ಬೆಂಗಳೂರಿನಲ್ಲಿ ಜ್ಯೋತಿರ್ಲಿಂಗಗಳು
ಬೆಂಗಳೂರಿನಲ್ಲಿ ಜ್ಯೋತಿರ್ಲಿಂಗಗಳು
Vishwavani News
December 15, 2022
ಬೆಂಗಳೂರಿನ ಓಂಕಾರ ಬೆಟ್ಟದಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳ ದೇಗುಲಗಳು ಒಂದೇ ಆವರಣದಲ್ಲಿವೆ.
ಸುಭಾಸ ಯಾದವಾಡ
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ನಮ್ಮ ಮಗಳ ಮನೆಯಲ್ಲಿ ಮಾತ ನಾಡುತ್ತ ಕುಳಿತಿದ್ದೆವು. ಹನ್ನೆರಡು ಜ್ಯೋತಿರ್ಲಿಂಗ ಗಳ ಬಗೆಗೆ ಚರ್ಚೆ ನಡೆದಿತ್ತು. ನಾವ್ಯಾರೂ ಯಾವ ಜ್ಯೋತಿರ್ಲಿಂಗಗಳ ದರ್ಶನವನ್ನೂ ಮಾಡಿರಲಿಲ್ಲ.
ನಮ್ಮ ಮಗಳು, ನಡೆಯರಿ, ಒಂದೇ ಗಂಟೆಯಲ್ಲಿ ಹನ್ನೆರಡು ಜ್ಯೋತಿರ್ಲಿಂಗಳ ದರ್ಶನ ಮಾಡಿಸುತ್ತೇನೆ ಎಂದಳು. ಕುತೂಹಲ ದಿಂದ ನಾವೆಲ್ಲ ಹೊರಡಲು ಸಿದ್ಧರಾದೆವು. ರಾಜರಾಜೇಶ್ವರಿ ನಗರದಿಂದ ಸ್ವಲ್ಪ ದೂರದಲ್ಲಿ ಒಂದು ಬೆಟ್ಟ ವಿದೆ. ಅದನ್ನು ಓಂಕಾರ ಬೆಟ್ಟ ಎಂದು ಕರೆಯುತ್ತಾರೆ.
ಅಲ್ಲಿಯೇ ದ್ವಾದಶ ಜ್ಯೋತಿರ್ಲಿಂಗಗಳ ಗುಡಿ ಇರುವದು. ೧೫-೨೦ ನಿಮಿಷ ಗಳಲ್ಲಿ ನಾವು ಅಲ್ಲಿಗೆ ತಲುಪಿದೆವು. ಓಂಕಾರ ಬೆಟ್ಟ ಬೆಂಗಳೂರಿನ ಎತ್ತರವಾದ ಪ್ರದೇಶ. ಅಲ್ಲಿಂದ ಇಡೀ ಬೆಂಗಳೂರಿನ ದೃಶ್ಯವನ್ನು, ಪಕ್ಷಿ ನೋಟ ಬೀರಿ ಕಣ್ತುಂಬಿಕೊಳ್ಳಬಹುದು. ನೈಸರ್ಗಿಕವಾಗಿ ಸುಂದರವಾಗಿರುವ ಆ ತಾಣ ಪ್ರಶಾಂತವೂ, ಕಲಾತ್ಮಕ ಗುಡಿ-ಗೋಪುರ ಗಳಿಂದಾಗಿ ಆಕರ್ಷಕವೂ ಆಗಿದೆ.
ಒಂದೇ ಸೂರಿನಡಿ, ಭಾರತದ ಹನ್ನೆರಡು ಜ್ಯೋತಿರ್ಲಿಂಗಗಳ ದರ್ಶನ ಭಾಗ್ಯ ಅಲ್ಲಿ ಲಭ್ಯ. ಅಷ್ಟೇ ಅಲ್ಲ, ಅಲ್ಲಿ ಅನೇಕ ಮಂದಿರಗಳ ಸಮುಚ್ಛಯವೇ ಇದೆ. ಮತ್ಸ್ಯನಾರಾಯಣನ ಗುಡಿ ಅಲ್ಲಿದೆ. ದಶಾವತಾರಗಳಲ್ಲಿ ಮತ್ಸ್ಯಾವತಾರ, ವಿಷ್ಣುವಿನ
ಮೊದಲ ಅವತಾರ. ಇಡೀ ಭಾರತದಲ್ಲಿ ಮತ್ಸ್ಯನಾರಾಣನಿಗಾಗಿ ಕಟ್ಟಿದ ಏಕಮೇವ ಗುಡಿ ಇರುವದು ಬೆಂಗಳೂರಿನ ಈ ಓಂಕಾರ ಬೆಟ್ಟದಲ್ಲಿ ಮಾತ್ರ. ಇದರೊಂದಿಗೆ ನಾಗದೇವತಾ, ವನದುರ್ಗಾ, ಗಣಪತಿ ಹಾಗು ಮುನೀಶ್ವರ ಮಂದಿರಗಳು ಅಲ್ಲಿವೆ. ಆಶ್ರಮದ ಆವರಣದಲ್ಲಿ ವಿಶ್ವಾಮಿತ್ರ ವೇದ ವಿದ್ಯಾಲಯ ಹಾಗು ಗೋಶಾಲೆ ಇವೆ.
