ಕಾಬೂಲ್: ಆಫ್ಘಾನಿಸ್ತಾನದಾದ್ಯಂತ (Afghanistan) ಗುಪ್ತವಾಗಿ ಕಾರ್ಯನಿರ್ವಹಿಸುತ್ತಿರುವ ಬ್ಯೂಟಿ ಸಲೂನ್‌ಗಳ (Beauty Salon) ವಿರುದ್ಧ ತಾಲಿಬಾನ್ (Taliban) ಕಠಿಣ ಕ್ರಮಕ್ಕೆ ಮುಂದಾಗಿದೆ. ಇವುಗಳನ್ನು ನಡೆಸುತ್ತಿರುವ ಮಹಿಳೆಯರಿಗೆ ಒಂದು ತಿಂಗಳ ಗಡುವು ನೀಡಿದ್ದು, ಬಂದ್ ಮಾಡದಿದ್ದರೆ ಬಂಧನದ ಎಚ್ಚರಿಕೆ ನೀಡಿದೆ. 2023ರ ಆಗಸ್ಟ್‌ನಲ್ಲಿಯೇ ತಾಲಿಬಾನ್ ಎಲ್ಲ ಬ್ಯೂಟಿ ಸಲೂನ್ ಅಥವಾ ಪಾರ್ಲರ್‌ಗಳನ್ನು ಔಪಚಾರಿಕವಾಗಿ ಮುಚ್ಚಿದ್ದರಿಂದ 12,000 ವ್ಯಾಪಾರಗಳು ಬಂದ್ ಆಗಿ, 50,000ಕ್ಕೂ ಅಧಿಕ ಮಹಿಳಾ ಸೌಂದರ್ಯ ತಜ್ಞರು ಉದ್ಯೋಗ ಕಳೆದುಕೊಂಡಿದ್ದರು. ಆದರೂ ದೇಶದಾದ್ಯಂತ ಕೆಲವು ಬ್ಯೂಟಿ ಪಾರ್ಲರ್‌ಗಳು ಗುಪ್ತವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗ ಅವುಗಳಿಗೂ ನಿರ್ಬಂಧ ಹೇರಲು ತಾಲಿಬಾನ್ ಮುಂದಾಗಿದೆ.
ತಾಲಿಬಾನ್ ಈಗ ಈ ಗುಪ್ತ ವ್ಯಾಪಾರಗಳನ್ನು ಗುರುತಿಸಿ ನಿರ್ಮೂಲನೆ ಮಾಡಲು ಉದ್ದೇಶಿಸಿದ್ದು, ಸಮುದಾಯದ ಮುಖಂಡರು ಮತ್ತು ಹಿರಿಯರಿಗೆ ಇಂತಹ ಪಾರ್ಲರ್‌ಗಳನ್ನು ಗುರುತಿಸಿ ಪೊಲೀಸರಿಗೆ ವರದಿ ಮಾಡುವಂತೆ ಆದೇಶಿಸಿದೆ. ಈ ಬಗ್ಗೆ 38 ವರ್ಷದ ಮಹಿಳೆ ಫ್ರೇಸ್ಟಾ ತನ್ನ ಅಳಲು ತೋಡಿಕೊಂಡಿದ್ದಾಳೆ. ಫ್ರೇಸ್ಟಾ ಮೂವರು ಮಕ್ಕಳ ತಾಯಿ, ತನ್ನ ಗಂಡನ ಆರೋಗ್ಯ ಕ್ಷೀಣಿಸಿದ್ದರಿಂದ ತನ್ನ ಕುಟುಂಬದ ಏಕೈಕ ಆರ್ಥಿಕ ಆಧಾರ ತಾನೇ ಆಗಿದ್ದು, 2023ರಿಂದಲೂ ತನ್ನ ಬ್ಯೂಟಿ ಪಾರ್ಲರ್ ಅನ್ನು ಗುಪ್ತವಾಗಿ ನಡೆಸುತ್ತಿದ್ದಾಳೆ. ಮೂವರು ಮಕ್ಕಳ ಖರ್ಚನ್ನು ಭರಿಸಲು ಬೇರೆ ದಾರಿ ಉಳಿದಿರಲಿಲ್ಲ ಎಂದು ಆಕೆ ಹೇಳಿದ್ದಾಳೆ.
