- ಡಾ. ಪ್ರಿಯದರ್ಶಿನಿ ಡಿ.ಜೆ.
ವೆರಿಕೋಸ್ ವೇನ್ಸ್ (Varicose Veins) ಅಥವಾ ಉಬ್ಬಿದ ರಕ್ತನಾಳಗಳು ಸಾಮಾನ್ಯವಾಗಿ ಕಾಲುಗಳಲ್ಲಿ ಕಂಡುಬರುವ ರಕ್ತನಾಳಗಳ ಸಮಸ್ಯೆ. ರಕ್ತವನ್ನು ಹೃದಯದ ಕಡೆಗೆ ಸಾಗಿಸುವ ರಕ್ತನಾಳಗಳಲ್ಲಿನ ಕವಾಟಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ರಕ್ತವು ಕೆಳಭಾಗದಲ್ಲಿ ಸಂಗ್ರಹವಾಗಿ ರಕ್ತನಾಳಗಳು ಹಿಗ್ಗಿ, ಉಬ್ಬಿ ಮತ್ತು ಸುರುಳಿಯಾಕಾರದಲ್ಲಿ ಕಾಣಿಸಿಕೊಳ್ಳುತ್ತವೆ. ದೀರ್ಘಕಾಲ ನಿಂತುಕೊಂಡು ಕೆಲಸ ಮಾಡುವವರು, ದೈಹಿಕ ಚಟುವಟಿಕೆ ಕಡಿಮೆ ಇರುವವರು, ಗರ್ಭಿಣಿಯರು, ಅಧಿಕ ತೂಕ ಹೊಂದಿರುವವರು ಹಾಗೂ ಅನುವಂಶಿಕ ಪ್ರವೃತ್ತಿ ಇರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.
ಈ ಕಾಯಿಲೆಯ ಪ್ರಮುಖ ಲಕ್ಷಣಗಳೆಂದರೆ ಕಾಲುಗಳಲ್ಲಿ ನೋವು, ಭಾರವಾದ ಅನುಭವ, ಊತ, ಸುಡುವಿಕೆ, ತುರಿಕೆ, ಸ್ನಾಯು ಸೆಳೆತ ಹಾಗೂ ದೀರ್ಘಕಾಲ ನಿಂತಾಗ ಹೆಚ್ಚಾಗುವ ಅಸ್ವಸ್ಥತೆ. ಕೆಲವರಲ್ಲಿ ಚರ್ಮದ ಬಣ್ಣ ಬದಲಾವಣೆ, ಚರ್ಮ ಗಟ್ಟಿಯಾಗುವುದು ಮತ್ತು ಗಾಯಗಳು (Varicose Ulcers) ಉಂಟಾಗಬಹುದು. ನಿರ್ಲಕ್ಷಿಸಿದಲ್ಲಿ ದೀರ್ಘಕಾಲದ ಚರ್ಮದ ಬದಲಾವಣೆಗಳು ಹಾಗೂ ಇತರ ತೊಂದರೆಗಳು ಕಾಣಿಸಿಕೊಳ್ಳಬಹುದು.
ಪರಾಗಗಳ ಅಲರ್ಜಿ ಅಥವಾ ಪೋಲನ್ ಅಲರ್ಜಿ: ಏನು, ಎತ್ತ?
ಆಯುರ್ವೇದದಲ್ಲಿ ಈ ಸ್ಥಿತಿಯನ್ನು ರೋಗಿಯ ದೇಹಪ್ರಕೃತಿ, ದೋಷಗಳ ಸ್ಥಿತಿ ಹಾಗೂ ರೋಗದ ತೀವ್ರತೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಚಿಕಿತ್ಸಾ ವಿಧಾನಗಳನ್ನು ಆಯ್ಕೆ ಮಾಡಲಾಗುತ್ತದೆ. ರೋಗಿಯ ಆರೋಗ್ಯ ಸ್ಥಿತಿ ಮತ್ತು ಅಗತ್ಯ ವೈದ್ಯಕೀಯ ಮೌಲ್ಯಮಾಪನದ ನಂತರ ಸೂಕ್ತ ಚಿಕಿತ್ಸಾ ವಿಧಾನವನ್ನು ಆಯ್ಕೆ ಮಾಡಲಾಗುತ್ತದೆ.
