ಲಂಡನ್, ನ. 27: ಕೈಗಾರಿಕಾ ಅನಿಲ ಮತ್ತು ಸಂಬಂಧಿತ ಉತ್ಪಾದನೆಯಲ್ಲಿ ಸಕ್ರಿಯವಾಗಿರುವ ಪ್ರಾಕ್ಸ್ಏರ್ ಇಂಡಿಯಾ (Praxair India) ಕಂಪನಿಯು ಕರ್ನಾಟಕದಲ್ಲಿ (Invest Karnataka) ಲಿಕ್ವಿಡ್ ಆಕ್ಸಿಜನ್ ಮತ್ತು ನೈಟ್ರೋಜನ್ ತಯಾರಿಕಾ ಘಟಕ ಸ್ಥಾಪನೆಗೆ ಮುಂದಿನ 3 ವರ್ಷಗಳಲ್ಲಿ 210 ಕೋಟಿ ರೂ. ಬಂಡವಾಳ ಹೂಡಲಿದೆ. ಈ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಕಂಪನಿಯು ಬುಧವಾರ ಒಡಂಬಡಿಕೆಗೆ ಅಂಕಿತ ಹಾಕಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ (MB Patil) ಹೇಳಿದ್ದಾರೆ. ಹೂಡಿಕೆ ಆಕರ್ಷಣೆಗಾಗಿ ಅಧಿಕೃತ ನಿಯೋಗದೊಂದಿಗೆ ಲಂಡನ್ ಪ್ರವಾಸ ಕೈಗೊಂಡಿರುವ ಸಚಿವರು ಈ ಬಗ್ಗೆ ಮಾತನಾಡಿ, ಪ್ರಾಕ್ಸ್ಏರ್ ಇಂಡಿಯಾ ಈ ಹಣಕಾಸು ವರ್ಷದಿಂದಲೇ ತನ್ನ ಈ ಹೂಡಿಕೆ ಆರಂಭಿಸಲಿದೆ. ಸರ್ಕಾರ ಕೂಡ ಭೂಮಿ, ಏಕಗವಾಕ್ಷಿ ಅನುಮೋದನೆಗಳು ಮತ್ತು ಮೂಲಸೌಕರ್ಯಗಳನ್ನು ತ್ವರಿತವಾಗಿ ಪೂರೈಸಲಿದೆ ಎಂದಿದ್ದಾರೆ.
ಇದಲ್ಲದೆ ವೈಮಾಂತರಿಕ್ಷ, ರಕ್ಷಣೆ ಮತ್ತು ಡ್ರೋನ್ ವಲಯಗಳಲ್ಲಿ ಉಪಯೋಗಕ್ಕೆ ಬರುವ ಹೆಲಿಕ್ಯಾಲ್-ಆ್ಯಂಟೆನಾ ತಂತ್ರಜ್ಞಾನಕ್ಕೆ ಹೆಸರಾಗಿರುವ ಹೆಲಿಕ್ಸ್ ಜಿಯೋಸ್ಪೇಸ್, ಉಪಗ್ರಹಗಳಿಗೆ ಬೇಕಾಗುವ ಆ್ಯಂಟೆನಾ ತಯಾರಿಕೆಗೆ ಹೆಸರಾಗಿರುವ ಆಕ್ಸಫರ್ಡ್ ಸ್ಪೇಸ್ ಸಿಸ್ಟಮ್ಸ್ ಕಂಪನಿ (ಒಎಸ್ಎಸ್)ಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಒಎಸ್ಎಸ್ ಕಂಪನಿಗೆ ತನ್ನ ನಿರ್ದಿಷ್ಟ ಅಗತ್ಯ, ಬೇಕಾದ ಬೆಂಬಲ ಇವುಗಳನ್ನು ವಿವರಿಸಿ, ರಾಜ್ಯ ಸರ್ಕಾರಕ್ಕೆ ಟಿಪ್ಪಣಿ ಸಲ್ಲಿಸುವಂತೆ ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬ್ರಿಟನ್‌ನಲ್ಲಿ ಭಾರತದ ಹೈಕಮಿಷನರ್ ಆಗಿರುವ ವಿಕ್ರಮ್ ದೊರೆಸ್ವಾಮಿ ಅವರನ್ನು ಕೂಡ ಈ ಸಂದರ್ಭದಲ್ಲಿ ಭೇಟಿ ಮಾಡಿದ್ದು, ಇಂಗ್ಲೆಂಡ್ ಮತ್ತು ಕರ್ನಾಟಕದ ನಡುವಿನ ಕೈಗಾರಿಕಾ ಬಾಂಧವ್ಯ ಕುರಿತು ಚರ್ಚಿಸಲಾಗಿದೆ. ಜತೆಗೆ, ಉದ್ದೇಶಿತ ಕ್ವಿನ್ ಸಿಟಿ ಪ್ರದೇಶದಲ್ಲಿ `ಯು.ಕೆ. ಟೆಕ್ ಪಾರ್ಕ್ʼ ಸ್ಥಾಪಿಸಲು ಇರುವ ಅವಕಾಶಗಳ ಬಗ್ಗೆ ಅವರೊಂದಿಗೆ ವಿಚಾರ ವಿನಿಮಯ ನಡೆಸಿದ್ದೇನೆ. ಇದು ಸಾಧ್ಯವಾದರೆ ಸಂಶೋಧನೆ ಮತ್ತು ಅಭಿವೃದ್ಧಿ, ನವೋದ್ಯಮ ಮತ್ತು ಉನ್ನತ ಮಟ್ಟದ ತಯಾರಿಕೆ ಕಾರ್ಯಪರಿಸರದ ಬಲವರ್ಧನೆ ಆಗಲಿದೆ. ಈ ಸಂಬಂಧ ನಮ್ಮ ಹೈಕಮಿಷನರ್‌ನವರು ಇಲ್ಲಿನ ಕಂಪನಿಗಳೊಂದಿಗೆ ಮಾತುಕತೆ ನಡೆಸಿ, ಅದನ್ನು ರಾಜ್ಯ ಸರ್ಕಾರಕ್ಕೆ ತಿಳಿಸುವುದಾಗಿ ಹೇಳಿದ್ದಾರೆ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ.
ಗ್ರೀನ್ ಜೆಟ್ಸ್ ಕಂಪನಿ ರಾಜ್ಯಕ್ಕೆ ಬಂದರೆ ಪೂರ್ಣ ನೆರವು: ಎಂ.ಬಿ. ಪಾಟೀಲ್
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಮತ್ತಿತರರು ನಿಯೋಗದಲ್ಲಿದ್ದಾರೆ.