ಹನ್ನೆರಡು ಲಿಂಗಗಳು
ಶ್ವೇತ ವರ್ಣದ ದೇವಾಲಯದ ಒಂದೇ ಸೂರಿನಡಿಯಲ್ಲ ೧೨ ಜ್ಯೋತಿರ್ಲಿಂಗಗಳಿವೆ. ಪ್ರವೇಶದ್ವಾರದ ಕೇಂದ್ರಸ್ಥಾನದಲ್ಲಿ ೬ ಅಡಿ ಎತ್ತರದ ಓಂಕಾರೇಶ್ವರ ಲಿಂಗವಿದೆ. ಅದರ ಸುತ್ತ ಉಳಿದ ೧೧ ಜ್ಯೋತಿರ್ಲಿಂಗಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಜ್ಯೋತಿರ್ಲಿಂಗಕ್ಕೂ ಪ್ರತ್ಯೇಕವಾದ ಗುಡಿಗಳಿವೆ. ಅಲ್ಲಲ್ಲೇ ಅವುಗಳ ಬಗೆಗೆ ತಿಳಿಸಿಕೊಡುವ ಮಾಹಿತಿ ಫಲಕಗಳಿವೆ.
ಪ್ರತಿ ಜ್ಯೋತಿರ್ಲಿಂಗಕ್ಕೂ ಪ್ರತ್ಯೇಕವಾದ ಗೋಪುರ ಹಾಗು ಶಿಖರಗಳಿವೆ. ಪ್ರತಿ ಲಿಂಗ, ಗೋಪುರ, ಹಾಗು ಶಿಖರಗಳು ಆಯಾ ಜ್ಯೋತಿ ರ್ಲಿಂಗಗಳನ್ನು ಯಥಾವತ್ತಾಗಿ ಪ್ರತಿನಿಧಿ ಸುತ್ತವೆ. ಕೇಂದ್ರಸ್ಥಾನದಲ್ಲಿರುವ ಓಂಕಾರೇಶ್ವರ ಜ್ಯೋತಿರ್ಲಿಂಗದ ಶಿಖರ, ನೆಲದಿಂದ ೧೦೦ ಅಡಿ ಎತ್ತರದಲ್ಲಿದೆ. ಎಲ್ಲ ಶಿಖರದ ಮುಕುಟಗಳು ಸುವರ್ಣ ಬಣ್ಣದಿಂದ ಅಲಂಕೃತ ಗೊಂಡಿದ್ದು, ವಿವಿಧ ಆಕಾರ-ರೂಪ ಗಳಿಂದ ಮನಮೋಹಕವಾಗಿವೆ.
