ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶಾಂತಿ ಮಾತುಕತೆಗಾಗಿ ಪಾಕಿಸ್ತಾನಕ್ಕೆ ಅಮೆರಿಕ ನಿಯೋಗ ಕಳಿಸಲ್ಲ ಎಂದ ಡೊನಾಲ್ಡ್‌ ಟ್ರಂಪ್‌; ಇರಾನ್‌ ಜತೆಗಿನ ಸಂಘರ್ಷ ಮತ್ತೊಂದು ಹಂತದತ್ತ

Donald Trump: ಇರಾನ್‌ ಜತೆಗಿನ ಶಾಂತಿ ಮಾತುಕತೆಗೆ ಪಾಕಿಸ್ತಾನಕ್ಕೆ ನಿಯೋಗ ಕಳುಹಿಸುವುದಿಲ್ಲ ಎನ್ನುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ವಿಭಿನ್ನ ನಡೆ ಪ್ರದರ್ಶಿಸಿದ್ದಾರೆ. ಯುದ್ಧವನ್ನು ಕೊನೆಗೊಳಿಸುವ ಕುರಿತಾದ ಮಾತುಕತೆಗಾಗಿ ಪಾಕಿಸ್ತಾನಕ್ಕೆ ತೆರಳದಂತೆ ತಮ್ಮ ದೇಶದ ನಿಯೋಗಕ್ಕೆ ಸೂಚಿಸಿರುವುದಾಗಿ ಟ್ರಂಪ್‌ ಹೇಳಿದ್ದಾರೆ.

ಡೊನಾಲ್ಡ್‌ ಟ್ರಂಪ್‌ (ಸಂಗ್ರಹ ಚಿತ್ರ)

ವಾಷಿಂಗ್ಟನ್‌, ಏ. 25: ಇರಾನ್‌ ಜತೆಗಿನ ಶಾಂತಿ ಮಾತುಕತೆಗೆ ಪಾಕಿಸ್ತಾನಕ್ಕೆ ನಿಯೋಗ ಕಳುಹಿಸುವುದಿಲ್ಲ ಎನ್ನುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತೊಮ್ಮೆ ಜಗತ್ತನ್ನು ಆತಂಕದ ಬಾಗಿಲಿಗೆ ತಂದು ಬಿಟ್ಟಿದ್ದಾರೆ (Iran-US War). ಜತೆಗೆ ಬೂದಿ ಮುಚ್ಚಿದ ಕೆಂಡದಂತಿರುವ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಸ್ಥಿತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಭೀತಿ ಮೂಡಿಸಿದ್ದಾರೆ. ಯುದ್ಧವನ್ನು ಕೊನೆಗೊಳಿಸುವ ಕುರಿತಾದ ಮಾತುಕತೆಗಾಗಿ ಪಾಕಿಸ್ತಾನಕ್ಕೆ ತೆರಳದಂತೆ ತಮ್ಮ ದೇಶದ ನಿಯೋಗಕ್ಕೆ ಸೂಚಿಸಿರುವುದಾಗಿ ಟ್ರಂಪ್‌ ಹೇಳಿದ್ದಾರೆ. ಈಗಾಗಲೇ ಇರಾನ್‌ ಅಧಿಕಾರಿಗಳು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ ತಲುಪಿದ್ದಾರೆ.

ಫಾಕ್ಸ್ ನ್ಯೂಸ್ ಪ್ರಕಾರ ನಿಯೋಗ ಪಾಕಿಸ್ತಾನಕ್ಕೆ ಹೊರಡಲು ಸಿದ್ಧರಾಗುತ್ತಿರುವಾಗ ಟ್ರಂಪ್‌ ಮಧ್ಯ ಪ್ರವೇಶಿಸಿ ಕಾರ್ಯ ತಂತ್ರವನ್ನೇ ಬದಲಾಯಿಸಿದ್ದಾರೆ. ಪಾಕಿಸ್ತಾನಕ್ಕೆ ತೆರಳಬೇಡಿ ಎಂದ ಅವರು, ತಮ್ಮ ಅಧಿಕಾರಿಗಳು ಏನನ್ನೂ ಮಾತನಾಡದೆ ಕುಳಿತುಕೊಳ್ಳುವುದನ್ನು ನೋಡಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ.

ಶಾಂತಿ ಮಾತುಕತೆ ಬಗ್ಗೆ ಡೊನಾಲ್ಡ್‌ ಟ್ರಂಪ್‌ ನಿರ್ಧಾರ:



ಅದಾಗ್ಯೂ ಇಸ್ಲಾಮಾಬಾದ್‌ಗೆ ತೆರಳುವ ತಮ್ಮ ರಾಯಭಾರಿಗಳ ಪ್ರವಾಸವನ್ನು ರದ್ದುಗೊಳಿಸಿರುವುದಕ್ಕೆ ಇರಾನ್‌ನಲ್ಲಿ ಯುದ್ಧ ಪುನರಾರಂಭವಾಗುತ್ತದೆ ಎಂಬ ಅರ್ಥವಿಲ್ಲ ಎಂದೂ ಟ್ರಂಪ್ ಹೇಳಿದ್ದಾರೆ. ನಿಯೋಗದ ಪ್ರಯಾಣ ರದ್ದಾಗಿರುವುದರಿಂದ ಯುದ್ಧ ಪುನರಾರಂಭವಾಗುತ್ತದೆಯೇ ಎಂದು ಕೇಳಿದಾಗ, ಯುದ್ಧ ಆರಂಭಿಸುವ ಯೋಜನೆ ಸದ್ಯಕ್ಕಿಲ್ಲ ಎಂದಿದ್ದಾರೆ.

