ದೋಹಾ, ಕತಾರ್, ಜೂ.16: ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಅಂಗಸಂಸ್ಥೆಯಾದ ಕತಾರ್‌ನ ಪ್ರತಿಷ್ಠಿತ ಭಾರತೀಯ ಪ್ರವಾಸಿ ಸಂಘಟನೆ 'ಕರ್ನಾಟಕ ಸಂಘ ಕತಾರ್' (ಕೆಎಸ್‍ಕ್ಯೂ), ಇತ್ತೀಚೆಗೆ ಅಲ್ ವಕ್ರಾ ನಗರದ ಡಿಪಿಎಸ್ ಎಂಐಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 'ಸಂಭ್ರಮ 2026' ಭವ್ಯ ಸಂಗೀತ ರಸಸಂಜೆ ಕಾರ್ಯಕ್ರಮವು ಕತಾರ್‌ನಾದ್ಯಂತದ ಸಂಗೀತ ಪ್ರೇಮಿಗಳನ್ನು ಹಾಗೂ ಅನಿವಾಸಿ ಕನ್ನಡಿಗರನ್ನು ಮಂತ್ರಮುಗ್ಧಗೊಳಿಸಿತು.
"ಕನ್ನಡದ ಧ್ವನಿ... ಹೃದಯಗಳ ಸಂಭ್ರಮ" ಎಂಬ ಆಶಯದೊಂದಿಗೆ ಆಯೋಜಿಸಲಾಗಿದ್ದ ಈ ಸಾಂಸ್ಕೃತಿಕ ಮಹೋತ್ಸವವು ಕರ್ನಾಟಕದ ಶ್ರೀಮಂತ ಗಾಯನ ಪರಂಪರೆಯನ್ನು ಅತ್ಯಂತ ಯಶಸ್ವಿಯಾಗಿ ಕತಾರ್ ನೆಲದಲ್ಲಿ ಅನಾವರಣಗೊಳಿಸಿತು.
ಕತಾರ್‌ನ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಹರೀಶ್ ಪಾಂಡೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸಂಘ ಕತಾರ್‌ನ ಗೌರವಾನ್ವಿತ ಸಲಹಾ ಮಂಡಳಿ ಹಾಗೂ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಹೊಸದುರ್ಗ ಸ್ವಾಗತಿಸಿ, ಕತಾರ್‌ನಲ್ಲಿ ಕನ್ನಡ ಭಾಷೆ, ಸಂಸ್ಕೃತಿಯ ಪ್ರಸಾರ ಹಾಗೂ ಸಾಮುದಾಯಿಕ ಒಗ್ಗಟ್ಟನ್ನು ಬಲಪಡಿಸುವಲ್ಲಿ ಕರ್ನಾಟಕ ಸಂಘವು ನಡೆಸಿಕೊಂಡು ಬರುತ್ತಿರುವ ನಿರಂತರ ಸಾಂಸ್ಕೃತಿಕ ಕೈಂಕರ್ಯಗಳನ್ನು ಶ್ಲಾಘಿಸಿದರು. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಭಾವನಾ ನವೀನ್ ಸ್ವಾಗತಿಸಿದರು. ಜಂಟಿ ಸಾಂಸ್ಕೃತಿಕ ಹಾಗೂ ಕನ್ನಡ ಚಟುವಟಿಕೆಗಳ ಕಾರ್ಯದರ್ಶಿ ಶಶಿಧರ ಎಚ್.ಬಿ. ಸಭಾಂಗಣದ ಸುರಕ್ಷತಾ ನಿಯಮಾವಳಿಗಳು ಮತ್ತು ತುರ್ತು ನಿರ್ಗಮನದ ಕುರಿತು ವಿವರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕತಾರ್ ದೇಶದ ಭಾರತೀಯ ರಾಯಭಾರಿ ವಿಪುಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಭಾರತೀಯ ರಾಯಭಾರ ಕಚೇರಿಯ ಉಪ ರಾಯಭಾರಿ (ಡಿಸಿಎಂ) ಸಂದೀಪ್ ಕುಮಾರ್ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಭಾರತದ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು. ಗೌರವಾನ್ವಿತ ಅತಿಥಿಗಳಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಅಧ್ಯಕ್ಷ ಎ.ಪಿ. ಮಣಿಕಂಠನ್, ಕತಾರ್ ಆಟೋ ಮ್ಯೂಸಿಯಂನ ಆಡಳಿತ ವಿಭಾಗದ ಉಪ ನಿರ್ದೇಶಕಿ ಮಿಸ್ ಫಾತಿಮಾ ಅಲ್ ಮಾದೀದ್ ಮತ್ತು ಕತಾರ್ ಇಂಧನ ಕ್ಷೇತ್ರದ ಹಿರಿಯ ಪೆಟ್ರೋಲಿಯಂ ಎಂಜಿನಿಯರ್ ಖಾಲಿದ್ ಅಲ್ ಫಕ್ರೂ ಭಾಗವಹಿಸಿದ್ದರು.
ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘದ ಪ್ರತಿಯೊಂದು ಯಶಸ್ವಿ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳ ಹಿಂದೆ ಬೆನ್ನೆಲುಬಾಗಿ ನಿಲ್ಲುವ ಪೋಷಕರು, ಕಾರ್ಪೊರೇಟ್ ಪ್ರಾಯೋಜಕರು ಹಾಗೂ ಸ್ವಯಂಸೇವಕರ ಶ್ರಮವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿದರು. ಸಂಘದ ಉಪಾಧ್ಯಕ್ಷ ಅನಿಲ್ ಭಾಸಗಿ ವಂದಿಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತು ಭಾರತದಿಂದ ಆಗಮಿಸಿದ್ದ ಅವರ ಸುಪ್ರಸಿದ್ಧ ಸಂಗೀತ ವಾದ್ಯವೃಂದದ ನೇರ ಗಾಯನ ಪ್ರದರ್ಶನವು ಪ್ರೇಕ್ಷಕರನ್ನು ಅಕ್ಷರಶಃ ರಂಜಿಸಿತು. ಈ ಪ್ರದರ್ಶನದಲ್ಲಿ ಭಾರತದ ಖ್ಯಾತ ಗಾಯಕಿ ಪುಷ್ಪಾ ಆರಾಧ್ಯ, ಸೀಮಾ ರಾಯ್ಕರ್ ಮತ್ತು ಸಂತೋಷ್ ದೇವಯ್ಯ ಅವರ ಅದ್ಭುತ ಗಾಯನ ಹಾಗೂ ಪ್ರತಿಭಾವಂತ ವಾದ್ಯಗಾರರ ಸಂಯೋಜನೆ ಪ್ರೇಕ್ಷಕರ ಮನಗೆದ್ದಿತು. ಎವರ್‌ಗ್ರೀನ್ ಕನ್ನಡ ಗೀತೆಗಳು, ಹಳೆಯ ನೆನಪಿನ ಭಾವಗೀತೆಗಳು, ಸುಮಧುರ ಯುಗಳ ಗೀತೆಗಳು ಹಾಗೂ ಇತ್ತೀಚಿನ ಸೂಪರ್ ಹಿಟ್ ಚಿತ್ರಗೀತೆಗಳ ಸರಣಿಯನ್ನು ಹಾಡುವ ಮೂಲಕ ಸಭಾಂಗಣದಲ್ಲಿ ಎಲ್ಲರ ಮನರಂಜಿಸಿದರು. ಸಂಗೀತ ಸುಧೆಗೆ ಇಡೀ ಸಭಾಂಗಣವೇ ಎದ್ದು ನಿಂತು ಕರತಾಡನದ ಮೂಲಕ ಗೌರವ ಸಲ್ಲಿಸಿತು. ನಿರೂಪಕ ನಟರಾಜ್ ಶೆಟ್ಟಿಕೆರೆ ಕಾರ್ಯಕ್ರಮ ನಿರ್ವಹಿಸಿದರು. ಕೆಎಸ್‍ಕ್ಯೂ ಖಜಾಂಚಿ ಮಂಜೋತ್ ಸುರೇಶ್ ವಂದಿಸಿದರು.
ಸಮಾರಂಭದಲ್ಲಿ ಭಾರತೀಯ ರಾಯಭಾರ ಕಚೇರಿಯ ಅಡಿಯ ಪ್ರಮುಖ ಶೀರ್ಷ ಸಂಸ್ಥೆಗಳಾದ (ಅಪೆಕ್ಸ್ ಬಾಡೀಸ್) ಭಾರತೀಯ ಸಾಂಸ್ಕೃತಿಕ ಕೇಂದ್ರ (ಐಸಿಸಿ), ಇಂಡಿಯನ್ ಕಮ್ಯುನಿಟಿ ಬೆನೆವೊಲೆಂಟ್ ಫೋರಂ (ಐಸಿಬಿಎಫ್), ಇಂಡಿಯನ್ ಬಿಸಿನೆಸ್ ಅಂಡ್ ಪ್ರೊಫೆಷನಲ್ಸ್ ಕೌನ್ಸಿಲ್ (ಐಬಿಪಿಸಿ), ಮತ್ತು ಇಂಡಿಯನ್ ಸ್ಪೋರ್ಟ್ಸ್ ಸೆಂಟರ್ (ಐಎಸ್ಸಿ) ಪದಾಧಿಕಾರಿಗಳು, ವಿವಿಧ ಕರ್ನಾಟಕ ಪ್ರಾದೇಶಿಕ ಸಂಘಟನೆಗಳ ಮುಖ್ಯಸ್ಥರು ಹಾಗೂ ಸಂಯೋಜಿತ ಸಂಸ್ಥೆಗಳ (ಎಒಸ್) ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಐಸಿಸಿ ಸಲಹಾ ಸಮಿತಿಯ ಅಧ್ಯಕ್ಷ ಪಿ.ಎನ್. ಬಾಬುರಾಜನ್, ಐಸಿಬಿಎಫ್ ಪ್ರಧಾನ ಕಾರ್ಯದರ್ಶಿ ಹಾಗೂ ಕೆಎಸ್‍ಕ್ಯೂ ಸಲಹೆಗಾರ ದೀಪಕ್ ಶೆಟ್ಟಿ, ಕೆಎಸ್‍ಕ್ಯೂ ಸಲಹಾ ಮಂಡಳಿಯ ಅಧ್ಯಕ್ಷ ಎಂ. ರವಿಶೆಟ್ಟಿ ಮತ್ತು ಸಲಹೆಗಾರರಾದ ಅರುಣ್ ಕುಮಾರ್, ವೀರೆಶ್ ಮನ್ನಂಗಿ, ಮಧು ಕುಮಾರ್ ಹಾಗೂ ಮಹೇಶ್ ಗೌಡ ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದ ಕರ್ನಾಟಕ ಪ್ರತಿನಿಧಿ ಸಂದೀಪ್ ಶ್ರೀರಾಮರೆಡ್ಡಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯ ಕಲಾವಿದರು, ಕತಾರ್ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಧ್ವನಿ ಮತ್ತು ಬೆಳಕಿನ ತಾಂತ್ರಿಕ ತಂಡ, ಸ್ವಯಂಸೇವಕರು ಹಾಗೂ ಕತಾರ್‌ನ ಕಲಾಭಿಮಾನಿ ಸಾರ್ವಜನಿಕರಿಗೆ ಕರ್ನಾಟಕ ಸಂಘವು ತನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದೆ.