ಬೆಂಗಳೂರು: ಬೆಳಗಿನ ಉಪಾಹಾರ ದಿನದ ಅತಿ ಮುಖ್ಯ ಆಹಾರ ಎನ್ನುವ ಮಾತನ್ನು ನಾವೆಲ್ಲ ಸಾಕಷ್ಟು ಕೇಳಿದ್ದೇವೆ (Healthy Breakfast). ಆದರೂ ಬೆಳಗಿನ ತಿಂಡಿ ತಿನ್ನದೇ ಅಥವಾ ಅರ್ಧಂಬರ್ಧ ತಿನ್ನುವುದು, ಬ್ರಂಚ್ ಹೆಸರಿನಲ್ಲಿ ತಡವಾಗಿ ತಿನ್ನುವುದು ಎಂದೆಲ್ಲ ಮಾಡುತ್ತೇವೆ. ಪರಿಣಾಮ, ಬೆಳಗಿನ ಉಪವಾಸದ ನಂತರ ದಿನವಿಡೀ ಏನೇ ಆಹಾರವನ್ನು ನಾವು ದೇಹಕ್ಕೆ ನೀಡಿದರೂ, ಮತ್ತೆ ದೊರೆಯದಿದ್ದರೆ ಎನ್ನುವ ಭಯದಿಂದ ನಮ್ಮ ದೇಹ ದೊರೆತ ಕ್ಯಾಲರಿಗಳನ್ನು ಉಳಿಸಿಕೊಳ್ಳುವುದಕ್ಕೇ ನೋಡುತ್ತದೆ. ಬದಲಿಗೆ, ಬೆಳಗ್ಗೆ ಸರಿಯಾದ ರೀತಿಯಲ್ಲಿ ಉಪಾಹಾರ ಹೊಟ್ಟೆಗೆ ಬಿದ್ದರೆ, ನಮ್ಮ ಶರೀರ ಜಿಪುಣತನ ಮಾಡದೆ ಸಿಕ್ಕಿದ ಕ್ಯಾಲರಿಗಳನ್ನು ಖರ್ಚು ಮಾಡುತ್ತದೆ.
ಬೆಳಗಿನ ಹೊತ್ತಿಗೆ ʻಸರಿಯಾದ ಆಹಾರʼ ಹೊಟ್ಟೆಗೆ ಬೀಳುವುದು ಎಂದರೇನು? ಯಾವ ಆಹಾರವನ್ನು ನಾವು ಸರಿಯಾದ ಆಹಾರ ಎಂದು ಕರೆಯಬಹುದು? ಕೆಲವರು ಪ್ರೊಟೀನ್‌ಯುಕ್ತ ತಿಂಡಿಯೇ ಬೆಳಗಿನ ಹೊತ್ತು ಸೂಕ್ತ ಎಂದರೆ ಇನ್ನೂ ಕೆಲವರದ್ದು ಕಾರ್ಬೋಹೈಡ್ರೇಟ್‌ಭರಿತ ಉಪಾಹಾರವೇ ಸರಿ ಎಂಬ ವಾದವಿದೆ. ಹಾಗಾದರೆ ನಿಜಕ್ಕೂ ಯಾವುದು ಬೇಕು ನಮ್ಮ ಶರೀರಕ್ಕೆ ಎನ್ನುವುದನ್ನು ನೋಡೋಣ.
