ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರತಿದಿನ ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ ಅಥವಾ ನಷ್ಟವೋ? ತಜ್ಞರು ನೀಡಿದ ಅಚ್ಚರಿಯ ಮಾಹಿತಿ ಇಲ್ಲಿದೆ ನೋಡಿ

Diet and Health Tips: ನಿತ್ಯ ಬೆಳಗ್ಗೆ ಎದ್ದ ತಕ್ಷಣ ಬ್ಲ್ಯಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ ಇದು ನಿಮ್ಮ ದೇಹದ ಉರಿಯೂತಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬ ಪ್ರಶ್ನೆಗೆ ಆರೋಗ್ಯ ತಜ್ಞರು ಮಹತ್ವದ ಉತ್ತರ ನೀಡಿದ್ದಾರೆ. ಮಿತವಾದ ಸೇವನೆಯಿಂದ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹಕ್ಕೆ ರಕ್ಷಣೆ ನೀಡಿದರೆ, ಅತಿಯಾದರೆ ಅಥವಾ ಸಕ್ಕರೆ ಸೇರಿಸಿದರೆ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆ. ಈ ಕುರಿತ ತಜ್ಞರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಸಂಗ್ರಹ ಚಿತ್ರ

ಬೆಂಗಳೂರು, ನ.20: ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಬ್ಲ್ಯಾಕ್ ಕಾಫಿ (Black Coffee) ಕುಡಿಯುವ ಅಭ್ಯಾಸ ಅನೇಕರಿಗೆ ಇರುತ್ತದೆ. ಅದರ ಘಾಡವಾದ ಸುವಾಸನೆ ಮತ್ತು ರುಚಿ ಮನಸ್ಸಿಗೆ ಮುದ ನೀಡುವುದರ ಜೊತೆಗೆ, ಕಾಫಿಯಲ್ಲಿರುವ ನೈಸರ್ಗಿಕ ಗುಣಗಳು ದೇಹದ ಉರಿಯೂತವನ್ನು (Inflammation) ತಗ್ಗಿಸಲು ನೆರವಾಗುತ್ತವೆ ಎನ್ನುತ್ತವೆ ಹಲವು ಅಧ್ಯಯನಗಳು. ಆದರೆ, ಬರೀ ಅಧ್ಯಯನಗಳನ್ನು ನಂಬಿ ಪ್ರತಿದಿನ ಬ್ಲ್ಯಾಕ್ ಕಾಫಿ ಕುಡಿಯುವುದು ನಿಜಕ್ಕೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ನೋಡಿ ವೈದ್ಯರು ನೀಡುವ ಕೆಲವು ಸಲಹೆಗಳು

ಆಹಾರ ತಜ್ಞರ ಪ್ರಕಾರ, ಮಿತ ಪ್ರಮಾಣದಲ್ಲಿ ಬ್ಲ್ಯಾಕ್ ಕಾಫಿ ಸೇವಿಸುವುದು ದೇಹಕ್ಕೆ ಹಿತಕಾರಿಯಾಗಿದೆ. ಕಾಫಿ ಬೀಜಗಳಲ್ಲಿರುವ ಪಾಲಿಫಿನಾಲ್‌ಗಳು ಮತ್ತು ಕ್ಲೋರೋಜೆನಿಕ್ ಆಮ್ಲದಂತಹ ಉತ್ಕರ್ಷಣ ನಿರೋಧಕಗಳು ಜೀವಕೋಶಗಳನ್ನು ರಕ್ಷಿಸಿ, ದೇಹದಲ್ಲಿನ ಉರಿಯೂತದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಸಕ್ಕರೆ ಅಥವಾ ಹಾಲಿನ ಕ್ರೀಮ್ ಬೆರೆಸದೆ ಕುಡಿಯುವುದರಿಂದ ಅನಗತ್ಯ ಕ್ಯಾಲೋರಿಗಳೂ ಸೇರುವುದಿಲ್ಲ, ಮೆಟಾಬಾಲಿಸಮ್ ಕೂಡ ಚುರುಕಾಗಿರುತ್ತದೆ.

