ಟೆಹ್ರಾನ್/ವಾಷಿಂಗ್ಟನ್, ಮಾರ್ಚ್ 04: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಅಮೆರಿಕದ ಜಂಟಿ ಸೇನಾ ಕಾರ್ಯಾಚರಣೆ (iran- israel war) ತೀವ್ರಗೊಂಡಿದ್ದು, ಇರಾನ್‌ನ ನೂತನ ರಕ್ಷಣಾ ಸಚಿವ ಸಯ್ಯದ್ ಮಜೀದ್ ಇಬ್ನ್ ಅಲ್-ರೇಜಾ (Seyed Majid Ebn Al-Reza) ಅವರು ವೈಮಾನಿಕ ದಾಳಿಯಲ್ಲಿ (air strike) ಹತ್ಯೆಯಾಗಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ಶನಿವಾರ (ಫೆಬ್ರವರಿ 28, 2026) ನಡೆದ ಮೊದಲ ಹಂತದ ದಾಳಿಯಲ್ಲಿ ಇರಾನ್‌ನ ಮಾಜಿ ರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ ಅವರು ಹತರಾಗಿದ್ದರು. ಈ ಹಿನ್ನೆಲೆಯಲ್ಲಿ, ಸೋಮವಾರವಷ್ಟೇ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಸಯ್ಯದ್ ಮಜೀದ್ ಅವರನ್ನು ಉಸ್ತುವಾರಿ ರಕ್ಷಣಾ ಸಚಿವರನ್ನಾಗಿ ನೇಮಿಸಿದ್ದರು. ಆದರೆ, ಅಧಿಕಾರ ವಹಿಸಿಕೊಂಡ ಎರಡೇ ದಿನಗಳಲ್ಲಿ ಅವರು ಕೂಡ ಇಸ್ರೇಲ್‌ನ ದಾಳಿಗೆ ಬಲಿಯಾಗಿರುವುದು ಇರಾನ್ ಆಡಳಿತಕ್ಕೆ ಅರಗಿಸಿಕೊಳ್ಳಲಾಗದ ಹೊಡೆತ ನೀಡಿದೆ.
ಇಸ್ರೇಲ್‌ನ ‘ಆಪರೇಷನ್ ರೋರಿಂಗ್ ಲಯನ್’ (Operation Roaring Lion) ಮತ್ತು ಅಮೆರಿಕದ ‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ಅಡಿಯಲ್ಲಿ ಟೆಹ್ರಾನ್ ಸೇರಿದಂತೆ ಇರಾನ್‌ನ ಪ್ರಮುಖ ನಗರಗಳ ಮೇಲೆ ನಿರಂತರ ಬಾಂಬ್ ದಾಳಿ ನಡೆಸಲಾಗುತ್ತಿದೆ. ಈ ದಾಳಿಯಲ್ಲಿ ಇರಾನ್‌ನ ಉನ್ನತ ಮಿಲಿಟರಿ ಕಮಾಂಡರ್‌ಗಳು ಮತ್ತು ರಕ್ಷಣಾ ಇಲಾಖೆಯ ಪ್ರಮುಖ ಕಚೇರಿಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ.