ಬೆಂಗಳೂರು: ಸಾಮಾಜಿಕ ಮಾಧ್ಯಮ ನೋಡುತ್ತೀರಿ, ನಿಮ್ಮಿಷ್ಟದ ಯಾವುದೋ ನಿಯತಕಾಲಿಕ ಓದುತ್ತೀರಿ, ಯಾರೊಂದಿಗೊ ಮಾತಾಡುತ್ತೀರಿ, ಹೊರಗೆಲ್ಲೊ ಹೋಗುತ್ತೀರಿ- ಎಲ್ಲ ಸಂದರ್ಭಗಳಲ್ಲೂ ಒಂದಿಷ್ಟು ಮಾಹಿತಿಗಳು ವಿನಿಮಯ ಆಗಿಯೇ ಆಗುತ್ತವೆ… ಅವುಗಳಲ್ಲಿ ಒಂದಿಷ್ಟು ಸತ್ಯ, ಇಂದಿಷ್ಟು ಮಿಥ್ಯ. ಅದರಲ್ಲೂ ಆರೋಗ್ಯ ಮತ್ತು ಪೌಷ್ಟಿಕಾಂಶಗಳ ಬಗ್ಗೆ ಹರಡುವ ಅಂತೆ-ಕಂತೆಗಳಿಗೆ ತುದಿ ಮೊದಲೇ ಇಲ್ಲ. ಅದನ್ನು ತಿಂದರೆ ಹೀಗಾಗುತ್ತದೆ, ಇದನ್ನು ತಿನ್ನದಿದ್ದರೆ ಹಾಗಾಗುತ್ತದೆ… ಎಂದು ಕೋಡು, ಬಾಲ ಬೆಳೆಯುತ್ತಾ ಮುಂದೋಡುವ ಸುದ್ದಿಗಳಲ್ಲಿ ಯಾವುದನ್ನು ನಂಬುವುದು, ಯಾವುದನ್ನು ಬಿಡುವುದು? ಈ ಅಂತೆ-ಕಂತೆಗಳ ಸಂತೆಯಲ್ಲಿ ಯಾವುದು ಸರಿ, ಯಾವುದು ತಪ್ಪು? ಬದುಕಿನ ಎಲ್ಲಾ ವಲಯಗಳಲ್ಲಿ ಹರಿದಾಡುವಂತೆ, ಆಹಾರ ಮತ್ತು ಪೋಷಕಾಂಶಗಳ ಬಗ್ಗೆಯೂ ಬಹಳಷ್ಟು ಮಿಥ್ಯೆಗಳು ಪ್ರಚಲಿತದಲ್ಲಿವೆ (Health Tips). ಹಾರಾಡುತ್ತಿರುವ ಒಂದಿಷ್ಟು ಕಲ್ಪನೆಗಳಿಗೆ ವಾಸ್ತವದ ಲೇಪ ಇಲ್ಲಿದೆ.
ನೈಸರ್ಗಿಕ ಸಕ್ಕರೆಯಲ್ಲಿ ದೋಷವಿಲ್ಲ
ಸಂಸ್ಕರಿತ ಬಿಳಿ ಸಕ್ಕರೆ ತಿಂದರೆ ಮಾತ್ರವೇ ಆರೋಗ್ಯಕ್ಕೆ ಹಾಳು; ಉಳಿದಂತೆ, ಜೇನುತುಪ್ಪ, ಬೆಲ್ಲ ಮುಂತಾದ ನೈಸರ್ಗಿಕವಾಗಿ ದೊರೆಯುವ ಸಿಹಿಗಳನ್ನು ಎಷ್ಟು ತಿಂದರೂ ತೊಂದರೆಯಿಲ್ಲ- ಇದು ಎಲ್ಲೆಡೆ ಪ್ರಚಲಿತದಲ್ಲಿ ಇರುವಂಥದ್ದು. ತಜ್ಞರ ಪ್ರಕಾರ, ಸಿಹಿ ಅಂದರೆ ಸಿಹಿಯೇ. ಸಂಸ್ಕರಿತ ಬಿಳಿ ಸಕ್ಕರೆಯಷ್ಟು ಉಳಿದವು ಮಾರಕವಲ್ಲದಿರಬಹುದು. ಆದರೆ ಅವುಗಳನ್ನಾದರೂ ಮಿತಿಮೀರಿದರೆ ಆಪತ್ತು ತಪ್ಪಿದ್ದಲ್ಲ. ಆದರೊಂದು, ಸಕ್ಕರೆಯಂಶದ ಜೊತೆಗೆ ಜೇನುತುಪ್ಪದಂಥವು ಒಂದಿಷ್ಟು ಸತ್ವಗಳನ್ನು ದೇಹಕ್ಕೆ ನೀಡುವುದು ನಿಜ. ಹಾಗೆಂದು ಎಷ್ಟು ತಿಂದರೂ ದೋಷವಿಲ್ಲ ಎಂಬುದು ನಿಜವಲ್ಲ.
ಪಿಷ್ಟಗಳಿಲ್ಲದ ಆಹಾರ (ನೊ ಕಾರ್ಬ್ ಅಥವಾ ಲೋ ಕಾರ್ಬ್) ಆರೋಗ್ಯಕರ
ಪಿಷ್ಟವೆಂದರೆ ನಾವು ತಿನ್ನುವ ಅನ್ನದಲ್ಲಿ ಮಾತ್ರವೇ ದೊರೆಯುವುದಲ್ಲ. ಯಾವುದೇ ಧಾನ್ಯಗಳು, ಕಾಳುಗಳು, ಹಣ್ಣು-ತರಕಾರಿಗಳು- ಹೀಗೆ ಬಹಳಷ್ಟು ಆಹಾರಗಳಿಂದ ನಾವು ಪಿಷ್ಟವನ್ನು ಕ್ರೋಢೀಕರಿಸುತ್ತೇವೆ. ಇವೆಲ್ಲವನ್ನೂ ಕಡಿಮೆ ಮಾಡಿಬಿಟ್ಟರೆ… ದೇಹಕ್ಕೆ ಪೌಷ್ಟಿಕಾಂಶಗಳು ದೊರೆಯುವುದಾದರೂ ಹೇಗೆ? ಇದರಲ್ಲೊಂದು ವಿಷಯವಿದೆ, ನಾವಿಲ್ಲಿ ಸಂಕೀರ್ಣವಾದ ಪಿಷ್ಟಗಳ ಬಗ್ಗೆ ಹೇಳುತ್ತಿದ್ದೇವೆ ಹೊರತು ಕರಿದ ತಿಂಡಿಗಳು, ಮೈದಾ ಬ್ರೆಡ್, ಕುಕಿ ಮುಂತಾದ ಸಂಸ್ಕರಿತ, ಸರಳ ಪಿಷ್ಟದ ಬಗ್ಗೆ ಅಲ್ಲ. ಸಂಸ್ಕರಿಸಿದ ಸರಳ ಪಿಷ್ಟಗಳು ನಿಶ್ಚಿತವಾಗಿ ಆರೋಗ್ಯಕ್ಕೆ ಮಾರಕ.
