Teeth Whitening: ಹಲ್ಲುಗಳ ಯೌವನ ಕಾಪಾಡಲು ಏನು ಮಾಡಬಹುದು ಗೊತ್ತೆ?
ನಮಗೆ ವಯಸ್ಸಾಗುತ್ತಿದ್ದಂತೆ ನಮ್ಮ ಶರೀರದ ಎಲ್ಲ ಅಂಗಾಂಗಗಳಿಗೂ ನಮ್ಮಷ್ಟೇ ವಯಸ್ಸಾಗುತ್ತದೆ. ಅಂದರೆ ನಮ್ಮಷ್ಟೇ ವಯಸ್ಸು ನಮ್ಮ ಕೈ-ಕಾಲು ಗಳಿಗೆ, ಹೃದಯ-ಕಿಡ್ನಿಗಳಿಗೂ ಆಗಿರುತ್ತದೆ. ಹಾಗೆ ನೋಡಿದರೆ ನಮಗಿಂತ ಸ್ವಲ್ಪ ಕಡಿಮೆ ವಯಸ್ಸಿನವು ಎಂದರೆ ನಮ್ಮ ಹಲ್ಲುಗಳೇ ಇರಬಹುದು. ಈ ವಯಸ್ಸಿನ ಗೋಜಲನ್ನೇ ಬಿಟ್ಹಾಕಿದರಾಯ್ತು. ಬದಲಿಗೆ ತಲೆ ಬೆಳ್ಳಗಾದ ಮೇಲೂ ಹಲ್ಲನ್ನು ಗಟ್ಟಿ ಯಾಗಿಟ್ಟುಕೊಳ್ಳುವುದು ಹೇಗೆ ಎನ್ನುವತ್ತ ಗಮನ ಹರಿಸೋಣ.

Teeth Whitening

ನವದೆಹಲಿ: ವಯಸ್ಸಾಗುವುದೆಂದರೇನು? ಛೇ! ಇದೆಂಥಾ ಪ್ರಶ್ನೆ ಎಂದುಕೊಳ್ಳುವಿರಾ? ಬೇಡ, ಇಂಥ ಪ್ರಶ್ನೆ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಇದನ್ನು ಬೇರೆ ರೀತಿಯಲ್ಲಿ ಕೇಳುವುದಾದರೆ- ನಮಗೆ ವಯಸ್ಸಾಗುತ್ತಿದ್ದಂತೆ ನಮ್ಮ ಶರೀರದ ಎಲ್ಲ ಅಂಗಾಂಗಗಳಿಗೂ ನಮ್ಮಷ್ಟೇ ವಯಸ್ಸಾಗುತ್ತದೆಯೇ? ಈಗಲೂ ಅರ್ಥವಾಗಲಿಲ್ಲವೇ? ಅಂದರೆ ನಮ್ಮಷ್ಟೇ ವಯಸ್ಸು ನಮ್ಮ ಕೈ-ಕಾಲು ಗಳಿಗೆ, ಹೃದಯ-ಕಿಡ್ನಿಗಳಿಗೂ ಆಗಿರುತ್ತದೆ. ಹಾಗೆ ನೋಡಿದರೆ ನಮಗಿಂತ ಸ್ವಲ್ಪ ಕಡಿಮೆ ವಯಸ್ಸಿನವು ಎಂದರೆ ನಮ್ಮ ಹಲ್ಲುಗಳೇ (Teeth) ಇರಬಹುದು. ಬಿದ್ದು ಹುಟ್ಟಿದವಲ್ಲವೇ? ಹಾಗಂತ ನಮಗಿಂತ ಮೊದಲೇ ಅವಸಾನ ಹೊಂದುವುದು ನಮ್ಮ ಹಲ್ಲುಗಳೇ. ಅಂದರೆ ನಮಗಿಂತ ಮೊದಲೇ, ನಮಗಿಂತ ಹೆಚ್ಚು ವಯಸ್ಸಾಗುತ್ತದೆ ಹಲ್ಲುಗಳಿಗೇ ಎಂದು ಅರ್ಥವೇ? ಛೇ! ಎಲ್ಲ ಅಯೋಮಯ! ಈ ವಯಸ್ಸಿನ ಗೋಜಲನ್ನೇ ಬಿಟ್ಹಾಕಿದರಾಯ್ತು. ಬದಲಿಗೆ, ತಲೆ ಬೆಳ್ಳಗಾದ ಮೇಲೂ ಹಲ್ಲನ್ನು ಗಟ್ಟಿ ಯಾಗಿಟ್ಟುಕೊಳ್ಳುವುದು ಹೇಗೆ ಎನ್ನುವತ್ತ ಗಮನ ಹರಿಸೋಣ.
