Hyderabad Airport: ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸ್ವಾಗತಿಸುವ ಮುದ್ದುಮುದ್ದಾದ ಶ್ವಾನಗಳು; ಏನಿದು ಥೆರಪಿ ಡಾಗ್ ಕಾನ್ಸೆಪ್ಟ್?
ವಿಮಾನದಲ್ಲಿ ಪ್ರಯಾಣ ಮಾಡುವುದು ಕೆಲವರಿಗೆ ಮಾನಸಿಕ ಒತ್ತಡವನ್ನು ಉಂಟು ಮಾಡುತ್ತದೆ. ಇದನ್ನು ಪರಿಹರಿಸಲು ಇದೀಗ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಲ ಅಲ್ಲಾಡಿಸುತ್ತ ಸ್ನೇಹಪರವಾಗಿರುವ ನಾಯಿಗಳನ್ನು ಪರಿಚಯಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಹೈದರಾಬಾದ್: ಹೆಚ್ಚಿನ ಒತ್ತಡ, ಗಡಿಬಿಡಿ, ಆತಂಕದೊಂದಿಗೆ ವಿಮಾನ ನಿಲ್ದಾಣಕ್ಕೆ (Airport) ಆಗಮಿಸಿದಾಗ ಮುದ್ದುಮುದ್ದಾದ ಶ್ವಾನಗಳು (Therapy Dogs) ನಮ್ಮನ್ನು ಸ್ವಾಗತಿಸಿದರೆ ಎಷ್ಟು ಸಂತೋಷವಾಗುತ್ತದೆ ಅಲ್ಲವೇ? ಇದೀಗ ಹೈದರಾಬಾದ್‌ನ ವಿಮಾನ ನಿಲ್ದಾಣದಲ್ಲಿ ಇಂತಹ ಅನುಭವವನ್ನು ಪಡೆಯಬಹುದು. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(Rajiv Gandhi International Airport) ಪ್ರಯಾಣಿಕರ ಆತಂಕವನ್ನು ನಿಭಾಯಿಸಲು ಥೆರಪಿ ಶ್ವಾನಗಳನ್ನು ಪರಿಚಯಿಸಲಾಗಿದೆ. ಇವು ಪ್ರಯಾಣಿಕರಿಗೆ ಭಾವನಾತ್ಮಕವಾಗಿ ಸಹಾಯ ಮಾಡುತ್ತವೆ ಮತ್ತು ವಿಮಾನ ಪ್ರಯಾಣಕ್ಕೆ ಮುಂಚಿನ ಆತಂಕವನ್ನು ದೂರ ಮಾಡುತ್ತವೆ ಎಂದು ತಜ್ಞರು ಹೇಳಿದ್ದಾರೆ.
ವಿಮಾನದಲ್ಲಿ ಪ್ರಯಾಣ ಮಾಡುವುದು ಕೆಲವರಿಗೆ ಹೆಚ್ಚಿನ ಮಾನಸಿಕ ಒತ್ತಡವನ್ನು ಉಂಟು ಮಾಡುತ್ತದೆ. ಇದನ್ನು ದೂರ ಮಾಡಲು ಇದೀಗ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಲ ಅಲ್ಲಾಡಿಸುವ ಮತ್ತು ಸ್ನೇಹಪರ ನಾಯಿಗಳನ್ನು ಪರಿಚಯಿಸಲಾಗಿದೆ.
ವಿಮಾನ ನಿಲ್ದಾಣಕ್ಕಾಗಿ ಇದೇ ಮೊದಲ ಬಾರಿಗೆ ಪ್ರಯಾಣಿಕರ ಸಂತೋಷಕ್ಕಾಗಿ ಥೆರಪಿ ಶ್ವಾನಗಳನ್ನು ಪರಿಚಯಿಸಲಾಗಿದೆ. ಈ ಥೆರಪಿ ಶ್ವಾನಗಳು ಪ್ರಯಾಣಿಕರು ವಿಮಾನ ನಿಲ್ದಾಣದ ಮೂಲಕ ಸಂಚರಿಸುವಾಗ ಅವರಿಗೆ ಸ್ವಾಗತ ಕೋರಿ ಭಾವನಾತ್ಮಕವಾಗಿ ಬೆಂಬಲಿಸಲು ಸಹಾಯ ಮಾಡುತ್ತವೆ.
