ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nova Music Festival Massacre: 'ನೋವಾ'ದ ಆ ಗಾಯವನ್ನು ಇಸ್ರೇಲ್ ದಶಕಗಳ ಕಾಲ ಹಸಿಯಾಗಿರಿಸಲಿದೆ!

ಇಸ್ರೇಲ್‌ನ ನೋವಾ ಸೈಟ್‌‌ 2023ರ ಅಕ್ಟೋಬರ್‌ನಲ್ಲಿ 7ರಂದು ಅಕ್ಷರಶಃ ರುದ್ರಭೂಮಿಯಾಗಿತ್ತು. ವಾರಕ್ಕೊಮ್ಮೆ ಇಸ್ರೇಲಿ ಯುವ ಜನ ಚಿಟ್ಟೆಗಳಂತೆ ಸಂಭ್ರಮಿಸುವ ಸ್ಥಳ ಅಂದು ಮಸಣ ಭೂಮಿಯಂತಾಗಿತ್ತು. ಅಕ್ಟೋಬರ್ 6ರ ಇಳಿ ಸಂಜೆ ಸೂಪರ್ ನೋವಾ ಮ್ಯೂಸಿಕಲ್ ಫೆಸ್ಟಿವಲ್ ಆಯೋಜಿಸಲಾಗಿತ್ತು. ಸುಮಾರು 4,000 ಇಸ್ರೇಲಿ ಯುವ ಜನ ಅಲ್ಲಿ ಸೇರಿದ್ದರು. ರಾತ್ರಿಯಿಡೀ ಹಾಡಿ, ಕುಣಿದು ಇನ್ನೇನು ಮನೆಗೆ ಮರಳುವ ಹೊತ್ತು. ಈ ವೇಳೆ ಹಮಾಸ್ ಉಗ್ರರ ಭೀಕರ ದಾಳಿ ನಡೆಸಿದ್ದರು. ಈ ವೇಳೆ 378 ಮಂದಿ ಮೃತಪಟ್ಟಿದ್ದರು. ಈ ಘಟನೆಯನ್ನು ನೆನೆದು ಅಲ್ಲಿನ ಜನ ಈಗಲೂ ದುಃಖಿತರಾಗುತ್ತಾರೆ.

'ನೋವಾ'ದ ಆ ಗಾಯವನ್ನು ಇಸ್ರೇಲ್ ದಶಕಗಳ ಕಾಲ ಹಸಿಯಾಗಿರಿಸಲಿದೆ!

ಹಮಾಸ್ ದಾಳಿಯ ಬಲಿಪಶುಗಳು. -

Ramesh B Ramesh B Sep 20, 2025 9:21 PM
  • ರಮೇಶ್ ಕುಮಾರ್ ನಾಯಕ್

ನಾವು ಇಸ್ರೇಲ್ - ಗಾಜಾ ಗಡಿಯ ಸೆಡೆರಾಟ್ (Sderot) ನಗರದ ಕೃಷಿಕರ ಗ್ರಾಮವೊಂದರಲ್ಲಿ ಹೆಜ್ಜೆ ಹಾಕುತ್ತಿದ್ದೆವು. ಗ್ರಾಮಸ್ಥರೆಲ್ಲ ಒಂದಾಗಿ ಕೃಷಿ ನಡೆಸುವ, ಆ ಬಳಿಕ ಬೆಳೆಯ ಫಲವನ್ನು ಹಂಚಿಕೊಳ್ಳುವ ಪರಸ್ಪರ ಸಹಕಾರ ವ್ಯವಸ್ಥೆ ಅವರದು. ಇಸ್ರೇಲಿಗರು ಅದನ್ನು ಕಿಬುಡ್ಜ್ ಎಂದು ಕರೆಯುತ್ತಾರೆ‌.

‌ಅಲ್ಲಿನ ಸುಮಾರು ನೂರರಷ್ಟು ಮನೆಗಳು ಈಗ ಖಾಲಿ ಖಾಲಿ. ಎಲ್ಲ ಮನೆಗಳ ಗೋಡೆಗಳ ತುಂಬ ಎಕೆ 47 ಗನ್‌‌ ಗುಂಡುಗಳ ತೂತು. ಅಲ್ಲಲ್ಲಿ ಬಿದ್ದಿರುವ ರಾಕೆಟ್‌‌ನ ಅವಶೇಷಗಳು. ಬೆಂಕಿಯಲ್ಲಿ ಸುಟ್ಟು ಹೋಗಿರುವ ಗೃಹೋಪಯೋಗಿ ವಸ್ತುಗಳು. ನೆಲದ ಮೇಲೆ ಇನ್ನೂ ಇರುವ ರಕ್ತದ ಕಲೆಗಳು. ಕತ್ತು ಓರೆ ಮಾಡಿಕೊಂಡು ಬಿದ್ದಿರುವ ಮಕ್ಕಳ ಗೊಂಬೆಗಳು. ಅಡುಗೆ ಮನೆಯ ಮಗುಚಿ ಬಿದ್ದ ಪಾತ್ರೆಗಳಲ್ಲಿ ಇನ್ನೂ ಉಳಿದಿರುವ ಆಹಾರದ ತುಣುಕು. ಎಲ್ಲ ಮನೆಗಳ ಮುಂದೆ Martyr ಎಂಬ ಶೀರ್ಷಿಕೆಯ ಜತೆ, ಉಗ್ರರ ದಾಳಿಯಲ್ಲಿ ಮೃತಪಟ್ಟವರ ಫೋಟೊಗಳು. ಅಪಹರಣಕ್ಕೊಳಗಾದವರ ಭಾವಚಿತ್ರದ ಮೇಲೆ Bring Them Home Now ಎಂಬ ಬರಹ... ಅಲ್ಲಿಯ ಆ ದೃಶ್ಯ ಭಯಾನಕ.

