ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ (Reliance) ಅಂಗಸಂಸ್ಥೆ ಮತ್ತು ಪ್ರಮುಖ ಜೀನೋಮಿಕ್ಸ್ ಕಂಪನಿ ಸ್ಟ್ರಾಂಡ್ ಲೈಫ್ ಸೈನ್ಸಸ್‌ನಿಂದ ಅಪರೂಪದ ಕಾಯಿಲೆಗಳ ರೋಗವನ್ನು ಪತ್ತೆ ಹಚ್ಚುವುದರಲ್ಲಿ ಸುಧಾರಣೆ ತರುವುದಕ್ಕಾಗಿ ಗುರುವಾರ ಸ್ಟ್ರಾಂಡ್‌ಓಮಿಕ್ಸ್ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ. ʼವಿರಳ ಕಾಯಿಲೆಗಳ ದಿನʼದ ಸಂದರ್ಭದಲ್ಲಿ ಇಂಥದ್ದೊಂದು ಹೆಜ್ಜೆಯನ್ನು ಇಡಲಾಗಿದೆ. ಈ ಹೊಸ ಆನ್‌ಲೈನ್ ಪೋರ್ಟಲ್ ಆನುವಂಶಿಕ ವೇರಿಯಂಟ್‌ಗಳ ಮಾಹಿತಿ ಶೀಘ್ರ ಮತ್ತು ಸುಲಭ ಸಂಪರ್ಕವನ್ನು ವೈದ್ಯರಿಗೆ ನೀಡುತ್ತದೆ. ಇದು ಪ್ರತಿ ರೋಗಿಯ ಪ್ರಕರಣದ ಬಗ್ಗೆ ಸಮಗ್ರವಾದ ನೋಟವನ್ನು ನೀಡುತ್ತದೆ. ರೋಗಿಗಳಿಗೆ ವೇಗವಾಗಿ ಮತ್ತು ಹೆಚ್ಚು ನಿಖರವಾದ ರೋಗ ನಿರ್ಣಯ ಫಲಿತಾಂಶ ಒದಗಿಸುತ್ತದೆ.
ಪೋರ್ಟಲ್ ಜತೆಗೆ ಸ್ಟ್ರಾಂಡ್ ಲೈಫ್ ಸೈನ್ಸಸ್ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ವಿರಳ ಕಾಯಿಲೆಗಳ ಆನುವಂಶಿಕ ಪರೀಕ್ಷೆಯನ್ನು ಒದಗಿಸುತ್ತದೆ. ಇದರಿಂದಾಗಿ ಈ ನಿರ್ಣಾಯಕ ವೈದ್ಯಕೀಯ ಪರೀಕ್ಷೆಗಳನ್ನು ಹೆಚ್ಚು ಮಂದಿ ಮಾಡಿಸಿಕೊಳ್ಳಬಹುದಾಗಿದೆ.
ಸ್ಟ್ರಾಂಡ್ ಓಮಿಕ್ಸ್ ಪೋರ್ಟಲ್ ಯಾವ ರೀತಿ ನೆರವಾಗುತ್ತದೆ?
* ರೋಗನಿರ್ಣಯದಲ್ಲಿನ ಉತ್ತಮ ಫಲಿತಾಂಶಕ್ಕಾಗಿ ಸ್ಪಷ್ಟ ಮತ್ತು ಶೀಘ್ರ ಆನುವಂಶಿಕ ಒಳನೋಟಗಳನ್ನು ಒದಗಿಸುವುದು
* ವಿಶಾಲವಾದ ಆನುವಂಶಿಕ ರೂಪಾಂತರಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ವೈದ್ಯರಿಗೆ ಅನುವು
* ತಜ್ಞರ ಮಧ್ಯೆ ಉತ್ತಮ ಸಹಯೋಗದ ಮೂಲಕ ಪ್ರಸವಪೂರ್ವ ರೋಗ ನಿರ್ಣಯ ಸುಧಾರಣೆ
ಸ್ಟ್ರಾಂಡ್ ಲೈಫ್ ಸೈನ್ಸಸ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಡಾ. ರಮೇಶ್ ಹರಿಹರನ್ ಮಾತನಾಡಿ, ʼಆನುವಂಶಿಕ ರೋಗನಿರ್ಣಯದ ಸುಧಾರಣೆ ಮತ್ತು ಈ ಸೇವೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ನಾವು ಬದ್ಧರಾಗಿದ್ದೇವೆ. ವಿರಳ ಕಾಯಿಲೆಗಳ ವಿರುದ್ಧದ ಹೋರಾಟದಲ್ಲಿ ವೈದ್ಯರನ್ನು ಸಬಲಗೊಳಿಸಲು ನಾವು ಸ್ಟ್ರಾಂಡ್‌ಓಮಿಕ್ಸ್ ಪೋರ್ಟಲ್ ನಾವೀನ್ಯತೆ ಮತ್ತು ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆʼ ಎಂದರು.
ಈ ಸುದ್ದಿಯನ್ನೂ ಓದಿ | BESCOM: ಬೆಸ್ಕಾಂನಿಂದ ಕಡಿಮೆ ವಿದ್ಯುತ್ ಬಳಸುವ ಬಿ.ಎಲ್.ಡಿ.ಸಿ. ಫ್ಯಾನ್ ಲೋಕಾರ್ಪಣೆ
ಸ್ಟ್ರಾಂಡ್ ಲೈಫ್ ಸೈನ್ಸಸ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆ. ಹಲವು ಬಗೆಯ ಕ್ಯಾನ್ಸರ್‌ಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದಕ್ಕಾಗಿ ಈ ಕಂಪೆನಿಯು ರಕ್ತದ ಆಧಾರಿತವಾದ ಪರೀಕ್ಷೆಯನ್ನು ಮಾಡುತ್ತದೆ. ಇದನ್ನು ಕ್ಯಾನ್ಸರ್ ಸ್ಪಾಟ್ (CancerSpot) ಎಂದು ಕರೆಯಲಾಗಿದೆ. ಈ ಪರೀಕ್ಷೆಗಾಗಿ ಜಾಗತಿಕ ಮಟ್ಟದಲ್ಲಿ ಅಂಗೀಕೃತವಾದ ಮೆಥಿಲೇಷನ್ ಪ್ರೊಫೈಲಿಂಗ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದರ ಮೂಲಕವಾಗಿ ಕ್ಯಾನ್ಸರ್ ಗಡ್ಡೆಯ ಡಿಎನ್ಎ ತುಣುಕುಗಳನ್ನು ಗುರುತಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.