ಯುಗಾದಿ - ಪ್ರಕೃತಿಯೇ ಹೊಸತನಕೆ ಬರೆವ ಮುನ್ನುಡಿ
ಯುಗಾದಿ - ಪ್ರಕೃತಿಯೇ ಹೊಸತನಕೆ ಬರೆವ ಮುನ್ನುಡಿ
Vishwavani News
March 31, 2022
ಡಾ.ಗಣಪತಿ ಆರ್.ಭಟ್
ಮತ್ತೆ ಬಂದಿದೆ ಯುಗಾದಿ. ಕಳೆದ ಎರಡು ವರ್ಷಗಳಿಗಿಂತ ಈ ವರ್ಷದ ಯುಗಾದಿಯ ಸಡಗರ ಹೆಚ್ಚು. ಏಕೆಂದರೆ, ಇಂದು ಕರೋನಾ ಸೋಂಕಿನ ಭಯವು ದೂರಾಗಿದೆ, ಹೊಸ ಹುರುಪಿನಿಂದ ಹಬ್ಬವನ್ನು ಆಚರಿಸುವ ಅವಕಾಶ ದೊರೆ ತಿದೆ. ಆದ್ದರಿಂದ ಕಳೆದ ಎರಡು ವರ್ಷಗಳ ಸಂತಸ ಈ ವರ್ಷ ಇಮ್ಮಡಿಗೊಂಡಿದೆ! ಜೀವನದಲ್ಲಿ, ಬದುಕಿನಲ್ಲಿ ಹೊಸ ಚೇತನವನ್ನು ತುಂಬುವ ಈ ವರ್ಷದ ಯುಗಾದಿಯು ಎಲ್ಲರಿಗೂ ಶುಭ ತರಲಿ.
ಆಗಸದಲ್ಲಿ ಮೋಡಗಳ ಸುಳಿವು, ಆಗೊಮ್ಮೆ ಈಗೊಮ್ಮೆ ಬೀಳುವ ಮಳೆಯ ಸ್ಪರ್ಶಕೆ ಹಸಿರಾಗುವ ಇಳೆ, ಚಿಗುರಿದ ಹೊಂಗೆ, ಕಂಪುಬೀರುವ ಹೂವು, ಗೊನೆ ತೂಗುವ ಮಾಮರ, ಮಧುರ ದನಿ ಎತ್ತಿ ಕೂಗುವ ಕೋಗಿಲೆ ಹೀಗೆ ಬಿನ್ನಾಣ ಗೈದು ಪ್ರಕೃತಿಯೇ ಹೊಸತನವನ್ನು ತೋರುತ್ತಿದೆ. ಇದುವೇ ಆರಂಭ. ಇದು ಯುಗಾದಿಯೆಂದು ಪ್ರಕೃತಿಯೇ ಸಾರಿ ಹೇಳುತ್ತಿದೆ. ಪ್ರಕೃತಿ ನಿಯಮದಡಿ ಬಾಳುವ ನಾವು ನಮ್ಮ ಬದುಕನ್ನು ಹೊಸತನದ ಕಡೆಗೆ ಹೊರಳಿಸುವ ಸಮಯವಿದು. ಪ್ಲವನಾಮ ಸಂವತ್ಸರವು ಕಳೆದು ಶುಭಕೃತ್ ನಾಮ ಸಂವ ತ್ಸರವು ಆಗಮಿಸುವ ಸುಸಮಯವಿದು. ಭಾರತೀಯರ ಹೊಸ ವರ್ಷ ಇದು.
ಯುಗಾದಿಯೆಂದರೆ: ಯುಗಸ್ಯ ಆದಿಃ ಯುಗಾದಿಃ ಎಂಬುದಾಗಿ ಯುಗಾದಿಯನ್ನು ಯುಗದ ಆರಂಭ ಎಂದು ವ್ಯಾಖ್ಯಾನಿಸಲಾಗಿದೆ. ಕೃತಯುಗ, ತ್ರೇತಾಯುಗ, ದ್ವಾಪರಾಯುಗ, ಕಲಿಯುಗ ಎಂಬುದಾಗಿ 4 ಯುಗಗಳನ್ನು ಕಾಲಗಣನೆಯ ಪ್ರಮುಖ ಘಟ್ಟಗಳಾಗಿ ಗುರುತಿಸಿದ್ದರೂ, ಇಲ್ಲಿ ಸಾಮಾನ್ಯಾರ್ಥದಲ್ಲಿ ಯುಗವೆಂದರೆ ವರ್ಷ ಅಥವಾ ಸಂವತ್ಸರವೆಂದು ತೆಗೆದುಕೊಳ್ಳಬೇಕು. ಹಾಗಾಗಿ ಯುಗಾದಿ ಎಂದರೆ ವರ್ಷದ ಆರಂಭ ಎಂದು.
