ದ್ವಂದ್ವವನಳಿದು ದಾಸೋಹಂ ಎಂದೆನಿಸಯ್ಯ
ದ್ವಂದ್ವವನಳಿದು ದಾಸೋಹಂ ಎಂದೆನಿಸಯ್ಯ
Vishwavani News
February 17, 2022
ಶರಣರ ದೃಷ್ಟಿಯಲ್ಲಿ ದಾಸೋಹವೆಂಬುದು ಸಮಾಜಸೇವೆ. ಇಂತಹ ದಾಸೋಹದಿಂದ ಸಿಗುವ ತೃಪ್ತಿ, ಸಂತೋಷ ಕೈಲಾಸದಲ್ಲೂ ಇಲ್ಲ ಎನ್ನುತ್ತಾರೆ ಶರಣರು.
ಶಾರದಾ ಕೌದಿ
ಸಮಾಜದ ಎಲ್ಲ ಆಯಾಮಗಳಿಗೆ ಸ್ಪಂದಿಸಿ ಕ್ರಾಂತಿಗೆ ನಾಂದಿ ಹಾಡಿದ ಕಾಲವೆಂದರೆ ಹನ್ನೆರಡನೆಯ ಶತಮಾನ. ಸಾಮಾಜಿಕ ಸಿದ್ಧಾಂತ ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಿದ ಕಾಲವದು.
ಸೋಹಂ ಎಂಬುದು ಅಂತರಂಗದ ಮದ, ಶಿವೋಹಂ ಎಂಬುದು ಬಹಿರಂಗದ ಮದ. ಈ ದ್ವಂದ್ವವನಳಿದು ದಾಸೋಹಂ ಎಂದೆನಿಸಯ್ಯ ಎಂದಿದ್ದಾರೆ ಅಲ್ಲಮ ಪ್ರಭುದೇವರು. ದಾಸೋಹದ ವ್ಯಾಪ್ತಿ ವಿಶಾಲವಾಗಿದೆ. ಅನ್ನದಾಸೋಹ, ಜ್ಞಾನ ದಾಸೋಹ, ಭಕ್ತಿ ದಾಸೋಹ. ೧೨ ನೇ ಶತಮಾನದ ಶರಣರು ದಾನಕ್ಕೆ ಬದಲಾಗಿ ದಾಸೋಹ ತತ್ವ ಬೆಳೆಸಿದರು.
ದಾನಕ್ಕಿಂತ ಶ್ರೇಷ್ಠ ದಾಸೋಹ
ದಾನಕ್ಕೆ ದೊಡ್ಡ ಇತಿಹಾಸವಿದೆ. ದಾನ ಧರ್ಮ ಮಾಡಬೇಕೆಂದು ಎಲ್ಲ ಧರ್ಮಗಳು ಹೇಳುತ್ತವೆ. ಅನ್ನದಾನ, ಕನ್ಯಾದಾನ, ಭೂದಾನ, ಗೋದಾನ, ದೀಪದಾನ ಹೀಗೆ ದಾನಗಳ ವ್ಯಾಪ್ತಿ ಕೂಡ ದೊಡ್ಡದೆ. ದಾನ ಸತ್ಪಾತ್ರರಿಗೆ, ಸತ್ಕಾರ್ಯಕ್ಕೆ ಸಲ್ಲಬೇಕು. ಫಲಾಪೇಕ್ಷೆ ಇಲ್ಲದೆ ದಾನ ಮಾಡಬೇಕು ಎಂದಿದ್ದಾರೆ.
