- ಡಾ.ಎಚ್.ಎಸ್. ಹರ್ಷಿತಾ
ರುಮಟಾಯ್ಡ್ ಆರ್ಥ್ರೈಟಿಸ್ (Rheumatoid Arthritis) ಎಂಬುದು ದೇಹದ ರೋಗನಿರೋಧಕ ಶಕ್ತಿಯು ತನ್ನದೇ ದೇಹದ ಕೀಲುಗಳ ಮೇಲೆ ದಾಳಿ ಮಾಡುವ ದೀರ್ಘಕಾಲೀನ ಸ್ವಯಂ ನಿರೋಧಕ ಕಾಯಿಲೆಯಾಗಿದೆ. ಇದರಿಂದ ಕೀಲುಗಳಲ್ಲಿ ನೋವು, ಊತ ಮತ್ತು ಬಿಗಿತ ಉಂಟಾಗುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ, ಕೀಲುಗಳ ಚಲನೆಗೆ ತೊಂದರೆಯಾಗಿ ದೈನಂದಿನ ಚಟುವಟಿಕೆಗಳಿಗೂ ಅಡ್ಡಿಯಾಗಬಹುದು. ಆದ್ದರಿಂದ ಆರಂಭಿಕ ಹಂತದಲ್ಲಿಯೇ ರೋಗವನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ.
28 ವರ್ಷದ ಅವಿವಾಹಿತ ಯುವತಿಯೊಬ್ಬರು ಕಳೆದ ಐದು ವರ್ಷಗಳಿಂದ ರುಮಟಾಯ್ಡ್ ಆರ್ಥ್ರೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದರು ಮತ್ತು ನಿಯಮಿತವಾಗಿ ಔಷಧಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಅವರ ರಕ್ತ ಪರೀಕ್ಷೆಯಲ್ಲಿ RA ಫ್ಯಾಕ್ಟರ್ ಪಾಸಿಟಿವ್ ಆಗಿತ್ತು. ಅವರು ಎರಡೂ ಮೊಣಕಾಲುಗಳಲ್ಲಿ ತೀವ್ರ ನೋವು, ಊತ ಹಾಗೂ ಬಿಗಿತದ ಸಮಸ್ಯೆಯಿಂದ ಬಳಲುತ್ತಾ ನಡೆಯಲು ಕಷ್ಟಪಡುತ್ತಿದ್ದರು. ಕೀಲುಗಳ ಚಲನೆಯೂ ಸೀಮಿತವಾಗಿತ್ತು. ಇದರೊಂದಿಗೆ ಮುಟ್ಟಿನ ಚಕ್ರದಲ್ಲಿ ಅನಿಯಮಿತತೆ, ಮಲಬದ್ಧತೆ, ಜೀರ್ಣಕ್ರಿಯೆಯ ತೊಂದರೆಗಳು ಹಾಗೂ ನಿರಂತರ ಮಾನಸಿಕ ಒತ್ತಡದ ಬಗ್ಗೆಯೂ ದೂರಿದ್ದರು.
ಸಮಗ್ರ ಪರೀಕ್ಷೆ, ವೈಯಕ್ತಿಕ ಪಂಚಕರ್ಮ ಚಿಕಿತ್ಸಾ ವಿಧಾನ
ಸಮಗ್ರ ವೈದ್ಯಕೀಯ ಪರೀಕ್ಷೆ ಮತ್ತು ಅಗತ್ಯವಿರುವ ತಪಾಸಣೆಗಳ ನಂತರ ಮೊದಲನೆಯದಾಗಿ ಅವರಿಗೆ ಸೇವಿಸಲು ಔಷಧಿಗಳನ್ನು ನೀಡಲಾಯಿತು. ಒಂದು ತಿಂಗಳ ಚಿಕಿತ್ಸೆ ನಂತರ, ಮರುಪರೀಕ್ಷೆಯಲ್ಲಿ RA ಫ್ಯಾಕ್ಟರ್ ನೆಗೆಟಿವ್ ಆಗಿರುವುದು ಕಂಡುಬಂತು. ಅವರ ಆರೋಗ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆಯ ಮುಂದುವರಿದ ಭಾಗವಗಿ ಪಂಚಕರ್ಮ ಚಿಕಿತ್ಸೆಯನ್ನು ಆರಂಭಿಸಲಾಯಿತು.