ಯುಗಾದಿಯ ವೈಶಿಷ್ಟ್ಯ: ಚಾಂದ್ರಮಾನ ಕಾಲಗಣನೆಯ ಪ್ರಕಾರ ಹೊಸ ಸಂವತ್ಸರ ಆರಂಭವಾಗುವ ದಿನವೇ ಯುಗಾದಿ. ಹನ್ನೆರಡು ಮಾಸಗಳ ಪೈಕಿ ಮೊದಲನೇ ಮಾಸವಾದ ಚೈತ್ರದ ಮೊದಲದಿನ. ಅಂದೇ ಆರು ಋತುಗಳ ಪೈಕಿ ಮೊದಲ ಋತುವಾದ ವಸಂತದ ಆರಂಭವೂ ಹೌದು. ಈ ದಿನ ಬ್ರಹ್ಮದೇವನು ಸೂರ್ಯೋದಯದ ಕಾಲಕ್ಕೆ ಈ ಜಗತ್ತಿನ ಸೃಷ್ಟಿ ಕಾರ್ಯವನ್ನು ಆರಂಭಿಸಿದ ಎಂದು ಪುರಾಣಗಳು ಹೇಳುತ್ತವೆ. ಅಂದೇ ಸೂರ್ಯನು ತನ್ನ ಮೊದಲ ರಶ್ಮಿ ಯನ್ನು ಬೀರಿದ ಎಂಬ ಪ್ರತೀತಿಯೂ ಇದೆ. ಮಹಾ ವಿಷ್ಣು ಮತ್ಸ್ಯಾವತಾರ ತಾಳಿದ್ದು ಕೂಡ ಇದೇ ಶುಭಸಂದರ್ಭದಲ್ಲಿ.
ಹೊಸವರ್ಷದ ಸಡಗರ: ಯುಗಾದಿಯು ಆಚರಣೆಯ ದೃಷ್ಟಿಯಿಂದ ಮಿಕ್ಕೆಲ್ಲ ಹಬ್ಬಗಳಿಗಿಂತ ತುಸು ಭಿನ್ನ. ಮನುಷ್ಯನ ಜೀವನ-ಆಹಾರ-ಪ್ರಕೃತಿ ಈ ಮೂರರ ಸುಮಧುರ ಕೊಂಡಿ ಈ ಹಬ್ಬದೊಂದಿಗೆ ತಾಳೆ ಹಾಕಿಕೊಳ್ಳುತ್ತದೆ. ಇದೊಂದು ಪ್ರಕೃತಿಯ ಆರಾಧನೆ. ಯುಗಾದಿಯೆಂದರೆ ಅರ್ಥವತ್ತಾಗಿ ಬದುಕಿನಲ್ಲಿ ಹೊಸತನವನ್ನು ಆಹ್ವಾನಿ ಸುವ ವಿಧಾನ.
ಬೆಳಿಗ್ಗೆ ನಸುಕಿನಲ್ಲಿಯೇ ಎದ್ದು ಮನೆಯನ್ನು ಒಪ್ಪವಾಗಿ ಸಾರಿಸಿ, ತೋರಣಗಳಿಂದ ಸಿಂಗರಿಸಿ, ಸ್ನಾನಾದಿಗಳನ್ನು ಮುಗಿಸಿ ಹೊಸ ವಸಗಳನ್ನು ಧರಿಸಿ ಸೂರ್ಯೋದಯದ ಕಾಲಕ್ಕೆ ಮನೆ ಮಂದಿಯೆಲ್ಲ ಹೋಮವನ್ನು ಮಾಡುವ ಸಂಪ್ರದಾಯವಿದೆ. ಅಂದು ಅಗ್ನಿಯ ಮೂಲಕ ಬ್ರಹ್ಮದೇವನಿಗೆ ಹವಿಸ್ಸನ್ನು ಅರ್ಪಿಸಲಾಗುತ್ತದೆ. ಯುಗಾದಿಯಂದು ಪ್ರಮುಖವಾಗಿ ಉಪಾಸಿಸಲ್ಪಡುವ ದೇವರೆಂದರೆ ಬ್ರಹ್ಮ. ಉಳಿದಂತೆ ಕುಲದೇವತೆ ಹಾಗೂ ಇಷ್ಟದೇವತೆಗಳನ್ನು ನೆನೆದು ಸಂಕಲ್ಪ ಮಾಡುವುದೂ ಇನ್ನೊಂದು ಸಂಪ್ರದಾಯ. ಆ ವರ್ಷ ತಾವು ಮಾಡಲುದ್ದೇಶಿಸಿರುವ ಕಾರ್ಯದ ಕುರಿತಂತೆ ದೇವರ ಮುಂದೆ ಕುಳಿತು ದೃಢ ಸಂಕಲ್ಪವನ್ನು ಮಾಡಲು ಇದು ಪ್ರಶಸ್ತ ಸಮಯವೇ ಸರಿ.
