ವಾಷಿಂಗ್ಟನ್: ಹಿಂದುಗಳು (Hindu), ಸಿಖ್ಖರು (Sikhs) ಮತ್ತು ಕ್ರಿಶ್ಚಿಯನ್ನರು (Christians) ಸೇರಿದಂತೆ ಪಾಕಿಸ್ತಾನದಲ್ಲಿ (Pakistan) ಅಲ್ಪಸಂಖ್ಯಾತ ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ (Atrocities On Minority Girls) ಹೆಚ್ಚಳವಾಗಿದೆ ಎಂದು ಅಮೆರಿಕದ ಗ್ಲೋಬಲ್ ಹಿಂದು ದೇವಾಲಯ ಜಾಲ (Global Hindu Temple Network) ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ. ವಿಶ್ವದ ಎರಡು ಪ್ರಮುಖ ಸಂಸ್ಥೆಗಳಾದ ವಿಶ್ವ ಬ್ಯಾಂಕ್ (World bank) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಗಳೊಂದಿಗೆ (International Monetary Fund) ವ್ಯವಹಾರ ನಡೆಸುತ್ತಿರುವ ಪಾಕಿಸ್ತಾನ ತನ್ನದೇ ಘೋಷಿತ ಮಾರ್ಗಸೂಚಿಗಳನ್ನು ಉಲ್ಲಂಘಿಸಿವೆ ಎಂದು ವರದಿಯಲ್ಲಿ ತಿಳಿಸಿದೆ.
ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳ ಅಪ್ರಾಪ್ತ ಬಾಲಕಿಯರು, ಮಹಿಳೆಯರು, ವಿಶೇಷವಾಗಿ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಸಿಖ್ಖರು ಅಪಹರಣ, ಬಲವಂತದ ಧಾರ್ಮಿಕ ಮತಾಂತರ ಮತ್ತು ಬಲವಂತದ ವಿವಾಹಕ್ಕೆ ಒಳಗಾಗುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅಲ್ಪಸಂಖ್ಯಾತ ಹುಡುಗಿಯರ ವಿರುದ್ಧದ ಲಿಂಗ ಹಿಂಸಾಚಾರಕ್ಕೆ ಸಂಬಂಧಿಸಿ ಪಾಕಿಸ್ತಾನದಲ್ಲಿ ವರ್ಷಕ್ಕೆ ಸರಿಸುಮಾರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ ಎಂದು ಯುಎನ್ ವಿಶೇಷ ವರದಿಗಾರರು, ಅಂತಾರಾಷ್ಟ್ರೀಯ ಎನ್‌ಜಿಒಗಳು ಮತ್ತು ಕೆಲವು ಸ್ಥಳೀಯ ಪಾಕಿಸ್ತಾನಿ ತಂಡಗಳು ಅಂದಾಜಿಸಿವೆ. ಇದಕ್ಕೆ ಸಂಬಂಧಿಸಿ ದೂರುಗಳನ್ನು ಸಲ್ಲಿಸಲು ವ್ಯವಸ್ಥಿತ ಅಡೆತಡೆಗಳು, ಪ್ರತೀಕಾರದ ಭಯ ಮತ್ತು ಪೊಲೀಸ್ ನಿಷ್ಕ್ರಿಯತೆಯು ಕಂಡು ಬಂದಿದೆ ಎಂದು ಹೇಳಲಾಗಿದೆ.
ಬಲವಂತದ ಮತಾಂತರಕ್ಕೆ ಸಂಬಂಧಿಸಿ ವರದಿ ಮಾಡಿದವರಿಗೆ ಧರ್ಮಗುರುಗಳಿಂದ ಶಿರಚ್ಛೇದನದ ಬೆದರಿಕೆಯು ಬಂದಿದೆ. ಇದರಲ್ಲಿ 15 ವರ್ಷದ ಹಿಂದೂ ಬಾಲಕಿ ಮೆಹಕ್ ಕುಮಾರಿಯ ಪ್ರಕರಣ ಕೂಡ ಸೇರಿದೆ.
2023ರ ಡಿಸೆಂಬರ್ 29ರಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ಕಾಳಜಿಯ ದೇಶ ಎಂದು ಮರುನಾಮಕರಣ ಮಾಡಿತ್ತು. ಇದರಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಗಳಲ್ಲಿ ದೇಶದ ಸಹಿಷ್ಣುತೆಯನ್ನು ಉಲ್ಲೇಖಿಸಲಾಗಿತ್ತು. ಬಲವಂತದ ಮತಾಂತರ, ವಿವಾಹಗಳು ಮತ್ತು ಅಲ್ಪಸಂಖ್ಯಾತ ಹುಡುಗಿಯರ ಅಪಹರಣಗಳು ಸೇರಿದಂತೆ ಇವುಗಳನ್ನು ಗಂಭೀರ ಪ್ರಕರಣವೆಂದು ಪರಿಗಣಿಸುವುದಾಗಿ ಹೇಳಿತ್ತು. ಇದಕ್ಕೆ ಸಂಬಂಧಿಸಿ 2025ರಲ್ಲಿ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಯುಎಸ್ ಆಯೋಗವು (USCIRF) ಪಾಕಿಸ್ತಾನಕ್ಕೆ ನೀಡಿರುವ ''ಕಾಳಜಿಯ ದೇಶ" ಎನ್ನುವ ಹೆಸರನ್ನು ಮತ್ತೊಮ್ಮೆ ಪರಿಶೀಲಿಸುವಿನಂತೆ ಒತ್ತಾಯಿಸಿತ್ತು. 2021ರ ಅನಂತರ ಜಾಗತಿಕ ಲಿಂಗ ಅಂತರ ಸೂಚ್ಯಂಕದಲ್ಲಿ 156ರಲ್ಲಿ 153ನೇ ಸ್ಥಾನ ಪಡೆದ ಪಾಕಿಸ್ತಾನ ವಿಶ್ವದಲ್ಲೇ ಮಹಿಳೆಯರಿಗೆ ನಾಲ್ಕನೇ ಅತ್ಯಂತ ಅಪಾಯಕಾರಿ ದೇಶವೆಂದು ಪರಿಗಣಿಸಲಾಗಿದೆ.
