Health Tips: ಹೃದಯ ಆರೋಗ್ಯಕ್ಕೂ ಬೇಕು ಕಾಳಜಿ
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳ ಬಗ್ಗೆ ಹೆಚ್ಚು ವರದಿಯಾಗುತ್ತಿದೆ. ಅದಕ್ಕೇನು ಕಾರಣ ಎಂದು ತಿಳಿಯಲು ಹೋದಾಗ ನಗರ ಜೀವನ ಹಾಗೂ ಗ್ರಾಮದ ಜೀವನ ಎಂಬ ವ್ಯತ್ಯಾಸವಿಲ್ಲ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಕಳಪೆ ಆಹಾರ ಪದ್ಧತಿ, ಒತ್ತಡ, ಧೂಮಪಾನ ಮತ್ತು ಮದ್ಯಪಾನ, ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಡಿಸ್ಲಿಪಿಡೆಮಿಯಾದಂತಹ ಅಪಾಯಕಾರಿ ಅಂಶಗಳು ಮತ್ತು ನಮ್ಮ ಜೀವನಶೈಲಿಯೇ ಕಾರಣ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಕಾರ್ಡಿಯಾಲಜಿಸ್ಟ್ ಡಾ. ಕೃಷ್ಣ ಕುಮಾರ್


ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹೃದಯಾಘಾತ (Heart attack) ಪ್ರಕರಣಗಳ ಬಗ್ಗೆ ಹೆಚ್ಚು ವರದಿಯಾಗುತ್ತಿದೆ. ಈ ಮುಂಚೆ ನಗರ ಪ್ರದೇಶದಲ್ಲಿರುವವರಲ್ಲಿ ಈ ಸಮಸ್ಯೆ ಜಾಸ್ತಿ ಕಾಣಿಸಿ ಕೊಳ್ಳುತ್ತಿತ್ತು, ಅದಕ್ಕೆ ಕಾರಣ ನಮ್ಮ ಜೀವನಶೈಲಿ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಗ್ರಾಮೀಣ ಭಾಗದವರಲ್ಲೂ ಕೂಡ ಈ ಸಮಸ್ಯೆ ಎದುರಾಗುತ್ತಿದೆ. ಅದಕ್ಕೇನು ಕಾರಣ ಎಂದು ತಿಳಿಯಲು ಹೋದಾಗ ನಗರ ಜೀವನ ಹಾಗೂ ಗ್ರಾಮದ ಜೀವನ ಎಂಬ ವ್ಯತ್ಯಾಸವಿಲ್ಲ. ಎಲ್ಲ ಆರೋಗ್ಯ ಸಮಸ್ಯೆಗಳಿಗೂ ಕಳಪೆ ಆಹಾರ ಪದ್ಧತಿ, ಒತ್ತಡ, ಧೂಮಪಾನ ಮತ್ತು ಮದ್ಯಪಾನ, ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಡಿಸ್ಲಿಪಿಡೆಮಿಯಾದಂತಹ ಅಪಾಯಕಾರಿ ಅಂಶಗಳು ಮತ್ತು ನಮ್ಮ ಜೀವನಶೈಲಿಯೇ ಕಾರಣ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಕಾರ್ಡಿಯಾಲಜಿಸ್ಟ್ ಡಾ. ಕೃಷ್ಣ ಕುಮಾರ್.
ಸಾಮಾನ್ಯವಾಗಿ ಜನರು ರಾಗಿ, ಗೋಧಿ, ಅಕ್ಕಿಯಂತಹ ಧಾನ್ಯಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಉಪ್ಪು, ಕೊಬ್ಬಿನಾಂಶದಿಂದ ಕೂಡಿದ ಪದಾರ್ಥಗಳನ್ನು ಹೆಚ್ಚಾಗಿ ಬಳಸುತ್ತಿದ್ದೇವೆ. ಹಾಗಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಪೌಷ್ಠಿಕಾಂಶ ಎಂದರೆ ನಾವು ಏನು ತಿನ್ನುತ್ತೇವೆಯೋ ಅದರಿಂದ ಸಿಗುವಂತದ್ದಲ್ಲ. ಎಷ್ಟು ತಿನ್ನುತ್ತೇವೆ ಹಾಗೂ ಹೇಗೆ ತಿನ್ನು ತ್ತೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿರುವುದಕ್ಕೆ ಅನೇಕ ಕಾರಣಗಳಿವೆ. ಅವುಗಳಲ್ಲಿ ಇನ್ಸುಲಿನ್ ಪ್ರಮಾಣ, ಅಧಿಕ ರಕ್ತ ದೊತ್ತಡ, ಕೊಬ್ಬು ಶೇಖರಣೆ, ಬೊಜ್ಜು, ಮಾದಕ ದ್ರವ್ಯ, ತಂಬಾಕು ಸೇವನೆ ಹಾಗೂ ಸ್ಟೀರಾಯಡ್ಡ್‌ಗಳ ದುರುಪಯೋಗಳೂ ಸೇರಿವೆ. ಇನ್ನೂ ಕೆಲವು ಕುಟುಂಬಗಳಲ್ಲಿ ಅನುವಂಶಿಕವಾಗಿಯೂ ಆರೋಗ್ಯ ಸಮಸ್ಯೆಯು ಕಂಡುಬರುತ್ತದೆ. ಒಂದು ವೇಳೆ ಕುಟುಂಬದಲ್ಲಿ ಯಾರಿಗಾದರೂ ಅದರ ಮುನ್ಸೂಚನೆ ಅಥವಾ ಯಾರಿಗಾದರೂ ಈ ಆರೋಗ್ಯ ಸಮಸ್ಯೆ ತಿಳಿದುಬಂದಲ್ಲಿ ಕೂಡಲೇ ವೈದ್ಯರ ಬಳಿ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.
