ಕಠ್ಮಂಡು: ಹಲವು ದಿನಗಳ ಜೆನ್ ಝೀ (ಯುವ ಸಮುದಾಯ) ಪ್ರತಿಭಟನೆಗೆ ಸಿಲುಕಿ ನಲುಗಿದ ನೇಪಾಳ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 72 ವರ್ಷದ ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕುರ್ಕಿ (Sushila Karki) ಶುಕ್ರವಾರ (ಸೆಪ್ಟೆಂಬರ್ 12) ರಾತ್ರಿ ಮಧ್ಯಂತರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೀಗ ಅವರು ಪ್ರತಿಭಟನೆಯಲ್ಲಿ ಮರಣ ಹೊಂದಿದವರನ್ನು ಹುತಾತ್ಮರು ಎಂದು ಘೋಷಿಸಿದ್ದಾರೆ.
ಪ್ರಧಾನಿ ಹುದ್ದೆ ಸ್ವೀಕರಿಸಿದ ಬಳಿಕ ಮೊದಲ ಬಾರಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸುಶೀಲಾ ಕುರ್ಕಿ, ಸಂತ್ರಸ್ತರ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದರು. ಜತೆಗೆ ಪ್ರತಿಭಟನೆಯಲ್ಲಿ ಮೃತಪಟ್ಟವರ ತ್ಯಾಗವನ್ನು ಸ್ಮರಿಸುವುದಾಗಿಯೂ ತಿಳಿಸಿದರು. ಹೋರಾಟದಲ್ಲಿ ಸುಮಾರು 51 ಮಂದಿ ಮೃತಪಟ್ಟು, 1,300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಈ ಸುದ್ದಿಯನ್ನೂ ಓದಿ: Plane Hijack: ಬಾಲಿವುಡ್ ತಾರೆಯ ಸಹಿತ ವಿಮಾನ ಅಪಹರಿಸಿದ್ದರಂತೆ ನೇಪಾಳದ ನೂತನ ಪ್ರಧಾನಿಯ ಪತಿ
ʼʼಪ್ರತಿಭಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ಸಂತಾಪ ಸೂಚಿಸುತ್ತಿದ್ದೇನೆ. ಅದರಲ್ಲಿಯೂ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಮೃತಪಟ್ಟ ಸುದ್ದಿ ಕೇಳಿ ನೋವಾಗಿದೆ. ಜೆನ್ ಝೀ ಹೋರಾಟವನ್ನು ನಿಯಂತ್ರಿಸುವ ವೇಳೆ ಮೃತಪಟ್ಟವರನ್ನು ಹುತಾತ್ಮರೆಂದು ಪರಿಗಣಿಸಲಾಗುತ್ತದೆ. ಅವರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಗಾಯಗೊಂಡವರಿಗೂ ಸರ್ಕಾರ ನೆರವಿನ ಹಸ್ತ ಚಾಚಲಿದೆ. ವಿಧ್ವಂಸಕ ಘಟನೆಗಳಲ್ಲಿ ಭಾಗಿಯಾದವರ ವಿರುದ್ಧ ತನಿಖೆ ಮಾಡಲಾಗುತ್ತದೆ" ಎಂದು ತಿಳಿಸಿದರು.
"ನನ್ನ ತಂಡ ಮತ್ತು ನಾನು ಅಧಿಕಾರ ಚಲಾಯಿಸಲು ಬಂದಿಲ್ಲ. ನಾವು 6 ತಿಂಗಳಿಗಿಂತ ಹೆಚ್ಚು ಕಾಲ ಇರುವುದಿಲ್ಲ. ಹೊಸ ಸಂಸತ್ತಿಗೆ ಜವಾಬ್ದಾರಿಯನ್ನು ಹಸ್ತಾಂತರಿಸುತ್ತೇವೆ. ನಿಮ್ಮ ಬೆಂಬಲವಿಲ್ಲದೆ ನಾವು ಯಶಸ್ವಿಯಾಗುವುದಿಲ್ಲ" ಎಂದು ಕರ್ಕಿ ರಾಷ್ಟ್ರವನ್ನುದ್ದೇಶಿಸಿ ಹೇಳಿದರು. ನೇಪಾಳದ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಪರಿಹರಿಸಲು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವಂತೆ ಅವರು ಕರೆ ನೀಡಿದರು. 26 ಸಾಮಾಜಿಕ ಮಾಧ್ಯಮ ನಿಷೇಧದ ನಂತರ ಸೆಪ್ಟೆಂಬರ್ 8ರಂದು ಕಠ್ಮಂಡುವಿನಲ್ಲಿ ಭುಗಿಲೆದ್ದ ಪ್ರತಿಭಟನೆ ಬಳಿಕ ಭ್ರಷ್ಟಾಚಾರದ ವಿರುದ್ಧ ಧ್ವನಿಯಾಗಿ ಬದಲಾಗಿತ್ತು. ಬಳಿಕ ಕೆ.ಪಿ. ಶರ್ಮಾ ಒಲಿ ನೇತೃತ್ವದ ಸರ್ಕಾರ ಪತನವಾಗಿತ್ತು. ಮುಂದಿನ ವರ್ಷ ಮಾರ್ಚ್‌ನಲ್ಲಿ ಸಂಸತ್ ಚುನಾವಣೆ ನಡೆಯಿದೆ.
ಮೋದಿ ಅಭಿನಂದನೆ
ನ್ಯಾ. ಸುಶೀಲಾಕುರ್ಕಿ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ʼʼನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಸುಶೀಲಾ ಕರ್ಕಿ ಅವರಿಗೆ ಅಭಿನಂದನೆಗಳು. ನೇಪಾಳದ ಸಹೋದರ ಸಹೋದರಿಯರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತ ಸಂಪೂರ್ಣ ಬದ್ಧವಾಗಿದೆʼʼ ಎಂದು ತಿಳಿಸಿದ್ದಾರೆ.
ಜನರ ನಿರೀಕ್ಷೆ
ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವು ಹೊಂದಿರುವ ಸುಶೀಲಾ ಆಡಳಿತದ ಮೇಲೆ ಯುವ ಜನತೆ ಅಪಾರ ನಿರೀಕ್ಷೆ ಹೊಂದಿದ್ದಾರೆ. ನೇಪಾಳ ಜನರು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಎದುರು ನೋಡುತ್ತಿದ್ದಾರೆ. ಅಲ್ಲದೆ ಭ್ರಷ್ಟಾಚಾರದ ಕಳಂಕ ಹೊತ್ತುಕೊಂಡಿರುವ ಮಾಜಿ ಪ್ರಧಾನಿಗಳು ಸೇರಿ ಎಲ್ಲ ಸಚಿವರ ವಿರುದ್ಧ ತನಿಖೆ ನಡೆಸಬೇಕು, ನೇಪಾಳವನ್ನು ಭ್ರಷ್ಟಾಚಾರವನ್ನು ಮುಕ್ತವಾಗಿಸಬೇಕು ಎಂಬುದು ಯುವ ಜನತೆಯ ಆಶಯ.