ಸಿಯಾಲ್‌ಕೋಟ್‌ನಲ್ಲಿ 14 ವರ್ಷದ, 15 ವರ್ಷದ ಕ್ರಿಶ್ಚಿಯನ್ ಹುಡುಗಿಯರ ಅಪಹರಣ, ಬಲವಂತದ ಮದುವೆ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಗ್ಲೋಬಲ್ ಫೋರಮ್ ಆಫ್ ಕಮ್ಯುನಿಟೀಸ್ ಡಿಸ್ಕ್ರಿಮೈನೇಟೆಡ್ ಆನ್ ವರ್ಕ್ ಆ್ಯಂಡ್ ಡಿಸೆಂಟ್ ಜೂನ್ 19ರಂದು ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಎತ್ತಿ ತೋರಿಸಿದೆ. ಇದರಲ್ಲಿ ಪಾಕಿಸ್ತಾನದ ಸಂಘರ್ ಜಿಲ್ಲೆಯ ಶಹದಾದ್‌ಪುರದಲ್ಲಿರುವ ಜಿಯಾ (22), ದಿಯಾ (20), ದಿಶಾ (16) ಮತ್ತು ಗಣೇಶ್ ಕುಮಾರ್ (14) ಎಂಬ ನಾಲ್ಕು ಹಿಂದೂ ಮಕ್ಕಳನ್ನು ಅಪಹರಿಸಿ ಅವರಲ್ಲಿ ಕಲ್ಮಾ ಪಠಣ ಮಾಡಿಸಿರುವುದರ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿತ್ತು. ಇದರ ಬಳಿಕ ಅವರ ಕುಟುಂಬ ಏನಾಯಿತು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಹೀಗೆ ದೇಶಾದ್ಯಂತ ಶೇ. 90ರಷ್ಟು ಪ್ರಕರಣಗಳು ಅಲ್ಪಸಂಖ್ಯಾತ ಹುಡುಗಿಯರು ಮತ್ತು ಹುಡುಗರ ಅಪಹರಣ, ಬಲವಂತದ ಮತಾಂತರ ಮತ್ತು ಶೋಷಣೆ ಸೇರಿದೆ.
ಇದನ್ನೂ ಓದಿ: Viral Video: 9 ತಿಂಗಳ ಮಗುವನ್ನು ಎತ್ತಿಕೊಂಡು ಡೇಂಜರಸ್ ಬೆಟ್ಟ ಹತ್ತಿದ ಜೋಡಿ; ನೆಟ್ಟಿಗರು ಫುಲ್ ಶಾಕ್!
ಗ್ಲೋಬಲ್ ಹಿಂದೂ ದೇವಾಲಯ ಜಾಲದ ವರದಿಯ ಪ್ರಕಾರ 2022- 25ರ ನಡುವೆ ಪಾಕಿಸ್ತಾನದಲ್ಲಿ 1,000ಕ್ಕೂ ಹೆಚ್ಚು ಧಾರ್ಮಿಕ ಅಲ್ಪಸಂಖ್ಯಾತ ಅಪ್ರಾಪ್ತ ಬಾಲಕಿಯರನ್ನು ಅಪಹರಿಸಲಾಗಿದೆ. ಇವರನ್ನು ಬಲವಂತವಾಗಿ ಮತಾಂತರಿಸಲಾಗಿದ್ದು, ಅಪರಿಚಿತರೊಂದಿಗೆ ಮದುವೆ ಮಾಡಿಸಲಾಗಿದೆ. ಕೆಲವರನ್ನು ಕಳ್ಳ ಸಾಗಣೆ ಮಾಡಲಾಗಿದೆ. ಹಿಂದೂ, ಕ್ರಿಶ್ಚಿಯನ್ ಸಿಖ್ ಕುಟುಂಬಗಳಲ್ಲಿ ಹೆಚ್ಚಿನವರ ಅಪಹರಣ ನಡೆದಿದೆ ಎಂದು ವರದಿ ತಿಳಿಸಿದೆ. ಅಲ್ಲದೇ ಪಾಕಿಸ್ತಾನಕ್ಕೆ ನೀಡುವ ಎಲ್ಲ ಸಾಲ ಸೌಲಭ್ಯಗಳಿಗೆ ಮುನ್ನ ಅಲ್ಲಿನ ಲಿಂಗ ನ್ಯಾಯವನ್ನು ಗುರುತಿಸಲು ಮತ್ತು ಟ್ರ್ಯಾಕ್ ಮಾಡಲು ಶಿಫಾರಸು ಮಾಡಿದೆ.