ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Cooking Oils: ಖಾದ್ಯ ತೈಲ ಮಿಶ್ರ ಮಾಡಿ ಬಳಸುತ್ತಿದ್ದೀರಾ? ಈ ಬಗ್ಗೆ ಆಹಾರ ತಜ್ಞರು ಹೇಳೋದೇನು?

Health Tips: ಅಡುಗೆ ಎಣ್ಣೆಗಳನ್ನು ಮಿಶ್ರ ಮಾಡಿ ಬಳಸಬಹುದೆ? ಇದು ಸದ್ಯ ಹಲವರು ಕಾಡುತ್ತಿರುವ ಮಿಲಿಯನ್‌ ಡಾಲರ್‌ ಪ್ರಶ್ನೆ. ಸಮರ್ಪಕವಾಗಿ ಮಿಶ್ರ ಮಾಡಿದರೆ ತೊಂದರೆಯೇನಿಲ್ಲ. ಅಂದರೆ ಯಾವ ಎಣ್ಣೆಯ ಗುಣ ಏನು ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮಿಶ್ರ ಮಾಡಿದರೆ ತೊಂದರೆಯಾಗುವ ಸಾಧ್ಯತೆ ಇಲ್ಲ ಎನ್ನುತ್ತಾರೆ ಆಹಾರ ತಜ್ಞರು.

ಸಾಂದರ್ಭಿಕ ಚಿತ್ರ.

ಬೆಂಗಳೂರು, ಫೆ. 16: ಖಾದ್ಯ ತೈಲಗಳಿಲ್ಲದೆ ಅಡುಗೆ ಮಾಡುವುದು ಅಸಾಧ್ಯ. ಹಸಿಯಾದ ಸೊಪ್ಪು-ಸದೆ, ಕಾಯಿ-ಹಣ್ಣುಗಳನ್ನು ತಿಂದುಕೊಂಡಿರಬಹುದೇ ಹೊರತು ರುಚಿಯಾದ ಪಾಕ ಮಾಡುವುದಕ್ಕೆ ಸ್ವಲ್ಪವಾದರೂ ಜಿಡ್ಡು ಬೇಕು. ಕೊಬ್ಬರಿ ಎಣ್ಣೆ, ಶೇಂಗಾ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸಾಸಿವೆ ಎಣ್ಣೆ- ಹೀಗೆ ತರಹೇವಾರಿ ಎಣ್ಣೆಗಳನ್ನು ಅಡುಗೆಗೆ ಬಳಸಲಾಗುತ್ತದೆ. ಆದರೆ ಒಂದೊಂದು ಎಣ್ಣೆಯ ಸತ್ವ-ಗುಣವೂ ಭಿನ್ನ (Cooking Oils). ಹಾಗಾಗಿ ಹಲವು ಗುಣ-ಸತ್ವಗಳನ್ನು ಪಡೆಯಬೇಕೆಂಬ ನಿಟ್ಟಿನಲ್ಲಿ, ಅಡುಗೆ ಎಣ್ಣೆಗಳನ್ನು ಮಿಶ್ರ ಮಾಡಿ ಬಳಸುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ (Health Tips). ಆದರೆ ಖಾದ್ಯ ತೈಲಗಳನ್ನು ಹೀಗೆ ಮಿಶ್ರ ಮಾಡಿ ಉಪಯೋಗಿಸಬಹುದೇ? ಇದು ಸುರಕ್ಷಿತವೇ? ಇದರ ಸಾಧಕ-ಬಾಧಕಗಳೇನು?

ಇದು ಸುರಕ್ಷಿತವೇ?