ಶ್ರಮ ಜೀವಿಗಳು ನಾವು. ನಮ್ಮ ಇಡೀ ಹಳ್ಳಿ ಒಂದು ಕುಟುಂಬದಂತಿತ್ತು. ಒಬ್ಬರಿಗೊಬ್ಬರು ನೆರವಾಗುತ್ತ ಬದುಕು ಸಾಗಿಸುತ್ತಿದ್ದೆವು. ಆದರೆ ಆ ದುಷ್ಟರು ಇಡೀ ಹಳ್ಳಿಯನ್ನೇ ಧ್ವಂಸಗೊಳಿಸಿ ಹೋಗಿಬಿಟ್ಟರು. ರಾಕೆಟ್ ಉಡಾಯಿಸಿ ನಮ್ಮ ಮನೆಗಳನ್ನು ನಾಶಗೊಳಿಸಿದರು. ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಅಪಹರಿಸಿಕೊಂಡು ಹೋದರು. ಆ ಊರಿನವನೊಬ್ಬ, 2023ರ ಅಕ್ಟೋಬರ್ 7ರಂದು ನಡೆದಿದ್ದ ಹಮಾಸ್ ಉಗ್ರರ ಭೀಕರ ದಾಳಿಯ ಬಗ್ಗೆ ನಮಗೆ ವಿವರಿಸುತ್ತ ಹೋದ.

ನಾವು ಅಲ್ಲಿಂದ ನಾಲ್ಕೈದು ಕಿ.ಮೀ ದೂರದ ನೋವಾ ಸೈಟ್‌‌ಗೆ (Nova Site) ಹೋದೆವು. ವಾರಕ್ಕೊಮ್ಮೆ ಇಸ್ರೇಲಿ ಯುವ ಜನ ಚಿಟ್ಟೆಗಳಂತೆ ಸಂಭ್ರಮಿಸುವ ಸ್ಥಳ ಅದು. ಈಗ ಅಕ್ಷರಶಃ ಮಸಣ ಭೂಮಿ. ಆ ವಿಶಾಲ ಮೈದಾನದ ತುಂಬ ಬಲಿ ಪಶುಗಳ ಫೋಟೊಗಳೇ ತುಂಬಿಕೊಂಡಿವೆ. ಎಲ್ಲೆಡೆ ಶೋಕ ತೋರಣ...

Nova Music Festival Massacre 3

ಹಮಾಸ್ ಉಗ್ರರ ದಾಳಿಗೆ ತುತ್ತಾದ ಮನೆ‌.

ಸರಿಯಾಗಿ ಎರಡು ವರ್ಷಗಳ ಹಿಂದೆ‌ ಆ ಜಾಗದಲ್ಲಿ ಸೂಪರ್ ನೋವಾ ಮ್ಯೂಸಿಕಲ್ ಫೆಸ್ಟಿವಲ್ ಆಯೋಜಿಸಲಾಗಿತ್ತು. ಅದು ಅಕ್ಟೋಬರ್ 6ರ ಇಳಿ ಸಂಜೆ. ಸುಮಾರು 4,000 ಇಸ್ರೇಲಿ ಯುವ ಜನ ಅಲ್ಲಿ ಸೇರಿದ್ದರು. ಮರು ದಿನ ಶನಿವಾರ. ಇಸ್ರೇಲಿಗರ ವಿರಾಮ ದಿನವಾದ ಶಬ್ಬತ್. ಸಂಜೆ ಆರಕ್ಕೆ ಶುರುವಾಗಿದ್ದ ಸಂಗೀತ ಹಬ್ಬ ಬೆಳಗಿನ ಜಾವದವರೆಗೂ ಮುಂದುವರಿದಿತ್ತು. ರಾತ್ರಿಯಿಡೀ ಹಾಡಿ, ಕುಣಿದು ಇನ್ನೇನು ಮನೆಗೆ ಮರಳುವ ಹೊತ್ತು. ಇದ್ದಕ್ಕಿದ್ದಂತೆ ಗಾಜಾ ಗಡಿಯಾಚೆಯಿಂದ ರಾಕೆಟ್ ಬಂದು ಬಿತ್ತು. ಅದರ ಬೆನ್ನಿಗೇ ಗ್ರೇನೆಡ್ ಸ್ಫೋಟ, ನಾಲ್ಕೂ ದಿಕ್ಕಿನಿಂದ ತೂರು ಬರುತ್ತಿದ್ದ ಗುಂಡುಗಳು. ಕೆಲವೇ ನಿಮಿಷಗಳಲ್ಲಿ ಆ ಸ್ಥಳದಲ್ಲಿ 378 ಮಂದಿ ಹೆಣವಾಗಿ ಬಿದ್ದರು. ಸಾವಿರಾರು ಮಂದಿ ಗಾಯಗೊಂಡರು. 44 ಮಂದಿಯನ್ನು ಉಗ್ರರು ಅಪಹರಿಸಿಕೊಂಡು ಹೋದರು.

ನಾವು ಸಂಗೀತ ಪ್ರಿಯರು. ಇದು ಪ್ರೀತಿ ಅರಳುವ ಸ್ಥಳ. ಆದರೆ ಆ ರಕ್ಕಸರು ಇಲ್ಲಿ ನರಕ ಸೃಷ್ಟಿಸಿ ಹೋದರು. ಆವತ್ತು ನಾನೂ ಈ ಸ್ಥಳದಲ್ಲಿದ್ದೆ. ಗುಂಡಿನ ಸದ್ದು ಮತ್ತು ರಾಕೆಟ್ ದಾಳಿಯ ಹೊಗೆಯಿಂದಾಗಿ ಇಲ್ಲೊಂದು ಯುದ್ಧದ ವಾತಾವರಣವೇ ಸೃಷ್ಟಿಯಾಗಿ ಬಿಟ್ಟಿತ್ತು. ಹಮಾಸ್ ಉಗ್ರರು ಹೆಣ್ಣು ಮಕ್ಕಳನ್ನು ನಗ್ನಗೊಳಿಸಿ ವಿಕೃತಿ ಮೆರೆದರು. ಸಾಮೂಹಿಕವಾಗಿ ಅತ್ಯಾಚಾರ ಎಸಗಿದರು. ಸಿಕ್ಕಸಿಕ್ಕವರನ್ನು ಬರ್ಬರವಾಗಿ ಕೊಂದರು. ನಾನು ಬಚಾವಾಗಿದ್ದೇ ಪವಾಡ ಎಂದು ವಿವರಿಸಿದರು ಮಜಲ್ ತಜಾಜೊ ಎಂಬ ಇಸ್ರೇಲಿ ಯುವತಿ.