ದಾನದಲ್ಲಿ ಕೊಡುವವನ ಕೈ ಮೇಲೆ, ದಾನ ತಗೆದುಕೊಳ್ಳುವವನ ಕೈ ಕೆಳಗೆ. ಕೊಟ್ಟವರು ದೊಡ್ಡವರು. ದಾನ ಪಡೆದವ ದಾಕ್ಷಿಣ್ಯಕ್ಕೆ ಬೀಳುವನು. ದಾನ ಶೌರ್ಯ ಮತ್ತು ಐಶ್ವರ್ಯಗಳ ಪ್ರತೀಕ. ಇಂತಹ ನಿರೀಕ್ಷೆ ದಾಸೋಹ ದಲ್ಲಿ ಇಲ್ಲ. ಇಂತಹ ಅಸಮಾನತೆ ನೀಗಿಸಲೆಂದೆ ಬಸವಣ್ಣನವರು ದಾಸೋಹ ತತ್ವ ತಂದರು. ಸಕಲಜೀವಾತ್ಮ ರಿಗೆ ಲೇಸನೆ ಬಯಸುವ ಜೀವನ ಸಿದ್ಧಾಂತವಿದು. ದಾನ ಮತ್ತು ದಾಸೋಹಕ್ಕೆ ಇರುವ ವ್ಯತ್ಯಾಸವೆಂದರೆ ಅಹಂ ನಿರಸನ. ದಾನಿಗಳಲ್ಲಿ ತಾನು ಕೊಟ್ಟದ್ದು ಎಂಬ ತೋರಿಕೆಯ ಭಾವ. ಈ ಅಹಂಭಾವ ಅಳಿದಾಗಲೇ ದಾಸೋಹ ಮಾಡಲು ಸಾಧ್ಯ.
ತನು, ಮನ, ಧನ ಈ ತ್ರಿವಿಧವನ್ನು ದಾಸೋಹಕ್ಕೆ ಅರ್ಪಿಸಿದರು ಶರಣರು. ದಾಸೋಹವನ್ನು ಕೂಡ ಸಮರ್ಪಣಾ ಭಾವದಿಂದ ಮಾಡಬೇಕು. ದಾಸೋಹ ಕ್ಕೆ ಧನವೇ ಬೇಕೆಂದೇನಿಲ್ಲ. ದಾಸೋಹ ತತ್ವದ ಮೂಲಕ ಶರಣರು ಬದುಕಿನ ಗೂಡಾರ್ಥ ಬಿಚ್ಚಿಟ್ಟಿzರೆ. ದಾಸೋಹ ಸಿದ್ಧಾಂತದಲ್ಲಿ ಧಾರ್ಮಿಕ ಭಾವ ಮತ್ತು ಆರ್ಥಿಕ ಚಿಂತನೆಯಿದೆ.
ದಾಸೋಹಕ್ಕೆ ಕೊಡುವ ಧನ ಸತ್ಯ, ಶುದ್ಧ ಕಾಯಕದಿಂದ ಬಂದಿರಬೇಕು. ಅಂದಿನ ಶರಣರಿಗೆ ಆಹಾರವೆಂಬುದು ಕೇವಲ ಪದಾರ್ಥವಾಗಿರಲಿಲ್ಲ. ಅದು ಸತ್ಯ ಶುದ್ಧ ಕಾಯಕದಿಂದ ಬಂದ ಪ್ರಸಾದವಾಗಿತ್ತು. ಕಾಯಕ, ದಾಸೋಹ ಒಂದೇ ನಾಣ್ಯದ ಎರಡು ಮುಖಗಳು. ಯಾರz ಸಂಪತ್ತನ್ನು ಬೇಡಿ ತಂದು ದಾಸೋಹ ಮಾಡುವದಲ್ಲ. ದೇಹ ಭಾವದಹಂಕಾರ ದಾಸೋಹ ಭಾವದೊಳಗಲ್ಲದೆ ಅಳಿಯದು.
ಶರಣರ ದೃಷ್ಟಿಯಲ್ಲಿ ದಾಸೋಹವೆಂಬುದು ಸಮಾಜಸೇವೆ. ಇಂತಹ ದಾಸೋಹದಿಂದ ಸಿಗುವ ತೃಪ್ತಿ ಸಂತೋಷ ಕೈಲಾಸದಲ್ಲೂ ಇಲ್ಲ ಎನ್ನುತ್ತಾರೆ ಶರಣರು. ಶರಣರ ದಾಸೋಹ ತತ್ವ ಸಮಾಜದಲ್ಲಿ ಸಮಾನತೆಯನ್ನು ತರುವ ಮಾರ್ಗ. ಆಹಾರ ಸಮಸ್ಯಗೆ ಹನ್ನೆರಡನೆಯ ಶತಮಾನದ ಶರಣರು ಕಂಡುಕೊಂಡ ಸುಲಭೋಪಾಯ.
