ಲಂಡನ್, ಆ. 8: ಮದ್ಯದ ದೊರೆ, ಆರ್ಸಿಬಿ ಫ್ರಾಂಚೈಸಿಯ ಮಾಜಿ ಮಾಲಕ ವಿಜಯ್ ಮಲ್ಯ (Vijay Mallya) ಅವರ ಪುತ್ರ ಸಿದ್ಧಾರ್ಥ್ ಮಲ್ಯ (Siddharth Mallya) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 2024ರಲ್ಲಿ ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಅವರು ಇದೀಗ ತಾವು ಮದ್ಯ ತ್ಯಜಿಸಿದ 8ನೇ ವಾರ್ಷಿಕೋತ್ಸವ ಆಚರಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರು ಹೇಳಿಕೊಂಡಿದ್ದು, ವಿಡಿಯೊ ವೈರಲ್ ಆಗಿದೆ (Viral Video). ಮದ್ಯದ ದೊರೆಯ ಮಗನೇ ಮದ್ಯ ತ್ಯಜಿಸಿದ್ದಾನೆ ಎಂದು ಹಲವರು ಕಾಲೆಳೆದಿದ್ದಾರೆ.
ಸಿದ್ಧಾರ್ಥ್ ಮಲ್ಯ ಮದ್ಯ ಮುಕ್ತ ಜೀವನದ 8ನೇ ವಾರ್ಷಿಕೋತ್ಸವ ಆಚರಿಸಿದ್ದು, ಈ ವಿಚಾರವನ್ನು ಅವರೇ ಖುಷಿಯಿಂದ ತಿಳಿಸಿದ್ದಾರೆ. 39 ವರ್ಷದ ಅವರು "ತೀವ್ರ ಆತಂಕದ ಮನಸ್ಥಿತಿಯಿಂದ ಹೊರ ಬರಲು ಮತ್ತು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಲುʼʼ ಮದ್ಯಪಾನವನ್ನು ತ್ಯಜಿಸಿದ್ದಾಗಿ ತಿಳಿಸಿದ್ದಾರೆ.
ಸಿದ್ಧಾರ್ಥ್ ಮಲ್ಯ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್:
ಆಗಸ್ಟ್ 6ರಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿಈ ವಿಡಿಯೊ ಹಂಚಿಕೊಂಡಿದ್ದಾರೆ. ʼʼನಾನು ಮದ್ಯಪಾನ ತ್ಯಜಿಸಿ 8 ವರ್ಷವಾಯ್ತು. ನಿಮ್ಮ ಜೀವನದಲ್ಲಿ ನೀವು ಏನನ್ನಾದರೂ ಬದಲಾಯಿಸಲು ಬಯಸಿದರೆ, ಅದನ್ನು ಮಾಡುವ ಶಕ್ತಿ ನಿಮಗಿದೆ ಎಂಬುದನ್ನು ನೆನಪಿಡಿ. ನೀವು ಬದಲಾವಣೆಯನ್ನು ಸಾಕಷ್ಟು ಶಕ್ತವಾಗಿ ಬಯಸಬೇಕುʼʼ ಎಂದು ಕ್ಯಾಪ್ಶನ್ ನೀಡಿದ್ದಾರೆ. ವಿಡಿಯೊದಲ್ಲಿ ಅವರು ವೈಯಕ್ತಿಕ ಸಬಲೀಕರಣ, ಹೊಣೆಗಾರಿಕೆ ಮತ್ತು ಬಾಹ್ಯ ಅಭಿಪ್ರಾಯಗಳಿಗಿಂತ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಮಹತ್ವವನ್ನು ಒತ್ತಿ ಹೇಳಿದ್ದಾರೆ.
