ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ನಿಂತ ನೀರಿನಿಂದ ಆರೋಗ್ಯ ತೊಂದರೆಗಳು ಬರಬಹುದು..ಜೋಕೆ!

ಇಂಥ ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಮಳೆ ನೀರು ನಿಲ್ಲುವುದು ಹೊಸದೇನಲ್ಲ. ಅದರಲ್ಲೂ ನಗರಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಕೆಟ್ಟಿ ದ್ದರೆ ಅಥವಾ ನೀರು ಹರಿಯುವ ದಾರಿ ಕಟ್ಟಿದ್ದರೆ ಊರೆಲ್ಲ ನೀರು ತುಂಬಿರುವ ದೃಶ್ಯಗಳೇ ಕಾಣುತ್ತವೆ... ಆದರೆ ದೊಡ್ಡ ಮಳೆ ಬಂದು ಒಂದೆರಡು ದಿನಗಳಾದರೂ ಮಳೆ ನೀರು ಹರಿದು ಖಾಲಿ ಯಾಗದೆ ನಿಂತರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಎಂಥಾ ಆರೋಗ್ಯ ಸಮಸ್ಯೆಗಳನ್ನು ತರುತ್ತವೆ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ...

ನಿಂತ ನೀರಿನಿಂದ ಈ ಆರೋಗ್ಯ ಸಮಸ್ಯೆ ‌ಕಾಡಬಹುದು

Profile Pushpa Kumari May 27, 2025 5:00 AM

ನವದೆಹಲಿ: ಮುಂಗಾರು ಈಗಾಗಲೇ ಕಾಲಿಟ್ಟಿದೆ. ಬಹಳಷ್ಟು ಕಡೆ ಸೋನೆ, ಹಲವೆಡೆ ಹದ ಮಳೆ, ಕೆಲವೆಡೆ ಜಡಿ ಮಳೆ ಪ್ರಾರಂಭವಾಗಿದೆ. ಇನ್ನೂ ಬಿಸಿಲಿನ ಯೋಚನೆಯಲ್ಲೇ ಇದ್ದವರ ಮೇಲೆಲ್ಲ ಮೋಡಗಳು ತಣ್ಣೀರು ಸುರಿದಿವೆ. ರಭಸದ ಗಾಳಿ, ಶೀತ, ಥಂಡಿ, ಒದ್ದೆಯ ವಾತಾವರಣ ರಾಜ್ಯದೆಲ್ಲೆಡೆ ಹರಡಿಕೊಳ್ಳುತ್ತಿದೆ. ಇಂಥ ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಮಳೆ ನೀರು ನಿಲ್ಲುವುದು ಹೊಸದೇನಲ್ಲ. ಅದರಲ್ಲೂ ನಗರಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಕೆಟ್ಟಿ ದ್ದರೆ ಅಥವಾ ನೀರು ಹರಿಯುವ ದಾರಿ ಕಟ್ಟಿದ್ದರೆ ಊರೆಲ್ಲ ನೀರು ತುಂಬಿರುವ ದೃಶ್ಯಗಳೇ ಕಾಣುತ್ತವೆ. ಮಳೆ ಬಂದಾಗೊಮ್ಮೆ ರಸ್ತೆಯ ಆಚೀಚೆಯಲ್ಲಿ ನೀರು ಹರಿದು, ಮಳೆ ನಿಂತ ಒಂದೆರಡು ತಾಸಿನೊಳಗೆ ಎಲ್ಲವೂ ಸರಿ ಹೋದರೆ- ಅವೆಲ್ಲ ಸಮಸ್ಯೆಯೇ ಅಲ್ಲ. ಆದರೆ ದೊಡ್ಡ ಮಳೆ ಬಂದು ಒಂದೆರಡು ದಿನಗಳಾದರೂ ಮಳೆ ನೀರು ಹರಿದು ಖಾಲಿ ಯಾಗದೆ ನಿಂತರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು (Health Tips) ತರುತ್ತದೆ. ಎಂಥಾ ಆರೋಗ್ಯ ಸಮಸ್ಯೆಗಳನ್ನು ತರುತ್ತವೆ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಲೆಪ್ಟೊಸ್ಪಿರೋಸಿಸ್: ಇದೊಂದು ಬ್ಯಾಕ್ಟೀರಿಯ ಸೋಂಕು.ಈ ಸೋಂಕನ್ನು ಹೊತ್ತ ಪ್ರಾಣಿಗಳ ಮೂತ್ರ ಸೇರಿದ ನೀರಿನ ಮೂಲಕ ಇವು ಮಾನವರಿಗೆ ಹರಡುತ್ತವೆ. ಅದರಲ್ಲೂ ಇಲಿ, ಹೆಗ್ಗಣಗಳಿಂದ ಹರಡುವುದು ಹೆಚ್ಚು. ಮಳೆ ನೀರು ಇಂಥ ಸೋಂಕುಗಳಿಗೆ ಮೂಲವಾಗಬಲ್ಲದು. ಕೈಕಾಲುಗಳ ಮೇಲಿನ ಗಾಯಗಳು ಮಳೆ ನೀರು ಅದ್ದಿದಾಗ ಈ ಬ್ಯಾಕ್ಟೀರಿಯಗಳು ದೇಹದೊಳಗೆ ಪ್ರವೇಶಿಸುತ್ತವೆ. ಈ ಸೋಂಕಿನ ಲಕ್ಷಣಗಳ ಬಗ್ಗೆ ಹೇಳುವುದಾದರೆ, ತೀವ್ರ ಜ್ವರ, ನಡುಕ, ಅತೀವ ತಲೆ ನೋವು, ಸ್ನಾಯುಗಳಲ್ಲಿ ನೋವು, ಕಣ್ಣು ಕೆಂಪಾಗುವುದು ಮತ್ತು ಕಾಮಾಲೆಯ ಲಕ್ಷಣ ಗಳು ಕಾಣಿಸಿಕೊಳ್ಳುತ್ತವೆ. ಈ ಸೋಂಕು ಮುಂದುವರಿದು ತೀವ್ರವಾದಲ್ಲಿ, ಕಿಡ್ನಿ, ಯಕೃತ್‌, ಪುಪ್ಪುಸಗಳಿಗೆ ಹಾನಿ ಮಾಡುತ್ತದೆ. ಹಾಗಾಗಿ ನಿಂತ ಮಳೆನೀರು ಸೋಕದಂತೆ ಎಚ್ಚರ ವಹಿಸಿ.