ತೂಕ ಇಳಿಸುವವರು ಅನ್ನ-ತುಪ್ಪ-ಬಾಳೆಹಣ್ಣು ಸೇವಿಸಬಾರದೆ? ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ ಇಲ್ಲಿದೆ
ಪ್ರೊಟೀನ್‌ಯುಕ್ತ ಆಹಾರದ ಲಾಭ: ದೇಹ ಬೆಳೆಸುವವರು ಅಥವಾ ಜಿಮ್ ಆಸಕ್ತರಿಗೆ ಮಾತ್ರವೇ ಹೆಚ್ಚಿನ ಪ್ರೊಟೀನ್ ಬೇಕಾಗುತ್ತದೆ ಎಂದೇನಿಲ್ಲ. ಇಡೀ ದಿನ ಕಾಡುವ ಕಳ್ಳ ಹಸಿವಿಗೆ ರಾಮಬಾಣ ಇಂಥ ಆಹಾರ. ಹಾಗೆನ್ನುತ್ತಿದ್ದಂತೆ ಬೆಳಗೆದ್ದು ಮಾಂಸಾಹಾರ ಸೇವಿಸಬೇಕೆಂದು ಖಂಡಿತ ಅರ್ಥವಲ್ಲ. ಸಸ್ಯಮೂಲದ ಪ್ರೊಟೀನ್‌ಗಳ ಆಯ್ಕೆ ಬೇಕಷ್ಟಿದೆ. (ಉದಾ, ಕಿನೂವಾ, ಸಿರಿ ಧಾನ್ಯಗಳು) ಹಾಲು ಮತ್ತು ಹಾಲಿನ ಉತ್ಪನ್ನಗಳು (ಉದಾ: ಪನೀರು, ಚೀಸ್) ಸಹ ಉತ್ತಮ ಪ್ರೊಟೀನ್ ಹೊಂದಿದವು. ಮೊಟ್ಟೆ ನಿಮ್ಮ ಆಹಾರದ ಪಟ್ಟಿಯಲ್ಲಿದ್ದರೆ ಅದಕ್ಕೂ ಬೆಳಗಿನ ಹೊತ್ತು ಖಂಡಿತ ಸ್ಥಾನ ಕೊಡಬಹುದು.
ಇದೇ ಯಾಕೆ?: ನಮ್ಮಿಷ್ಟದ ಸಮೋಸಾ ಯಾಕೆ ಬೆಳಗಿನ ಉಪಾಹಾರಕ್ಕೆ ಬೇಡ ಎನ್ನುವ ಪ್ರಶ್ನೆ ಕೆಲವರಿಗಾದರೂ ಬರಬಹುದು. ಆದರೆ ಈ ಗುಜರಿ ತಿಂಡಿಗಳ ಬದಲು ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವುದರೊಂದ ನಮ್ಮ ಹೃದಯದ ಆರೋಗ್ಯವನ್ನು ಉತ್ತಮವಾಗಿ ಇಡುವುದಕ್ಕೆ ಸಾಧ್ಯವಾಗುತ್ತದೆ. ದೇಹದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಿ, ಕೊಬ್ಬನ್ನು ಕಡಿಮೆ ಮಾಡಿ, ತೂಕ ಇಳಿಸುತ್ತವೆ. ಇದರಿಂದ ದಿನವಿಡೀ ಚೈತನ್ಯ ತುಂಬಿದಂತೆ ಇರುವ ಶರೀರ ಮತ್ತಷ್ಟು ಚಟುವಟಿಕೆಯಲ್ಲಿ ಇರುವುದಕ್ಕೆ ಸಾಧ್ಯ. ಇಡೀ ದಿನ ಹೊಟ್ಟೆ ತುಂಬಿದ ಅನುಭವ ನೀಡಿ, ಕುರುಕಲು ತಿನ್ನುವ ಆಸೆಗೆ ಕಡಿವಾಣ ಹಾಕುತ್ತದೆ. ಶರೀರದ ತೂಕ ಇಳಿಸುವ ಅಥವಾ ಇನ್ಯಾವುದಾದರೂ ರೀತಿಯ ಫಿಟ್‌ನೆಟ್ ಗುರಿಯನ್ನು ಹೊಂದಿದ್ದವರಿಗೆ ಇಂಥ ಆಹಾರ ಹೆಚ್ಚು ಸೂಕ್ತ.