ಜಿಮ್‌ಗೆ ಹೋಗದೆ ಬ್ಲ್ಯಾಕ್ ಟೀ ಕುಡಿದು ತೂಕ ಇಳಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಮೆದುಳು ಮತ್ತು ಲಿವರ್‌ಗೆ ಬ್ಲ್ಯಾಕ್ ಕಾಫಿ ಬೆಸ್ಟ್‌

ಕಾಫಿ ಕುಡಿಯದವರೊಂದಿಗೆ ಹೋಲಿಸಿದರೆ, ನಿಯಮಿತವಾಗಿ ಕಾಫಿ ಸೇವಿಸುವವರ ದೀರ್ಘಕಾಲೀನ ಆರೋಗ್ಯದಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಕಾಫಿ ಪ್ರಿಯರಲ್ಲಿ ಖಿನ್ನತೆ ಹಾಗೂ ಲಿವರ್ ಸಂಬಂಧಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಕಡಿಮೆ ಇರುತ್ತದೆ ಎಂಬ ಅಂಶ ಸಂಶೋಧನೆಗಳಲ್ಲಿ ಹೊರಬಿದ್ದಿದೆ. ಅಷ್ಟೇ ಅಲ್ಲದೆ, ಪ್ರತಿದಿನ ಕನಿಷ್ಠ ಎರಡು ಕಪ್ ಕಾಫಿ ಕುಡಿಯುವವರಲ್ಲಿ ದಿನವಿಡೀ ಹೆಚ್ಚು ಚೈತನ್ಯ, ಉತ್ಸಾಹ ಮತ್ತು ತೃಪ್ತಿಯ ಭಾವನೆ ಇರುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಕಾಫಿ ಕುಡಿಯದವರಿಗೆ ಹೋಲಿಸಿದರೆ ನಿಯಮಿತವಾಗಿ ಕಾಫಿ ಸೇವಿಸುವವರಲ್ಲಿ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಬರುವ ಅಪಾಯ ಶೇಕಡಾ 28ರಷ್ಟು ಕಡಿಮೆ ಇರುತ್ತದೆ ಎಂಬುದನ್ನು ಅಧ್ಯಯನಗಳು ತೋರಿಸಿವೆ. ವಿಶೇಷವಾಗಿ ಆಲ್ಝೈಮರ್ , ಪಾರ್ಕಿನ್ಸನ್ ಮತ್ತು ಡಿಮೆನ್ಶಿಯಾ ನಂತಹ ಸಮಸ್ಯೆಗಳ ವಿರುದ್ಧ ಇದು ರಕ್ಷಣೆ ನೀಡಬಲ್ಲದು ಎನ್ನಲಾಗಿದೆ.

ಅತಿಯಾದರೆ ಏನಾಗುತ್ತೆ?

ಒಳ್ಳೆಯದು ತಾನೇ ಎಂದು ದಿನಕ್ಕೆ ಹಲವು ಕಪ್ ಬ್ಲ್ಯಾಕ್ ಕಾಫಿ ಕುಡಿಯುವ ಅಭ್ಯಾಸ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಹೆಚ್ಚಿನ ಕೆಫೀನ್ ದೇಹದಲ್ಲಿ ಒತ್ತಡದ ಹಾರ್ಮೋನ್ ಮಟ್ಟವನ್ನು ಏರಿಸಬಹುದು. ಇದರಿಂದ ನಿದ್ರೆಯ ತೊಂದರೆ, ಆತಂಕ ಹಾಗೂ ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಂಡು, ದೇಹದಲ್ಲಿ ಉರಿಯೂತ ಹೆಚ್ಚಾಗುವ ಸಾಧ್ಯತೆಯೇ ಹೆಚ್ಚು.

ಸಕ್ಕರೆ, ಸಿರಪ್ ಸೇರಿಸಿದರೆ ಪ್ರಯೋಜನವಿಲ್ಲ

ಬ್ಲ್ಯಾಕ್ ಕಾಫಿಯ ಆರೋಗ್ಯಕರ ಲಾಭ ಸಿಗಬೇಕೆಂದರೆ ಅದು ಶುದ್ಧವಾಗಿರಬೇಕು. ಹೆಚ್ಚಿನ ಸಕ್ಕರೆ, ಫ್ಲೇವರ್ಡ್ ಸಿರಪ್ ಅಥವಾ ಕ್ರೀಮ್ ಸೇರಿಸಿದರೆ ದೇಹದಲ್ಲಿ ಉರಿಯೂತ ಹೆಚ್ಚಿಸುವ ಅಂಶಗಳೇ ಸೇರಿಕೊಳ್ಳುತ್ತವೆ. ಹೀಗಾಗಿ, ದಿನಕ್ಕೆ ಒಂದರಿಂದ ಎರಡು ಕಪ್ ಬ್ಲ್ಯಾಕ್ ಕಾಫಿಯನ್ನು ಮಿತವಾಗಿ, ಅದರಲ್ಲೂ ಆಹಾರ ಸೇವಿಸಿದ ನಂತರ ಕುಡಿಯುವುದು ಉತ್ತಮ ಎನ್ನುವುದು ತಜ್ಞರ ಸಲಹೆ.