ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pak Train Hijack: ಪಾಕಿಸ್ತಾನ ರೈಲು ಹೈಜಾಕ್; ಬದುಕುಳಿದ ಎಲ್ಲ ಒತ್ತೆಯಾಳುಗಳ ರಕ್ಷಣೆ: 30 ಉಗ್ರರ ಹತ್ಯೆ

Pak Train Hijack: ಪ್ರತ್ಯೇಕತಾವಾದಿ ಉಗ್ರರು ಮಂಗಳವಾರ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ 400ಕ್ಕೂ ಹೆಚ್ಚು ಪ್ರಯಾಣಿಕರಿದ್ದ ರೈಲನ್ನು ಅಪಹರಿಸಿದ ಘಟನೆ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದೆ. ಇದೀಗ ಬಂಡುಕೋರರು ಒತ್ತೆಯಾಳುಗಳಾಗಿ ಇರಿಸಿದ್ದ ಎಲ್ಲ ಬದುಕುಳಿದ ರೈಲು ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನ ರೈಲು ಹೈಜಾಕ್; ಎಲ್ಲ ಒತ್ತೆಯಾಳುಗಳ ರಕ್ಷಣೆ

-

Ramesh B Ramesh B Mar 12, 2025 11:13 PM

ಇಸ್ಲಮಾಬಾದ್‌: ಪ್ರತ್ಯೇಕತಾವಾದಿ ಉಗ್ರರು ಮಂಗಳವಾರ (ಮಾ. 11) ಪಾಕಿಸ್ತಾನದ (Pakistan) ಬಲೂಚಿಸ್ತಾನದಲ್ಲಿ 400ಕ್ಕೂ ಹೆಚ್ಚು ಪ್ರಯಾಣಿಕರಿದ್ದ ರೈಲನ್ನು (Pak Train Hijack) ಅಪಹರಿಸಿದ ಘಟನೆ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದೆ. ಇದೀಗ ಬಂಡುಕೋರರು ಒತ್ತೆಯಾಳುಗಳಾಗಿ ಇರಿಸಿದ್ದ, ಬದುಕುಳಿದ ಎಲ್ಲ ರೈಲು ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಸೇನಾ ಅಧಿಕಾರಿಯೊಬ್ಬರು ಎಎಫ್‌ಪಿಗೆ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ 28 ಯೋಧರು ಮೃತಪಟ್ಟಿದ್ದಾರೆ. ಈ ಮಧ್ಯೆ 50 ಒತ್ತೆಯಾಳುಗಳನ್ನು ಕೊಂದಿರುವುದಾಗಿ ಎಂದು ಬಲೂಚ್ ಲಿಬರೇಶನ್ ಆರ್ಮಿ (BLA) ಉಗ್ರರು ಖಚಿತಪಡಿಸಿದ್ದಾರೆ.

"ಕಾರ್ಯಾಚರಣೆಯ ಸಮಯದಲ್ಲಿ 346 ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ ಮತ್ತು 30ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ" ಎಂದು ಸೇನಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ʼʼರೈಲಿನಲ್ಲಿ ಪ್ರಯಾಣಿಸುತ್ತಿದ್ದ 28 ಸೈನಿಕರು ಭಯೋತ್ಪಾದಕರಿಂದ ಹತರಾಗಿದ್ದಾರೆʼʼ ಎಂದು ತಿಳಿಸಿದ್ದಾರೆ.



ಬಲೂಚಿಸ್ತಾನ ಪ್ರಾಂತ್ಯದ ದೂರದ ಗಡಿ ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ ಬಂಡುಕೋರ ಗುಂಪು ರೈಲನ್ನು ವಶಪಡಿಸಿಕೊಂಡಾಗ 400ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಈ ದಾಳಿಯ ಹೊಣೆಯನ್ನು ಮಂಗಳವಾರವೇ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ವಹಿಸಿಕೊಂಡಿತ್ತು. ದಾಳಿಯ ವೇಳೆ ಈ ರೈಲು ಕ್ವೆಟ್ಟಾದಿಂದ ಪೇಶಾವರಕ್ಕೆ ಪ್ರಯಾಣಿಸುತ್ತಿತ್ತು.