ಕೊಬ್ಬು ರಹಿತ ವಸ್ತುಗಳು ಆರೋಗ್ಯಕರ
ಕೊಬ್ಬಿನ ವಸ್ತುಗಳೆಂದರೆ ಹೆದರಿ ಓಡುತ್ತಿದ್ದ ಕಾಲವೊಂದಿತ್ತು. ಈಗ ಆರೋಗ್ಯಕರ ಕೊಬ್ಬುಗಳು ದೇಹಕ್ಕೆ ಬೇಕು ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ. ಅಗತ್ಯ ಪೌಷ್ಟಿಕಾಂಶಗಳನ್ನು ದೇಹ ಹೀರಿಕೊಳ್ಳುವುದಕ್ಕೆ, ಕೋಶಗಳ ಆರೋಗ್ಯಕ್ಕೆ, ಅಂಗಾಗಗಳ ಸ್ವಾಸ್ಥ್ಯಕ್ಕೆ- ಹೀಗೆ ಬಹಳಷ್ಟು ಕೆಲಸಗಳಿಗೆ ಆರೋಗ್ಯಕರ ಕೊಬ್ಬಿನ ಅಗತ್ಯವಿದೆ. ಅದರರ್ಥ ಚೀಸ್, ಬೆಣ್ಣೆ ಮುಂತಾದವನ್ನು ಮನಸೋಇಚ್ಛೆ ತಿನ್ನಬಹುದು ಎಂದಲ್ಲ. ಸ್ಯಾಚುರೇಟ್ ಆಗಿರುವ ಇಂಥ ಕೊಬ್ಬುಗಳು ಅನಾರೋಗ್ಯಕ್ಕೆ ದಾರಿ. ಬದಲಿಗೆ, ಎಣ್ಣೆ ಬೀಜಗಳು, ಅವುಗಳ ಎಣ್ಣೆ, ಬೆಣ್ಣೆ ಹಣ್ಣು, ಸ್ವಲ್ಪ ಪ್ರಮಾಣದಲ್ಲಿ ತುಪ್ಪದಂಥವು ಆರೋಗ್ಯಕ್ಕೆ ಲಾಭದಾಯಕ
ಕೆಲವು ವಿಶೇಷ ಡಯೆಟ್‌ಗಳಿಂದ ತೂಕ ಇಳಿಸಬಹುದು
ಕೀಟೊ ಡಯೆಟ್, ಮೊನೊ ಡಯೆಟ್ ಮುಂತಾದ ಹತ್ತಾರು ರೀತಿಯ ಡಯೆಟ್‌ಗಳಿಂದ ತೂಕ ಇಳಿಯುವುದು ನಿಜ, ಆದರದು ಅಲ್ಪಾಯು. ಅಂದರೆ ನಮ್ಮ ಮಾಮೂಲಿ ಲಯಕ್ಕೆ ಮರಳುತ್ತಿದ್ದಂತೆ ತೂಕವೂ ಮಾಮೂಲಿ ಸ್ಥಿತಿಗೇ ಮರಳುತ್ತದೆ. ಎಲ್ಲಕ್ಕಿಂತ ಅಪಾಯಕಾರಿಯೆಂದರೆ, ಇಂಥ ಡಯೆಟ್‌ಗಳು ಅಗತ್ಯ ಪೋಷಕಾಂಶಗಳ ಕೊರತೆಯನ್ನು ಉಂಟು ಮಾಡುತ್ತವೆ. ದೇಹ ಸೊರಗುವಂತೆ ಮಾಡುತ್ತವೆ.
ಈ ಸುದ್ದಿಯನ್ನೂ ಓದಿ: Makhana Benefits: ಮಖನಾ ಲಾಭಗಳನ್ನು ತಿಳಿಯುವುದಕ್ಕೆ ತಿಂದು ನೋಡಿ!
ತಿಂದಷ್ಟೂ ಕರಗಿಸಿದರೆ ತೂಕ ನಿಭಾಯಿಸಬಹುದು
ತಿಂದಷ್ಟು ಕ್ಯಾಲರಿಗಳನ್ನು ಕರಗಿಸಿದರೆ ತೂಕ ನಿಭಾಯಿಸಬಹುದು ಎಂಬುದು ಸುಳ್ಳಲ್ಲ. ಆದರೆ ಇದಿಷ್ಟೇ ಸತ್ಯವೂ ಅಲ್ಲ. ಅಂದರೆ ಎಷ್ಟು ತಿನ್ನುತ್ತೇವೆ ಅನ್ನುವಷ್ಟೇ ಮಹತ್ವದ್ದು ಏನನ್ನು ತಿನ್ನುತ್ತೇವೆ ಎಂಬುದು. ದಿನಕ್ಕೆ ಬೇಕಾಗುವ ೨೦೦೦ ಕ್ಯಾಲರಿಗಳನ್ನು ಸಕ್ಕರೆ, ಕೊಬ್ಬು ಇತ್ಯಾದಿಗಳಲ್ಲಿ ತುಂಬಿ, ಅದನ್ನು ಕರಗಿಸಿದರೆ ದೇಹಕ್ಕೆ ಪ್ರಯೋಜನವಿಲ್ಲ. ಬದಲಿಗೆ, ಆರೋಗ್ಯಕರ ಕ್ಯಾಲರಿಗಳನ್ನು ತುಂಬಿ- ಕರಗಿಸಿದರೆ ದೇಹ ಸದೃಢವಾಗುತ್ತದೆ.