ಅದು ಇಸ್ರೇಲ್ ಇತಿಹಾಸದಲ್ಲಿ ದಾಖಲಾದ ಭೀಕರ ದಾಳಿಗಳಲ್ಲಿ ಒಂದು. ಹಮಾಸ್ ಉಗ್ರ ಸಂಘಟನೆಯ ಮಿಲಿಟರಿ ಘಟಕವಾದ ಅಲ್ ಖಾಸಮ್ ಬ್ರಿಗೇಡ್‌‌ನ ನೂರಾರು ಉಗ್ರರು ಅಚ್ಚರಿಯ ರೀತಿಯಲ್ಲಿ ಗಾಜಾ ಗಡಿಯ ತಂತಿ ಬೇಲಿ ಕತ್ತರಿಸಿಕೊಂಡು ದಾಟಿ ಬಂದಿದ್ದರು. ಗಾಜಾ ಗಡಿಗೂ ಈ ನೋವಾ ಪ್ರದೇಶಕ್ಕೂ ನಾಲ್ಕೇ ನಾಲ್ಕು ಕಿ.ಮೀಟರ್ ದೂರ. ಕೆಲವರು ಪ್ಯಾರಾ ಗ್ಕೈಡರ್ ಬಳಸಿ ಗಡಿ ದಾಟಿದ್ದರು.‌ ಕಿಬುಡ್ಜ್ ಜನ ವಸತಿ ಪ್ರದೇಶ ಮತ್ತು ನೋವಾ ಮ್ಯೂಸಿಲ್ ಫೆಸ್ಟಿವಲ್ ಮೇಲೆ ಮುಗಿ ಬಿದ್ದಿದ್ದರು. ಸೆಡೆರಾಟ್ ಪೊಲೀಸ್ ಚೌಕಿಯ ಮೇಲೂ ದಾಳಿ ಮಾಡಿ ಪೊಲೀಸರನ್ನು ಕೊಂದು ಹಾಕಿದ್ದರು. ಸ್ಥಳೀಯರು ಹೇಳುವ ಪ್ರಕಾರ, ಬೆಳಗಿನ ಜಾವ ಶುರುವಾದ ಹಮಾಸ್ ಉಗ್ರರ ಅಟ್ಟಹಾಸ ಮಧ್ಯಾಹ್ನ 11ರವರೆಗೂ ಮುಂದುವರಿದಿತ್ತು. ಕೆಲವು ಗಂಟೆಗಳ ಕಾಲ ಪರಿಸ್ಥಿತಿ ಔಟ್ ಆಫ್ ಕಂಟ್ರೋಲ್. ಇಸ್ರೇಲ್ ಸೈನಿಕರು ಪೊಷಿಷನ್ ತೆಗೆದುಕೊಳ್ಳುವಷ್ಟರಲ್ಲಿ ಕಾಲ ಮೀರಿತ್ತು. ಭೀಕರ ಮಾರಣಹೋಮ ನಡೆದು ಹೋಗಿತ್ತು. ನೋವಾ ಮ್ಯೂಸಿಕ್ ಫೆಸ್ಟಿವಲ್ ಸ್ಥಳದಿಂದ 41 ಮಂದಿ ಸೇರಿದಂತೆ ಒಟ್ಟು 240 ಜನರನ್ನು ಬಲವಂತವಾಗಿ ತಮ್ಮ ವಾಹನಗಳಲ್ಲಿ ಕೂರಿಸಿಕೊಂಡು ಗಾಜಾದೊಳಗೆ ಸೇರಿ ಬಿಟ್ಟಿದ್ದರು. ಉಗ್ರರು ಮೂರು ತಿಂಗಳ ಮಗುವನ್ನೂ ಎತ್ತಿಕೊಂಡು ಹೋಗಿದ್ದರು.

ಇದು ಸಾಲದೆಂಬಂತೆ ಮರು ದಿನ ಲೆಬೆನಾನ್‌‌ನಿಂದ ಇಸ್ರೇಲ್ ಮೇಲೆ ಸರಣಿ ರಾಕೆಟ್ ದಾಳಿ ನಡೆಯಿತು. ಅತ್ತ ಯೆಮೆನ್‌‌ನಿಂದ ಇರಾನ್ ಬೆಂಬಲಿತ ಹೌತಿ ಉಗ್ರರು ಕ್ಷಿಪಣಿ ಉಡಾಯಿಸಿದರು. ಹೀಗೆ ಮೂರು ಕಡೆಯಿಂದ ನಡೆದ ದಾಳಿಗಳಿಂದಾಗಿ ಇಸ್ರೇಲ್ ಘಾಸಿಗೊಳಗಾದರೂ ತಿರುಗಿ ಬೀಳಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

ಮೊದಲು ಹಮಾಸ್ ಉಗ್ರರ ಬೆನ್ನು ಮುರಿಯುತ್ತೇವೆ. ಆನಂತರ, ಇವರಿಗೆ ಕುಮ್ಮಕ್ಕು ನೀಡಿದ ನಮ್ಮ ಶತ್ರು ದೇಶಗಳಿಗೆ ಪಾಠ ಕಲಿಸುತ್ತೇವೆ ಎಂದು ಅಬ್ಬರಿಸಿದರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು!

Nova Music Festival Massacre 2

ಹೇಗಿತ್ತು ಇಸ್ರೇಲ್ ಪ್ರತಿಕಾರ?