ಆಸ್ಪತ್ರೆಯಲ್ಲಿ ಈ ಚಿಕಿತ್ಸಾ ವಿಧಾನಗಳನ್ನು ಪಡೆದ ಕೆಲವು ರೋಗಿಗಳ ಪ್ರಕರಣಗಳ ದಾಖಲಾತಿಗಳಲ್ಲಿ ನೋವು, ಕಾಲುಗಳ ಭಾರವಾದ ಅನುಭವ, ಊತ ಹಾಗೂ ದೈನಂದಿನ ಚಟುವಟಿಕೆಗಳಿಗೆ ಸಂಬಂಧಿಸಿದ ತೊಂದರೆಗಳಲ್ಲಿ ಸುಧಾರಣೆ ಕಂಡುಬಂದಿರುವುದನ್ನು ಗಮನಿಸಲಾಗಿದೆ. ಇಂತಹ ಚಿಕಿತ್ಸಾ ಅನುಭವಗಳು ರೋಗಲಕ್ಷಣಗಳ ನಿರ್ವಹಣೆಯಲ್ಲಿ ಆಯುರ್ವೇದದ ಪೂರಕ ಪಾತ್ರದ ಸಾಧ್ಯತೆಯನ್ನು ಸೂಚಿಸುತ್ತವೆ. ಆದಾಗ್ಯೂ, ಇವುಗಳನ್ನು ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವ ಅಥವಾ ಅದರ ಪ್ರಗತಿಯನ್ನು ತಡೆಯುವ ಚಿಕಿತ್ಸೆಗಳೆಂದು ಪರಿಗಣಿಸಲಾಗುವುದಿಲ್ಲ.
ವಾಯು ಮಾಲಿನ್ಯದಿಂದ ತಪ್ಪಿಸಿಕೊಳ್ಳಲು ಎಂಥಾ ಮಾಸ್ಕ್ ಸೂಕ್ತ?
ಇದರ ಜತೆಗೆ ಆಹಾರ ಕ್ರಮದಲ್ಲಿ ಸೂಕ್ತ ಬದಲಾವಣೆ, ನಿಯಮಿತ ನಡಿಗೆ, ಕಾಲುಗಳಿಗೆ ವ್ಯಾಯಾಮ, ದೀರ್ಘಕಾಲ ಒಂದೇ ಭಂಗಿಯಲ್ಲಿ ನಿಲ್ಲುವುದನ್ನು ತಪ್ಪಿಸುವುದು ಮತ್ತು ಕಾಲುಗಳನ್ನು ಎತ್ತರದಲ್ಲಿರಿಸಿ ವಿಶ್ರಾಂತಿ ಪಡೆಯುವುದು ಮುಂತಾದ ಜೀವನಶೈಲಿಯ ಬದಲಾವಣೆಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಸಮಯೋಚಿತ ರೋಗನಿರ್ಣಯ, ಸೂಕ್ತ ವೈದ್ಯಕೀಯ ಆರೈಕೆ, ಆಯುರ್ವೇದದ ಪೂರಕ ಚಿಕಿತ್ಸಾ ವಿಧಾನಗಳು ಮತ್ತು ಜೀವನಶೈಲಿಯ ಬದಲಾವಣೆಗಳ ಸಮನ್ವಯದಿಂದ ವೆರಿಕೋಸ್ ವೇನ್ಸ್ ಸಮಸ್ಯೆಯಿಂದ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡಿ ಆರೋಗ್ಯಕರ ಜೀವನದತ್ತ ಹೆಜ್ಜೆ ಇಡಬಹುದು.