ಲಕ್ಷ ಲಕ್ಷ ದಾಸೋಹ
ಕಲ್ಯಾಣದಲ್ಲಿ ಪ್ರತಿನಿತ್ಯ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರ ನಿತ್ಯ ದಾಸೋಹ ನಡೆಯುತ್ತಿದ್ದುದು ಇಂದಿನವರ ಕಲ್ಪನೆಗೂ ನಿಲುಕದು. ಈ ದಾಸೋಹದ ಮಹತಿಯನ್ನು ತಿಳಿದು ದೇಶದ ನಾನಾ ಭಾಗಗಳಿಂದ ಅರಸರಾದಿಯಾಗಿ ಎಲ್ಲಜನ ಕಲ್ಯಾಣದತ್ತ ನಡೆದರು. ಜನಪದರು ಬಸವಣ್ಣನವರ ದಾಸೋಹವನ್ನು ಹಾಡಿ ಹೊಗಳಿದ್ದಾರೆ.
ಉಂಡು ತೇಗಿತು ಲೋಕ
ಕೊಂಡಾಡಿ ಕಾಯಕವ ಕಂಡಕಂಡಲ್ಲಿ ದಾಸೋಹ ಶರಣೆ ನೀಲಲೋಚನೆಯಿಂದ ಕಲ್ಯಾಣದಲ್ಲಿ ದಾಸೋಹ ಬೆಳೆದು ಮಹಾಮನೆಯಾಯಿತು. ದಾಸೋಹವೆಂದರೆ ಕೇವಲ ಉಣ್ಣುವದು, ಉಣಿಸುವದಲ್ಲ. ಕಾಯಕದಿಂದ ಬಂದ ಗಳಿಕೆಯಲ್ಲಿ ತನ್ನ ಅವಶ್ಯಕತೆಗೆ ಮೀರಿದದ್ದನ್ನು ಸಮಾಜಕ್ಕೆ ದಾಸೋಹ ರೂಪದಲ್ಲಿ ಅರ್ಪಿಸುವದು. ಕಾಗೆ ಒಂದಗುಳ ಕಂಡರೆ ಕರೆಯದೆ ತನ್ನ ಬಳಗವನೆಲ್ಲ, ಕೋಳಿ ಒಂದು ಗುಟುಕ ಕಂಡರೆ ಕೂಗಿ ಕರೆಯದೆ ತನ್ನ ಕುಲವ! ಹೀಗೆ ಪಕ್ಷಿಗಳಲ್ಲಿರುವ ಹಂಚಿಕೊಂಡು ತಿನ್ನುವ ಬುದ್ಧಿ ಮಾನವರಲ್ಲಿ ಬರಬೇಕೆಂಬ ಆಶೆಯಿಂದ ದಾಸೋಹವೆಂಬ ಸಾಮಾಜಿಕ ಸಿದ್ಧಾಂತವನ್ನು ಸಮಾಜಕ್ಕೆ ನೀಡಿದರು ಬಸವಣ್ಣನವರು.
ಹೆಚ್ಚು ಧಾನ್ಯ ಬೇಕಿಲ್ಲ
ಅತಿ ಆಸೆ ಸಂಗ್ರಹಕ್ಕೆ ಕಾರಣ. ದಾಸೋಹಕ್ಕೆಂದು ದಿನಕ್ಕಿಂತ ಹೆಚ್ಚಿನ ಅಕ್ಕಿಯನ್ನು ಆಯ್ದು ತಂದ ಗಂಡನನ್ನು ‘ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ, ಈಸಕ್ಕಿ ಆಸೆ ನಮಗೇಕೆ, ಈಶ ನೊಪ್ಪ’ ಎಂದು ಆಯ್ದಕ್ಕಿ ಲಕ್ಕಮ್ಮ ಗಂಡನನ್ನು ಎಚ್ಚರಿಸುವ ಪರಿ ಇಂದಿನ ಸಮಾಜಕ್ಕೆ ನೀಡಿದ ಎಚ್ಚರದಂತಿದೆ.