ಮಲೇರಿಯಾ: ಮಳೆಯಿಂದ ನಿಲ್ಲುವ ನೀರು ಸೊಳ್ಳೆಗಳಿಗೆ ಒಳ್ಳೆಯ ಆಶ್ರಯ ತಾಣ. ಈ ಸೊಳ್ಳೆಗಳಿಂದ ಬರುವ ರೋಗಗಳು ಒಂದೆರಡೇ ಅಲ್ಲ. ಅನಾಫಿಲಿಸ್‌ ಹೆಣ್ಣು ಸೊಳ್ಳೆಯು ಕಚ್ಚಿದಾಗ ದೇಹ ಸೇರುವ ಪ್ಮಾಸ್ಮೋಡಿಯಂ ಎಂಬ ಏಕಕೋಶ ಜೀವಿ ಯಿಂದ ಬರುವ ಕಾಯಿಲೆಯಿದು. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಇದು ಪ್ರಾಣಘಾತುಕವೂ ಆಗ ಬಲ್ಲದು. ಮುನ್ನೆಚ್ಚರಿಕೆಯಿಂದ ಇದನ್ನು ತಡೆಯುವುದು ಸಾಧ್ಯವಿದ್ದರೂ, ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಲಕ್ಷಗಟ್ಟಲೆ ಜೀವಗಳು ಈ ರೋಗಕ್ಕೆ ಬಲಿಯಾಗುತ್ತಿವೆ. ವಿಪರೀತ ಜ್ವರ, ಮೈಕೈ ನೋವು, ಚಳಿಯಾಗಿ ನಡುಕ, ಜ್ವರ ಕಡಿಮೆಯಾದರೆ ಸಿಕ್ಕಾಪಟ್ಟೆ ಬೆವರುವುದು, ತಲೆನೋವು, ವಾಂತಿ, ಡಯರಿಯದಂಥ ಚಿಹ್ನೆಗಳು ಕಂಡುಬರುತ್ತವೆ. ಈ ಯಾವುದೇ ಲಕ್ಷಣಗಳು ಕಂಡರೂ ವೈದ್ಯರೊಂದಿಗೆ ಸಮಾಲೋಚನೆ ಅಗತ್ಯ.

ಡೆಂಗ್ಯೂ: ಏಡಿಸ್‌ ಹೆಣ್ಣು ಸೊಳ್ಳೆಯಿಂದ ಹರಡುವ ವೈರಸ್‌ ಸೋಂಕಿದು. ಸೊಳ್ಳೆ ಕಚ್ಚಿದ ನಾಲ್ಕಾರು ದಿನಗಳ ನಂತರ ರೋಗದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಫ್ಲೂ ಮಾದರಿಯಲ್ಲಿ ಇರುವ ಈ ಕಾಯಿಲೆಯಲ್ಲಿ ಕೆಲವೊಮ್ಮೆ ರಕ್ತದಲ್ಲಿ ಪ್ಲೇಟ್‌ಲೆಟ್‌ಗಳು ಕುಸಿದು ಜೀವಕ್ಕೆ ಎರವಾಗುವ ಸಾಧ್ಯತೆಯಿದೆ. ಜ್ವರ, ತೀವ್ರವಾದ ತಲೆನೋವು, ಕಣ್ಣಿನ ಹಿಂಭಾಗ ದಲ್ಲಿ ನೋವು, ಕೀಲು ಮತ್ತು ಸ್ನಾಯುಗಳಲ್ಲಿ ನೋವು, ಮೈಮೇಲೆ ದದ್ದುಗಳು, ವಾಂತಿ- ಜ್ವರದೊಂದಿಗೆ ಈ ಪೈಕಿ ಯಾವುದೇ ಎರಡು ಲಕ್ಷಣಗಳನ್ನು ಕಂಡರೂ ವೈದ್ಯರನ್ನು ಸಂಪರ್ಕಿಸಬೇಕು.

ಚಿಕೂನ್‌ಗುನ್ಯಾ: ಸೊಳ್ಳೆ ಕಚ್ಚುವುದರಿಂದ ಹರಡುವ ಚಿಕೂನ್‌ಗುನ್ಯಾ ವೈರಸ್‌ನಿಂದಲೇ ಬರುವ ರೋಗವಿದು. ಜ್ವರದೊಂದಿಗೆ ತೀವ್ರವಾದ ಕೀಲುನೋವು ಇದರ ಪ್ರಮುಖ ಲಕ್ಷಣಗಳು. ಸೋಂಕಿತ ಸೊಳ್ಳೆ ಕಚ್ಚಿದ ೪-೮ ದಿನಗಳ ಅಂತರದಲ್ಲಿ ರೋಗ ಚಿಹ್ನೆಗಳು ಕಂಡುಬರುತ್ತವೆ. ಈ ಸೊಳ್ಳೆಗಳು ರಾತ್ರಿಯಲ್ಲಿ ಮಾತ್ರವೇ ಅಲ್ಲ, ಹಗಲಿನಲ್ಲೂ ಕಚ್ಚುತ್ತವೆ. ಏಷ್ಯಾ ಮತ್ತು ಭಾರ ತೀಯ ಉಪಖಂಡದಲ್ಲಿ ಮುಖ್ಯವಾಗಿ ಈ ಕಾಯಿಲೆ ಸದ್ದು ಮಾಡುತ್ತಿದೆ.