ನಡುವಯಸ್ಸಿನಲ್ಲೇ ಅಮರಿಕೊಳ್ಳುತ್ತಿರುವ ಜೀವನಶೈಲಿಯ ಖಾಯಿಲೆಗಳಿಂದ (ಬಿಪಿ, ಮಧುಮೇಹ, ಬೊಜ್ಜು, ಕೀಲುನೋವು ಇತ್ಯಾದಿ) ನಮ್ಮ ಶರೀರದ ಉಳಿದೆಲ್ಲ ಭಾಗಗಳಂತೆ ಒತ್ತಡವನ್ನು ಅನು ಭವಿಸುವಲ್ಲಿ ನಮ್ಮ ದಂತಗಳೂ ಸೇರಿವೆ. ಆದರೆ ಇದು ನೇರವಾಗಿ ನಮ್ಮ ಅರಿವಿಗೆ ಬರುವುದಿಲ್ಲ ವಷ್ಟೇ. ನಮ್ಮ ದಂತ ರೋಗಗಳಿಗೂ ಹೃದಯದ ಆರೋಗ್ಯಕ್ಕೂ ಸಂಬಂಧವಿದೆ ಎನ್ನುತ್ತವೆ ಅಧ್ಯಯನಗಳು. 30 ವರ್ಷಕ್ಕೆ ಮೇಲ್ಪಟ್ಟ ಶೇ. 46ರಷ್ಟು ಜನರಲ್ಲಿ ಒಂದಿಲ್ಲೊಂದು ರೀತಿಯ ದಂತಾರೋಗ್ಯ ಸಮಸ್ಯೆಗಳು ಕಂಡುಬಂದರೆ, ಶೇ. 6ರಷ್ಟು ಮಂದಿಯಲ್ಲಿ ಈ ಸಮಸ್ಯೆ ತೀವ್ರವಾಗಿದೆಯಂತೆ. ಹಾಗಾಗಿ ಹೆಚ್ಚುತ್ತಿರುವ ಪ್ರಾಯದ ಜತೆಗೆ ಹಲ್ಲಿನ ಸಮಸ್ಯೆಗಳೂ ಹೆಚ್ಚದಂತೆ ಮಾಡುವುದಕ್ಕೆ ಇಲ್ಲಿವೆ ಕೆಲವು ಸಲಹೆಗಳು.
ಆಹಾರ: ನಮ್ಮ ಶರೀರದ ಉಳಿದೆಲ್ಲ ಭಾಗಗಳ ಮೇಲೆ ಪರಿಣಾಮ ಬೀರುವಂತೆ, ಹಲ್ಲುಗಳ ಆರೋಗ್ಯದ ಮೇಲೂ ನಾವು ತಿನ್ನುವ ಆಹಾರ ಪರಿಣಾಮ ಬೀರುತ್ತದೆ. ಅತಿಯಾದ ಸಿಹಿ ಅಥವಾ ಪಿಷ್ಟದ ಆಹಾರಗಳು ಹಲ್ಲುಗಳ ಅರೋಗ್ಯಕ್ಕೆ ಮಾರಕ. ಸಿಕ್ಕಾಪಟ್ಟೆ ಹುಳಿ ಪದಾರ್ಥಗಳೂ ಹಲ್ಲುಗಳ ಎನಾಮಲ್‌ಗೆ ಹಾನಿ ಮಾಡುತ್ತವೆ. ಕಾರಣ ಯಾವುದೇ ಇರಲಿ, ಒಮ್ಮೆ ಹಲ್ಲುಗಳ ಎನಾಮಲ್ ದುರ್ಬಲವಾದರೆ ಮತ್ತೆ ಹಲ್ಲುನೋವಿನ ದಿನಗಳು ದೂರವಿಲ್ಲ. ಹಾಗಾಗಿ ಸಿಹಿ, ಸೋಡಾ, ಜ್ಯೂಸ್ ಇಂಥ ಆಹಾರಗಳ ಬದಲು ಎಲ್ಲ ರೀತಿಯ ಹಣ್ಣು-ತರಕಾರಿ ಮತ್ತು ಧಾನ್ಯಗಳು ನಮ್ಮ ಊಟದ ಭಾಗವಾಗಿರಲಿ.