ಯಾವುದೇ ಆರೋಗ್ಯ ಸಮಸ್ಯೆಗಳಾಗಲೀ ಮೊದಲಿಗೆ ಎಚ್ಚೆತ್ತುಕೊಂಡಲ್ಲಿ ಪರಿಹಾರ ಖಂಡಿತಾ ಇದೆ, ಹೃದಯಾಘಾತವೂ ಅದಕ್ಕೆ ಹೊರತಾಗಿಲ್ಲ. ಹೃದಯಾಘಾತದ ಲಕ್ಷಣಗಳಾದ ಎದೆನೋವು, ಬೆವರು ಕಾಣಿಸಿಕೊಳ್ಳುವ ಮೊದಲೇ ಅದರ ಚಿಹ್ನೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ತಂತ್ರಜ್ಞಾನವನ್ನು ನಾವು ಹೊಂದಿದ್ದೇವೆ. ಆದರೆ ಇಸಿಜಿ, ಇಸಿಎಚ್‌ಒ ಅಥವಾ ಥ್ರೆಡ್‌ಮಿಲ್ ಪರೀಕ್ಷೆಗಳಿಂದ ಮಾತ್ರವೇ ಹೃದಯಾಘಾತದ ಲಕ್ಷಣಗಳನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ಕೊರೊನರಿ ಅಪಧಮನಿಯನ್ನು ಸಿಟಿ ಸಿಎಜಿ ಕ್ಯಾಲ್ಸಿಯಂ ಸ್ಕೋರ್ ಮತ್ತು ಕ್ಯಾಥೆಟರ್ ಆಂಜಿಯೋಗ್ರಾಮ್ ಮೂಲಕ ಗುರುತಿಸಬಹುದು. ಈ ಮೂಲಕ ಹೃದಯದಲ್ಲಿನ ಸಂಪೂರ್ಣ ಚಿತ್ರಣವನ್ನು ಕಂಡುಕೊಳ್ಳಬಹುದು. ಆರಂಭ ಹಂತದಲ್ಲಿ ಔಷಧದ ಮೂಲಕ ಚಿಕಿತ್ಸೆ ನೀಡಬಹುದು, ಅಗತ್ಯವಿದ್ದಲ್ಲಿ ಸ್ಟೆಂಟಿಂಗ್ ಅಥವಾ ಬೈಪಾಸ್ ಗ್ರಾಫ್ಟಿಂಗ್ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಕೆಲವೊಮ್ಮೆ ಆಂಜಿಯೋಗ್ರಾಮ್ ಮೂಲಕವೂ ಮುಂದೆ ಎದರಾಗಬಹುದಾದ ಅಪಾಯವನ್ನು ಪತ್ತೆಹಚ್ಚಲು ಸಾಧ್ಯವಿರುವುದಿಲ್ಲ. ಆದ್ದರಿಂದ ಆಗಾಗ್ಗೆ ಆರೋಗ್ಯ ತಪಾಸಣೆ ಮತ್ತು ಉತ್ತಮ ಜೀವನ ಶೈಲಿಯನ್ನು ಹೊಂದುವುದು ಅತ್ಯಗತ್ಯ ಎನ್ನುತ್ತಾರೆ ತಜ್ಞರು.