ಸಸ್ಯಾಹಾರಿಗಳಿಗೆ ಪ್ರೊಟೀನ್ ಸಾಕಾಗುವುದಿಲ್ಲ
ಮಾಂಸಾಹಾರಿಗಳಿಗೆ ಸುಲಭವಾಗಿ ಹೆಚ್ಚಿನ ಪ್ರೊಟೀನ್ ದೊರೆಯುವುದು ನಿಜ. ಹಾಗೆಂದು ಸಸ್ಯಾಹಾರಿ ಎಂದಾಕ್ಷಣಕ್ಕೆ ಅವರಿಗೆ ಪ್ರೊಟೀನ್ ಕೊರತೆ ಇರಲೇಬೇಕೆಂದಿಲ್ಲ. ಆದರೆ ಏನನ್ನು ತಿನ್ನುತ್ತಿದ್ದೇನೆ ಮತ್ತು ಇದು ನನ್ನ ಜೀವನಶೈಲಿಗೆ ಎಷ್ಟು ಬೇಕು ಎಂಬ ಮಾಹಿತಿಯ ಕೊರತೆಯಿದ್ದರೆ ಪ್ರೊಟೀನ್ ಸಹ ಕೊರತೆಯಾಗಬಹುದು. ವೈವಿಧ್ಯಮಯ ಆಹಾರಶೈಲಿಯನ್ನು ರೂಢಿಸಿಕೊಳ್ಳುವುದು, ಸಸ್ಯಜನ್ಯ ಪ್ರೊಟೀನ್‌ಗಳನ್ನು ಶಿಸ್ತುಬದ್ಧವಾಗಿ ಸೇವಿಸುವುದು ಮುಂತಾದವುಗಳಿಂದ ಪ್ರೊಟೀನ್ ಕೊರತೆ ಕಾಡದಂತೆ ತಡೆಯಬಹುದು
ತೆಳ್ಳಗೆ ಇದ್ದವರೆಲ್ಲ ಆರೋಗ್ಯವಂತರು
ತೆಳ್ಳಗೆ, ಬಳುಕುವಂತಿದ್ದರೆ ಅವರೆಲ್ಲ ಆರೋಗ್ಯವಂತರು ಎಂಬ ಭಾವನೆಯುಂಟು. ಬೊಜ್ಜು ಹೆಚ್ಚಾದರೆ ರೋಗಗಳು ಹತ್ತಿರವಾಗುತ್ತವೆ ಎಂಬುದು ನಿಜವೇ. ಆದರೆ ಆರೋಗ್ಯಕರ ತೂಕ ಎಷ್ಟು ಅಗತ್ಯವೋ, ಸರಿಯಾದ ಆಹಾರ ಸೇವನೆ, ಚಟುವಟಿಕೆ ಮತ್ತು ವ್ಯಾಯಾಮಭರಿತ ಜೀವನವೂ ಅಷ್ಟೇ ಅಗತ್ಯ. ತೆಳ್ಳಗಿನ ಶರೀರದವರೆಲ್ಲ ರೋಗರಹಿತರು ಎಂಬ ತೀರ್ಮಾನಕ್ಕೆ ಆಧಾರಗಳಿಲ್ಲ.