ಪಿಷ್ಟಭರಿತ ಆಹಾರದ ಲಾಭ: ಹಾಗೆನ್ನುತ್ತಿದ್ದಂತೆ ಸಕ್ಕರೆಭರಿತ ಸೀರಿಯಲ್‌ಗಳನ್ನು ಹಾಲಿನಲ್ಲಿ ತೇಲಿಸಿಕೊಂಡು ತಿನ್ನುವವರ ಚಿತ್ರವನ್ನು ಕಣ್ಮುಂದೆ ತಂದುಕೊಳ್ಳಬೇಕಿಲ್ಲ. ಅದರ ಅಗತ್ಯವೂ ಇಲ್ಲ. ಮೊದಲಿನಿಂದ ಪರಂಪರಾಗತವಾಗಿ ನಮ್ಮ ಉಪಾಹಾರಗಳೇ ಸಾಕು. ದೋಸೆ, ಇಡ್ಲಿ, ಚಪಾತಿ, ಉಪ್ಪಿಟ್ಟು, ಅವಲಕ್ಕಿಗಳಂಥವು ಪಿಷ್ಟಭರಿತ ಉಪಾಹಾರದ ಪಟ್ಟಿಗೆ ಸೇರುತ್ತವೆ. ಜತೆಗೆ ಪಲ್ಯ. ಚಟ್ನಿ, ಸಾಂಬಾರಿನಂಥವು ಹೇಗೂ ಇರುತ್ತವೆ. ಇಡಿ ಧಾನ್ಯಗಳು, ಹಣ್ಣು, ತರಕಾರಿಗಳೆಲ್ಲಾ ನಾರು ಮತ್ತು ಪಿಷ್ಟಭರಿತ ಉಪಾಹಾರದ ಮಾದರಿಗಳೇ ಹೊರತು ಬೇರೇನಲ್ಲ.
ಚರ್ಮದ ಆರೋಗ್ಯದಿಂದ ಮಧುಮೇಹ ನಿಯಂತ್ರಣದವರೆಗೆ ಕೊತ್ತಂಬರಿ ಬೀಜಗಳ ಆರೋಗ್ಯ ಲಾಭ ಒಂದೆರಡಲ್ಲ!
ಇದೇ ಯಾಕೆ?: ಇಡೀ ದಿನ ನಮ್ಮನ್ನು ಸಶಕ್ತರನ್ನಾಗಿರಿಸಿ, ಜೀರ್ಣಾಂಗದ ಆರೋಗ್ಯವನ್ನು ಕಾಪಾಡಿ, ಮಾನಸಿಕವಾಗಿ ಲವಲವಿಕೆಯಲ್ಲಿ ಇರುವಂತೆ ಮಾಡುತ್ತವೆ ಇಂಥ ಆಹಾರಗಳು. ಬೆಳಗೆದ್ದು ಯೋಗ, ಜಿಮ್, ರನ್ನಿಂಗ್ ಎಂದೆಲ್ಲಾ ಹೋಗುವವರಿಗೆ ಇಂಥ ಆಹಾರವೇ ಸೂಕ್ತ. ನಮ್ಮ ಚಟುವಟಿಕೆಗಳು ಏನು, ಹೇಗೆ ಎನ್ನುವುದರ ಮೇಲೆ ನಮ್ಮ ಬೆಳಗಿನ ಉಪಾಹಾರವನ್ನು ನಾವೇ ನಿರ್ಧರಿಸಿಕೊಳ್ಳಬಹುದು. ಪ್ರೊಟೀನ್ ಮತ್ತು ಪಿಷ್ಟಗಳ ಮಿಶ್ರಣವನ್ನು ಹೊಂದಿದ ಆಹಾರ ಬಹುತೇಕ ಎಲ್ಲರಿಗೂ, ಎಲ್ಲ ಕಾಲಕ್ಕೂ ಹೊಂದುವಂಥದ್ದು.
ಆರೋಗ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.