ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Iran protests: ಇರಾನ್‌ನಲ್ಲಿ ಬೀದಿಗಿಳಿದ ಜನ, ಭಾರಿ ಪ್ರತಿಭಟನೆ, 7 ಮಂದಿ ಸಾವು

ದೇಶದ ಆರ್ಥಿಕ ಕುಸಿತ, ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆಗಳು ಯುವಜನರನ್ನು ಬೀದಿಗಿಳಿಯುವಂತೆ ಮಾಡಿವೆ. ಡಿಸೆಂಬರ್‌ನಲ್ಲಿ ಬೆಲೆಯೇರಿಕೆ ಪ್ರಮಾಣ ಅಧಿಕೃತವಾಗಿ 42.5 ಶೇಕಡಕ್ಕೆ ಏರಿಕೆಯಾಗಿದೆ. ಭಾನುವಾರ ಸರ್ಕಾರ ದೇಶಿ ಕರೆನ್ಸಿಯ ತೀವ್ರ ಕುಸಿತವನ್ನು ನಿಭಾಯಿಸಿದ ರೀತಿ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ವ್ಯಾಪಾರಿಗಳು ಬೀದಿಗೆ ಇಳಿಯುವುದರೊಂದಿಗೆ ಈ ಪ್ರತಿಭಟನೆಗಳು ಆರಂಭವಾದವು.

ಇರಾನ್‌ನಲ್ಲಿ ಪ್ರತಿಭಟನೆ

ಟೆಹರಾನ್‌, ಜ.02: ಭಾನುವಾರದಿಂದ ಇರಾನ್‌ನಲ್ಲಿ (Iran protests) ಭಾರಿ ಪ್ರತಿಭಟನೆಗಳು ಆರಂಭವಾಗಿದ್ದು, ದೇಶವನ್ನು ತಲ್ಲಣಗೊಳಿಸುತ್ತಿವೆ. ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ. ಈ ಪ್ರತಿಭಟನೆಗಳು ಮೊದಲು ರಾಜಧಾನಿ ಟೆೆಹ್ರಾನ್‌ನಲ್ಲಿ (Tehran) ಆರಂಭವಾಗಿದ್ದು, ಮಂಗಳವಾರ ಕನಿಷ್ಠ ಹತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ ಬಳಿಕ ಇತರ ಪ್ರದೇಶಗಳಿಗೂ ವಿಸ್ತರಿಸಿವೆ.

ದೇಶದ ಆರ್ಥಿಕ ಕುಸಿತ, ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆಗಳು ಯುವಜನರನ್ನು ಬೀದಿಗಿಳಿಯುವಂತೆ ಮಾಡಿವೆ. ಡಿಸೆಂಬರ್‌ನಲ್ಲಿ ಬೆಲೆಯೇರಿಕೆ ಪ್ರಮಾಣ ಅಧಿಕೃತವಾಗಿ 42.5 ಶೇಕಡಕ್ಕೆ ಏರಿಕೆಯಾಗಿದೆ. ಭಾನುವಾರ ಸರ್ಕಾರ ದೇಶಿ ಕರೆನ್ಸಿಯ ತೀವ್ರ ಕುಸಿತವನ್ನು ನಿಭಾಯಿಸಿದ ರೀತಿ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ವ್ಯಾಪಾರಿಗಳು ಬೀದಿಗೆ ಇಳಿಯುವುದರೊಂದಿಗೆ ಈ ಪ್ರತಿಭಟನೆಗಳು ಆರಂಭವಾದವು.

ವ್ಯಾಪಾರಿಗಳು, ಅಂಗಡಿ ಮಾಲೀಕರು ಮತ್ತು ಹಲವು ಇರಾನಿಯನ್ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಪ್ರಮುಖ ಬಜಾರ್, ಮಾರುಕಟ್ಟೆಗಳನ್ನು ಬಂದ್ ಮಾಡಿದ್ದಾರೆ. ಬುಧವಾರ ತೀವ್ರ ಚಳಿಯ ಕಾರಣ ಸರ್ಕಾರ ರಜೆ ಘೋಷಿಸಿದ್ದು, ಪರಿಣಾಮವಾಗಿ ದೇಶದ ಬಹುಭಾಗದಲ್ಲಿ ಚಟುವಟಿಕೆಗಳು ಸ್ಥಗಿತಗೊಂಡಿವೆ.

ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆಯ ಪ್ರಕಾರ, ಪ್ರತಿಭಟನಾಕಾರರು ಕಲ್ಲು ತೂರಿದ ಪರಿಣಾಮ ಕೆಲವು ಕಟ್ಟಡಗಳು ತೀವ್ರವಾಗಿ ಹಾನಿಗೊಂಡಿವೆ. ದೊಂಬಿಯ ಮುಖ್ಯ ಪ್ರಚೋದಕರು ಎಂದು ಕರೆಯಲ್ಪಟ್ಟ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ತೆಹ್ರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಮೆರಿಕಾ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧಗಳಿಂದಾಗಿ ಇರಾನ್‌ನ ಆರ್ಥಿಕತೆ ಹಲವು ವರ್ಷಗಳಿಂದ ಒತ್ತಡದಲ್ಲಿದೆ. ಜೂನ್‌ನಲ್ಲಿ ಇಸ್ರೇಲ್‌ನೊಂದಿಗೆ ನಡೆದ 12 ದಿನಗಳ ಸಂಘರ್ಷದಿಂದ ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಾಗಿ, ಸರ್ಕಾರದ ಹಣಕಾಸಿನ ಸ್ಥಿತಿ ಮತ್ತಷ್ಟು ದುರ್ಬಲಗೊಂಡಿದೆ. ಆರ್ಥಿಕ ಸಂಕಷ್ಟವೇ ಪ್ರಧಾನ ಕಾರಣವಾದರೂ, ಕೆಲವು ಪ್ರತಿಭಟನಾಕಾರರು ಇರಾನ್‌ನ ಧಾರ್ಮಿಕ ಆಡಳಿತ ವ್ಯವಸ್ಥೆಯ ವಿರುದ್ಧವೂ ಘೋಷಣೆಗಳನ್ನು ಕೂಗಿದ್ದಾರೆ.

ಇತ್ತೀಚಿನ ಪ್ರತಿಭಟನೆಗಳು 2022ರಲ್ಲಿ ಮಹ್ಸಾ ಅಮಿನಿ ಬಂಧನದಲ್ಲಿದ್ದಾಗ ಮೃತಪಟ್ಟ ನಂತರ ಉಂಟಾದ ಭಾರೀ ಅಶಾಂತಿಗೆ ಹೋಲಿಸಿದರೆ ಚಿಕ್ಕ ಪ್ರಮಾಣದಲ್ಲಿವೆ. ಮಹಿಳೆಯರ ಕಟ್ಟುನಿಟ್ಟಾದ ಉಡುಪು ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿ ಸಾವನ್ನಪ್ಪಿದ ಮಹ್ಸಾ ಅಮಿನಿ ಪ್ರಕರಣದ ಬಳಿಕ ದೇಶವ್ಯಾಪಿ ಭಾರೀ ಆಕ್ರೋಶ ವ್ಯಕ್ತವಾಗಿ, ಭದ್ರತಾ ಪಡೆಗಳ ಸದಸ್ಯರು ಸೇರಿ ನೂರಾರು ಮಂದಿ ಸಾವನ್ನಪ್ಪಿದ್ದರು.

ಪ್ರತಿಭಟನೆಗಳ ಬಗ್ಗೆ ಇರಾನ್ ಸರ್ಕಾರದ ಪ್ರತಿಕ್ರಿಯೆ

ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ನೇತೃತ್ವದ ಇರಾನ್‌ನ ನಾಗರಿಕ ಸರ್ಕಾರವು ಪ್ರತಿಭಟನಾಕಾರರೊಂದಿಗೆ ಸಂವಾದಕ್ಕೆ ಸಿದ್ಧವಾಗಿದ್ದೇವೆ ಎಂದು ಹೇಳಿದೆ. “ಇಸ್ಲಾಮಿಕ್ ದೃಷ್ಟಿಕೋನದಿಂದ ನೋಡಿದರೆ… ಜನರ ಜೀವನೋಪಾಯದ ಸಮಸ್ಯೆಗಳನ್ನು ನಾವು ಬಗೆಹರಿಸದಿದ್ದರೆ, ಕೊನೆಯಲ್ಲಿ ನರಕಕ್ಕೇ ಹೋಗುವ ಸ್ಥಿತಿ ಬರುತ್ತದೆ” ಎಂದು ಅವರು ದೂರದರ್ಶನದಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಆದರೆ, ಇರಾನ್‌ನ ರಿಯಾಲ್ ಮೌಲ್ಯ ತೀವ್ರವಾಗಿ ಕುಸಿತಗೊಂಡಿರುವುದರಿಂದ ತಮ್ಮ ಆಯ್ಕೆಗಳು ಸೀಮಿತವಾಗಿವೆ ಎಂದು ಪೆಜೆಶ್ಕಿಯನ್ ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಒಂದು ಅಮೆರಿಕನ್ ಡಾಲರ್‌ಗೆ ಸುಮಾರು 14 ಲಕ್ಷ ರಿಯಾಲ್ ಮೌಲ್ಯವಿದೆ.

ಹರೀಶ್‌ ಕೇರ

View all posts by this author