ನವದೆಹಲಿ: ಭಾರತೀಯ ವ್ಯಕ್ತಿಯನ್ನು ರಷ್ಯಾ ಬಲವಂತವಾಗಿ ಯುದ್ಧಕ್ಕೆ ಬಳಸಿಕೊಳ್ಳುತ್ತಿದೆ ಮತ್ತೊಂದು ಆರೋಪ ಕೇಳಿಬಂದಿದೆ. ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ರಷ್ಯಾ(Russia War)ಗೆ ತೆರಳಿದ್ದ ತನ್ನನ್ನು ಉಕ್ರೇನ್ ವಿರುದ್ಧ ಯುದ್ಧ ಮಾಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಹೈದರಾಬಾದ್(Hyderabad) ಮೂಲದ ವ್ಯಕ್ತಿಯೊಬ್ಬ ಸೆಲ್ಫಿ ವಿಡಿಯೊ ಮೂಲಕ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಹೌದು.. ರಷ್ಯಾದಲ್ಲಿ ಸಿಲುಕಿರುವ ಹೈದರಾಬಾದ್ ಮೂಲದ 37 ವರ್ಷದ ಮೊಹಮ್ಮದ್ ಅಹ್ಮದ್(Mohammed Ahmed) ಎಂಬಾತನನ್ನು ರಕ್ಷಿಸುವಂತೆ ಅವರ ಪತ್ನಿ ಅಫ್ಶಾ ಬೇಗಂ (Afsha Begum) ವಿದೇಶಾಂಗ ಸಚಿವ ಎಸ್.ಜೈಶಂಕರ್(S Jaishankar)ಗೆ ಪತ್ರ ಬರೆದಿದ್ದಾರೆ.
ಅಹ್ಮದ್ ಪತ್ನಿ ಪ್ರಕಾರ, ಮುಂಬೈ(Mumbai) ಮೂಲದ ಕನ್ಸಲ್ಟನ್ಸಿ ಕಂಪನಿಯೊಂದು ಕಟ್ಟಡ ನಿರ್ಮಾಣ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿತ್ತು. ಅದರಂತೆ ಅಮಹ್ಮದ್ ಏಪ್ರಿಲ್ 2025ರಂದು ಭಾರತದಿಂದ ರಷ್ಯಾಗೆ ತೆರಳಿದ್ದರು. ಒಂದು ತಿಂಗಳೂ ಯಾವುದೇ ಕೆಲಸ ನೀಡದೇ ಹಾಗೆ ಕೂರಿಸಿ ಬಳಿಕ, ಇತರೆ 30 ಜನರೊಂದಿಗೆ ದೂರದ ಪ್ರದೇಶಕ್ಕೆ ಸ್ಥಳಾಂತರಿಸಿ ಬಲವಂತವಾಗಿ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ಶಿವಾಜಿ ಮಹಾರಾಜರ ಗೆಟ್‌ಅಪ್‌ನಲ್ಲಿ ಬಂದು ಸೆಕ್ಯೂರಿಟಿ ಗಾರ್ಡ್ ಜೊತೆ ವಾಗ್ಯುದ್ಧ! ಈತನ ಹುಚ್ಚಾಟವನ್ನೊಮ್ಮೆ ನೋಡಿ
ತರಬೇತಿ ಬಳಿಕ 26 ಜನರನ್ನು ಉಕ್ರೇನ್ ವಿರುದ್ಧ ಹೋರಾಡಲು ಗಡಿ ಪ್ರದೇಶಕ್ಕೆ ಕರೆದೊಯ್ಯುವಾಗ ಅಹ್ಮದ್ ಸೇನಾ ವಾಹನದಿಂದ ಹಾರಿದ್ದಾರೆ. ಈ ವೇಳೆ ಅವರ ಬಲಗಾಲಿನ ಮೂಳೆ ಮೂರಿದು ಗಾಯಗೊಂಡಿದ್ದರೂ ಯುದ್ಧ ಮಾಡು ಇಲ್ಲವಾದರೆ ಸಾಯಲು ಸಿದ್ಧನಾಗು ಎಂದು ಬೆದರಿಕೆ ಹಾಕಲಾಗುತ್ತಿದೆ. ನಮ್ಮ ಮನೆಗೆ ಅವರೇ ಆಧಾರ ಸ್ಥಂಬವಾಗಿದ್ದು, ದಯವಿಟ್ಟು ಅವರನ್ನು ರಕ್ಷಿಸಲು ಸಹಾಯ ಮಾಡಿ ಎಂದು, ಅಹ್ಮದ್ ಪತ್ನಿ ಅಫ್ಶಾ ಬೇಗಂ ಪತ್ರದಲ್ಲಿ ತಿಳಿಸಿದ್ದಾರೆ.