1948ರಲ್ಲಿ ದೇಶ ಹುಟ್ಟಿದಾಗಿನಿಂದ ಇಸ್ರೇಲ್ ಮುಸ್ಲಿಂ ಮೂಲಭೂತವಾದಿ ಉಗ್ರರಿಂದ ಉಪಟಳ ಎದುರಿಸುತ್ತಲೇ ಇದೆ. ಇರಾನ್‌, ಇರಾಕ್‌, ಈಜಿಪ್ಟ್‌, ಜೋರ್ಡಾನ್‌, ಲಿಬಿಯಾ, ಪ್ಯಾಲೆಸ್ತೀನ್‌, ಲೆಬೆನಾನ್‌, ಸಿರಿಯಾ, ಟರ್ಕಿ, ಯೆಮೆನ್...ಈ ಎಲ್ಲ ದೇಶಗಳ ಮೂಲಕ ಇಸ್ಲಾಮಿಕ್ ಉಗ್ರರು ಇಸ್ರೇಲನ್ನು ಪೀಡಿಸುತ್ತ ಬಂದಿದ್ದಾರೆ. ಸುತ್ತಲೂ ವೈರಿ ದೇಶಗಳನ್ನು ಇಟ್ಟುಕೊಂಡು ಇಸ್ರೇಲ್ ನಿರಂತರವಾಗಿ ಯುದ್ಧ ಮಾಡುತ್ತ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದೇ ಅಚ್ಚರಿ. ಉಗ್ರರ ಯಾವ ದಾಳಿಗೂ ಇಸ್ರೇಲ್ ಇದುವರೆಗೆ ಸೇಡು ತೀರಿಸಿಕೊಳ್ಳದೇ ಬಿಟ್ಟಿಲ್ಲ. ಅಕ್ಟೋಬರ್ 7ರ ಹಮಾಸ್ ಉಗ್ರರ ದಾಳಿಗಂತೂ ಇಸ್ರೇಲ್‌‌ ತಿರುಗೇಟು ನೀಡುತ್ತಿರುವ ರೀತಿ ಬೆರಗು ಮೂಡಿಸುತ್ತದೆ.

ಮೊಸಾದ್‌‌ನಂಥ ಜಾಗತಿಕ ನಂ. 1 ಗುಪ್ತಚರ ಸಂಸ್ಥೆಯನ್ನು ಹೊಂದಿದ್ದೂ ತನ್ನ ಗಡಿಯಾಚೆಯಿಂದ ನೂರಾರು ಹಮಾಸ್ ಉಗ್ರರು ಹಾಡಹಗಲೇ ಒಳ ನುಸುಳಿ ಬಂದಿದ್ದು ಅವಮಾನಕರ ವೈಫಲ್ಯ ಎಂದು ಇಸ್ರೇಲ್ ಒಪ್ಪಿಕೊಂಡಿತು. ಆದರೆ ದಾಳಿ ನಡೆದ 24 ಗಂಟೆಯೊಳಗೆ ಗಾಜಾದ ದಶದಿಕ್ಕುಗಳನ್ನು ರಾಕೆಟ್ ಮತ್ತು ಕ್ಷಿಪಣಿಗಳಿಂದ ನಡುಗಿಸಿತು. ಗಾಜಾದ ಗಗನಚುಂಬಿ ಕಟ್ಟಡಗಳು ನಿಮಿಷದೊಳಗೆ ನೆಲಕಚ್ಚಿದವು. ಅ.27ರ ಹೊತ್ತಿಗೆ ಇಸ್ರೇಲ್ ಸೇನೆ ನೇರ ಗಾಜಾದೊಳಗೇ ನುಗ್ಗಿತು.

ಇಸ್ರೇಲ್‌‌ನ ಭೀಷಣ ದಾಳಿಯಿಂದ ಥಂಡಾ ಹೊಡೆದಿದ್ದ ಹಮಾಸ್ ಉಗ್ರರು ಮತ್ತು ಕಮಾಂಡರ್‌‌ಗಳು ಅಲ್ಲಿಯ ಅತಿ ದೊಡ್ಡ ಆಸ್ಪತ್ರೆ ಅಲ್ ಶಿಫಾದ ನೆಲ ಮಾಳಿಗೆಯೊಳಗೆ ಅಡಗಿಕೊಂಡರು. ನವೆಂಬರ್ 15ರಂದು ಇಸ್ರೇಲ್ ಈ ಆಸ್ಪತ್ರೆ ಮೇಲೆಯೇ ಬಾಂಬ್ ದಾಳಿ ನಡೆಸಿ ಹತ್ತಾರು ಉಗ್ರರನ್ನು ಹೊಸಕಿ ಹಾಕಿತು. ಇಸ್ರೇಲ್ ಒತ್ತಡಕ್ಕೆ ಕಂಗೆಟ್ಟ ಹಮಾಸ್ ಉಗ್ರರು ಸುಮಾರು ನೂರರಷ್ಟು ಅಪಹೃತರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದರು. ಉಳಿದ ಅಪಹೃತರನ್ನು ಬಿಡುಗಡೆ ಮಾಡದ ಕಾರಣ

ಡಿ.4ರಂದು ಇಸ್ರೇಲ್ ಭೂ ಸೇನೆ ದಕ್ಷಿಣ ಗಾಜಾದ ಮೇಲೆ ಬೃಹತ್ ಪ್ರಮಾಣದಲ್ಲಿ ಆಕ್ರಮಣ ನಡೆಸಿತು. ಮುಂದೆ ಗಾಜಾದ ಖಾನ್ ಯೂನಿಸ್ ಮತ್ತು ರಫಾ ಪ್ರದೇಶಗಳನ್ನು ವಶಪಡಿಸಿಕೊಂಡು ಬಿಸಿ ಮುಟ್ಟಿಸಿತು. ಸದ್ಯ ಗಾಜಾದ ಶೇ. 60ರಷ್ಟು ಪ್ರದೇಶ ಇಸ್ರೇಲ್ ಸೇನೆಯ ಹಿಡಿತದಲ್ಲಿದೆ. ಇಡೀ ಗಾಜಾ ಪಟ್ಟಿಯನ್ನು ಕೈವಶ ಮಾಡಿಕೊಳ್ಳಲು ದಾಪುಗಾಲು ಹಾಕುತ್ತಿದೆ ಇಸ್ರೇಲ್ ಡಿಫೆನ್ಸ್ ಫೋರ್ಸ್!

