿ ಜಿಲ್ಲೆಯಲ್ಲಿ 29 ವರ್ಷದ ಅಮೃತ್ ಮಂಡಲ್ ಆಲಿಯಾಸ್ ಸಾಮ್ರಾಟ್ ಎಂಬ ಯುವಕನ ಮೇಲೆ ಬುಧವಾರ (ಡಿಸೆಂಬರ್ 24) ಹಲ್ಲೆ ಮಾಡಿದ ಉದ್ರಿಕ್ತರ ಗುಂಪು ಅವರನ್ನು ಸಾಯಿಸಿದೆ. ಅ ಮೂಲಕ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ಅವ್ಯಾಹತವಾಗಿ ಮುಂದುವರಿದಿದೆ.
ವರದಿಗಳ ಪ್ರಕಾರ, ಅಮೃತ್ ಮಂಡಲ್ ಅವರನ್ನು ರಾಜಧಾನಿ ಢಾಕಾದಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿರುವ ರಾಜಬರಿ ಜಿಲ್ಲೆಯ ಪಂಗಶಾದಲ್ಲಿ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಹತ್ಯೆ ಮಾಡಲಾಗಿದೆ.
ಮೃತ ಅಮೃತ್ ಹೊಸಾಯಿದಂಗ ಗ್ರಾಮದವರು ಎನ್ನಲಾಗಿದೆ. ಅಮೃತ್ ದರೋಡೆಕೋರ ಎಂದು ಆರೋಪಿಸಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಸ್ಥಳೀಯರು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ:
ಸ್ಥಳೀಯರು ಹೇಳಿದ್ದೇನು?
ಸ್ಥಳೀಯ ನಿವಾಸಿಗಳು ಬಾಂಗ್ಲಾದೇಶದ ಮಾಧ್ಯಮ ಸಂಸ್ಥೆ ದಿ ಡೈಲಿ ಸ್ಟಾರ್ ಜತೆ ಮಾತನಾಡಿ, ʼʼಸಾಮ್ರಾಟ್ 'ಸಾಮ್ರಾಟ್ ಬಹಿನಿ' ಎಂಬ ಕ್ರಿಮಿನಲ್ ಗ್ಯಾಂಗ್‌ನ ನಾಯಕನಾಗಿದ್ದ. ಈ ಗುಂಪು ಸುಲಿಗೆ ಸೇರಿದಂತೆ ಇತರ ಕಾನೂನುಬಾಹಿತ ಚಟುವಟಿಕೆಗಳಲ್ಲಿ ಭಾಗಿಯಾಗಿತ್ತು. ಕಳೆದ ವರ್ಷ ಶೇಖ್ ಹಸೀನಾ ದೇಶ ಬಿಟ್ಟು ಹೋದ ನಂತರ ಸಾಮ್ರಾಟ್ ಪಲಾಯನ ಮಾಡಿದ್ದ ಮತ್ತು ಇತ್ತೀಚೆಗೆ ತನ್ನ ಗ್ರಾಮವಾದ ಹೊಸಾಯಿದಂಗ ಮರಳಿದ್ದʼʼ ಎಂದು ಆರೋಪಿಸಿದ್ದಾರೆ.
ಬುಧವಾರ ರಾತ್ರಿ ಸುಮಾರು 11 ಗಂಟೆಗೆ ಸಾಮ್ರಾಟ್ ಮತ್ತು ಗ್ಯಾಂಗ್‌ನ ಇತರ ಕೆಲವು ಸದಸ್ಯರು ಗ್ರಾಮಸ್ಥ ಶಾಹಿದುಲ್ ಇಸ್ಲಾಂ ಮನೆಗೆ ಹೋಗಿ ಹಣ ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ. ಗ್ಯಾಂಗ್ ಸದಸ್ಯರನ್ನು ನೋಡಿದ ಕೂಡಲೇ ಶಾಹಿದುಲ್ ಇಸ್ಲಾಂನ ಕುಟುಂಬ ಸದಸ್ಯರು ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದರು. ಕೂಡಲೇ ಧಾವಿಸಿ ಬಂದ ಗ್ರಾಮಸ್ಥರು ಸಾಮ್ರಾಟ್‌ನನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಆದರೆ ಗ್ಯಾಂಗ್‌ನ ಇತರ ಸದಸ್ಯರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪೊಲೀಸರು ಸಾಮ್ರಾಟ್‌ನನ್ನುಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಪಂಗಶಾದಲ್ಲಿ ಪೊಲೀಸ್ ಠಾಣೆಯಲ್ಲಿ ಸಾಮ್ರಾಟ್ ವಿರುದ್ಧ ಕನಿಷ್ಠ ಎರಡು ಪ್ರಕರಣ ದಾಖಲಾಗಿವೆ. ಅವುಗಳಲ್ಲಿ ಒಂದು ಕೊಲೆ ಪ್ರಕರಣವೂ ಸೇರಿದೆ ಎಂದು ಪೊಲೀಸರು ಹೇಳಿದ್ದಾರೆ. ಸಾಮ್ರಾಟ್‌ನ ಸಹಚರರಲ್ಲಿ ಮೊಹಮ್ಮದ್ ಸೆಲೀಮ್‌ನನ್ನು ಬಂಧಿಸಲಾಗಿದ್ದು, ಆತನ ಬಳಿಯಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಇದು ವೃಥಾ ಆರೋಪ ಎನ್ನಲಾಗುತ್ತಿದೆ.
ಕೆಲವು ದಿನಗಳ ಹಿಂದೆ ದೀಪು ಚಂದ್ರ ದಾಸ್ ಅವರನ್ನು ಸಾರ್ವಜನಿಕವಾಗಿ ಥಳಿಸಿ ಹತ್ಯೆ ಮಾಡಲಾಗಿತ್ತು. ಇಸ್ಲಾಮ್ ಧರ್ಮ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಸಾಯಿಸಲಾಗಿತ್ತು. ಸದ್ಯ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಕಳವಳಕ್ಕೆ ಕಾರಣವಾಗಿದ್ದು, ಭಾರತ ಈಗಾಗಲೇ ಅಲ್ಲಿನ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.