ಹೈದರಾಬಾದ್ ವಿಮಾನ ನಿಲ್ದಾಣದ ದೇಶೀಯ ಮತ್ತು ಅಂತಾರಾಷ್ಟ್ರೀಯ ನಿರ್ಗಮನ ಪ್ರದೇಶದ ಪ್ರಮುಖ ಪ್ರಯಾಣಿಕರ ಟಚ್‌ಪಾಯಿಂಟ್‌ಗಳಲ್ಲಿ ಪ್ರತಿದಿನ ಎರಡು ತರಬೇತಿ ಪಡೆದ ಥೆರಪಿ ಶ್ವಾನಗಳನ್ನು ನಿಯೋಜಿಸಲಾಗುತ್ತದೆ. ಪ್ರಯಾಣಿಕರು ಭದ್ರತೆಯ ಅನಂತರ ಅವು ಬೋರ್ಡಿಂಗ್ ಗೇಟ್‌ಗಳ ಬಳಿಯೂ ಸಿಗುತ್ತವೆ. ದಿನಕ್ಕೆ 4ರಿಂದ 6 ಗಂಟೆಗಳ ಕಾಲ ಕರ್ತವ್ಯದಲ್ಲಿರುವ ಥೆರಪಿ ಶ್ವಾನಗಳ ವಿಶ್ರಾಂತಿ ಮತ್ತು ಆರೈಕೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಇವುಗಳೊಂದಿಗೆ ಪ್ರಯಾಣಿಕರು ಸಂವಹನವನ್ನು ಮಾಡಬಹುದು. ಇವುಗಳೊಂದಿಗೆ ನಿರ್ವಾಹಕರು ಕೂಡ ಇರುತ್ತಾರೆ.
ಪ್ರಯಾಣಿಕರ ಯೋಗಕ್ಷೇಮಕ್ಕೆ ಆದ್ಯತೆ
ಕೋವಿಡ್ ಸಾಂಕ್ರಾಮಿಕದ ಬಳಿಕ ವಿಮಾನ ಪ್ರಯಾಣವು ಪೂರ್ಣ ಪ್ರಮಾಣದಲ್ಲಿ ಪುನರಾರಂಭವಾಗುತ್ತಿದ್ದಂತೆ ಅನೇಕ ವಿಮಾನಯಾನ ಸಂಸ್ಥೆಗಳು ಜನಸಂದಣಿ, ಆರೋಗ್ಯ ಕಾಳಜಿ ಮತ್ತು ವಿಳಂಬದ ಬಗ್ಗೆ ಪ್ರಯಾಣಿಕರಲ್ಲಿ ಹೆಚ್ಚಿನ ಆತಂಕ ಉಂಟಾಗಿದೆ. ಇದಕ್ಕಾಗಿ ಪ್ರಪಂಚದಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ, ಭಾವನಾತ್ಮಕ ಬೆಂಬಲವನ್ನು ನೀಡಲು ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಹೈದರಾಬಾದ್ ವಿಮಾನ ನಿಲ್ದಾಣವು ಪ್ರಮುಖ ಹೆಜ್ಜೆಯನ್ನು ಇಟ್ಟಿದೆ.
ಚಿಕಿತ್ಸಾ ಶ್ವಾನಗಳೇ ಏಕೆ?
ವಿಮಾನ ಪ್ರಯಾಣವೆಂದರೆ ಹೆಚ್ಚಾಗಿ ದೀರ್ಘ ಸಾಲುಗಳು, ಅನಿರೀಕ್ಷಿತ ವಿಳಂಬಗಳು, ಟರ್ಮಿನಲ್‌ಗಳ ಬಗ್ಗೆ ಗೊಂದಲ ಉಂಟಾಗುವುದು ಸಹಜ. ಚಿಕಿತ್ಸಾ ಶ್ವಾನಗಳು ಪ್ರಯಾಣಿಕರಿಗೆ ಒತ್ತಡವನ್ನು ಕಡಿಮೆ ಮಾಡಲು ಸಹಕರಿಸುತ್ತವೆ. ಈ ನಾಯಿಗಳು ವಿಮಾನ ನಿಲ್ದಾಣದ ಪರಿಸರದಲ್ಲಿ ನಿರಾಳತೆ ಮತ್ತು ಪರಿಚಿತವದ ಭಾವನೆಯನ್ನು ಉಂಟು ಮಾಡುತ್ತವೆ.
ವಿಜ್ಞಾನ ಏನು ಹೇಳುತ್ತದೆ?
ಥೆರಪಿ ಪ್ರಾಣಿಗಳೊಂದಿಗೆ ಸಮಯ ಕಳೆಯುವುದರಿಂದ ಒತ್ತಡ ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಕೇವಲ 5ರಿಂದ 10 ನಿಮಿಷಗಳ ಕಾಲ ನಾಯಿಯೊಂದಿಗೆ ಇರುವುದು ರಕ್ತದೊತ್ತಡ, ಆತಂಕದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಮೇಯೊ ಕ್ಲಿನಿಕ್ ಮತ್ತು ಅಮೆರಿಕನ್ ಕೆನಲ್ ಕ್ಲಬ್ ಸಂಸ್ಥೆಗಳ ಅಧ್ಯಯನ ಹೇಳಿದೆ.
Travellers at Hyderabad’s Rajiv Gandhi International Airport (RGIA) can now expect a heartwarming welcome, not from staff, but from four fluffy Toy Poodles.
— Peek TV (@PeekTV_in) August 4, 2025
A new 'Therapy Dog Program’ called 'Paws and Peace' the airport aims to create a more soothing experience for passengers. pic.twitter.com/Mnfu6Shk2N
ಪ್ರಯಾಣಿಕರು ಏನು ಹೇಳುತ್ತಾರೆ?