ದಾಳಿ ಗಾಜಾಗಷ್ಟೇ ಸೀಮಿತವಾಗಲಿಲ್ಲ

ಗಾಜಾದ ಮೇಲಿನ ದಾಳಿಗಷ್ಟೇ ಇಸ್ರೇಲ್ ಸೀಮಿತವಾಗುಳಿಯಲಿಲ್ಲ. ಏ.1ರಂದು ಸಿರಿಯಾ ರಾಜಧಾನಿ ಡಮಾಸ್ಕಸ್‌‌ನಲ್ಲಿರುವ ಇರಾನ್ ಎಂಬೆಸಿ ಕಚೇರಿ ಮೇಲೆಯೇ ಏರ್ ಸ್ಟೈಕ್ ನಡೆಸಿತು. ಲೆಬೆನಾನ್ ಮತ್ತು ಸಿರಿಯಾದಿಂದ ಇಸ್ರೇಲ್‌‌ಗೆ ಕಿರುಕುಳ ಕೊಡುತ್ತಿದ್ದ ಉಗ್ರ ಮೊಹಮ್ಮದ್ ಜಹೇದಿಯನ್ನು ಈ ದಾಳಿಯಲ್ಲಿ ಹತ್ಯೆ ಮಾಡಲಾಯಿತು. ಇರಾನ್‌‌ ಮಿಲಿಟರಿಯ ಕೆಲವು ಹಿರಿಯ ಕಮಾಂಡರ್‌‌ಗಳೂ ಈ ದಾಳಿಯಲ್ಲಿ ಹತರಾದರು. ಇರಾನ್‌‌ನ ಯಾವ ಪ್ರತಿರೋಧವನ್ನೂ ಇಸ್ರೇಲ್ ಲೆಕ್ಕಿಸಲಿಲ್ಲ.

ಮುಂದೆ ಜುಲೈ 13ರಂದು ನಡೆಸಿದ ಮತ್ತೊಂದು ಪ್ರಮುಖ ಏರ್ ಸ್ಟ್ರೈಕ್‌‌ನಲ್ಲಿ ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೆಫ್‌‌ನನ್ನೇ ಇಸ್ರೇಲ್ ಸೇನೆ ಮುಗಿಸಿ ಹಾಕಿತು. ಈ ದಾಳಿಯಲ್ಲಿ 90 ಮಂದಿ ಬಲಿಯಾಗಿದ್ದರು. 1990ರಲ್ಲಿ ಹಮಾಸ್‌‌ನ ಮಿಲಿಟರಿ ಘಟಕ ಖಾಸಮ್ ಬ್ರಿಗೇಡ್ ಅನ್ನು ಬಲಿಷ್ಠವಾಗಿ ಬೆಳೆಸಿದವನು ಈತ. ಇಸ್ರೇಲ್ ಮೇಲಿನ ಹಲವಾರು ಭೀಕರ ದಾಳಿಗಳಿಗೆ ಈತನೇ ಸೂತ್ರಧಾರ. ಇಸ್ರೇಲ್ ಸೇನೆಯನ್ನು ಯಾಮಾರಿಸಲು ಈತ ಗಾಜಾದುದ್ದಕ್ಕೂ ಸುರಂಗಗಳನ್ನು ನಿರ್ಮಿಸಿದ್ದ.

ಇಸ್ರೇಲ್ ಸೇಡಿನ ದಾಳಿ ಇಲ್ಲಿಗೇ ನಿಲ್ಲಲಿಲ್ಲ. ಜುಲೈ 30ರಂದು ಲೆಬೆನಾನ್ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ, ಹೆಜ್ಬುಲ್ಲಾ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಫಾಹುದ್ ಶುಕ್ರ್‌‌ನನ್ನು ಕೊಂದು ಹಾಕಿತು.

ಹಮಾಸ್‌‌ ಸಂಘಟನೆಯ ರಾಜಕೀಯ ತಂತ್ರಗಾರ ಇಸ್ಮಾಯಿಲ್ ಹನಿಯೆ ಇಸ್ರೇಲ್‌‌ನ ಹಿಟ್ ಲಿಸ್ಟ್‌‌ನಲ್ಲಿದ್ದ. ಇರಾನ್ ಹೊಸ ಅಧ್ಯಕ್ಷರ ಪದ ಗ್ರಹಣ ಸಮಾರಂಭಕ್ಕೆಂದು ಈತ ಟೆಹರಾನ್‌‌ಗೆ ಹೋದ ಸಂದರ್ಭದಲ್ಲಿ ಹೊಂಚು ಹಾಕಿ ಇಸ್ರೇಲ್ ಗುಪ್ತಚರ ತಂಡ ಜು.31ರಂದು ಈತನ ಕತೆ ಮುಗಿಸಿತು.

ಇಸ್ರೇಲ್‌‌ನ ಮುಂದಿನ ಟಾರ್ಗೆಟ್ ಹಸನ್ ನಸ್ರುಲ್ಲಾ. ಈತ ಹಮಾಸ್, ಹೆಜ್ಬುಲ್ಲಾ ಇತ್ಯಾದಿ ಸಂಘಟನೆಗಳನ್ನು ಇಸ್ರೇಲ್ ವಿರುದ್ಧ ದಾಳಿಗೆ ಸಜ್ಜುಗೊಳಿಸುತ್ತಿದ್ದ. ಸೆ.27ರಂದು ಲೆಬೆನಾನ್ ರಾಜಧಾನಿ ಬೀರತ್‌‌ನಲ್ಲಿ ಮಿಂಚಿನ ದಾಳಿ ನಡೆಸಿ ಇಸ್ರೇಲ್ ಸೇನೆ ಈತನನ್ನು ಕೊಂದಿತು. ಈತನ ಹತ್ಯೆಯ ಮರುದಿನವೇ ಹೆಜ್ಬುಲ್ಲಾ ಸೆಂಟ್ರಲ್ ಕೌನ್ಸಿಲ್‌‌‌ನ ಡೆಪ್ಯುಟಿ ಹೆಡ್ ನಬಿಲ್ ಕೌಕ್ ಬೀರತ್‌‌ನಲ್ಲಿ ನಡೆದ ಮತ್ತೊಂದು ಏರ್ ಸ್ಟ್ರೈಕ್‌‌ಗೆ ಬಲಿಯಾದ. ಹಸನ್ ನಸ್ರುಲ್ಲಾನ ಉತ್ತರಾಧಿಕಾರಿಯಾಗಿ ಆಯ್ಕೆಯಾದ 24 ಗಂಟೆಯೊಳಗೆ ಈತನನ್ನು ಇಸ್ರೇಲ್ ಕೊಂದು ಹಾಕಿತು.