ಬೇವು-ಬೆಲ್ಲ ಮಿಶ್ರಣ: ಯುಗಾದಿಯಂದು ಬೇವು ಬೆಲ್ಲಗಳ ಮಿಶ್ರಣವನ್ನು ನೈವೇದ್ಯ ಮಾಡಿ ಮನೆಯವರಿಗೆ, ಬಂಧು, ಹಿತಷಿ ಗಳಿಗೆ ಹಂಚುವುದು ಸಾಮಾನ್ಯ. ಬೇವು ಜೀವನದ ಕಷ್ಟಗಳನ್ನು, ಬೆಲ್ಲ ಸುಖವನ್ನು ಸಂಕೇತಿಸುವುದಲ್ಲದೇ, ಇವುಗಳ ಸಮ್ಮಿಶ್ರಣ ಸುಖ-ದುಃಖಗಳ ಸಮ ಸ್ವೀಕಾರವನ್ನು ಸಾರಿ ಹೇಳುತ್ತದೆ. ಜೀವನವೆಂದರೆ ಕೇವಲ ಸುಖಮಯವಾಗಿರಲು ಸಾಧ್ಯವಿಲ್ಲ. ಸುಖದ ಅನುಭವವಾಗಲಾದರೂ ದುಃಖ ಅನುಭ ವಿಸಲೇ ಬೇಕು ಎನ್ನುತ್ತಾರೆ ನಮ್ಮ ಹಿರಿಯರು. ಸುಃಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸುವುದೇ ಭಾರತೀಯರ ಪಾಲಿಗೆ ಜೀವನ ಧರ್ಮ.
ಆಯುರ್ವೇದಾತ್ಮಕವಾಗಿಯೂ ಬೇವು ಬೆಲ್ಲ ಸೇವನೆಗೆ ಮಹತ್ವವಿದೆ. ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ ಸರ್ವಾರಿಷ್ಟ ವಿನಾಶಾಯ ನಿಂಬಕಂ ದಲಭಕ್ಷಣಮ್ ಎಂಬುದಾಗಿ ದೀರ್ಘಾಯಸ್ಸು, ವಜ್ರದಂತೆ ಗಟ್ಟಿಮುಟ್ಟಾದ ದೇಹ, ಸಕಲ
ಸಂಪತ್ತು ಇವೆಲ್ಲವುಗಳ ಪ್ರಾಪ್ತಿ ಹಾಗೂ ವಿಪತ್ತು ನಿವಾರಣೆಯು ಬೇವು ಭಕ್ಷಣೆಯಿಂದ ಸಾಧ್ಯ. ಯುಗಾದಿಯ ದಿನ ಒಬ್ಬಟ್ಟು ಅಥವಾ ಹೋಳಿಗೆಯನ್ನು ಮನೆಯಲ್ಲೇ ತಯಾರಿಸುವುದು ಮಹಿಳೆಯರ ಸಂಭ್ರಮ.
ಈ ಸಾಮಾನ್ಯ ಆಚರಣೆಗಳ ಜತೆ, ಇನ್ನೂ ಬಗೆ ಬಗೆಯ ಆಚರಣೆಗಳನ್ನು ದೇಶದುದ್ದಗಲಕ್ಕೂ ಯುಗಾದಿಯಂದು ಆಚರಿಸುತ್ತಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಈ ಹಬ್ಬವನ್ನು ಆಚರಿಸುವ ಪರಿಪಾಠವಿದೆ. ಕೇರಳದಲ್ಲಿ ವಿಶುವನ್ನು ಆಚರಿಸಲಾಗುತ್ತದೆ. ಯುಗಾದಿಯ ದಿನ ಮನೆಯ ಮೇಲೆ ಅಥವಾ ಗುಡಿಯ ಮೇಲೆ ಧ್ವಜಾರೋಹಣ ಮಾಡುವ ಪದ್ಧತಿಯೂ ಇದೆ. ಮಹಾರಾಷ್ಟ್ರದಲ್ಲಿ ಇದನ್ನೇ ಗುಡಿಪಡ್ವ ಎಂಬುದಾಗಿ ಆಚರಿಸುತ್ತಾರೆ. ಪಂಜಾಬ್ ಪ್ರದೇಶದಲ್ಲಿ ಬೈಶಾಕಿ ಹಬ್ಬ ಎನಿಸಿದೆ.
ಪವಿತ್ರ ನದಿ ಗಂಗಾ ಮತ್ತು ಇತರ ನದಿಗಳಲ್ಲಿ ಜನ ಪುಣ್ಯಸ್ನಾನ ಮಾಡುವುದು ಸರ್ವೇ ಸಾಮಾನ್ಯ. ಆಚರಣೆಯಲ್ಲಿ ಭಿನ್ನತೆ ಯಿದ್ದರೂ ಹೊಸ ವರ್ಷವನ್ನು ಸ್ವಾಗತಿಸುವ ಭಾವನೆಯಲ್ಲಿ ಎಂದಿಗೂ ನವೀನತೆಯೇ ಇರುವುದಂತೂ ಸುಳ್ಳಲ್ಲ