ಪಂಚಕರ್ಮ ಚಿಕಿತ್ಸೆಯ ಪ್ರಮುಖ ವಿಧಾನಗಳಲ್ಲಿ ಒಂದಾದ ಬಸ್ತಿ ಚಿಕಿತ್ಸೆ (Enema)ಯನ್ನು ಬಾಹ್ಯ ಚಿಕಿತ್ಸೆಗಳು ಹಾಗೂ ಆಂತರಿಕ ಔಷಧಿಗಳೊಂದಿಗೆ ನೀಡಲಾಯಿತು. ಇದರ ನಂತರ ಚಿಕಿತ್ಸಾ ಯೋಜನೆಯ ಭಾಗವಾಗಿ ವಿರೇಚನ ಚಿಕಿತ್ಸೆ ಎರಡನೇ ಹಂತದಲ್ಲಿ ನೀಡಲಾಯಿತು.
ಉಬ್ಬಿದ ರಕ್ತನಾಳಗಳ ನಿರ್ವಹಣೆಯಲ್ಲಿ ಆಯುರ್ವೇದದ ಪೂರಕ ಪಾತ್ರ: ಆರೋಗ್ಯಕರ ಕಾಲುಗಳತ್ತ ಹೊಸ ಹೆಜ್ಜೆ
ಚೇತರಿಕೆಯ ಹಾದಿಯಲ್ಲಿ ಹೊಸ ಬೆಳಕು!
ಚಿಕಿತ್ಸೆಯ ನಂತರ ಯುವತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತು. ಕೀಲುಗಳ ನೋವು ಮತ್ತು ಬಿಗಿತ ಗಣನೀಯವಾಗಿ ಕಡಿಮೆಯಾಯಿತು. ಕೀಲುಗಳ ಚಲನೆ ಸುಧಾರಿಸಿ, ನಡೆಯಲು ಹೆಚ್ಚು ಅನುಕೂಲವಾಯಿತು. ಮಲಬದ್ಧತೆ ಮತ್ತು ಜೀರ್ಣಕ್ರಿಯೆಯ ತೊಂದರೆಗಳು ನಿವಾರಣೆಯಾದವು. ಮುಟ್ಟಿನ ಚಕ್ರವೂ ಕ್ರಮಬದ್ಧವಾಯಿತು. ತಮ್ಮ ಆರೋಗ್ಯದಲ್ಲಾದ ಸುಧಾರಣೆಯಿಂದ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಅವರು ವೈದ್ಯರ ಸಲಹೆಯಂತೆ ಆಂತರಿಕ ಔಷಧಗಳನ್ನು ಮುಂದುವರಿಸುತ್ತಿದ್ದು, ನಿಯಮಿತವಾಗಿ ತಪಾಸಣೆಗೆ ಬರುತ್ತಿದ್ದಾರೆ.
ಪರೀಕ್ಷಾ ವರದಿಗಿಂತ ಮುಖ್ಯವಾದದ್ದು ಸಮಗ್ರ ಆರೋಗ್ಯದ ಸುಧಾರಣೆ!
ರುಮಟಾಯ್ಡ್ ಆರ್ಥ್ರೈಟಿಸ್ ದೀರ್ಘಕಾಲೀನ ಸ್ವಯಂ ನಿರೋಧಕ ಕಾಯಿಲೆಯಾಗಿದ್ದು, RA ಫ್ಯಾಕ್ಟರ್ ನೆಗೆಟಿವ್ ಆಗಿರುವುದೊಂದೇ ರೋಗ ಸಂಪೂರ್ಣ ಗುಣವಾಗಿದೆ ಎಂಬುದಕ್ಕೆ ಸಾಕ್ಷಿಯಲ್ಲ. ಈ ಕಾಯಿಲೆಯ ಸಮರ್ಪಕ ನಿರ್ವಹಣೆಗೆ ಆರಂಭಿಕ ರೋಗನಿರ್ಣಯ, ಅಗತ್ಯ ಪರೀಕ್ಷೆಗಳು, ಸಕಾಲಿಕ ಹಾಗೂ ವೈಯಕ್ತಿಕ ಚಿಕಿತ್ಸಾ ವಿಧಾನ, ನಿಯಮಿತ ತಪಾಸಣೆ ಮತ್ತು ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅತ್ಯಗತ್ಯ. ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಗಳನ್ನು ನಿಲ್ಲಿಸಬಾರದು.
ಈ ಪ್ರಕರಣವು ರೋಗಿಯ ಪರೀಕ್ಷಾ ವರದಿಗಳ ಸುಧಾರಣೆಯಷ್ಟೇ ಅಲ್ಲದೆ, ಅವರ ನೋವು ಕಡಿಮೆಯಾಗಿ, ಚಲನವಲನ ಸುಧಾರಿಸಿ, ದೈನಂದಿನ ಜೀವನದ ಗುಣಮಟ್ಟ ಉತ್ತಮಗೊಳ್ಳುವುದೂ ಚಿಕಿತ್ಸೆಯ ನಿಜವಾದ ಯಶಸ್ಸು ಎಂಬುದನ್ನು ತೋರಿಸುತ್ತದೆ.