ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

9/11 ಮಾದರಿ ದಾಳಿ ಸಂಚು ವಿಫಲಗೊಳಿಸಿ 180 ಪ್ರಯಾಣಿಕರ ಜೀವ ಉಳಿಸಿದ ಫ್ಲೈದುಬೈ ವಿಮಾನದ ಭಾರತೀಯ ಪೈಲಟ್‌; ಯಾರು ಈ ಕ್ಯಾಪ್ಟನ್ ಸ್ಮಿತ್ ಮಚ್ಚಾರ್?

Flydubai: ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಿ 9/11 ಮಾದರಿಯ ಭೀಕರ ಭಯೋತ್ಪಾದನಾ ದಾಳಿ ನಡೆಸಲು ಯತ್ನಿಸಿದ್ದ ಕೋ-ಪೈಲಟ್‌ನ ಸಂಚನ್ನು ವಿಫಲಗೊಳಿಸಿ ಭಾರತೀಯ ಮೂಲದ ಪೈಲಟ್‌ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ 180 ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ.

ಟೆಲ್‌ ಅವಿವ್‌, ಸೆ. 30: ಬಹುದೊಡ್ಡ ವೈಮಾನಿಕ ದುರಂತವೊಂದು ಭಾರತೀಯ ಪೈಲಟ್‌ ಒಬ್ಬರ ಸಾಹಸದಿಂದ ತಪ್ಪಿದೆ. ಇಸ್ರೇಲ್‌ ಪ್ರಯಾಣಿಕರಿದ್ದ ವಿಮಾನವನ್ನು ಅಪಹರಿಸಿ 9/11 ಮಾದರಿಯಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಭಯೋತ್ಪಾದಕರ ಸಂಚು ವಿಪಲವಾಗಿದೆ. ಹೌದು, ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ (Flydubai) ವಿಮಾನವನ್ನು ಪತನಗೊಳಿಸಿ 9/11 ಮಾದರಿಯ ಭೀಕರ ಭಯೋತ್ಪಾದನಾ ದಾಳಿ ನಡೆಸಲು ಯತ್ನಿಸಿದ್ದ ಕೋ-ಪೈಲಟ್‌ನ ಸಂಚನ್ನು ವಿಫಲಗೊಳಿಸಿ ಭಾರತೀಯ ಮೂಲದ ಪೈಲಟ್‌ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) 180 ಪ್ರಯಾಣಿಕರ ಪ್ರಾಣ ಉಳಿಸಿ ಸಾಹಸ ಮೆರೆದಿದ್ದಾರೆ.

ಓಮನ್ ಮೂಲದ ಕೋ-ಪೈಲಟ್ ವಿಮಾನದ ನಿಯಂತ್ರಣ ಸಾಧಿಸಿ ಪತನಗೊಳಿಸಲು ನಡೆಸಿದ ಯತ್ನವನ್ನು ಸ್ಮಿತ್ ಮಚ್ಚಾರ್ ತಡೆದಿದ್ದಾರೆ. ಕೋ-ಪೈಲಟ್ ಚಾಕುವಿನಿಂದ ಇರಿದು ಗಾಯಗೊಳಿಸಿದರೂ, ರಕ್ತ ಹರಿಯುತ್ತಿದ್ದರೂ ತನ್ನ ಜೀವವನ್ನೂ ಲೆಕ್ಕಿಸದೆ 166 ಇಸ್ರೇಲಿಗರು ಸೇರಿ 180 ಪ್ರಯಾಣಿಕರ ಪ್ರಾಣ ಕಾಪಾಡಿದ್ದಾರೆ. ಇಸ್ರೇಲ್‌ ಮಾಧ್ಯಮಗಳು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಭಾರತೀಯ ಪ್ರಜೆ ಎನ್ನುವುದನ್ನು ದೃಢಪಡಿಸಿವೆ.

