ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎರಡು ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ ನಿಖತ್ ಜರೀನ್‌ಗೆ ಕತಾರ್‌ನಲ್ಲಿ ಸನ್ಮಾನ; ಕರ್ನಾಟಕ ಸಂಘದ ಪ್ರತಿನಿಧಿಗಳು ಭಾಗಿ

Nikhat Zareen: ಭಾರತೀಯ ಕ್ರೀಡಾ ಕೇಂದ್ರ ಸಹಯೋಗ, ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಹಾಗೂ ಕತಾರ್ ಪ್ರೀಮಿಯರ್ ಲೀಗ್, ತೆಲುಗು ಸ್ಪೋರ್ಟ್ಸ್ ಅಸೋಸಿಯೇಷನ್ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಬಾಕ್ಸರ್‌ ನಿಖತ್ ಜರೀನ್ ಅವರನ್ನು ಸನ್ಮಾನಿಸಲಾಗಿದೆ.

ದೋಹಾ, (ಕತಾರ್): ಎರಡು ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತೆ ನಿಖತ್ ಜರೀನ್ ಅವರ ಗೌರವ ಸಮಾರಂಭ ಹಾಗೂ ಸಮುದಾಯದೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘ ಕತಾರ್‌ನ ಪ್ರತಿನಿಧಿಗಳು ಭಾಗವಹಿಸಿದರು. ಭಾರತೀಯ ಸಾಂಸ್ಕೃತಿಕ ಕೇಂದ್ರ (ICC)ನ ಅಶೋಕ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕತಾರ್‌ನ ಭಾರತೀಯ ಸಮುದಾಯದ ಹಲವು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕತಾರ್ ಪ್ರೀಮಿಯರ್ ಲೀಗ್ ಮತ್ತು ತೆಲುಗು ಸ್ಪೋರ್ಟ್ಸ್ ಅಸೋಸಿಯೇಷನ್ ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮವು, ಭಾರತೀಯ ಕ್ರೀಡಾ ಕೇಂದ್ರದ (ISC) ಸಹಯೋಗದಲ್ಲಿ ಹಾಗೂ ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ನಡೆಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಖತ್ ಜರೀನ್ ಸಾಧಿಸಿರುವ ಗಮನಾರ್ಹ ಕ್ರೀಡಾ ಸಾಧನೆಗಳನ್ನು ಗೌರವಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

Nikhat Zareen  (1)

ಕಾರ್ಯಕ್ರಮಕ್ಕೆ ಕತಾರ್‌ನಲ್ಲಿರುವ ಭಾರತದ ರಾಯಭಾರಿ ಎಚ್.ಇ. ಡಾ. ಕೆ. ಶ್ರೀಕರ್ ರೆಡ್ಡಿ ಕೊಪ್ಪುಲಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ವಿವಿಧ ಭಾರತೀಯ ಸಮುದಾಯ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ಸಂಘ ಕತಾರ್‌ನ ನಿಯೋಗವು ಅಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ನೇತೃತ್ವದಲ್ಲಿ, ನಿರ್ವಹಣಾ ಸಮಿತಿ ಸದಸ್ಯರೊಂದಿಗೆ ನಿಖತ್ ಜರೀನ್ ಅವರನ್ನು ಸಾಂಪ್ರದಾಯಿಕ ಗೌರವದೊಂದಿಗೆ ಸನ್ಮಾನಿಸಿ, ಕತಾರ್‌ನ ಕನ್ನಡ ಸಮುದಾಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿತು. ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಕೊಡುಗೆ, ಪರಿಶ್ರಮ ಮತ್ತು ಸಾಧನೆಗಳನ್ನು ನಿಯೋಗವು ಶ್ಲಾಘಿಸಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ನಿಖತ್ ಜರೀನ್ ಅವರ ಗಮನಾರ್ಹ ಸಾಧನೆಗಳು ಹಾಗೂ ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಕೊಂಡಾಡಿದರು. ಅವರ ಕ್ರೀಡಾ ಪಯಣ ಮತ್ತು ಸಮರ್ಪಣಾ ಮನೋಭಾವವು ದೇಶದ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಂತ್ಯದಲ್ಲಿ ನಡೆದ ಸಂವಾದ ಹಾಗೂ ಮೀಟ್-ಅಂಡ್-ಗ್ರೀಟ್ ಕಾರ್ಯಕ್ರಮದಲ್ಲಿ ಸಮುದಾಯದ ಸದಸ್ಯರು ಮತ್ತು ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ವಿಶ್ವ ಚಾಂಪಿಯನ್ ನಿಖತ್ ಜರೀನ್ ಅವರೊಂದಿಗೆ ಸಂವಾದ ನಡೆಸಿ, ಅವರ ಸಾಧನೆಗಳಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಮುಂದಿನ ಕ್ರೀಡಾ ಪಯಣಕ್ಕೆ ಶುಭ ಹಾರೈಸಿದರು.