ಈ ಸುದ್ದಿಯನ್ನೂ ಓದಿ: Pak train Hijack: ಪಾಕ್‌ ರೈಲು ಹೈಜಾಕ್-‌ ಮತ್ತೊಂದು ಶಾಕಿಂಗ್‌ ವಿಡಿಯೊ ರಿಲೀಸ್‌ ಮಾಡಿದ ಬಂಡುಕೋರರು

ರೈಲನ್ನು ವಶಕ್ಕೆ ಪಡೆದಿದ್ದು ಹೇಗೆ?

ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನದ ಬಂಡುಕೋರರ ಗುಂಪೊಂದು ಮಂಗಳವಾರ ಮಧ್ಯಾಹ್ನ ರೈಲ್ವೆ ಹಳಿಯ ಒಂದು ಭಾಗದ ಮೇಲೆ ಬಾಂಬ್ ದಾಳಿ ನಡೆಸಿ ರೈಲಿಗೆ ನುಗ್ಗಿ, ಪ್ರಯಾಣಿಕರು ಮತ್ತು ಪಾಕ್‌ ಸೈನಿಕರನ್ನು ವಶಕ್ಕೆ ಪಡೆದಿತ್ತು. ಪಾಕಿಸ್ತಾನ ವಿರೋಧಿ ಧೋರಣೆ ಹೊಂದಿರುವ ಬಲೂಚಿಸ್ತಾನದ ಬಲೂಚ್ ಲಿಬರೇಶನ್ ಆರ್ಮಿ ಉಗ್ರರು ಖೈಬರ್‌ ಕಣಿವೆಯ ಗುಡಾಲಾರ್ ಹಾಗೂ ಪಿರು ಕೊಣೇರಿ ನಡುವಿನ 8ನೇ ಸುರಂಗದ ಸನಿಹ ಸಾಗುತ್ತಿದ್ದ 9 ಕೋಚ್‌ಗಳಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಬಳಿಕ ರೈಲನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಎಲ್ಲ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ʼʼಪಾಕಿಸ್ತಾನ ಸೇನಾ ಪಡೆ ಪ್ರತಿ ಕಾರ್ಯಾಚರಣೆ ಕೈಗೊಂಡಲ್ಲಿ ಪರಿಣಾಮಗಳು ತೀವ್ರವಾಗಿರಲಿವೆ. ನಮ್ಮ ವಿರುದ್ಧ ಸೇನೆ ದಂಡೆತ್ತಿ ಬಂದರೆ ಎಲ್ಲ ಒತ್ತೆಯಾಳುಗಳನ್ನು ಕೊಲ್ಲುತ್ತೇವೆ. ಮುಂದಾಗುವ ರಕ್ತಪಾತದ ಹೊಣೆಯನ್ನು ಸೇನೆಯೇ ಹೊರಬೇಕಾಗುತ್ತದೆʼ' ಎಂದು ಬಿಎಲ್‌ಎ ಎಚ್ಚರಿಕೆ ನೀಡಿದ್ದರು.

ಸದ್ಯ ರಕ್ಷಿಸಲ್ಪಟ್ಟ ಪ್ರಯಾಣಿಕರನ್ನು ಅವರ ಸ್ವಂತ ಊರುಗಳಿಗೆ, ಮಾಚ್ ಜಿಲ್ಲೆ ಮತ್ತು ಕ್ವೆಟ್ಟಾದಲ್ಲಿರುವ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



ಪ್ರಧಾನಿ ಹೇಳಿದ್ದೇನು?

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಘಟನೆ ಬಗ್ಗೆ ಮಾಹಿತಿ ನೀಡಿ, ʼʼಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಅವರೊಂದಿಗೆ ಮಾತನಾಡಿದ್ದೇನೆ. ಅವರು ಜಾಫರ್ ಎಕ್ಸ್‌ಪ್ರೆಸ್‌ ಮೇಲಿನ ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ವಿವರಿಸಿದರು. ಈ ಹೇಡಿತನದ ಕೃತ್ಯದಿಂದ ಇಡೀ ರಾಷ್ಟ್ರವು ತೀವ್ರ ಆಘಾತಕ್ಕೊಳಗಾಗಿದೆ ಮತ್ತು ಮುಗ್ಧ ಪ್ರಯಾಣಿಕರ ಸಾವಿನಿಂದ ದುಃಖವಾಗಿದೆ. ಇಂತಹ ಹೇಡಿತನದ ಕೃತ್ಯದಿಂದ ಪಾಕಿಸ್ತಾನದ ಸಂಕಲ್ಪವನ್ನು ಅಲುಗಾಡಿಸಲು ಸಾಧ್ಯವಿಲ್ಲʼʼ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.