ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇರಾನ್‌ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ; ಯುದ್ಧ ಆರಂಭವಾದ ಬಳಿಕ ಮೊದಲ ಬಾರಿ ಇಬ್ಬರು ನಾಯಕರ ಮುಖಾಮುಖಿ

Masoud Pezeshkian: ಕಿರ್ಗಿಸ್ತಾನ್‌ ರಾಜಧಾನಿ ಬಿಷ್ಕೆಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಫೆಬ್ರವರಿಯಲ್ಲಿ ಅಮೆರಿಕ-ಇಸ್ರೇಲ್‌-ಇರಾನ್ ಯುದ್ಧ ಪ್ರಾರಂಭವಾದ ನಂತರ ಇಬ್ಬರು ನಾಯಕರ ಮಧ್ಯೆ ನಡೆದ ಮೊದಲ ವೈಯಕ್ತಿಕ ಸಭೆ ಇದಾಗಿದೆ.

ಕಿರ್ಗಿಸ್ತಾನ್‌ನಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಜತೆ ನರೇಂದ್ರ ಮೋದಿ ಮಾತುಕತೆ

ಬಿಷ್ಕೆಕ್‌, ಆ. 31: ಕಿರ್ಗಿಸ್ತಾನ್‌ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ (ಆಗಸ್ಟ್‌ 31) ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ (Massoud Pezeshkian) ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು (SCO Summit). ಫೆಬ್ರವರಿಯಲ್ಲಿ ಅಮೆರಿಕ-ಇಸ್ರೇಲ್‌-ಇರಾನ್ ಯುದ್ಧ ಪ್ರಾರಂಭವಾದ ನಂತರ ಇಬ್ಬರು ನಾಯಕರ ಮಧ್ಯೆ ನಡೆದ ಮೊದಲ ವೈಯಕ್ತಿಕ ಸಭೆ ಇದಾಗಿದ್ದು, ಜಗತ್ತೇ ಕುತೂಹಲದಿಂದ ಗಮನಿಸುತ್ತಿದೆ.

ಇಬ್ಬರು ನಾಯಕರು ಏನು ಚರ್ಚಿಸಿದರು ಎನ್ನುವ ಮಾಹಿತಿ ಇನ್ನೂ ಗೊತ್ತಾಗಿಲ್ಲ. ಅದಾಗ್ಯೂ ಯುದ್ಧ ಆರಂಭವಾದ ಬಳಿಕ ಇರಾನ್‌ ಹೊರ್ಮುಜ್ ಜಲಸಂಧಿಯನ್ನು ಸ್ಥಗಿತಗೊಳಿಸಿರುವ ಬಗ್ಗೆ ಮಾತುಕತೆ ನಡೆದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದ ದಾಳಿ ಎದುರಿಸಲು ಅಗತ್ಯವಾದ ಬೆಂಬಲ ಸಂಗ್ರಹಿಸಲು ಪೆಜೆಶ್ಕಿಯನ್ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಇರಾನ್‌ ಅಧ್ಯಕ್ಷರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ:



"ಇರಾನ್ ಅಧ್ಯಕ್ಷ ಡಾ. ಮಸೂದ್ ಪೆಜೆಶ್ಕಿಯಾನ್ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಭಾಗವಹಿಸಲು ಕಿರ್ಗಿಸ್ತಾನ್‌ಗೆ ಭೇಟಿ ನೀಡಿದ್ದು, ಮೊದಲ ಹಂತದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು" ಎಂದು ಭಾರತದಲ್ಲಿನ ಇರಾನ್‌ನ ರಾಯಭಾರ ಕಚೇರಿಯು ಅಧಿಕೃತ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ.