ವಿಮಾನ ನಿಲ್ದಾಣದಲ್ಲಿ ಥೆರಪಿ ಡಾಗ್‌ಗಳ ಪರಿಚಯಕ್ಕೆ ಪ್ರಯಾಣಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಪ್ರಯಾಣಿಕರು ಇದನ್ನು "ಅದ್ಭುತ ನಡೆ" ಎಂದು ಹೇಳಿದ್ದಾರೆ.
ಥೆರಪಿ ಶ್ವಾನಗಳು ಬೇರೆಲ್ಲಿದೆ?
ದೆಹಲಿ ವಿಮಾನ ನಿಲ್ದಾಣ, ಟರ್ಕಿಯ ಇಸ್ತಾನ್‌ಬುಲ್ ವಿಮಾನ ನಿಲ್ದಾಣ, ಅಮೆರಿಕದ ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸ್ಯಾನ್ ಫ್ರಾನ್ಸಿಸ್ಕೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೂಡ ಥೆರಪಿ ಶ್ವಾನಗಳಿವೆ.
ಏನು ಮಾಡಬಹುದು?
ಸುರಕ್ಷಿತ ಅಂತರ ಕಾಯ್ದುಕೊಂಡು ಶ್ವಾನಗಳ ಸಮೀಪಕ್ಕೆ ಹೋಗಬಹುದು. ನಿರ್ವಾಹಕರ ಸೂಚನೆಗಳನ್ನು ಪಾಲಿಸಿ, ಫ್ಲ್ಯಾಷ್ ಬಳಸದೆ ಫೋಟೋ ತೆಗೆದುಕೊಳ್ಳಬಹುದು. ಈ ವೇಳೆ ಮಕ್ಕಳ ಬಗ್ಗೆ ಎಚ್ಚರವಿರಲಿ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಇದನ್ನೂ ಓದಿ: Viral Video: ನಿಯಂತ್ರಣ ತಪ್ಪಿದ ಬೊಲೆರೊ... ರಸ್ತೆಬದಿ ನಿಂತಿದ್ದ ಜನ... ನಡೀತು ಘನಘೋರ ಘಟನೆ! ವೈರಲ್ ವಿಡಿಯೊ ನೋಡಿ
ಏನು ಮಾಡಬಾರದು?
ಆಹಾರ ನೀಡಬೇಡಿ, ಅವುಗಳ ಬಳಿ ಜೋರಾಗಿ ಶಬ್ದಗಳನ್ನು ಮಾಡಬೇಡಿ, ಅವುಗಳ ಕಿವಿ ಅಥವಾ ಬಾಲವನ್ನು ಎಳೆಯಬೇಡಿ, ಅವುಗಳನ್ನು ಎತ್ತಿಕೊಳ್ಳಲು ಪ್ರಯತ್ನಿಸಬೇಡಿ. ಇತರರಿಗೂ ಅವುಗಳೊಂದಿಗೆ ಸಮಯ ಕಳೆಯಲು ಅವಕಾಶ ನೀಡಿ.
ಥೆರಪಿ ಡಾಗ್‌ಗಳೊಂದಿಗಿನ ಚಟುವಟಿಕೆಗಳು
ವಿಮಾನ ನಿಲ್ದಾಣದಲ್ಲಿರುವ ಥೆರಪಿ ಡಾಗ್‌ಗಳೊಂದಿಗೆ ಸಣ್ಣ ಆಟಿಕೆಯನ್ನು ಎಸೆದು ಆಟವಾಡಬಹುದು, ನಾಯಿಗಳ ಪಕ್ಕದಲ್ಲಿ ಗೊತ್ತುಪಡಿಸಿದ ಪ್ರದೇಶಗಳಲ್ಲಿ ಫೋಟೊ ತೆಗೆದುಕೊಳ್ಳಬಹುದು, ನಿರ್ವಾಹಕರ ಮಾರ್ಗದರ್ಶನದಲ್ಲಿ ಅವುಗಳನ್ನು ಮುದ್ದಿಸಬಹುದು.
ವಿಮಾನ ನಿಲ್ದಾಣದಲ್ಲಿ ಮಾತ್ರವಲ್ಲ ಥೆರಪಿ ನಾಯಿಗಳನ್ನು ಭಾರತದಾದ್ಯಂತ ವಿವಿಧ ಸಂಸ್ಥೆಗಳಲ್ಲಿ ಭಾವನಾತ್ಮಕ ಬೆಂಬಲ ಮತ್ತು ಒಡನಾಟವನ್ನು ನೀಡಲು ಬಳಸಲಾಗುತ್ತದೆ. ಶಾಲೆಗಳು, ಹಿರಿಯರ ಆರೈಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ತರಬೇತಿ ಪಡೆದ ಚಿಕಿತ್ಸಾ ಪ್ರಾಣಿಗಳನ್ನು ಬಳಸಲಾಗುತ್ತಿದೆ.