ಅಹ್ಮದ್ ಸೆಲ್ಫಿ ವಿಡಿಯೊದಲ್ಲಿ ಹೇಳಿದ್ದೇನು?
"ನನ್ನ ಜತೆ ತರಬೇತಿ ಪಡೆದ 25 ಜನರಲ್ಲಿ ಈಗಾಗಲೇ 17 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಒಬ್ಬ ಭಾರತೀಯನೂ ಇದ್ದಾನೆ. ನಾನು ಈಗ ಗಡಿ ಪ್ರದೇಶದಲ್ಲಿದ್ದು, ಇಲ್ಲಿ ಯುದ್ಧ ನಡೆಯುತ್ತಿದೆ. ನಾವು ನಾಲ್ವರು ಭಾರತೀಯರು ಯುದ್ಧ ಮಾಡುಲು ನಿರಾಕರಿಸಿದ್ದೇವೆ. ಆದರೆ ಅವರು ಬಂದೂಕು ತೋರಿಸಿ ಯುದ್ಧ ಮಾಡು ಇಲ್ಲವಾದರೆ ಡ್ರೋನ್ ದಾಳಿ ಮಾಡಿದಂತೆ ತೋರಿಸಿ ನಿಮ್ಮನ್ನು ಕೊಲ್ಲುತ್ತೇವೆ ಎಂದು ಬೆದರಿಸುತ್ತಿದ್ದಾರೆ," ಎಂದು ಅಹ್ಮದ್ ಸೆಲ್ಫಿ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಇನ್ನೂ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕೂಡ ವಿದೇಶಾಂಗ ಸಚಿವಾಲಯ ಹಾಗೂ ರಷ್ಯಾದಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಪತ್ರ ಬರೆದು, ಅಹ್ಮದ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ತರುವಂತೆ ಮನವಿ ಮಾಡಿದ್ದಾರೆ.
ಭಾರತದ ವಿನಂತಿ ರಷ್ಯಾಕ್ಕೆ
ಈ ಬಗ್ಗೆ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಕೌನ್ಸಿಲರ್ ತಡು ಮಾಮು ಪ್ರತಿಕ್ರಿಯಿಸಿದ್ದು, "ರಾಯಭಾರ ಕಚೇರಿಯು ಅಹ್ಮದ್ ಅವರ ವಿವರಗಳನ್ನು ರಷ್ಯಾದ ಅಧಿಕಾರಿಗಳೊಂದಿಗೆ ಹಂಚಿಕೊಂಡಿದೆ ಮತ್ತು ಅವರನ್ನು ರಷ್ಯಾದ ಸೈನ್ಯದಿಂದ ಬೇಗನೆ ಬಿಡುಗಡೆ ಮಾಡಿ ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ಕಳುಹಿಸುವಂತೆ ವಿನಂತಿಸಿದೆ," ಎಂದು ಹೇಳಿದ್ದಾರೆ. ಕಳೆದ ತಿಂಗಳು ಭಾರತವು ರಷ್ಯಾ ಸೇನೆಯಲ್ಲಿ ನೇಮಕಗೊಂಡ 27 ಭಾರತೀಯರ ಬಿಡುಗಡೆಗಾಗಿ ಸಹ ವಿನಂತಿಸಿತ್ತು ಎಂದು ತಿಳಿದುಬಂದಿದೆ.