Nova Music Festival Massacre 3 (1)

ನೋವಾ ಮ್ಯೂಸಿಕ್ ಫೆಸ್ಟಿವಲ್ ಮೇಲಿನ ದಾಳಿಯ ವಿವರಣೆ ನೀಡಿದ ಇಸ್ರೇಲಿ ಮಹಿಳೆ ಮಜಾಲ್ ತಜಾಜೊ ಮತ್ತು ಹಮಾಸ್ ಉಗ್ರರ ದಾಳಿಯ ಭೀಕರತೆ ವಿವರಿಸಿದ ಇಸ್ರೇಲಿ ಪೊಲೀಸ್ ಅಧಿಕಾರಿ ಸಲ್ಮಾನ್ ಹುಸೇನ್.

ಪೇಜರ್‌‌ನೊಳಗೇ ಇತ್ತು ಸ್ಫೋಟಕ!

ಇಸ್ಲಾಮಿಕ್ ಉಗ್ರಗಾಮಿಗಳಿಗೆ ನಡುಕ ಹುಟ್ಟಿಸಿದ್ದು ಪೇಜರ್ ಬ್ಲಾಸ್ಟ್ ಪ್ರಕರಣ. 2024ರ ಸೆ.17ರಂದು ಲೆಬೆನಾನ್‌‌ನ ಎರಡು ಸಾವಿರಕ್ಕೂ ಹೆಚ್ಚು ಹೆಜ್ಬುಲ್ಲಾ ಉಗ್ರರ ಬಳಿ ಇದ್ದ ಪೇಜರ್‌‌ಗಳೆಲ್ಲ ಏಕಕಾಲಕ್ಕೆ ಸ್ಫೋಟಗೊಂಡು ಅಲ್ಲೋಲಕಲ್ಲೋಲ ಸೃಷ್ಟಿಯಾಯಿತು. ತಮ್ಮ ಗುಪ್ತ ನೆಲೆಯನ್ನು ಇಸ್ರೇಲ್ ಪತ್ತೆ ಹಚ್ಚಬಾರದು ಎಂಬ ಉದ್ದೇಶದಿಂದ ಈ ಉಗ್ರರು ಮೊಬೈಲ್ ಬಳಸದೆ ಪೇಜರ್ ಬಳಸಿ ಅತಿ ಬುದ್ಧಿವಂತಿಕೆ ಪ್ರದರ್ಶಿಸುತ್ತಿದ್ದರು.‌ ಇವು ತೈವಾನ್ ನಿರ್ಮಿತ ಪೇಜರ್‌‌ಗಳಾಗಿದ್ದವು. ಆದರೆ ಇವು ಪೂರೈಕೆ ಆಗುವ ಮೊದಲೇ ಪೇಜರ್‌‌ನೊಳಗೆ ಸಣ್ಣ ಸ್ಫೋಟಕವನ್ನು ಅಡಗಿಸಿ ಇಡಲಾಗಿತ್ತು. ರಿಮೋಟ್ ಕಂಟ್ರೋಲ್ ಮೂಲಕ ಇವುಗಳನ್ನು ಏಕಕಾಲಕ್ಕೆ ಸ್ಫೋಟಿಸಲಾಯಿತು. ಪೇಜರ್ ಬಹುತೇಕ ಉಗ್ರರ ಸೊಂಟದಲ್ಲಿ ಇದ್ದ ಕಾರಣ, ಸ್ಫೋಟದ ತೀವ್ರತೆಗೆ ಬಹುತೇಕ ಮಂದಿಗೆ ಅಕ್ಷರಶಃ 'ಮರ್ಮಾಘಾತ'ವೇ ಆಗಿ ಹೋಯಿತು! ಕೆಲವರ ಮುಖ, ಕೈ, ಕಾಲುಗಳು ನಜ್ಜುಗುಜ್ಜಾದವು. ಈ ಸ್ಫೋಟದಲ್ಲಿ ತನ್ನ ಕೈವಾಡ ಇಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿತಾದರೂ, ಇಸ್ರೇಲ್‌‌ ಅಲ್ಲದೇ ಬೇರೆ ಯಾರು ಇಂಥ ಪ್ಲ್ಯಾನ್ ಮಾಡಲು ಸಾಧ್ಯ ಎನ್ನುವುದು ಹೆಜ್ಬುಲ್ಲಾ ಉಗ್ರರ ನಂಬಿಕೆ! ಪೇಜರ್ ಸಹವಾಸವೇ ಬೇಡ ಅಂತ ಹೆಜ್ಬುಲ್ಲಾ ಉಗ್ರರು ಮರುದಿನ ವಾಕಿಟಾಕಿ ಬಳಸಲು ಶುರು ಮಾಡಿದರು. ನೂರಾರು ವಾಕಿಟಾಕಿಗಳೂ ಒಮ್ಮೆಲೇ ಸ್ಫೋಟಗೊಳ್ಳಬೇಕೆ? ಈ ಪೇಜರ್, ವಾಕಿಟಾಕಿ ಎರಡೂ ಸ್ಫೋಟಗಳಲ್ಲಿ ಒಟ್ಟು 52 ಮಂದಿ ಸತ್ತಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಬಹುತೇಕ ಜನ ಹೆಜ್ಬುಲ್ಲಾ ಉಗ್ರರು.

ಇತ್ತ ಗಾಜಾದ ಮೇಲಿನ ಇಸ್ರೇಲ್ ಪ್ರಹಾರ ತಡೆದುಕೊಳ್ಳಲಾಗದೆ ಹಮಾಸ್ ನವೆಂಬರ್ 27ರಂದು ಕದನ‌ ವಿರಾಮ ಘೋಷಣೆ ಮಾಡಿತು.

ಕೆಲವು ಅಪಹೃತರನ್ನು ಬಿಡುಗಡೆ ಮಾಡುವ ನಾಟಕ ಮಾಡಿತಾದರೂ, ಇಪ್ಪತ್ತಕ್ಕೂ ಹೆಚ್ಚು ಇಸ್ರೇಲಿಗರನ್ನು ಬಚ್ಚಿಟ್ಟುಕೊಂಡಿತು.‌ ಇದರಿಂದ ಕೆರಳಿದ ಇಸ್ರೇಲ್, ಮಾ.18ರಂದು ಗಾಜಾದ ಮೇಲೆ ಬಾಂಬ್‌‌ಗಳ ಸುರಿಮಳೆಗರೆಯಿತು. ಆಗ ನೂರಾರು ಮಂದಿ ಬಲಿಯಾದರು.

