ಬೆಂಗಳೂರು: ಚಳಿಗಾಲ (Winter Season) ಪ್ರಾರಂಭವಾಗುತ್ತಿದ್ದಂತೆ ನಮ್ಮ ದೇಹದ ಚಯಾಪಚಯ ಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯಲ್ಲಿ ಏರುಪೇರಾಗುವುದು ಸಾಮಾನ್ಯ. ಈ ಹವಾಮಾನ ವೈಪರೀತ್ಯದಿಂದ ರಕ್ಷಣೆ ಪಡೆದು, ಶೀತ, ಕೆಮ್ಮು ಹಾಗೂ ಸೋಂಕುಗಳಿಂದ ದೂರವಿರಲು ಪೌಷ್ಟಿಕತಜ್ಞರು ಕೆಲವು ವಿಶೇಷ ಆಹಾರ ಪದಾರ್ಥಗಳನ್ನು ಡಯಟ್ನಲ್ಲಿ ಸೇರಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಚಳಿಗಾಲಕ್ಕೆ ಅತ್ಯುತ್ತಮವಾದ ಆ 5 ಆಹಾರಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ.
ಸಿಹಿಗೆಣಸು, ನೆಲ್ಲಿಕಾಯಿ, ಮೆಂತ್ಯ ಸೊಪ್ಪು, ಬೆಲ್ಲ ಹಾಗೂ ಡ್ರೈಫ್ರೂಟ್ಸ್ನಂತಹ ಆರೋಗ್ಯಕರ ಆಹಾರಗಳನ್ನು ಚಳಿಗಾಲದ ದೈನಂದಿನ ಮೆನುವಿನಲ್ಲಿ ಸೇರಿಸಿಕೊಳ್ಳುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದಲ್ಲದೆ, ದೇಹಕ್ಕೆ ಅಗತ್ಯವಾದ ಉಷ್ಣತೆ ಮತ್ತು ಶಕ್ತಿ ದೊರೆಯುತ್ತದೆ. ಇದರಿಂದ ಶೀತ, ಕೆಮ್ಮು ಹಾಗೂ ಇನ್ಫೆಕ್ಷನ್ಗಳಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.
ಚಳಿಗಾಲದಲ್ಲಿ ಸೇವಿಸಬೇಕಾದ ಪ್ರಮುಖ 5 ಆಹಾರಗಳು
ಸಿಹಿ ಗೆಣಸು: ಚಳಿಗಾಲದಲ್ಲಿ ಸಿಹಿಗೆಣಸು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಎ, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ಸಮೃದ್ಧವಾಗಿವೆ. ಇದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುವುದಲ್ಲದೆ, ಚಳಿಗಾಲದಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ನೆಲ್ಲಿಕಾಯಿ: ವಿಟಮಿನ್ ಸಿಯ ಉತ್ತಮ ಮೂಲವಾಗಿರುವ ನೆಲ್ಲಿಕಾಯಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವು ಮತ್ತು ಸೋಂಕುಗಳಿಂದ ಇದು ರಕ್ಷಣೆ ನೀಡುತ್ತದೆ. ಜತೆಗೆ ಕೂದಲು ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ಮೆಂತ್ಯೆ ಸೊಪ್ಪು: ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಮೆಂತ್ಯ ಸೊಪ್ಪು ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಇದರಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ ಮತ್ತು ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ರಕ್ತಹೀನತೆಯನ್ನು ತಡೆಯುತ್ತದೆ ಹಾಗೂ ಮಧುಮೇಹಕ್ಕೆ ಇದು ಪ್ರಯೋಜನಕಾರಿ.
ಮುಂಜಾನೆ ಎದ್ದ ತಕ್ಷಣ ನಿರಂತರ ಸೀನು, ನೆಗಡಿ ಇರುತ್ತಾ? ಇಲ್ಲಿದೆ ಸರಳ ಪರಿಹಾರ
ಬೆಲ್ಲ ಮತ್ತು ಕಡಲೆಕಾಯಿ: ಚಳಿಗಾಲದಲ್ಲಿ ಬೆಲ್ಲ ಮತ್ತು ಕಡಲೆಕಾಯಿ ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬೆಲ್ಲವು ದೇಹಕ್ಕೆ ಬೇಕಾದ ಉಷ್ಣತೆಯನ್ನು ನೀಡಿದರೆ, ಕಡಲೆಕಾಯಿಯಲ್ಲಿರುವ ಆರೋಗ್ಯಕರ ಕೊಬ್ಬುಗಳು ಮತ್ತು ಪ್ರೋಟೀನ್ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ಚಳಿಗಾಲದ ಆಯಾಸವನ್ನು ದೂರ ಮಾಡುತ್ತದೆ.
ಒಣ ಹಣ್ಣುಗಳು ಮತ್ತು ಬೀಜಗಳು: ಬಾದಾಮಿ, ವಾಲ್ನಟ್ಸ್, ಗೋಡಂಬಿ ಮತ್ತು ಖರ್ಜೂರದಂತಹ ಡ್ರೈಫ್ರೂಟ್ಸ್ ಚಳಿಗಾಲದ ಅತ್ಯುತ್ತಮ ಸ್ನ್ಯಾಕ್ಸ್ ಆಗಿವೆ. ಇವು ದೇಹಕ್ಕೆ ಆಂತರಿಕ ಉಷ್ಣತೆ ಮತ್ತು ಅಪಾರ ಶಕ್ತಿಯನ್ನು ನೀಡುವುದರೊಂದಿಗೆ ಮೆದುಳಿನ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸುತ್ತವೆ.