ಟೆಹರಾನ್, ಮಾ. 1: ಮಹತ್ವದ ಬೆಳವಣಿಗೆಯೊಂದರಲ್ಲಿ ಇಸ್ರೇಲ್ ಮತ್ತು ಅಮೆರಿಕ ಜಂಟಿ ಕಾರ್ಯಾಚರಣೆ ನಡೆಸಿ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರನ್ನು ಹೊಡೆದುರುಳಿಸಿದೆ. ಇರಾನ್‌ಗೆ ನುಗ್ಗಿ ಖಮೇನಿ ಅಡಗುತಾಣವನ್ನು ಧ್ವಂಸಗೊಳಿಸುವ ಮೂಲಕ ಮೇಲುಗೈ ಸಾಧಿಸಿದೆ (Iran Israel War). ಇರಾನ್ ಕೂಡ ಖಮೇನಿ ಸಾವನ್ನು ಖಚಿತಪಡಿಸಿದೆ. ಇಸ್ರೇಲ್ ಫೈಟರ್ ಜೆಟ್‌ಗಳು ಬರೋಬ್ಬರಿ 30 ಬಾಂಬ್‌ಗಳ ಖಮೇನಿ ಮನೆ ಮೇಲೆ ಬೀಳಿಸಿದ್ದಾಗಿ ದಿ ವಾಲ್ ಸ್ಟ್ರೀಟ್ ಜರ್ನಲ್ (The Wall Street Journal) ಸುದ್ದಿಸಂಸ್ಥೆ ವರದಿ ಮಾಡಿದೆ.
ಖಮೇನಿ ಅವರ ಮನೆಯನ್ನೊಳಗೊಂಡ ಸಂಕೀರ್ಣದ ಮೇಲೆ ಇಸ್ರೇಲ್ ಜೆಟ್‌ಗಳು ದಾಳಿ ಮಾಡಿರುವ ಸ್ಯಾಟ್‌ಲೈಟ್ ಚಿತ್ರ ರಿಲೀಸ್ ಆಗಿದೆ. ಅದರಲ್ಲಿ ಖಮೇನಿ ಅವರ ಮನೆಯನ್ನೊಳಗೊಂಡ ಸಂಕೀರ್ಣ ಧ್ವಂಸಗೊಂಡಿರುವುದು ಕಂಡು ಬಂದಿದೆ.
ಧ್ವಂಸಗೊಂಡ ಖಮೇನಿ ಅವರ ನಿವಾಸ:
ಹಲವು ಸಮಯಗಳ ಯೋಜನೆ
ಖಮೇನಿ ಅವರನ್ನು ಹೊಡೆದುರುಳಿಸಬೇಕು ಎಂದು ಹಲವು ವರ್ಷಗಳಿಂದ ಇಸ್ರೇಲ್ ಮತ್ತು ಅಮೆರಿಕ ಕಾಯುತ್ತಿದ್ದವು. ಇಸ್ರೇಲ್ ಮತ್ತು ಅಮೆರಿಕದ ಗುಪ್ತಚರ ಅಧಿಕಾರಿಗಳು ದೀರ್ಘಕಾಲದಿಂದ ಖಮೇನಿ ಹತ್ಯೆಗೆ ಹೊಂಚು ಹಾಕುತ್ತಿದ್ದವು ಎಂದು ವರದಿಯೊಂದು ತಿಳಿಸಿದೆ.
ಗುಪ್ತಚರ ಪಡೆಗಳಿಗೆ ಅಂತಿಮವಾಗಿ ಶನಿವಾರ (ಫೆಬ್ರವರಿ 28) ಖಮೇನಿ ಇರುವ ನಿಗದಿತ ಸ್ಥಳದ ಬಗ್ಗೆ ಮಾಹಿತಿ ದೊರೆಯಿತು ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಹಗಲು ದಾಳಿ ನಡೆಸಲಾಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾಳಿ ಆದೇಶ ಹೊರಡಿಸುವ ಮೊದಲೇ ಅಮೆರಿಕದ ವಿರುದ್ಧ ದಾಳಿ ನಡೆಸಲು ಖಮೇನಿ ನೇತೃತ್ವದ ಇಸ್ಲಾಮಿಕ್ ಗಣರಾಜ್ಯ ಚಿಂತನೆ ನಡೆಸಿತ್ತು ಎನ್ನಲಾಗಿದೆ. ಈ ಬಗ್ಗೆ ಅಮೆರಿಕಕ್ಕೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು.
ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್
ಶನಿವಾರ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ನ 30ಕ್ಕೂ ಹೆಚ್ಚು ನಗರಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. 400ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಈ ದಾಳಿಯಲ್ಲಿ 86 ವರ್ಷದ ಖಮೇನಿ ಸಹಿತ ಇರಾನ್ ರಕ್ಷಣಾ ಸಚಿವ ಅಮಿರ್ ಹಟಾಮಿ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮುಖ್ಯಸ್ಥ ಪಕ್ಪೌರ್ ಹತರಾಗಿದ್ದಾರೆ. ಖಮೇನಿ 1989ರಿಂದ ಇರಾನ್ ಅನ್ನು ಮುನ್ನಡೆಸುತ್ತಿದ್ದರು.
ಖಮೇನಿ ಹತ್ಯೆ ಖಂಡಿಸಿ ಪಾಕಿಸ್ತಾನಿಗಳಿಂದ ಅಮೆರಿಕ ರಾಯಭಾರಿ ಕಚೇರಿ ಮೇಲೆ ದಾಳಿ; ಗುಂಡೇಟಿಗೆ 10 ಸಾವು
40 ದಿನಗಳ ಶೋಕಾಚರಣೆ
ಖಮೇನಿ ಸಾವಿನ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಹಲವು ದಶಕಗಳಲ್ಲಿ ನಡೆದ ಅತಿ ದೊಡ್ಡ ದಾಳಿ ಇದು ಎಂದು ಇರಾನ್ ತಿಳಿಸಿದೆ. ಪ್ರತೀಕಾರದ ಭಾಗವಾಗಿ ಇರಾನ್ ಈಗಾಗಲೇ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದೆ. ಮಾತ್ರವಲ್ಲ ವಿವಿಧ ದೇಶಗಳಲ್ಲಿರುವ ಇಸ್ರೇಲ್-ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ಇರಾನ್‌ನ ಆಕ್ರಮಣವನ್ನು ಸಮರ್ಥವಾಗಿ ಎದುರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವರಿಸಿದ್ದಾರೆ. ಸದ್ಯ ಯುದ್ಧದ ವಾತಾವರಣ ಮುಂದುವರಿದಿದೆ.