ಇದು ಎಲ್ಲಕ್ಕಿಂತ ಮೊದಲು ಕಾಡುವ ಪ್ರಶ್ನೆ. ಆಹಾರ ತಜ್ಞರ ಪ್ರಕಾರ, ಸಮರ್ಪಕವಾಗಿ ಮಾಡಿದರೆ ತೊಂದರೆಯೇನಿಲ್ಲ. ಅಂದರೆ ಯಾವ ಎಣ್ಣೆಯ ಗುಣ ಏನು ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮಿಶ್ರ ಮಾಡಿದರೆ ತೊಂದರೆಯಾಗುವ ಸಾಧ್ಯತೆ ಇಲ್ಲ. ಉದಾಹರಣೆ: ಸೂರ್ಯಕಾಂತಿ ಎಣ್ಣೆಯನ್ನು ಸಾಸಿವೆ ಎಣ್ಣೆಯೊಂದಿಗೆ ಮಿಶ್ರ ಮಾಡುವುದಾದರೆ ಹೆಚ್ಚಿನ ಸಮಸ್ಯೆ ಆಗಲಾರದು. ಸೂರ್ಯಕಾಂತಿ ಎಣ್ಣೆ ಲಘುವಾದ ಮತ್ತು ಹೆಚ್ಚು ಪರಿಮಳವಿಲ್ಲದ ತೈಲ. ಇದಕ್ಕೆ ತನ್ನದೇ ಗಾಢವಾದ ಘಮವಿರುವ ಸಾಸಿವೆ ಎಣ್ಣೆಯನ್ನು ಸೇರಿಸಬಹುದು. ಆದರೆ ಈ ಮಿಶ್ರಣವನ್ನು ಮರುಬಳಕೆ ಮಾಡುವಂತಿಲ್ಲ ಮತ್ತು ಅತಿಯಾದ ಶಾಖಕ್ಕೆ ಒಡ್ಡುವಂತಿಲ್ಲ. ಹೆಚ್ಚಿನ ಶಾಖದಲ್ಲಿ ಕರಿಯುವುದು, ಮತ್ತೆ ಅದೇ ಎಣ್ಣೆಯನ್ನು ಬಳಸುವುದು- ಇಂಥ ಯಾವುದೂ ನಿಷಿದ್ಧ.

ಆಹಾರವನ್ನು ಹಬೆಯಲ್ಲೋ ನೀರಲ್ಲೋ ಹೇಗೆ ಬೇಯಿಸಿದರೆ ಒಳ್ಳೆಯದು?

ಸಮಸ್ಯೆಯೇನು?

ಎಲ್ಲ ತೈಲಗಳಿಗೂ ಅದರದ್ದೇ ಆದ ಸ್ಮೋಕ್‌ ಪಾಯಿಂಟ್‌ ಇರುತ್ತದೆ. ಅಂದರೆ ಎಣ್ಣೆಯನ್ನು ಎಷ್ಟು ಬಿಸಿ ಮಾಡಿದಾಗ ಅದರ ಮೇಲೆ ಹೊಗೆಯೇಳುತ್ತದೆಯೋ ಆ ಬಿಂದುವನ್ನು ಸ್ಮೋಕ್‌ ಪಾಯಿಂಟ್‌ ಎನ್ನಬಹುದು. ಈ ಬಿಂದುವಿನ ನಂತರವೂ ತೈಲಕ್ಕೆ ಹೆಚ್ಚು ಶಾಖ ನೀಡುತ್ತಲೇ ಹೋದಾಗ, ಅದರಿಂದ ಅನಾರೋಗ್ಯಕರ ಸಂಯುಕ್ತಗಳು ವಿಘಟನೆಗೊಳ್ಳುತ್ತವೆ. ಎರಡು ಭಿನ್ನ ಗುಣಗಳ ಎಣ್ಣೆಗಳನ್ನು ಮಿಶ್ರ ಮಾಡಿದಾಗ ಬರುವಂಥ ದೊಡ್ಡ ಸಮಸ್ಯೆಗಳಲ್ಲಿ ಈ ಶಾಖವನ್ನು ತಾಳಿಕೊಳ್ಳುವ ಗುಣವೂ ಒಂದು. ಉದಾ, ಆಲಿವ್‌ ಎಣ್ಣೆಯನ್ನು ಶೇಂಗಾ ಎಣ್ಣೆಯೊಂದಿಗೆ ಮಿಶ್ರ ಮಾಡಿದ್ದೀರಿ ಎಂದಾದರೆ- ಆಲಿವ್‌ ಎಣ್ಣೆ ಬಿಸಿಯನ್ನು ತಡೆಯುವುದೇ ಇಲ್ಲ. ಅದನ್ನು ಹಸಿಯಾಗಿ ತಿಂದರೇ ಒಳ್ಳೆಯದು. ಅದೇ ಶೇಂಗಾ ಎಣ್ಣೆಯ ಹೊಗೆಯಾಡುವ ಬಿಂದು ಸಾಕಷ್ಟು ದೀರ್ಘವಾಗಿದೆ. ಅಲ್ಲಿಗೆ ಶೇಂಗಾ ಎಣ್ಣೆಯಿಂದ ಹೊಗೆ ಬರುವಷ್ಟರಲ್ಲಿ ಆಲಿವ್‌ ಎಣ್ಣೆಯಿಂದ ಹಾನಿಕಾರಕ ವಸ್ತುಗಳು ವಿಘಟನೆಗೊಂಡು ಆಗಿರುತ್ತದೆ. ಆರೋಗ್ಯ ಸಮಸ್ಯೆ ಬರಬಹುದು.

