ಬೆಂಗಳೂರು: ನಮ್ಮೆಲ್ಲರ ಬಾಳಿನಲ್ಲಿ ಅತ್ಯಂತ ಹೆಚ್ಚಾಗಿ ಉಪಯೋಗಿಸುವ ಹಣ್ಣೆಂದರೆ ಬಾಳೆ. ಇದನ್ನು ಹಣ್ಣಾಗಿ ಮಾತ್ರವೇ ಉಪಯೋಗಿಸದೆ ಕಾಯಿ ಇದ್ದಾಗಲೂ ಉಪಯೋಗಿಸುತ್ತೇವೆ. ಈ ಎರಡೂ ಒಂದೇ ವಸ್ತುವಿನ ಭಿನ್ನ ರೂಪಗಳೇ ಹೌದಾದರೂ ಅದನ್ನು ತಿಂದಾಗ ದೇಹದ ಮೇಲೆ ಆಗುವಂಥ ಪರಿಣಾಮಗಳು ಬೇರೆಯೆ. ಹಾಗಾದರೆ ಬಾಳೆಯನ್ನು ಹಣ್ಣಾಗಿಸಿ ತಿನ್ನುವುದು ಸೂಕ್ತವೋ ಕಾಯಿದ್ದಾಗ ತಿನ್ನುವುದು ಒಳ್ಳೆಯದೋ? ಯಾವುದರ ಪರಿಣಾಮ ಏನು? ಯಾವುದು ನಮಗೆ ಸರಿ?
ನಿಮ್ಮ ದೇಹದ ಅಗತ್ಯವೇನು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ. ನಂತರವೇ ನಿಮ್ಮ ಜೀವನಶೈಲಿಗೆ ಬಾಳೆಯ ಹಣ್ಣು ಸೂಕ್ತವೋ ಕಾಯಿಯೋ ಎಂಬುದನ್ನು ನೀವೇ ನಿರ್ಧರಿಸಬಹುದು. ಕಾರಣ, ಬಾಳೆಯನ್ನು ಹಣ್ಣು ಇಲ್ಲವೇ ಕಾಯಿ- ಯಾವುದೇ ರೂಪದಲ್ಲಿ ತಿಂದರೂ ಬಹಳಷ್ಟು ಬಗೆಯ ಸತ್ವಗಳು ದೇಹಕ್ಕೆ ದೊರೆಯುತ್ತವೆ. ನಿಮ್ಮ ಮಧುಮೇಹ ನಿಯಂತ್ರಣಕ್ಕೆ ಯತ್ನಿಸುತ್ತಿದ್ದೀರೇ; ವ್ಯಾಯಾಮದ ನಂತರ ಬೇಕಾಗುವ ಶಕ್ತಿಯನ್ನು ತುಂಬುತ್ತಿದ್ದೀರೇ… ನಿಮ್ಮ ಅಗತ್ಯವೇನು ಎಂಬುದು ಮುಖ್ಯವಾಗುತ್ತದೆ.

ಬಾಳೆ ಕಾಯಿ: ಕಡು ಹಸಿರು ಬಣ್ಣದ ಕದಳಿಯನ್ನು ಇರುವಂತೆಯೇ ಸಿಪ್ಪೆ ಸುಲಿದು ತಿನ್ನಲು ಅಸಾಧ್ಯ. ಹಾಗಾಗಿ ಇದನ್ನು ಥರಾವರಿ ವ್ಯಂಜನಗಳ ಮೂಲಕ ಸೇವಿಸುವುದು ಅನಿವಾರ್ಯ. ಸಾಂಬಾರ್, ಪಲ್ಯ, ಸಾಸಿವೆ, ಕೂಟುಗಳಂಥ ಅಪ್ಪಟ ದಕ್ಷಿಣ ಭಾರತೀಯ ಅಡುಗೆಗಳಿಂದ ಹಿಡಿದು ಚಿಪ್ಸ್, ಕಟ್ಲೆಟ್‌ಗಳಂಥ ಬಾಯಾಡುವ ತಿನಿಸುಗಳವರೆಗೆ ಬಗೆಬಗೆಯ ರುಚಿಗಳಲ್ಲಿ ಇವುಗಳನ್ನು ಸೇವಿಸಬಹುದು.
ಇದರಲ್ಲಿರುವ ಸಂಕೀರ್ಣ ಪಿಷ್ಟ ಮತ್ತು ನಾರಿನಂಶವು ದೀರ್ಘ ಕಾಲದವರೆಗೆ ನಮಗೆ ಹೊಟ್ಟೆ ತುಂಬಿರುವ ಅನುಭವವನ್ನು ನೀಡುತ್ತದೆ. ಇದರಲ್ಲಿರುವ ನಾರು ಕರುಳಿನಲ್ಲಿರುವ ಬ್ಯಾಕ್ಟೀರಿಯಗಳಿಗೆ ಲಾಭದಾಯಕ. ಹಾಗಾಗಿ ಜೀರ್ಣಾಂಗಗಳ ಆರೋಗ್ಯ ಸುಧಾರಣೆಗೆ ಇದು ನೆರವಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ, ತೂಕ ಇಳಿಸುವ ಉದ್ದೇಶ ಹೊಂದಿದವರಿಗೆ ಬಾಳೆ ಕಾಯಿಯ ಖಾದ್ಯಗಳು ಉಪಯುಕ್ತ.