ಟೈಫಾಯ್ಡ್:‌ ಮಳೆಗಾಲದಲ್ಲಿ ನೀರು, ಆಹಾರ ಕಲುಷಿತವಾಗುವ ಸಾಧ್ಯತೆ ಅಧಿಕ. ಮಲಿನ ಆಹಾರ ಮತ್ತು ನೀರಿನಿಂದಲೇ ಸಾಲ್ಮೊನೆಲ್ಲಾ ಟೈಫಿ ಎಂಬ ರೋಗಾಣು ದೇಹ ಸೇರಿ, ಬರುವಂಥ ಮಾರಣಾಂತಿಕ ರೋಗ ಟೈಫಾಯ್ಡ್‌. ದೀರ್ಘ ಕಾಲದ ವರೆಗೆ ಜ್ವರ, ಸುಸ್ತು, ತಲೆನೋವು, ವಾಂತಿ, ಕಿಬ್ಬೊಟ್ಟೆಯಲ್ಲಿ ನೋವು, ಡಯರಿ ಯಾದಂಥ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ವೈದ್ಯರ ಶುಶ್ರೂಷೆಯ ಜೊತೆಗೆ ಸರಿಯಾದ ಆಹಾರವನ್ನೂ ತೆಗೆದುಕೊಳ್ಳಬೇಕು. ಆಹಾರದ ಸ್ವಚ್ಛತೆ ಕಡೆಗೆ ಗಮನ ನೀಡಲೇಬೇಕು. ಇದಕ್ಕೆ ಲಸಿಕೆ ಲಭ್ಯವಿದೆ.

ಇದನ್ನು ಓದಿ: Health Tips: ಗರ್ಭಕೊರಳಿನ ಕ್ಯಾನ್ಸರ್‌ ಬಗ್ಗೆ ನಮಗೆಷ್ಟು ಗೊತ್ತು?

ಕಾಲರಾ: ವಿಬ್ರಿಯೊ ಕಾಲೆರೆ ಎಂಬ ಬ್ಯಾಕ್ಟೀರಿಯಾದಿಂದ ಕಲುಷಿತ ನೀರು ಮತ್ತು ಆಹಾರದ ಮೂಲಕ ಇದು ಮಾನವರಿಗೆ ಹರಡುತ್ತದೆ. ತೀವ್ರವಾದ ಅತಿಸಾರ ಭೇದಿ ಇದರ ಪ್ರಮುಖ ಲಕ್ಷಣ. ಉಳಿದಂತೆ ಹೆಚ್ಚಿನ ಲಕ್ಷಣಗಳು ತೋರಿಸಿಕೊಳ್ಳುವುದಿಲ್ಲ ಈ ರೋಗ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ತೀವ್ರ ನಿರ್ಜಲೀಕರಣಕ್ಕೆ ಒಳಗಾಗಿ ಜೀವಕ್ಕೆ ಅಪಾಯ ಕಟ್ಟಿಟ್ಟಿದ್ದು. ಕಾಲರಾ, ಟೈಫಾಯ್ಡ್‌ನಂಥ ರೋಗಗಳಿಗೆ ನೀರನ್ನು ಕುದಿಸಿಯೇ ಕುಡಿಯುವುದು ಉತ್ತಮ ಉಪಾಯ.

ಹೆಪಟೈಟಿಸ್‌ ಎ, ಇ: ಕಲುಷಿತ ನೀರು ಮತ್ತು ಆಹಾರದಿಂದಲೇ ಬರುವ ವೈರಲ್‌ ಸೋಂಕಿದು. ಇವೆರಡೂ ವೈರಸ್‌ಗಳು ಪಿತ್ತಕೋಶಕ್ಕೆ ಹಾನಿ ಮಾಡುತ್ತವೆ. ಜ್ವರ, ಆಯಾಸ, ಹಸಿವಿಲ್ಲದಿರುವುದು, ಹೊಟ್ಟೆ ತೊಳೆಸುವುದು, ವಾಂತಿ, ಕಿಬ್ಬೊಟ್ಟೆಯಲ್ಲಿ ನೋವು ಮತ್ತು ಕಾಮಾಲೆಯ ಲಕ್ಷಣಗಳು ಇದರಲ್ಲಿ ಕಾಣಿಸಿಕೊಳ್ಳುತ್ತವೆ. ನೀರು, ಆಹಾರ ಶುದ್ಧವಾಗಿ ಇರುವಂತೆ ನೋಡಿ ಕೊಳ್ಳಬೇಕು. ಹೆಪಟೈಟಿಸ್‌ ಎ ಸೋಂಕಿಗೆ ಲಸಿಕೆ ಲಭ್ಯವಿದೆ..