ಸಂಸ್ಕರಿಸಿದ ಎಣ್ಣೆಗಳನ್ನು ಅಥವಾ ರಿಫೈನ್ಡ್‌ ತೈಲಗಳನ್ನು ಗಾಣದ ಎಣ್ಣೆಗಳ ಜತೆ ಮಿಶ್ರ ಮಾಡಿದಾಗ ಆಗುವ ಸಮಸ್ಯೆಯೂ ಇದೇ. ರಿಫೈನ್ಡ್‌ ಎಣ್ಣೆಗಳ ಹೊಗೆಯಾಡುವ ಬಿಂದು ಬಹಳ ಕಡಿಮೆ. ಅಂದರೆ ಸ್ವಲ್ಪ ಬಿಸಿಯಾಗುತ್ತಿದ್ದಂತೆ ಹೊಗೆಯೇಳಲಾರಂಭಿಸುತ್ತದೆ. ಗಾಣದ ಎಣ್ಣೆಗಳ ಅಥವಾ ಕೋಲ್ಡ್‌ ಪ್ರೆಸ್ಡ್‌ ತೈಲಗಳ ಹೊಗೆಯಾಡುವ ಬಿಂದು ದೀರ್ಘವಾಗಿದೆ. ಇಂಥ ಮಿಶ್ರಣಗಳು ಹೃದಯದ ಕಾಯಿಲೆಯಿಂದ ಹಿಡಿದು ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ತಂದಿಡಬಹುದು. ಹಾಗಾಗಿ ಖಾದ್ಯ ತೈಲಗಳನ್ನು ಮಿಶ್ರ ಮಾಡುವಾಗ ತೀರಾ ಲೆಕ್ಕಾಚಾರ ಅಗತ್ಯ. ಒಂದರ್ಥದಲ್ಲಿ ಮಾಡದಿದ್ದರೂ ಒಳ್ಳೆಯದೇ.

Cooking Oil

ಪರಿಹಾರವೇನು?