ಟ್ರಂಪ್‌ ಹೇಳಿದ್ದೇನು?

ʼʼಇರಾನ್‌ ಅಧಿಕಾರಿಗಳನ್ನು ಭೇಟಿ ಮಾಡಲು ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ತೆರಳಲು ಮುಂದಾದ ನಮ್ಮ ಪ್ರತಿನಿಧಿಗಳ ಪ್ರವಾಸವನ್ನು ರದ್ದುಗೊಳಿಸಿದ್ದೇನೆ. ಈ ಪ್ರಯಾಣದಿಂದ ಸಮಯ ವ್ಯರ್ಥ. ಇದರ ಜತೆಗೆ ಅವರ (ಇರಾನ್‌) ನಾಯಕತ್ವದಲ್ಲಿ ಗೊಂದಲವಿದೆ. ಅಲ್ಲದೆ ನಮ್ಮಲ್ಲಿ ಎಲ್ಲ ಕಾರ್ಡ್‌ಗಳಿವೆ (ಅಧಿಕಾರ). ಅವರ ಬಳಿ ಯಾವುದೂ ಇಲ್ಲ. ಅವರು ಮಾತನಾಡಲು ಬಯಸಿದರೆ ಕರೆ ಮಾಡಲಿ" ಎಂದು ಟ್ರಂಪ್‌ ಟ್ರೂತ್ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.

ಹತ್ಯೆಯಾಗಿ 7 ವಾರ ಕಳೆದರೂ ಅಯತೊಲ್ಲಾ ಅಲಿ ಖಮೇನಿ ಅಂತ್ಯ ಸಂಸ್ಕಾರ ನಡೆದಿಲ್ಲ

ಅಮೆರಿಕ ಮತ್ತು ಇರಾನ್‌ ನಡುವೆ 2ನೇ ಸುತ್ತಿನ ಶಾಂತಿ ಮಾತುಕತೆ ನಡೆಯುವ ಮುನ್ನವೇ ಈ ಬೆಳವಣಿಗೆ ಸಂಭವಿಸಿದೆ. ಇದಕ್ಕೂ ಮುನ್ನ ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ನೇತೃತ್ವದ ನಿಯೋಗವು ಪಾಕಿಸ್ತಾನ ನಾಯಕರೊಂದಿಗೆ ಮಾತುಕತೆ ನಡೆಸಲು ಇಸ್ಲಾಮಾಬಾದ್‌ಗೆ ಭೇಟಿ ನೀಡಿತು. ತಮ್ಮ ಒಂದು ದಿನದ ಭೇಟಿಯ ಸಂದರ್ಭದಲ್ಲಿ, ಅರಗ್ಚಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ವಿದೇಶಾಂಗ ಸಚಿವ ಇಶಾಕ್ ದಾರ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಭೇಟಿಯಾದರು. ಫೆಬ್ರವರಿ 28ರಂದು ಪ್ರಾರಂಭವಾದ ಯುದ್ಧವನ್ನು ಕೊನೆಗೊಳಿಸುವ ವಿಚಾರದ ಬಗ್ಗೆ ನಾಯಕರು ಮಾತುಕತೆ ನಡೆಸಿದರು.

ಯಾವುದೇ ಒಪ್ಪಂದವು ಜಾರಿಯಾಗಬೇಕಾದರೆ ಇರಾನ್ ತನ್ನ ಪುಷ್ಟೀಕರಿಸಿದ ಯುರೇನಿಯಂ ತ್ಯಜಿಸಬೇಕು ಮತ್ತು ಹೊರ್ಮುಜ್ ಜಲಸಂಧಿಯ ಮೂಲಕ ತೈಲದ ಮುಕ್ತ ಹರಿವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಡೊನಾಲ್ಡ್‌ ಟ್ರಂಪ್ ದೃಢವಾಗಿ ಹೇಳಿದ್ದಾರೆ. ಒಪ್ಪಂದಕ್ಕೆ ಬರುವವರೆಗೆ ಅಮೆರಿಕ ಸೇನೆಯು ಇರಾನಿನ ಬಂದರಿನ ಮೇಲಿನ ದಿಗ್ಬಂಧನವನ್ನು ಮುಂದುವರಿಸುತ್ತದೆ ಎಂದು ಅವರು ಪುನರುಚ್ಚರಿಸಿದ್ದಾರೆ. ಸದ್ಯ ಭಾರತವೂ ಸೇರಿದಂತೆ ಇಡೀ ಜಗತ್ತೇ ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಯನ್ನು ಗಮನಿಸುತ್ತಿದೆ.

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author