ಸರ್ವಧರ್ಮ ಸಮನ್ವಯ
ಅಲ್ಲಿನ ಎಲ್ಲ ಜ್ಯೋತಿರ್ಲಿಂಗಗಳನ್ನು ನರ್ಮದಾ ನದಿಯಲ್ಲಿನ ಪವಿತ್ರ ಶಿಲೆಗಳಿಂದ ನಿರ್ಮಿಸಲಾಗಿದೆ. ಪ್ರತಿ ಜ್ಯೋತಿರ್ಲಿಂಗದ ಅಡಿಯಲ್ಲೂ ಒಂದು ಸಾವಿರ ಚಿಕ್ಕ ಲಿಂಗಳು ಇವೆಯಂತೆ. ಪ್ರಧಾನ ಜ್ಯೋತಿರ್ಲಿಂಗವಾದ ಓಂಕಾರೇಶ್ವರ ಲಿಂಗದ ಅಡಿಯಲ್ಲಿ ೨ ಸಾವಿರ ಚಿಕ್ಕ ಲಿಂಗಗಳಿವೆ. ಹೀಗಾಗಿ ಅಲ್ಲಿ ೧೨ ಗೋಚರ ಲಿಂಗಗಳ ಜೊತೆಗೆ ೧೩ ಸಾವಿರ ಅಗೋಚರ ಲಿಂಗಗಳೂ ಇವೆ. ಆ ಅಗೋಚರ ಚಿಕ್ಕ ಲಿಂಗಗಳೊಂದಿಗೆ ಸಾಲಿಗ್ರಾಮ, ನವರತ್ನ, ಅಪರೂಪದ ಗಿಡಮೂಲಿಕೆಗಳು, ಬಂಗಾರ ಮುಂತಾದ ಬೆಲಬಾಳುವ ಲೋಹಗಳು ಹಾಗು ವಿಶಿಷ್ಟ ಯಂತ್ರಗಳನ್ನು ಸೇರಿಸಲಾಗಿದೆಯಂತೆ. ಆ ಗುಡಿ ಎದುರಿಗೆ ಒಂದು ಬೃಹತ್ ಆಲದ ಮರವಿದೆ. ಅದರಡಿಯಲ್ಲಿ ಗೌತಮ ಬುದ್ಧ, ರಾಮಾನುಜಾಚಾರ‍್ಯ, ಮಹಾವೀರ, ಜೇಸಸ್, ಗುರುನಾನಕ ಮುಂತಾದವರ ಮೂರ್ತಿಗಳಿವೆ. ಹೀಗಾಗಿ ಈ ಓಂಕಾರ ಪೀಠವನ್ನು ಸರ್ವಧರ್ಮ ಸಮನ್ವಯ ಪೀಠ ಎಂದು ಗುರುತಿಸಲಾಗುತ್ತದೆ.
ಈ ಗುಡಿಯ ಆವರಣದಲ್ಲಿ ಒಂದು ಬೃಹತ್ ಗಡಿಯಾರದ ಗೋಪುರವಿದೆ. ಅದೇ ಭಾರತದ ಅತಿ ದೊಡ್ಡ ಗಡಿಯಾರದ ಗೋಪುರ ವಂತೆ. ಎಚ್‌ಎಂಟಿ ಕಂಪನಿ ಇದನ್ನು ಸ್ಥಾಪಿಸಿದೆ. ಪ್ರತಿಗಂಟೆಗೊಮ್ಮೆ ಈ ಗಡಿಯಾರ ಶಂಖನಾದ ಹೊರಡಿಸುವಂತೆ ವಿನ್ಯಾಸ ಗೊಳಿಸಲಾಗಿದೆ. ಆ ನಂತರ ಅದು ೫ ಬಾರಿ ಓಂಕಾರವನ್ನು ಪಠಿಸುತ್ತದೆ. ಈ ಗಡಿಯಾರದ ಎತ್ತರ ೪೦ ಅಡಿ, ತೂಕ ೫೦೦ ಕಿಲೋ. ಇದರಲ್ಲಿರುವ ಗಂಟೆ ಹಾಗು ನಿಮಿಷಗಳನ್ನು ಸೂಚಿಸುವ ಎರಡೂ ಮುಳ್ಳುಗಳ ಒಟ್ಟು ತೂಕ ೪೦ ಕಿಲೋ. ಓಂಕಾರ ಬೆಟ್ಟ ಕೆಂಗೇರಿ ಮತ್ತು ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿದೆ.
ಮೈಸೂರು ರಸ್ತೆಯಿಂದ ೨.೩ ಕಿಲೋಮೀಟರ್ ದೂರದಲ್ಲಿದೆ. ಜೆಎಸ್‌ಎಸ್ ಇನ್‌ಸ್ಟಿಟ್ಯುಟ್ ಆಫ್ ಟೆಕ್ನಾಲಜಿ ಸಮೀಪವೇ ಈ ಸುಂದರ ತಾಣವಿದೆ. ಇದು ಬೆಂಗಳೂರಿನ ಹೆಮ್ಮೆ. ಆಸ್ತಿಕರಿಗಂತೂ ತುಂಬ ಹಿಡಿಸುವ ಪುಣ್ಯಕ್ಷೇತ್ರ. ಇಲ್ಲಿನ ಕಲಾವೈಭವ, ಪ್ರಶಾಂತ ತೆ, ನೈಸರ್ಗಿಕ ವಾತಾವರಣ ಎಲ್ಲರಿಗೂ ಪ್ರಿಯವಾಗುತ್ತದೆ.