ಜೂನ್ 18ರಂದು ಇಸ್ರೇಲ್ ಮತ್ತೊಂದು ಸಾಹಸಕ್ಕೆ ಕೈ ಹಾಕಿತು. ಈ ಬಾರಿ ಸೀದಾ ಇರಾನ್‌‌ನ ಅಣು ಸ್ಥಾವರ ವ್ಯವಸ್ಥೆಯ ಮೇಲೆಯೇ ದಾಳಿ ಮಾಡಿತು. ಇರಾನ್ ಸೇನೆಯ ಟಾಪ್ ಜನರಲ್‌‌ಗಳೇ ಹತರಾದರು. ಬಹುದೊಡ್ಡ ರಿಸ್ಕ್ ತೆಗೆದುಕೊಂಡು ಇಸ್ರೇಲ್ ನಡೆಸಿದ ದಾಳಿ ಇದು. ಇರಾನ್‌‌ ನಿರಂತರ 12 ದಿನ ನಡೆಸಿದ ಮರು ದಾಳಿಗೂ ಇಸ್ರೇಲ್ ಸೇನೆ ಕೇರ್ ಮಾಡಲಿಲ್ಲ.

ಪ್ರತಿಕಾರದ ದಾಳಿ ಮಾಡುವಾಗ ಇಸ್ರೇಲ್ ಮುಖಾಮೂತಿ ನೋಡುವುದಿಲ್ಲ ಅನ್ನೋದಕ್ಕೆ ಮತ್ತು ಉಗ್ರರ ವಿಧ್ವಂಸಕ ಕೃತ್ಯಕ್ಕೆ ಅದರ ರೆಸ್ಪಾನ್ಸ್ ಎಷ್ಟು ಚುರುಕಾಗಿರುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ಕತಾರ್ ರಾಜಧಾನಿ ದೋಹಾದ ಮೇಲೆ ನಡೆದ ದಾಳಿಯೇ ಸಾಕ್ಷಿ.

Nova Music Festival Massacre 5

ಸೆ.8ರಂದು ಜೆರುಸಲೆಂನ ಸರ್ಕಲ್‌‌ವೊಂದರಲ್ಲಿ ಹಮಾಸ್ ಉಗ್ರರು ಬಸ್ ಮೇಲೆ ದಾಳಿ ಮಾಡಿ ಆರು ಇಸ್ರೇಲಿಗರನ್ನು ಕೊಂದಿದ್ದರು. ಈ ಘಟನೆ ನಡೆದ 24 ಗಂಟೆಯೊಳಗೆ ಇಸ್ರೇಲ್ ಕತಾರ್ ರಾಜಧಾನಿ ದೋಹಾದ ಮೇಲೆ ಒಂದರ ಹಿಂದೊಂದರಂತೆ 10 ಕ್ಷಿಪಣಿಗಳನ್ನು ಉಡಾಯಿಸಿತು. ಕತಾರ್ ಅಮೆರಿಕದ ಮಿತ್ರ ದೇಶ. ಅಮೆರಿಕದ ಏರ್ ಬೇಸ್ ಕತಾರ್‌‌ನಲ್ಲಿದೆ. ಇದೆಲ್ಲ ಗೊತ್ತಿದ್ದೂ ಇಸ್ರೇಲ್ ಕತಾರ್‌‌ನ ರಾಜಧಾನಿ ದೋಹಾದ ಮೇಲೆ ದಾಳಿ ಮಾಡುಲು ಹಿಂದೆಮುಂದೆ ನೋಡಲಿಲ್ಲ.

ಅ.7ರ ದಾಳಿಯ ಮಾಸ್ಟರ್ ಮೈಂಡ್ ಯಾಹ್ಯಾ ಸಿನ್ವರ್‌‌ನನ್ನೂ ಇಸ್ರೇಲ್ ಡಿಫೆನ್ಸ್ ಫೋರ್ಸ್ ಕೊಂದು ಹಾಕಿದೆ. ಇಸ್ರೇಲ್ ಸೇನೆ ಮೊದಲು ಈತ ಇರುವ ಕಟ್ಟಡದ ಮೇಲೆ ನಿಖರವಾಗಿ ದಾಳಿ ಮಾಡಿತ್ತು. ಧ್ವಂಸಗೊಂಡ ಕಟ್ಟಡದೊಳಗೆ ಈತ ಪ್ರಾಣ ಉಳಿಸಿಕೊಂಡು ಕೂತಿದ್ದ. ಇನ್ನೇನು ಬಚಾವಾಗಿಬಿಟ್ಟೆ ಎನ್ನುವಷ್ಟರಲ್ಲಿ ಸಣ್ಣದೊಂದು ಡ್ರೋನ್ ಕಿಟಕಿಯಿಂದ ತೂರಿ ಬಂದು ಈತನನ್ನು ಫಿನಿಶ್ ಮಾಡಿ ಹೋಯಿತು!

ಹಾಗಾದರೆ ಅ.7ರ ವಿಧ್ವಂಸಕ ಕೃತ್ಯಕ್ಕೆ ಪ್ರತಿಕಾರವಾಗಿ ಇಸ್ರೇಲ್ ದಾಳಿ ಮಾಡಿರುವ ದೇಶಗಳೆಷ್ಟು? ಪ್ಯಾಲೆಸ್ತೀನ್, ಲೆಬೆನಾನ್, ಸಿರಿಯಾ, ಯೆಮೆನ್, ಇರಾನ್, ಕತಾರ್! ಆರು ದೇಶಗಳ ಮೇಲೆ ಏಕಕಾಲಕ್ಕೆ ಯುದ್ಧ ಸಾರಿದೆ ಇಸ್ರೇಲ್!

ಈ ಸುದ್ದಿಯನ್ನೂ ಓದಿ: Israel-Iran Conflict: ಇರಾನಿನ 6 ವಾಯು ನೆಲೆಗಳ ಮೇಲೆ ಇಸ್ರೇಲ್‌ ದಾಳಿ; 15 ಯುದ್ಧ ವಿಮಾನಗಳು ಧ್ವಂಸ, ವಿಡಿಯೋ ನೋಡಿ

ದಾಳಿಯ ಜಾಗ ಈಗ ಯಾತ್ರಾ ಸ್ಥಳ!