180 ಪ್ರಯಾಣಿಕರ ಪ್ರಾಣ ಉಳಿಸಿ ಭಾರತೀಯ ಪೈಲಟ್‌:



ಘಟನೆ ವಿವರ

ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ FZ1073 ವಿಮಾನ ಬುಧವಾರ (ಸೆಪ್ಟೆಂಬರ್‌ 30) ಭಾರಿ ದುರಂತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಯಿತು ಎಂದು ಮೂಲಗಳು ತಿಳಿಸಿವೆ. ವಿಮಾನದ ಓಮನ್ ಮೂಲದ ಕೋ-ಪೈಲಟ್ ಸಹೋದ್ಯೋಗಿ ಸ್ಮಿತ್ ಮಚ್ಚಾರ್ ಅವರಿಗೆ ಚಾಕುವಿನಿಂದ ಇರಿದು ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದಾನೆ. ಇದರಿಂದ ಕೆಲ ಹೊತ್ತು ನಿಯಂತ್ರಣ ಕಳೆದುಕೊಂಡ ಬೋಯಿಂಗ್ 737 ವಿಮಾನವು ಏಕಾಏಕಿ ಸಾವಿರಾರು ಅಡಿ ಕೆಳಕ್ಕೆ ಇಳಿದಿದೆ. ಕೊನೆಗೆ ಫ್ಲೈದುಬೈಯ ಇನ್ನೊಬ್ಬ ಪೈಲಟ್‌ ನೆರವಿನಿಂದ ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದಲ್ಲಿ ಇಳಿಸಲಾಗಿದೆ ಎಂದು ಇಸ್ರೇಲ್‌ ಮಾಧ್ಯಮಗಳು ವರದಿ ಮಾಡಿವೆ.

ಫ್ಲೈದುಬೈ ವಿಮಾನದಲ್ಲಿ ಹೈಡ್ರಾಮಾ: ಚೂರಿ ಇರಿತಕ್ಕೊಳಗಾದರೂ 180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌

ಘಟನೆಯ ನಂತರ ವಿಡಿಯೊ ಸಂದೇಶವೊಂದರಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಕೋ ಪೈಲಟ್‌ ವಿಮಾನವನ್ನು ಪತನಗೊಳಿಸಲು ಉದ್ದೇಶಿಸಿದ್ದ ಎಂದು ತಿಳಿಸಿದ್ದಾರೆ. ಈ ಘಟನೆಯ ನಂತರ, ವಿಮಾನದಲ್ಲಿದ್ದ ಕರ್ತವ್ಯನಿರತ ಫ್ಲೈದುಬೈ ಸಿಬ್ಬಂದಿ ವಿಮಾನವನ್ನು ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದರು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ತಬುಕ್‌ನಲ್ಲಿ ಇಬ್ಬರೂ ಪೈಲಟ್‌ಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮುಂಬೈ ಮೂಲದ ಸ್ಮಿತ್ ಮಚ್ಚಾರ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಆರಂಭದಲ್ಲಿ ವಿಮಾನದ ಅಪಹರಣ ನಡೆದಿದೆ ಎಂದು ಭಾವಿಸಲಾಗಿತ್ತು. ಬಳಿಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಇದು ಅಪಹರಣವಲ್ಲ ಎಂದು ಸ್ಪಷ್ಟಪಡಿಸಿತು. ಅಪಹರಣದ ಅನುಮಾನ ಮೂಡಿದ್ದರಿಂದ ಇಸ್ರೇಲ್‌ ವಾಯುಪಡೆಯ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಸ್ಮಿತ್‌ ಅವರ ಸಂದರ್ಶನ:



ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

ಕಾಕ್‌ಪಿಟ್‌ನಿಂದ ಕಿರುಚಾಟ ಕೇಳಿಬಂದಾಗ ಪ್ರಯಾಣಿಕರೊಬ್ಬರು ಕಾಕ್‌ಪಿಟ್ ಬಾಗಿಲು ತೆರೆದು ನೋಡಿದಾಗ ಎಲ್ಲೆಂದರಲ್ಲಿ ರಕ್ತ ಚೆಲ್ಲಿರುವುದು ಮತ್ತು ಪೈಲಟ್‌‌ ಮಚ್ಚಾರ್‌ಗೆ ಚಾಕುವಿನಿಂದ ಇರಿದಿರುವುದು ಕಂಡುಬಂತು. ತಕ್ಷಣವೇ ಹಲವು ಪ್ರಯಾಣಿಕರು ಒಳನುಗ್ಗಿ ದಾಳಿ ನಡೆಸಿದ್ದ ಕೋ-ಪೈಲಟ್​​​ನನ್ನು ವಶಕ್ಕೆ ಪಡೆದು ಆತನನ್ನು ಕಟ್ಟಿ ಹಾಕಿದರು. ವಿಮಾನದಲ್ಲಿ ಇನ್ನೊಬ್ಬ ಪೈಲಟ್‌ ತಕ್ಷಣವೇ ಕಾಕ್‌ಪಿಟ್‌ಗೆ ಧಾವಿಸಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ತಕ್ಷಣವೇ ಸೌದಿ ಅರೇಬಿಯಾದ ತಬುಕ್ ವಿಮಾನ ನಿಲುವಾಣದಲ್ಲಿ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಯಿತು. ವಿಮಾನದ 174 ಪ್ರಯಾಣಿಕರ ಪೈಕಿ 166 ಮಂದಿ ಇಸ್ರೇಲಿಗರಿದ್ದರು. ಅದರಲ್ಲೂ 27 ಮಕ್ಕಳಿದ್ದರು. ಸದ್ಯ ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ.

ಇಸ್ರೇಲ್‌-ಅಮೆರಿಕಕ್ಕೆ ಸವಾಲೊಡ್ಡಿದ ಕೆಲವೇ ಹೊತ್ತಲ್ಲಿ ಇರಾನ್‌ ಐಆರ್‌ಜಿಸಿ ವಕ್ತಾರ ಅಲಿ ಮೊಹಮ್ಮದ್ ನೈನಿಯ ಹತ್ಯೆ

ಯಾರು ಈ ಸ್ಮಿತ್‌ ಮಚ್ಚಾರ್‌?

ಸದ್ಯ ತಮ್ಮ ಸಾಹಸದಿಂದ ಇಸ್ರೇಲಿಗರ ಪಾಲಿನ ಹೀರೋ ಎನಿಸಿಕೊಂಡಿರುವ ಸ್ಮಿತ್‌ ಮುಂಬೈ ಮೂಲದವರು. ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು 2022ರ ಜೂನ್‌ನಿಂದ ಫ್ಲೈದುಬೈ ಸಂಸ್ಥೆಯ ಬೋಯಿಂಗ್ 737 ವಿಮಾನಗಳ ತಂಡದಲ್ಲಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕೂ ಮೊದಲು ಅವರು ಮುಂಬೈಯ ಸ್ಪೈಸ್‌ಜೆಟ್ ವಿಮಾನದಲ್ಲಿ 11 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಅಲ್ಲಿ ಅವರು ಹಿರಿಯ ಕಮಾಂಡರ್ ಆಗಿ ಹಾಗೂ 2020ರಿಂದ ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆಗಿ ಇತರ ಪೈಲಟ್‌ಗಳಿಗೆ ತರಬೇತಿ ನೀಡುತ್ತಿದ್ದರು. ಒಟ್ಟು 9,750 ಗಂಟೆಗಳ ಹಾರಾಟ ಅನುಭವ ಹೊಂದಿದ್ದಾರೆ. ಅವರ ಸಹೋದರ ಆಕಾಶ ಏರ್‌ನಲ್ಲಿ ಪೈಲಟ್‌ ಆಗಿದ್ದಾರೆ.

ವಿದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author