ವಾಷಿಂಗ್ಟನ್, ಮಾ. 28: ಪಾಕಿಸ್ತಾನ ಒಂದು ರೀತಿಯಲ್ಲಿ ಉಗ್ರ ಸಂಘಟನೆಗಳಿಗೆ ತವರೂರು ಇದ್ದಂತೆ ಎನ್ನುವುದು ಇಡೀ ಜಗತ್ತಿಗೇ ಗೊತ್ತಿರುವ ಸತ್ಯ. ಸದ್ಯ ಹೊರ ಬಂದಿರುವ ಅಮೆರಿಕದ ಸಂಶೋಧನಾ ವರದಿಯಲ್ಲಿಯೂ ಈ ವಿಚಾರ ಮತ್ತೊಮ್ಮೆ ಸಾಬೀತಾಗಿದೆ. ಭಾರತದ ವಿರುದ್ಧ ಕಾರ್ಯಾಚರಿಸುವ ಉಗ್ರ ಸಂಘಟನೆಗಳಿಗೆ (Terrorist Groups) ಈಗಲೂ ಪಾಕಿಸ್ತಾನ ಆಶ್ರಯ ನೀಡುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತ ಮತ್ತು ಜಮ್ಮು ಕಾಶ್ಮೀರವನ್ನು ಗುರಿಯಾಗಿಸಿಕೊಂಡಿರುವ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ನೆಲದಲ್ಲಿ ಹುಲುಸಾಗಿ ಬೆಳೆಯುತ್ತಿವೆ ಎಂದು ಅಮೆರಿಕ ಕಾಂಗ್ರೆಸ್ ಸಂಶೋಧನಾ ಸೇವೆ (Congressional Research Service)ಯ ವರದಿ ತಿಳಿಸಿದೆ.
ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳು ಆಶ್ರಯ ಪಡೆದುಕೊಳ್ಳುತ್ತಿರುವ ಬಗ್ಗೆ ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ಧ್ವನಿ ಎತ್ತುತ್ತಲೇ ಬಂದಿದೆ. ಆಗೆಲ್ಲ ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ಅವಕಾಶ ನೀಡುತ್ತಿಲ್ಲ ಎಂದಿದ್ದ ಪಾಕಿಸ್ತಾನ ಮತ್ತೊಮ್ಮೆ ಜಗತ್ತಿನೆದುರು ಬೆತ್ತಲಾಗಿದೆ.
ಉಗ್ರರಿಗೆ ಈಗಲೂ ಪಾಕಿಸ್ತಾನದಿಂದ ಆಶ್ರಯ:
ವರದಿಯಲ್ಲಿ ಏನಿದೆ?
ಅಮೆರಿಕದ ಈ ಸಂಶೋಧನಾ ವರದಿಯು ಹಲವು ಬೆಚ್ಚಿ ಬೀಳಿಸುವ ಅಂಶಗಳನ್ನು ಬಹಿರಂಗಪಡಿಸಿದೆ. ಭಾರತದ ವಿರುದ್ಧ ದ್ವೇಷ ಕಾರುವ ಉಗ್ರ ಗುಂಪುಗಳು ಈಗಲೂ ಪಾಕಿಸ್ತಾನದಲ್ಲಿವೆ ಎಂದಿದೆ. 2008ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ ಲಷ್ಕರ್-ಎ-ತೊಯ್ಬಾ ಮತ್ತು 2001ರಲ್ಲಿ ಭಾರತದ ಸಂಸತ್‌ಗೆ ನುಗ್ಗಿದ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಈಗಲೂ ಪಾಕಿಸ್ತಾನದಲ್ಲಿ ಸಕ್ರಿಯವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಭಾರತದ ತೀವ್ರ ಮಿಲಿಟರಿ ಚಟುವಟಿಕೆ, ಸರ್ಜಿಕಲ್ ಸ್ಟ್ರೈಕ್, ಆಪರೇಷನ್ ಸಿಂದೂರ್‌ನಂತಹ ಕಾರ್ಯಾಚರಣೆಗಳ ಹೊರತಾಗಿಯೂ ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನೆ ತೀವ್ರವಾಗಿ ಏರಿಕೆ ಕಂಡಿದೆ. 2025ರಲ್ಲಿ ಭಯೋತ್ಪಾದಕ ಚಟುವಟಿಕೆಯಿಂದ 4,001 ಮಂದಿ ಮೃತಪಟ್ಟಿದ್ದು, ಇದು 11 ವರ್ಷಗಳಲ್ಲೇ ಅತ್ಯಧಿಕ ಎಂದು ತಿಳಿಸಿದೆ.
ಕಾಶ್ಮೀರದಲ್ಲಿ ಉಗ್ರರ ಒಳನುಸುಳುವಿಕೆ ಯತ್ನ ವಿಫಲ: ಭಯೋತ್ಪಾದಕನನ್ನು ಹೊಡೆದುರುಳಿಸಿದ ಸೇನೆ
ಈ ವರದಿ ಪ್ರಕಾರ ಭಯೋತ್ಪಾದನೆಯಿಂದ ಅತೀ ಹೆಚ್ಚು ತೊಂದರೆಗೊಳಗಾದ ದೇಶಗಳ ಪೈಕಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ. 2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಉಗ್ರ ಚಟುವಟಿಕೆ ಜಿಗಿತುಕೊಂಡಿದೆ. ಇದಲ್ಲದೆ ಹೆಚ್ಚಿನ ಭಯೋತ್ಪಾದಕ ಗುಂಪುಗಳು ಇಸ್ಲಾಮಿ ಉಗ್ರಗಾಮಿ ಸಿದ್ಧಾಂತದಿಂದ ಪ್ರೇರಿತವಾಗಿವೆ ಎಂದು ಅಮೆರಿಕದ ಕಾಂಗ್ರೆಸ್‌ನ ಸಂಶೋಧನಾ ವಿಭಾಗವು ಕಂಡುಕೊಂಡಿದೆ.
ಅಲ್ ಖೈದಾ ಗುಂಪು ಇತರ ಉಗ್ರಗಾಮಿ ಸಂಘಟನೆಗಳೊಂದಿಗೆ ಮೈತ್ರಿ ಕಾಯ್ದುಕೊಳ್ಳುತ್ತಿದೆ. ಇಸ್ಲಾಮಿಕ್ ಸ್ಟೇಟ್‌ನ ಪ್ರಾದೇಶಿಕ ಅಂಗಸಂಸ್ಥೆಯಾದ ಇಸ್ಲಾಮಿಕ್ ಸ್ಟೇಟ್-ಖೋರಾಸನ್ ಪ್ರಾಂತ್ಯವು ಅಂದಾಜು 4,000-6,000 ಹೋರಾಟಗಾರರನ್ನು ಹೊಂದಿದೆ ಮತ್ತು ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಇತರ ಉಗ್ರಗಾಮಿ ಗುಂಪುಗಳಿಂದ ಸದಸ್ಯರನ್ನು ಸೆಳೆಯುತ್ತಿದೆ ಎನ್ನಲಾಗಿದೆ.
ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆ; ಮತ್ತೋರ್ವನಿಗಾಗಿ ಮುಂದುವರಿದ ಶೋಧ
ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ ಗುಂಪನ್ನು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತ್ಯಂತ ಮಾರಕ ಭಯೋತ್ಪಾದಕ ಸಂಘಟನೆ ಎಂದು ವಿವರಿಸಲಾಗಿದೆ. ಇದು ಅಂದಾಜು 2,500-5,000 ಸದ್ಯರನ್ನು ಹೊಂದಿದೆ. ದೇಶದಲ್ಲಿ ಷರಿಯಾ ಕಾನೂನನ್ನು ಹೇರುವ ಗುರಿಯನ್ನು ಹೊಂದಿದೆ ಎಂದು ವರದಿ ಹೇಳಿದೆ.
ಸಿಆರ್‌ಎಸ್ ಅಮೆರಿಕ ಕಾಂಗ್ರೆಸ್‌ನ ಸ್ವತಂತ್ರ ಸಂಶೋಧನಾ ವಿಭಾಗವಾಗಿದ್ದು, ವಿವಿಧ ವಿಚಾರಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆ ನಡೆಸುತ್ತದೆ.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.