ಯಾವುದೇ ಸಮಸ್ಯೆಗೆ ಮಿಲಿಟರಿ ಸಂಘರ್ಷ ಪರಿಹಾರವಲ್ಲ: ಇರಾನ್‌-ಇಸ್ರೇಲ್‌ ಯುದ್ಧದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ಇಬ್ಬರು ನಾಯಕರ ನಡುವಿನ ಉನ್ನತ ಮಟ್ಟದ ಚರ್ಚೆಗಳು ಪ್ರಾದೇಶಿಕ ಭದ್ರತೆ, ಸಂಘರ್ಷಗಳಿಗೆ ರಾಜತಾಂತ್ರಿಕ ಪರಿಹಾರ, ಇಂಧನ ಭದ್ರತೆ ಮತ್ತು ಹೊರ್ಮುಜ್ ಜಲಸಂಧಿಯಲ್ಲಿನ ಸಾರಿಗೆ ಮಾರ್ಗಗಳ ಅಡೆತಡೆಗಳ ಮೇಲೆ ಕೇಂದ್ರೀಕರಿಸಿದ್ದವು ಎನ್ನಲಾಗಿದೆ. ಭಾರತಕ್ಕೆ ಪ್ರಮುಖವಾದ ತೈಲ ಮತ್ತು ಎಲ್‌ಎನ್‌ಜಿ ಆಮದು, ಗಲ್ಫ್ ರಾಷ್ಟ್ರಗಳಿಂದ ಇಂಧನ ಪೂರೈಕೆಗೆ ಎದುರಾಗಿರುವ ಅಡ್ಡಿ ಮುಂತಾದ ಕಳವಳಗಳನ್ನು ನಾಯಕರು ಚರ್ಚಿಸಿದರು. ಅಲ್ಲದೆ ಹೊರ್ಮುಜ್‌ ಜಲಸಂಧಿ ಮಾರ್ಗದಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಲ್ಲಿನ ಭಾರತೀಯ ನಾವಿಕರ ಸುರಕ್ಷತೆಯ ಬಗ್ಗೆಯೂ ಮೋದಿ ಪ್ರಸ್ತಾವಿಸಿದ್ದಾರೆ ಎನ್ನಲಾಗಿದೆ. ಪ್ರಾದೇಶಿಕ ಉದ್ವಿಗ್ನತೆಯನ್ನು ಪರಿಹರಿಸಲು ಅಗತ್ಯವಾದ ಶಾಂತಿ ಮಾತುಕತೆಯ ಮಹತ್ವವನ್ನು ಭಾರತ ಪುನರುಚ್ಚರಿಸಿದೆ.

ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವ ಈ ಸಮಯದಲ್ಲಿ ನಡೆದ ಸಭೆ ಬಹಳಷ್ಟು ಮಹತ್ವ ಪಡೆದಿದೆ. ಭಾರತ ಇರಾನ್‌ನ ಅಗ್ರ ವ್ಯಾಪಾರ ಪಾಲುದಾರ ದೇಶವಾಗಿದ್ದು, ಹೊರ್ಮುಜ್ ಜಲಸಂಧಿಯ ಸ್ಥಗಿತ ಮತ್ತು ಟೆಹರಾನ್‌ ವಿರುದ್ಧದ ಅಮೆರಿಕದ ನಿರ್ಬಂಧಗಳಿಂದಾಗಿ ಆರ್ಥಿಕ ಚಟುವಟಿಕೆಗಳಿಗೆ ಸದ್ಯ ಸಾಕಷ್ಟು ಅಡೆತಡೆ ಎದುರಾಗಿದೆ.

ಯುದ್ಧ ಆರಂಭವಾದ ಬಳಿ ಮೋದಿ ಮತ್ತು ಪೆಜೆಶ್ಕಿಯಾನ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರೂ ಮುಖಾಮುಖಿ ಸಭೆ ಇದು ಮೊದಲ ಬಾರಿ ಎನ್ನುವುದು ವಿಶೇಷ. ಕೊನೆಯ ಬಾರಿಗೆ ಜೂನ್‌ನಲ್ಲಿ ಪ್ರಧಾನಿ ಮೋದಿ ಮತ್ತು ಪೆಜೆಶ್ಕಿಯಾನ್ ದೂರವಾಣಿ ಮೂಲಕ ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದರು.

ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗೆ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷ; ಮಸೌದ್ ಪೆಜೆಶ್ಕಿಯಾನ್ ಹೇಳಿದ್ದೇನು?

ಎಚ್ಚರಿಕೆ ನೀಡಿದ್ದ ಡಾ. ಮಸೂದ್ ಪೆಜೆಶ್ಕಿಯಾನ್

ಬಿಷ್ಕೆಕ್‌ಗೆ ತೆರಳುವ ಮೊದಲು ಡಾ. ಮಸೂದ್ ಪೆಜೆಶ್ಕಿಯಾನ್, ʼʼಇರಾನ್ ಯುದ್ಧವನ್ನು ಬಯಸುವುದಿಲ್ಲ. ಆದರೆ ಯಾವುದೇ ಆಕ್ರಮಣವನ್ನು ದೃಢವಾಗಿ ಎದುರಿಸುತ್ತದೆʼʼ ಎಂದು ಎಂದು ಎಚ್ಚರಿಕೆ ನೀಡಿದ್ದರು. ಜತೆಗೆ ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿ ಎಲ್ಲ ದೇಶಗಳಿಗೆ ಮಾರಕ ಎಂದು ಇರಾನ್‌ ಪ್ರತಿಪಾದಿಸಿದೆ. ಈ ಮಧ್ಯೆ ಇರಾನ್‌ ಮೇಲೆ ಅಮೆರಿಕ ಕೆಲವು ದಿನಗಳ ಬಿಡುವಿನ ಬಳಿಕ ಮತ್ತೆ ದಾಳಿ ನಡೆಸಿದೆ.

ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author