ಹೃದಯಾಘಾತ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ದೂರವಿರಲು ದೈಹಿಕ ಚಟು ವಟಿಕೆಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಹಿನ್ನೆಲೆಯಲ್ಲಿ ದೈಹಿಕ ವ್ಯಾಯಾಮವನ್ನು ಕೈಗೊ ಳ್ಳುವ ಮುನ್ನ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ತದನಂತರ ತಜ್ಞರ ಸಲಹೆ ಯಂತೆ ಆರೋಗ್ಯ ಪರಿಸ್ಥಿತಿ ಮತ್ತು ವಯಸ್ಸಿನ ಆಧಾರದ ಮೇಲೆ ಸೂಕ್ತ ವ್ಯಾಯಾಮ ಕೈಗೊಳ್ಳು ವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು.
ಇಂದಿನ ದಿನಗಳಲ್ಲಿ ಮಕ್ಕಳಿಗೂ ಕೂಡ ಆರಂಭದಿಂದಲೇ ಆರೋಗ್ಯ ಕಾಳಜಿ ಕುರಿತು ಮಾಹಿತಿ ನೀಡುವ ಅಗತ್ಯವಿದೆ. ಚಿಕ್ಕ ಮಕ್ಕಳಿನಿಂದಲೇ ಉತ್ತಮ ಆರೋಗ್ಯ, ವ್ಯಾಯಾಮದ ಅಭ್ಯಾಸಗಳನ್ನು ಹೇಳಿಕೊಡಬೇಕು. ಇದಕ್ಕೆ ಮಹಿಳೆಯರ ಆರೋಗ್ಯವೂ ಹೊರತಾಗಿಲ್ಲ. ಈ ಮೂಲಕ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಮಹಿಳೆಯರಲ್ಲಿ ಹಾರ್ಮೋನುಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ ಹೀಗಾಗಿ ಆರೋಗ್ಯದ ಬಗ್ಗೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎಂಬ ಮಾತಿತ್ತು. ಆದ್ರೆ ಈಗಿನ ಜೀವನ ಶೈಲಿಯಲ್ಲಿ ಮಹಿಳೆರೂ ಕೂಡ ಹೆಚ್ಚಿನದಾಗಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣವೇ ನಮ್ಮ ಆಧುನಿಕ ಜೀವನ ಶೈಲಿ ಎನ್ನುತ್ತಾರೆ ಡಾ. ಕೃಷ್ಣ ಕುಮಾರ್.
ಇದನ್ನು ಓದಿ:Health Tips: ಪ್ರತಿ ರಾತ್ರಿ ಬೆತ್ತಲೆಯಾಗಿ ಮಲಗುವುದರಿಂದ ದೇಹಕ್ಕಾಗುವ ಪ್ರಯೋಜನವೇನು?
ನಾವು ನಮ್ಮ ಜೀವನ ಶೈಲಿಯನ್ನು ಅತ್ಯಂತ ಕಾಳಜಿಯುತವಾಗಿ ನೋಡಿಕೊಳ್ಳಬೇಕು. ನಿದ್ರೆ, ಆಹಾರ, ವ್ಯಾಯಾಮ, ವಿಶ್ರಾಂತಿ ಸೇರಿದಂತೆ ಎಲ್ಲ ರೀತಿಯ ಚಟುವಟಿಕೆಗಳಿಗೂ ನಿಗದಿತ ಸಮಯ ಮೀಸಲಿಟ್ಟು ಒತ್ತಡರಹಿತ ಬದುಕನ್ನು ಕಂಡುಕೊಳ್ಳಬೇಕು. ಆಗ್ಗಾಗ್ಗೆ ಆರೋಗ್ಯ ತಪಾಸಣೆಗೆ ಒಳ ಗಾಗಬೇಕು. ಹಾಗಾದಾಗ ಮಾತ್ರ ಆರೋಗ್ಯಯುತ ಜೀವನವನ್ನು ಹೊಂದಲು ಸಾಧ್ಯ ಜೊತೆಗೆ ಮುಂಬರುವ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯ. ಇದರ ಹೊರತಾಗಿಯೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಯಾವುದೇ ರೀತಿಯಲ್ಲಿ ಭಯಪಡದೆ ವೈದ್ಯರನ್ನು ಸಂಪರ್ಕಿಸಿ. ಒಟ್ಟಾರೆ ಆರೋಗ್ಯವೆಂದರೆ ರೋಗ ಬರದೇ ಇರುವುದಲ್ಲ, ದೈಹಿಕವಾಗಿ, ಮಾನಸಿಕ ವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಎಂದು ಡಾ. ಕೃಷ್ಣ ಕುಮಾರ್ ಹೇಳುತ್ತಾರೆ.