ವಾಷಿಂಗ್ಟನ್: ಅಮೆರಿಕದ ಕನ್ಸಾಸ್‌ನ ಸೆನೆಕಾ ನಗರದಲ್ಲಿ ಗುರುವಾರ (ಏ. 3) ಭಾರತೀಯ ಮೂಲದ ಕ್ಯಾಥೋಲಿಕ್ ಪಾದ್ರಿಯೊಬ್ಬರು ಅಪರಿಚಿತ ವ್ಯಕ್ತಿಯ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ (Catholic Priest Shot Dead). ಮೃತರನ್ನು ಆಂಧ್ರ ಪ್ರದೇಶ ಮೂಲದ ಫಾ. ಅರುಲ್ ಕ್ಯಾರಸಾಲ (Fr. Arul Carasala) ಎಂದು ಗುರುತಿಸಲಾಗಿದೆ. "ಫಾದರ್ ಅರುಲ್ ಅವರು ಅಪರಿಚಿತ ವ್ಯಕ್ತಿಯೊಬ್ಬನ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ" ಎಂದು ಕಾನ್ಸಾಸ್ ನಗರದ ಆರ್ಚ್‌ಡಯೋಸಿಸ್‌ನ ಆರ್ಚ್ ಬಿಷಪ್ ಜೋಸೆಫ್ ನೌಮನ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. "ಈ ಹಿಂಸಾಚಾರದ ಕೃತ್ಯವು ಪಾದ್ರಿ, ಧೀಮಂತ ನಾಯಕ ಮತ್ತು ನಮ್ಮ ಸ್ನೇಹಿತನನನ್ನು ಬಲಿ ತೆಗೆದುಕೊಂಡಿದ್ದು, ತುಂಬಲಾರದ ನಷ್ಟ ತಂದಿದೆ" ಎಂದು ಹೇಳಿದ್ದಾರೆ.
ಆಂಧ್ರ ಪ್ರದೇಶದ ಕಡಪಾದಲ್ಲಿ ಜನಿಸಿದ ಫಾದರ್ ಕ್ಯಾರಸಲಾ 2011ರಿಂದ ಸೆನೆಕಾದಲ್ಲಿರುವ ಸೇಂಟ್ಸ್ ಪೀಟರ್ ಮತ್ತು ಪಾಲ್ ಕ್ಯಾಥೋಲಿಕ್ ಚರ್ಚ್‌ನ ಪಾದ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. 1994ರಲ್ಲಿ ತಾಯ್ನಾಡು ಭಾರತದಲ್ಲಿ ಪಾದ್ರಿಯಾಗಿ ದೀಕ್ಷೆ ಪಡೆದ ಅವರು, 2004ರಂದು ಅಮೆರಿಕದ ಕಾನ್ಸಾಸ್‌ಗೆ ತೆರಳಿದ್ದರು. 2011ರಲ್ಲಿ ಅವರು ಅಮೆರಿಕದ ಪೌರತ್ವ ಸ್ವೀಕರಿಸಿದ್ದರು.
ಫೇಸ್‌ಬುಕ್ ಪೋಸ್ಟ್ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: PM Modi Meets Yunus: ಬಿಮ್‌ಸ್ಟೆಕ್ ಶೃಂಗಸಭೆ: ಪ್ರಧಾನಿ ಮೋದಿ- ಮುಹಮ್ಮದ್ ಯೂನಸ್ ದ್ವಿಪಕ್ಷೀಯ ಮಾತುಕತೆ
ಗುಂಡು ತಗುಲಿದ್ದ ಫಾದರ್ ಅರುಲ್ ಕ್ಯಾರಸಾಲ ಅವರನ್ನೂ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಅಸೋಸಿಯೇಟೆಡ್ ಪ್ರೆಸ್ (AP) ಜತೆ ಮಾತನಾಡಿದ ಪ್ಯಾರಿಷ್‌ನ ಧಾರ್ಮಿಕ ಶಿಕ್ಷಣ ನಿರ್ದೇಶಕರಾದ ಕ್ರಿಸ್ ಆಂಡರ್ಸನ್, "ನಮಗೆ ದೊರೆತ ಮಾಹಿತಿಯ ಪ್ರಕಾರ ವಯಸ್ಸಾದ ವ್ಯಕ್ತಿ ಅವರ ಬಳಿಗೆ ಬಂದು 3 ಸುತ್ತು ಗುಂಡು ಹಾರಿಸಿದ್ದಾನೆ" ಎಂದು ತಿಳಿಸಿದ್ದಾರೆ. ಯಾಕಾಗಿ ಈ ದಾಳಿ ನಡೆದಿದೆ ಎನ್ನುವುದು ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಶಂಕಿತನ ಬಂಧನ
ಕಾನ್ಸಾಸ್‌ನ ಸ್ಥಳೀಯ ಸುದ್ದಿವಾಹಿನಿ ಕೆಎನ್‌ಬಿಸಿ ನ್ಯೂಸ್‌ನ ವರದಿಯ ಪ್ರಕಾರ, ಘಟನೆಗೆ ಸಂಬಂಧಿಸಿದಂತೆ 66 ವರ್ಷದ ಗ್ಯಾರಿ ಎಲ್. ಹರ್ಮೆಶ್ ಎಂಬ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ಶಂಕಿತ ವ್ಯಕ್ತಿ ಒಕ್ಲಹೋಮಾದ ತುಲ್ಸಾ ಮೂಲದವನು. ಸದ್ಯ ಅಧಿಕಾರಿಗಳು ಆತನ ವಿಚಾರಣೆ ನಡೆಸುತ್ತಿದ್ದಾರೆ.
“ಫಾದರ್ ಕ್ಯಾರಸಾಲ ಒಬ್ಬ ಶ್ರದ್ಧಾವಂತ ಮತ್ತು ಉತ್ಸಾಹಭರಿತ ಪಾದ್ರಿಯಾಗಿದ್ದರು. ಅವರು ನಮ್ಮ ಆರ್ಚ್‌ಡಯೋಸಿಸ್‌ಗೆ 20ಕ್ಕಿಂತಲೂ ಅಧಿಕ ವರ್ಷಗಳಿಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದರು. ಜನಾನುರಾಗಿದ್ದ ಅವರನ್ನು ಸ್ನೇಹಿತರು ಮತ್ತು ಇತರ ಪಾದ್ರಿಗಳು ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ” ಎಂದು ಆರ್ಚ್ ಬಿಷಪ್ ಜೋಸೆಫ್ ನೌಮನ್ ಅವರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.