ಹಮಾಸ್ ಉಗ್ರರು 2023ರ ಅ.7ರಂದು ದಾಳಿ ಮಾಡಿದ್ದ ನೋವಾ ಮ್ಯೂಸಿಕ್ ಫೆಸ್ಟಿವಲ್ ಸೈಟ್ ಈಗ ಇಸ್ರೇಲಿನ ಯಾತ್ರಾಸ್ಥಳ, ಪ್ರವಾಸಿ ಸ್ಥಳವೇ ಆಗಿಬಿಟ್ಟಿದೆ.‌ ಆ ಸ್ಥಳವನ್ನು ದೇಶದ ಏಕತೆಗೆ, ಯುವ ಜನ ಜಾಗೃತಿಗೆ ಮತ್ತು ವೈರಿಗಳ ಮೇಲೆ ತಾನು ನಡೆಸುತ್ತಿರುವ ದಾಳಿಯ ಸಮರ್ಥನೆಗೆ ಇಸ್ರೇಲ್ ಬಲವಾಗಿ ಬಳಸಿಕೊಳ್ಳುತ್ತಿದೆ. ನಿತ್ಯ ಇಲ್ಲಿ ದೇಶ, ವಿದೇಶಗಳಿಂದ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಮ್ಯೂಸಿಕ್ ಫೆಸ್ಟಿವಲ್ ವೇದಿಕೆ ಮತ್ತು ಅದರ ಸುತ್ತಮುತ್ತ ಹಾಕಿರುವ ನೂರಾರು ಬಲಿ ಪಶುಗಳ ಭಾವಚಿತ್ರಗಳನ್ನು ನೋಡಿ ಇಸ್ರೇಲಿಗರು ಕಂಬನಿ ಮಿಡಿಯುತ್ತಾರೆ. ಸೇಡಿನ ಶಪಥವನ್ನಂತೂ ಮಾಡದೇ ಹೋಗುವುದಿಲ್ಲ.

ಈ ದಾಳಿಯ ಎರಡನೇ ವಾರ್ಷಿಕ ದಿನ ಜಾಗತಿಕವಾಗಿ ಗಮನ ಸೆಳೆಯಲು ಯಹೂದಿ ಸಮುದಾಯ ಸಜ್ಜಾಗಿದೆ. ಅಮೆರಿಕದ ಬೊಸ್ಟನ್‌‌ನಲ್ಲಿ ಕೂಡ Nova Music Festival Exibition ನಡೆಯಲಿದೆ. ನೋವಾದ ನೋವನ್ನು ಯಹೂದಿಗಳು ವಿಶ್ವದ ಮೂಲೆಮೂಲೆಗಳಲ್ಲಿ ಹಂಚಿಕೊಳ್ಳಲಿದ್ದಾರೆ.

Hamas war

ಇಸ್ರೇಲ್ ಮನಸು ಮಾಡಿದರೆ ಮೂರೇ ತಿಂಗಳಲ್ಲಿ ಆ ಗ್ರಾಮವನ್ನು ಮರು ನಿರ್ಮಿಸಬಹುದು. ಆದರೆ ಅದು ಹಾಗೆ ಮಾಡುವುದಿಲ್ಲ. ವೈರಿ ಮಾಡಿದ ಗಾಯವನ್ನು ಇಷ್ಟು ಬೇಗ ಅದು ಮಾಯಲು ಬಿಡುವುದಿಲ್ಲ. ಆದ ಗಾಯದ ನೋವನ್ನು ಸವರಿಕೊಳ್ಳುತ್ತಲೇ ತನ್ನ ಸುತ್ತಮುತ್ತಲಿನ ವೈರಿ ದೇಶಗಳಲ್ಲಿ ಅಡಗಿ ಕುಳಿತಿರುವ ಉಗ್ರಗಾಮಿಗಳನ್ನು ಬಗ್ಗುಬಡಿಯುತ್ತದೆ. ಇನ್ನೂ ಹತ್ತು ವರ್ಷ ಕಳೆದರೂ ಈ ಗಾಯವನ್ನು ಇಸ್ರೇಲ್ ಹಸಿಯಾಗಿರಿಸುತ್ತದೆ.‌ ಸೇಡನ್ನು ಬಡ್ಡಿ, ಚಕ್ರ ಬಡ್ಡಿ ಸಮೇತ ಚುಕ್ತಾ ಮಾಡುತ್ತಲೇ ಹೋಗುತ್ತದೆ. That's called Israel!

ಇಸ್ರೇಲ್ ನೆಲದಲ್ಲಿ ನಿಂತು ನೋಡಿದರೆ ಅದು ನಡೆಸುವ ಯಾವ ದಾಳಿಯೂ ತಪ್ಪು ಎಂದೆನಿಸುವುದಿಲ್ಲ. ಮರು ದಾಳಿಯಲ್ಲೇ ಇಸ್ರೇಲ್‌‌ನ ಅಸ್ತಿತ್ವ ಅಡಗಿದೆ.

Nova Music Festival Massacre 6

ಒಟ್ಟೊಟ್ಟಿಗೆ ಆರಾರು ದೇಶಗಳನ್ನು ಎದುರು ಹಾಕಿಕೊಂಡು ಉಗ್ರರ ಚರ್ಮ ಸುಲಿಯುತ್ತಿದೆ ಇಸ್ರೇಲ್. ನಾವು ಇಷ್ಟು ದೊಡ್ಡ ದೇಶ ಇಟ್ಟುಕೊಂಡು ಪಾಕಿಸ್ತಾನವೆಂಬ ಲಂಗೋಟಿ ಸೈಜಿನ ದೇಶಕ್ಕೆ ಪಾಠ ಕಲಿಸಲು ಹಿಂದೆಮುಂದೆ ನೋಡುತ್ತೇವೆ. ಭಯೋತ್ಪಾದನೆಯನ್ನು ಎದುರಿಸುವ ವಿಚಾರದಲ್ಲಿ ನಾವು 'ಇಸ್ರೇಲ್' ಆಗುವುದು ಯಾವಾಗ?