ಮಧುಮೇಹಿಗಳಿಗೆ ಸಹ ಬಾಳೆಯ ಹಣ್ಣಿಗಿಂತ ಕಾಯಿ ಸೂಕ್ತವಾದದ್ದು. ಇದರಲ್ಲಿ ಗ್ಲೈಸೆಮಿಕ್ ಸೂಚಿ ಕಡಿಮೆ ಇರುವುದರಿಂದ ಸಕ್ಕರೆಯಂಶ ಧಿಡೀರನೆ ರಕ್ತಕ್ಕೆ ಸೇರುವುದಿಲ್ಲ. ಹಾಗಾಗಿ, ಗಡ್ಡೆ-ಗೆಣಸುಗಳನ್ನು ಸೇವಿಸುವ ಮಾದರಿಯಲ್ಲೇ ಈ ಸಂಕೀರ್ಣ ಪಿಷ್ಟದ ಆಹಾರವನ್ನೂ ಸೇವಿಸಬಹುದು.

ಬಾಳೆ ಹಣ್ಣು: ಕಡು ಹಸಿರಿನ ಕಾಯಿಗಳು ಕಳಿತು ಹಣ್ಣಾಗಿ ಹಳದಿ ಬಣ್ಣಕ್ಕೆ ತಿರುಗುತ್ತಿದ್ದಂತೆ, ಇದರೊಳಗೆ ನಡೆಯುವ ರಾಸಾಯನಿಕ ಕ್ರಿಯೆಗಳು ಸಂಕೀರ್ಣ ಪಿಷ್ಟವನ್ನು ಸಕ್ಕರೆಯಂಶವನ್ನಾಗಿ ಪರಿವರ್ತಿಸುತ್ತದೆ. ಹಾಗಾಗಿ ಯಾವುದೇ ಪೂರ್ವತಯಾರಿಯಿಲ್ಲದೆ, ಹಸಿವಾದಾಗೆಲ್ಲ ಬಾಳೆಯ ಹಣ್ಣನ್ನು ಸುಲಿದು ತಿನ್ನುವುದು ಅತ್ಯಂತ ಸುಲಭದ ಕೆಲಸ. ಇದರಲ್ಲಿರುವ ಸಕ್ಕರೆಯಂಶವು ಅತ್ಯಂತ ತ್ವರಿತವಾಗಿ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ. ಹಾಗಾಗಿ ಕ್ರೀಡೆಗಳಲ್ಲಿ ಭಾಗವಹಿಸುವಾಗ, ಆಟದ ನಡುವಿನಲ್ಲಿ ಆಯಾಸವಾದಾಗೆಲ್ಲ ಕ್ಷಿಪ್ರವಾಗಿ ದೇಹಕ್ಕೆ ಶಕ್ತಿಯನ್ನು ಒದಗಿಸಲು ಇದು ಸೂಕ್ತವಾದ ತಿನಿಸು.
ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರಿಗೂ ಜೀರ್ಣವಾಗುವುದಕ್ಕೆ ಕಷ್ಟವಾಗದಂಥ ಹಣ್ಣಿದು. ಜೀರ್ಣಾಂಗಗಳ ತೊಂದರೆ ಇದ್ದವರಿಗೂ ಈ ಹಣ್ಣು ಅಷ್ಟಾಗಿ ತೊಂದರೆ ನೀಡುವುದಿಲ್ಲ. ದೇವರಿಗೆ ನೈವೇದ್ಯಕ್ಕೆ ಅರ್ಪಿಸುವುದರಿಂದ ಹಿಡಿದು ಸಿಹಿ ತಿನಿಸುಗಳ ತಯಾರಿಕೆಯವರೆಗೆ ಹಲವು ರೀತಿಯಲ್ಲಿ ಕದಳೀಫಲ ಬಳಕೆಯಲ್ಲಿದೆ. ಮಕ್ಕಳ ಮೆಚ್ಚಿನ ಕೇಕ್, ಸ್ಮೂದಿ, ಮಿಲ್ಕ್‌ಶೇಕ್‌ಗಳವರೆಗೆ ಯಾವುದೇ ಬಗೆಯ ಸಿಹಿಗಳಿಗೆ ಇದು ಹೊಂದುತ್ತದೆ.
ಮಹಿಳೆಯರಿಗೆ ಫ್ರೊಟೀನ್ ಆಹಾರ ಏಕೆ ಅಗತ್ಯ!
ತೂಕ ಹೆಚ್ಚಿಸಿಕೊಳ್ಳುವ ಉದ್ದೇಶವಿದ್ದರೆ ಇದೊಂದು ಆರೋಗ್ಯಕರ ಆಯ್ಕೆ. ಇದರಲ್ಲಿರುವ ನೈಸರ್ಗಿಕ ಶರ್ಕರಪಿಷ್ಟಗಳು ದೇಹಕ್ಕೆ ಸಾಕಷ್ಟು ಪುಷ್ಟಿಯನ್ನು ನೀಡಬಲ್ಲವು. ಒಂದೊಮ್ಮೆ ಮಧುಮೇಹಿಗಳಾಗಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣು ತಿನ್ನುವುದು ಸಮಸ್ಯೆಯನ್ನು ತರಬಲ್ಲದು. ಹಾಗಾಗಿ ಎಷ್ಟು ತಿನ್ನಬಹುದು ಎಂಬ ಬಗ್ಗೆ ವೈದ್ಯರ ಸಲಹೆ ಕೇಳುವುದು ಒಳಿತು. ಇವೆಲ್ಲವನ್ನೂ ತಿಳಿದ ಮೇಲೆ, ನಿಮ್ಮ ಬದುಕಿನ ಅಗತ್ಯಕ್ಕೆ ಬಾಳೆಯ ಕಾಯಿ ಸೂಕ್ತವೋ ಹಣ್ಣೋ ಎಂಬುದನ್ನು ನೀವೇ ತೀರ್ಮಾನಿಸಬಹುದು.