ಕಾಯಕದಿಂದ ಬಂದ ಕ್ಯಾರೆಸೊಪ್ಪಾದರು ಸರಿ ಅದು ದಾಸೋಹಕ್ಕೆ ಯೋಗ್ಯ. ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕೆ ಮಾಡೆನು, ನಿಮ್ಮ ಸೊಮ್ಮುನಿಮಗೆ ಎನ್ನುತ್ತಾರೆ ಶರಣರು. ಅಂದು ದಾಸೋಹದಿಂದ, ಸಹಭೋಜನದಿಂದ ನಿರ್ಗತಿಕರು ಸ್ವಾಭಿಮಾನದಿಂದ ಬದುಕಿದರು.
ಸದಾಚಾರ
ದಾಸೋಹ ತನಗೆ ಹೊಸ ಬದುಕು ನೀಡಿತೆಂದ ಶರಣ ಮಂಚಣ್ಣ, ದಾಸೋವೆಂಬುದನ್ನರಿಯದೆ ತನ್ನ ವೇಷ ಹುಸಿಯಾಗಿತ್ತು. ಅರಿತ ಮೇಲೆ ದಾಸೋಹವೆ ತನಗೆ ಹೊಸದಾರಿ ತೋರಿತೆಂದು ಎನ್ನ ನಿಮ್ಮ ದಾಸೋಹದ ದಾಸನ ಮಾಡಿಸಯ್ಯ ಎಂದಿzರೆ. ದಾಸೋಹ ಮಾಡುವವರು ಸದಾಚಾರಿಗಳು ಸದ್ಭಕ್ತರು ಆಗಿರಬೇಕು. ಆಯ್ದಕ್ಕಿ ಲಕ್ಕಮ್ಮ ‘ಕಾಯಕ ದಾಸೋಹಗಳೆರಡು ಕೂಡಿದಲ್ಲಿ ಅದೇ ಶಿವಜೀವೈಕ್ಯವು’ ಎಂದಿರುವಳು. ಅಂದರೆ ದಾಸೋಹದಿಂದಲೆ ದೇವನೊಲುಮೆ ಸಾಧ್ಯ. ಸಮುದಾಯದ ಕೆಲಸ ಮಾಡಿದಾಗ ಶಿವನ ಕರುಣೆ ಸಾಧ್ಯ ದಾಸೋಹದಲ್ಲಿ ದಾಸ್ಯತ್ವವಿಲ್ಲ.
ದಾಸೋಹದಲ್ಲಿ ಹಮ್ಮು ಬಿಮ್ಮು ಎಂಬುದಿಲ್ಲ. ದಾಸೋಹ ತತ್ವವನ್ನು ಹಲವರು ಬಿಡಿಸಿಟ್ಟಿದ್ದಾರೆ. ಕೊಟ್ಟು ಕುದಿಯಲಿ ಬೇಡ ಕೊಟ್ಟುಳಿಕೊಳ್ಳಬೇಡ
ಕೊಟ್ಟು ನಾ ಕೆಟ್ಟೆನೆನಬೇಡ | ಶಿವನಲ್ಲಿ | ಬುತ್ತಿ ಕಟ್ಟಿಹುದು ಸರ್ವಜ್ಞ ದಾಸೋಹದಿಂದ ವಿಶ್ವಪ್ರೇಮ ಹುಟ್ಟುತ್ತದೆ. ಅದು ಅಂತರಂಗದ ಭಕ್ತಿ. ದಾಸೋಹ ಜೀವನದ ಮೌಲ್ಯ ಹೆಚ್ಚಿಸುವದು.
ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕಿದೆ. ಸಮಾಜದ ಹಿತದಲ್ಲಿ ವ್ಯಕ್ತಿಯ ಹಿತವಡಗಿದೆ. ದಾಸೋಹದಿಂದ ಇಂದಿನ ಆಹಾರ ಸಮಸ್ಯೆ ನೀಗೀತು. ಬಡತನದ ಅತೃಪ್ತಿ ಹೋದೀತು. ದಾಸೋಹದಲ್ಲಿ ಸರ್ವರಿಗು ಸಮಪಾಲು, ಸರ್ವರಿಗು ಸಮಬಾಳು ತತ್ವವಿದೆ. ಸಮಾಜದ ಸರ್ವೋತೋಮುಖ ಅಭಿವೃದ್ಧಿ ಅಡಗಿದೆ.