"ಈಗಲೇ ಭಾರತಕ್ಕೆ ಮರಳಿ"; ವಿಜಯ್ ಮಲ್ಯಗೆ ಕೊನೆಯ ಎಚ್ಚರಿಕೆ ನೀಡಿದ ಬಾಂಬೆ ಹೈಕೋರ್ಟ್
"ನಾನು ಮದ್ಯ ವ್ಯಸನಿಯೇನೂ ಆಗಿರಲಿಲ್ಲ. ನನಗೆ ಒಸಿಡಿ ಇತ್ತು. ಆದ್ದರಿಂದ ನಾನು ಸ್ವಲ್ಪ ಮದ್ಯ ಸೇವಿಸಿದರೂ ಮರುದಿನ ಆತಂಕ ಗರಿಷ್ಟ ಮಟ್ಟದಲ್ಲಿರುತ್ತಿತ್ತು" ಎಂದು ತಿಳಿಸಿದ್ದಾರೆ. ಮದ್ಯಪಾನ ನಮ್ಮಲ್ಲಿರುವ ಎಲ್ಲ ದನಾತ್ಮಕ ಅಂಶಗಳನ್ನು ನಾಶಪಡಿಸುತ್ತದೆ ಎಂದೂ ವಿವರಿಸಿದ್ದಾರೆ. "ಆದ್ದರಿಂದ, ಮದ್ಯಪಾನ ನಾನು ತ್ಯಜಿಸಿದೆ. 8 ವರ್ಷಗಳಿಂದ ಬಹಳಷ್ಟು ಜನರು ನನ್ನನ್ನು ಸಂಪರ್ಕಿಸಿದ್ದಾರೆ. ನನ್ನ ಕಥೆಯಿಂದ ಅವರು ತುಂಬಾ ಪ್ರೇರಿತರಾಗಿದ್ದಾರೆ ಎಂದು ಹೇಳಿದ್ದಾರೆ. ನೀವು ಬಯಸುವ ಯಾವುದೇ ಬದಲಾವಣೆಗಳನ್ನು ಮಾಡಲು ನಿಮಗೆ ಶಕ್ತಿ ಇದೆ" ಎಂಬ ಸಂದೇಶ ರವಾನಿಸಿದ್ದಾರೆ. ಸದ್ಯ ಅವರ ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.
ಚಿತ್ರಗಳಲ್ಲೂ ನಟಿಸಿದ್ದ ಸಿದ್ಧಾರ್ಥ್
ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿದ ಸಿದ್ಧಾರ್ಥ್ ಮಲ್ಯ ಲಂಡನ್‌ನಲ್ಲಿ ಶಿಕ್ಷಣ ಪೂರೈಸಿದರು. ಪದವಿ ಪಡೆದ ನಂತರ ಅವರು ಮಾಡೆಲ್ ಮತ್ತು ನಟನಾಗಿ ವೃತ್ತಿ ಜೀವನ ಆರಂಭಿಸಿದರು. ʼಬ್ರಾಹ್ಮಣ ನಮನ್ʼ (Brahman Naman), ʼಬೆಸ್ಟ್ ಫೇಕ್ ಫ್ರೆಂಡ್ಸ್ʼ (Best Fake Friends) ಮುಂತಾದ ಚಿತ್ರಗಳಲ್ಲಿ ನಟಿಸಿದರು. ಬಳಿಕ ಅಭಿನಯದಿಂದ ದೂರ ಸರಿದರು.
ಲಂಡನ್‌ನಲ್ಲಿ ಅದ್ದೂರಿ ಪಾರ್ಟಿ; ಒಟ್ಟಿಗೆ ಹಾಡು ಹಾಡಿದ ವಿಜಯ್ ಮಲ್ಯ-ಲಲಿತ್ ಮೋದಿ
ಕೆಲವು ವರ್ಷಗಳ ಹಿಂದೆ ಬಾಲಿವುಡ್ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್ ಮಲ್ಯ ಡೇಟಿಂಗ್ ನಡೆಸುತ್ತಿದ್ದರು. ಒಂದೊಮ್ಮೆ ಇಬ್ಬರು ಪಂದ್ಯ ವೀಕ್ಷಿಸುತ್ತಿರುವಾಗಲೇ ಪರಸ್ಪರ ಚುಂಬಿಸಿ ಸದ್ದು ಮಾಡಿದ್ದರು. ಅದಾಗ್ಯೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಲ್ಲೂ ಬಾಯ್ಬಿಟ್ಟಿರಲಿಲ್ಲ. ಬಳಿಕ ಕಾರಣಾಂತರಗಳಿಂದ ಈ ಜೋಡಿ ಬೇರ್ಪಟ್ಟಿತು. ದೀಪಿಕಾ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿ ರಣವೀರ್ ಸಿಂಗ್ ಜತೆ ಸಪ್ತಪದಿ ತುಳಿದರು. ಇತ್ತ ಸಿದ್ಧಾರ್ಥ್ ತಂದೆ ಜತೆಗೆ ಲಂಡನ್‌ಗೆ ಹಾರಿ ಅಲ್ಲೇ ನೆಲೆಸಿದರು. ಬ್ರೇಕಪ್ ಆದ ಆರಂಭದಲ್ಲಿ ಸಿದ್ಧಾರ್ಥ್ ಸನ್ಯಾಸತ್ವ ಸ್ವೀಕರಿಸುತ್ತಾರೆ ಎಂಬ ಸುದ್ದಿ ಹರಡಿತ್ತು. ಲಂಡನ್‌ಗೆ ಪರಾರಿಯಾದ ಬಳಿಕ ಸಿದ್ದಾರ್ಥ್ ಮತ್ತು ಜಾಸ್ಮಿನ್ ಆತ್ಮೀಯರಾಗಿದ್ದರು. 2 ವರ್ಷಗಳ ಹಿಂದೆ ಮದುವೆಯಾದರು.
ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.