ಹಾಗಾದರೆ ಏನು ಮಾಡಬೇಕು? ಒಂದು ತೈಲದಲ್ಲಿ ಒಮೇಗಾ 3 ಕೊಬ್ಬಿನಾಮ್ಲ ಹೆಚ್ಚಿದ್ದರೆ, ಇನ್ನೊಂದರಲ್ಲಿ ಒಮೇಗಾ- 6, ಮತ್ತೊಂದರಲ್ಲಿ ಇನ್ನಾವುದೋ ಸತ್ವ… ಹೀಗೆ ಭಿನ್ನ ಸತ್ವಗಳನ್ನು ತೈಲಗಳಿಂದ ಪಡೆಯಬೇಕೆಂದರೆ ಏನು ಮಾಡಬೇಕು? ಖಾದ್ಯ ತೈಲಗಳನ್ನು ಒಂದಕ್ಕೊಂದು ಮಿಶ್ರ ಮಾಡಿ ಬಳಸುವುದಕ್ಕಿಂತ ಒಳ್ಳೆಯ ದಾರಿಗಳಿವೆ. ಏನದು?

ಹಿಪ್ಪಲಿಯ ಔಷಧೀಯ ಗುಣಗಳ ಬಗ್ಗೆ ಗೊತ್ತೆ?

ಬೇರೆ ಬೇರೆ ತೈಲಗಳನ್ನು ಭಿನ್ನ ಅಡುಗೆಗಳಲ್ಲಿ ಬಳಸುವುದು ಸುಲಭದ ಪರಿಹಾರ. ಉದಾಹರಣೆಗೆ ಹೇಳುವುದಾದರೆ, ನಿತ್ಯದ ಅಡುಗೆಗೆ ಸೂರ್ಯಕಾಂತಿ ಎಣ್ಣೆಯೋ ಕೊಬ್ಬರಿ ಎಣ್ಣೆಯನ್ನೋ ಬಳಸಬಹುದು. ಎಂದಾದರೂ ಕರಿಯುವ ಅಗತ್ಯವಿದ್ದರೆ ಶೇಂಗಾ ಎಣ್ಣೆ ಸೂಕ್ತ. ಉಪ್ಪಿನಕಾಯಿ ಹಾಕುವುದು ಅಥವಾ ಹುರಿಯುವ ಉದ್ದೇಶವಿದ್ದರೆ ಸಾಸಿವೆ ಎಣ್ಣೆ ಪ್ರಯತ್ನಿಸಿ. ಸಲಾಡ್‌ಗಳಿಗೆ ಅಥವಾ ಕಡಿಮೆ ಶಾಖದ ಅಡುಗೆಗಳಿಗೆ ಆಲಿವ್‌ ಎಣ್ಣೆ ಹೊಂದಿಕೊಳ್ಳುತ್ತದೆ. ಹೀಗೆ ಒಂದೊಂದು ಅಡುಗೆಗೆ ಬೇರೆಯದೇ ಎಣ್ಣೆಯನ್ನು ಬಳಸುವುದು ಒಂದು ಮಾರ್ಗ.

ಎಷ್ಟೊಂದು ಎಣ್ಣೆಗಳನ್ನು ತಂದಿರಿಸಿಕೊಳ್ಳಲು ಮನೆಯೇನು ಅಂಗಡಿಯೇ ಎನಿಸಬಹುದು. ಅಂಥವರಿಗಾಗಿ ಇನ್ನೊಂದು ಮಾರ್ಗವಿದೆ. ಒಂದೊಂದು ತಿಂಗಳು ಒಂದೊಂದು ಅಡುಗೆ ಎಣ್ಣೆಯನ್ನು ಬಳಸಬಹುದು. ಆಗ ಸಿಕ್ಕಾಪಟ್ಟೆ ಖಾದ್ಯ ತೈಲಗಳನ್ನು ತಂದು ಪೇರಿಸಿಕೊಳ್ಳುವ ಅಗತ್ಯವಿಲ್ಲ. ಹಲವು ಬಗೆಯ ಸತ್ವಗಳಿಗೂ ಕೊರತೆ ಇರುವುದಿಲ್ಲ. ಮಿಶ್ರ ಎಣ್ಣೆಗಳ ಉಸಾಬರಿಯೂ ಬೇಕಾಗಿಲ್ಲ.

Ramesh Ballamoole

View all posts by this author