ಇಸ್ಲಾಮಾಬಾದ್: ಖೈಬರ್ ಪಖ್ತುನ್ಖ್ವಾದ ಕುರ್ರಂ ಜಿಲ್ಲೆಯ ಅಫ್ಘಾನ್ ಗಡಿಯ ಬಳಿ ಉಗ್ರರೊಂದಿಗಿನ ಘರ್ಷಣೆಯಲ್ಲಿ ಪಾಕಿಸ್ತಾನಿ ಸೇನಾ ಕ್ಯಾಪ್ಟನ್ (Terorrist Attack) ಸೇರಿದಂತೆ ಆರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆ ಬುಧವಾರ ತಿಳಿಸಿದೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಹೇಳಿಕೆಯ ಪ್ರಕಾರ, ಕುರ್ರಂನ ಡೋಗರ್ ಪ್ರದೇಶದಲ್ಲಿ ನಿಗದಿತ ಮಾಹಿತಿಯನ್ನು ಆಧಾರಿಸಿ ಕಾರ್ಯಾಚರಣೆಯಲ್ಲಿ (IBO) ಕನಿಷ್ಠ ಏಳು ಉಗ್ರರು ಸಾವನ್ನಪ್ಪಿದ್ದಾರೆ. ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಗೆ ಸೇರಿದ ಉಗ್ರಗಾಮಿಗಳನ್ನು ಹತ್ತಿಕ್ಕಲು ಪಾಕಿಸ್ತಾನಿ ಸೇನೆ ಪ್ರಯತ್ನ ನಡೆಸುತ್ತಿದೆ.
ಇಂದು ಸಾವನ್ನಪ್ಪಿದವರಲ್ಲಿ, ಮಿಯಾನ್‌ವಾಲಿಯ 24 ವರ್ಷದ ವೈದ್ಯಕೀಯ ಅಧಿಕಾರಿ ಕ್ಯಾಪ್ಟನ್ ನೋಮನ್ ಸಲೀಮ್ ಕೂಡ ಸೇರಿದ್ದಾರೆ. ಕೊಲ್ಲಲ್ಪಟ್ಟ ಇತರ ಸೈನಿಕರು ಹವಾಲ್ದಾರ್ ಅಮ್ಜದ್ ಅಲಿ (39, ಸ್ವಾಬಿ), ನಾಯಕ್ ವಕಾಸ್ ಅಹ್ಮದ್ (36, ರಾವಲ್ಪಿಂಡಿ), ಸಿಪಾಯಿ ಐಜಾಜ್ ಅಲಿ (23, ಶಿಕಾರ್‌ಪುರ), ಸಿಪಾಯಿ ಮುಹಮ್ಮದ್ ವಲೀದ್ (23, ಝೀಲಂ), ಮತ್ತು ಸಿಪಾಯಿ ಮುಹಮ್ಮದ್ ಶಹಬಾಜ್ (32, ಖೈರ್‌ಪುರ) ಎಂದು ತಿಳಿದು ಬಂದಿದೆ.
ವಿದೇಶಿ ಪ್ರಾಯೋಜಿತ ಮತ್ತು ಬೆಂಬಲಿತ ಭಯೋತ್ಪಾದನೆಯ ಬೆದರಿಕೆಯನ್ನು ಅಳಿಸಿಹಾಕಲು 'ಅಜ್ಮ್-ಎ-ಇಸ್ತೆಹ್ಕಾಮ್' ಅಡಿಯಲ್ಲಿ ನಿರಂತರ ಭಯೋತ್ಪಾದನಾ ನಿಗ್ರಹ ಅಭಿಯಾನವು ಪೂರ್ಣ ವೇಗದಲ್ಲಿ ಮುಂದುವರಿಯುತ್ತದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿದೆ. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಾದ್ಯಂತ ಈ ವರ್ಷ ಇಲ್ಲಿಯವರೆಗೆ ಭಯೋತ್ಪಾದಕ ಘಟನೆಗಳಲ್ಲಿ 298 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ಇಲಾಖೆ (CTD) ವರದಿ ಮಾಡಿದೆ. ಭದ್ರತಾ ಪಡೆಗಳು 2,366 ಗುಪ್ತಚರ ಆಧಾರಿತ ಕಾರ್ಯಾಚರಣೆಗಳನ್ನು ನಡೆಸಿದ್ದು, 1,124 ಉಗ್ರರನ್ನು ಬಂಧಿಸಲಾಗಿದೆ ಮತ್ತು 368 ಭಯೋತ್ಪಾದಕರನ್ನು ಎನ್‌ಕೌಂಟರ್‌ಗಳಲ್ಲಿ ಕೊಲ್ಲಲಾಗಿದೆ ಎಂದು ವರದಿ ತಿಳಿಸಿದೆ. ಈ ವರ್ಷದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ 6,181 ಶಂಕಿತರನ್ನು ಬಂಧಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Pakistan-Afghanistan War: ತಾಲಿಬಾನ್ ಜತೆ ಶಾಂತಿ ಮಾತುಕತೆ ನಡುವೆಯೇ ಪಾಕಿಸ್ತಾನ-ಅಫ್ಘಾನ್ ಗಡಿಯಲ್ಲಿ ಘರ್ಷಣೆ; 5 ಪಾಕ್ ಸೈನಿಕರು ಬಲಿ
ಟಿಟಿಪಿಯ ಫೀಲ್ಡ್ ಮಾರ್ಷಲ್ ಅಹ್ಮದ್ ಕಾಝಿಂ 100 ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿರುವ ಆರೋಪ ಹೊತ್ತಿದ್ದಾನೆ. ಕಾಝಿಂ ತಲೆಗೆ ಪಾಕಿಸ್ತಾನ ಸರ್ಕಾರ 10 ಕೋಟಿ ಪಾಕಿಸ್ತಾನಿ ರೂ. ಬಹುಮಾನ ಘೋಷಿಸಿದೆ. ಕಳೆದ ವಾರವಷ್ಟೇ ಲಕ್ಕಿ ಮರ್ವಾತ್ ಜಿಲ್ಲೆಯಲ್ಲಿ ನಡೆದ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ಎಂಟು ಟಿಟಿಪಿ ಉಗ್ರರನ್ನು ಹತ್ಯೆ ಮಾಡಿ, ಐವರನ್ನು ಗಾಯಗೊಳಿಸಲಾಗಿತ್ತು. ಈ ಘಟನೆಯ ಬೆನ್ನಲ್ಲೇ ಈ ಪ್ರತೀಕಾರದ ದಾಳಿ ನಡೆದಿದೆ.