ತಂಬಾಕಿನಿಂದ ದೂರವಿರಿ: ತಂಬಾಕನ್ನು ಭಾಗವಾಗಿ ಹೊಂದಿದ ಯಾವುದೇ ಚಟಗಳು ಬಾಯಿಯ ಆರೋಗ್ಯಕ್ಕೆ (ಶರೀರದ ಆರೋಗ್ಯಕ್ಕೂ ಹೌದು!) ಚರಮಗೀತೆ ಬರೆಯುತ್ತವೆ. ಬಾಯಿಯ ಮೂಳೆಗಳು ಮತ್ತು ಮೃದು ಅಂಗಾಶಗಳ ಮೇಲೆ ವಿಪರೀತ ಪರಿಣಾಮ ಬೀರುವ ತಂಬಾಕು, ದಂತಗಳ ಬಣ್ಣಗೆಡಿಸಿ, ಹಲ್ಲುಗಳನ್ನು ವಿಕಾರಗೊಳಿಸುತ್ತದೆ. ಹಲ್ಲುಗಳಲ್ಲಿ ಕುಳಿಗಳು ಹೆಚ್ಚಾಗಿ, ಬೇಗನೆ ಅವುಗಳನ್ನು ಕಳೆದುಕೊಳ್ಳುವಂತಾಗುತ್ತದೆ. ಹಾಗಾಗಿ ತಂಬಾಕು ಮತ್ತದರ ಉತ್ಪನ್ನಗಳಿಂದ ಸರ್ವದಾ ದೂರವಿರಿ.
ಇದನ್ನು ಓದಿ:Health Tips: ಫುಡ್ ಪಾಯ್ಸನ್ ಆದರೆ ಚೇತರಿಸಿಕೊಳ್ಳುವುದು ಹೇಗೆ?
ಸ್ವಚ್ಛತೆ: ದಿನಂಪ್ರತಿ ಎರಡು ಬಾರಿ ಸೂಕ್ತರೀತಿಯಲ್ಲಿ ಹಲ್ಲುಜ್ಜುವುದು, ನಡುವೆ ಫ್ಲೋಸಿಂಗ್, ಆಹಾರ ಸೇವನೆಯ ನಂತರ ಬಾಯಿಗೆ ನೀರು ಹಾಕುವುದು- ಇವೆಲ್ಲ ಜೀವನದ ಭಾಗವೇ ಆಗಿರಲಿ. ಇದಲ್ಲದೆಯೂ, ವರ್ಷಕ್ಕೊಂದು ಬಾರಿ ಅಥವಾ ನಿಯಮಿತವಾಗಿ ದಂತ ವೈದ್ಯರನ್ನು ಕಾಣುವುದು ಕ್ಷೇಮ. ನಮ್ಮ ಸ್ವಚ್ಛತೆಗೆ ನಿಲುಕದ ಭಾಗಗಳನ್ನು ಈ ಮೂಲಕ ಶುಚಿಗೊಳಿಸಬಹುದು. ಮಾತ್ರವಲ್ಲ, ಆರಂಭದಲ್ಲಿರುವ ಯಾವುದಾದರೂ ದಂತ ಸಮಸ್ಯೆಗಳನ್ನು ಆಗಲೇ ಬಗೆಹರಿಸಿಕೊಳ್ಳಬಹುದು.
ಫ್ಲುರೈಡ್: ಈ ಅಂಶವಿರುವ ಟೂತ್‌ಪೇಸ್ಟ್ ಮತ್ತು ಮೌಥ್‌ವಾಷ್‌ಗಳನ್ನು ವೈದ್ಯರ ಸಲಹೆ ಮೇರೆಗೆ ಬಳಸುವುದು ಉಪಯುಕ್ತ. ಇದರಿಂದ ಹಲ್ಲಿನ ಎನಾಮಲ್‌ಗಳನ್ನು ರಕ್ಷಿಸಿಕೊಳ್ಳಬಹುದು. ಹಲ್ಲಿನ ಎನಾಮಲ್ ಕವಚ ದುರ್ಬಲ ಆಯಿತೆಂದರೆ ಮುಗಿಯಿತು, ಹಲ್ಲುಗಳಿಗೆ ನಮಗಿಂತ ಮೊದಲೇ ವಯಸ್ಸಾಗಿ ಕೈಲಾಸ ಕಾಣುವುದು ನಿಶ್ಚಿತ.