ಈ ಸುದ್ದಿಯನ್ನು ಓದಿ: Viral Video: ವಿಮಾನದ ರನ್‌ವೇ ಬಳಿ ಮೂತ್ರ ವಿಸರ್ಜಿಸಿದ ವೃದ್ಧ; ಕಾಕ್‍ಪಿಟ್‍ನಲ್ಲಿ ಕುಳಿತು ದೃಶ್ಯವನ್ನು ಚಿತ್ರೀಕರಿಸಿದ ಪೈಲಟ್
“ಮಹಿಳೆಯೊಬ್ಬಳು ಸುಂದರವಾಗಿ ತಯಾರಾದಾಗ, ಆಕೆ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿ ನಗುವಾಗ, ಆಕೆಯ ಸಂತೋಷ ನನಗೆ ಖುಷಿ ಕೊಡುತ್ತಿತ್ತು. ಆದರೆ ಈಗ ಬಂಧನದ ಭಯದಿಂದ ಮುಂದುವರಿಯಲು ಸಾಧ್ಯವಿಲ್ಲ. ಬೇರೆ ಯಾವ ಕೆಲಸವೂ ನನಗೆ ಗೊತ್ತಿಲ್ಲ. ನಮ್ಮ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ನಮ್ಮ ಧ್ವನಿಯನ್ನು ಕೇಳಲು ಈ ಜಗತ್ತಿನಲ್ಲಿ ಯಾರೂ ಇಲ್ಲ" ಎಂದು ಫ್ರೇಸ್ಟಾ ದುಃಖ ವ್ಯಕ್ತಪಡಿಸಿದ್ದಾಳೆ.
2021ರ ಆಗಸ್ಟ್‌ನಲ್ಲಿ ತಾಲಿಬಾನ್ ಆಫ್ಘಾನಿಸ್ತಾನದ ಆಡಳಿತವನ್ನು ವಶಪಡಿಸಿಕೊಂಡಾಗಿನಿಂದ, ಮಹಿಳೆಯರಿಗೆ ಹೆಚ್ಚಿನ ಉದ್ಯೋಗಗಳನ್ನು ನಿಷೇಧಿಸಲಾಗಿದೆ ಮತ್ತು ಹೆಣ್ಣುಮಕ್ಕಳಿಗೆ ಪ್ರೌಢಶಾಲೆ ಮತ್ತು ವಿಶ್ವವಿದ್ಯಾಲಯ ಶಿಕ್ಷಣವನ್ನು ತಡೆಯಲಾಗಿದೆ. ಮಾನವ ಹಕ್ಕುಗಳ ಸಂಘಟನೆಗಳ ಪ್ರಕಾರ, ತಾಲಿಬಾನ್ ಲಿಂಗ ಆಧಾರಿತ ಒಂದು ರೀತಿಯ ವಿಭಜನೆಯ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇದರಿಂದ ಮಹಿಳೆಯರು ಸಾರ್ವಜನಿಕ ಜೀವನದಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ. ಬ್ಯೂಟಿ ಪಾರ್ಲರ್, ಜಿಮ್ ಮತ್ತು ಇತರ ಸಾಮಾಜಿಕ ಸ್ಥಳಗಳನ್ನು ಮುಚ್ಚುವುದರ ಜತೆಗೆ, ಮಹಿಳೆಯರಿಗೆ ಸಾರ್ವಜನಿಕ ಉದ್ಯಾನವನಗಳಲ್ಲಿ ವಾಕ್, ಪುರುಷರಿಲ್ಲದೆ ಪ್ರಯಾಣ, ಸಂಪೂರ್ಣವಾಗಿ ದೇಹವನ್ನು ಮುಚ್ಚಿಕೊಳ್ಳದಿರುವುದು ಮತ್ತು ಸಾರ್ವಜನಿಕವಾಗಿ ಧ್ವನಿಯನ್ನು ಎತ್ತುವುದನ್ನು ನಿಷೇಧಿಸಲಾಗಿದೆ.